Times of Deenabandhu
  • Home
  • ಮುಖ್ಯಾಂಶಗಳು
  • ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಪಾಲಿಕೆ ತೀರ್ಮಾನ
ಜಿಲ್ಲೆ ಮುಖ್ಯಾಂಶಗಳು ಶಿವಮೊಗ್ಗ

ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಪಾಲಿಕೆ ತೀರ್ಮಾನ

ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಅಕ್ರಮ ಕಸಾಯಿ ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಪಾಲಿಕೆ ತೀರ್ಮಾನ ಕೈಗೊಂಡಿದೆ.

ತಮ್ಮ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಮೇಯರ್ ಸುವರ್ಣಾ ಶಂಕರ್ ಈ ಕುರಿತಾಗಿ ಮಾತನಾಡಿ, ಅಕ್ರಮ ಕಸಾಯಿ ಖಾನೆಗಳು ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಾಗಿವೆ ಎಂದು ತಿಳಿದುಬಂದಿದೆ. ಇಂತಹ ಕಸಾಯಿ ಖಾನೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಅಲ್ಲದೇ, ಗೋಮಾಂಸ ರಫ್ತು ಬಗ್ಗೆಯೂ ಗಮನಹರಿಸಲಾಗುವುದು ಎಂದರು.

ಕಾಂಗ್ರೆಸ್ ಸದಸ್ಯ ರಮೇಶ್ ಹೆಗ್ಡೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಗೋವುಗಳ ಬಗ್ಗೆ ಕಾಳಜಿ ಇದ್ದರೆ ಮೊದಲು ದೇಶದ ಗೋ ಮಾಂಸ ರಫ್ತು ನಿಲ್ಲಿಸಿದ ನಂತರ ಆಮೇಲೆ ಇಲ್ಲಿ ಕ್ರಮಕೈಗೊಳ್ಳಿ. ಬಿಜೆಪಿ ಅವಧಿಯಲ್ಲೇ ಅತಿ ಹೆಚ್ಚು ಪ್ರಮಾಣದ ಗೋ ಮಾಂಸ ರಫ್ತಾಗಿದೆ. ಇದು ನಿಮ್ಮ ಗಮನಕ್ಕೆ ಇರಲಿ ಎಂದು ಹೇಳಿದರು.

ರಮೇಶ್ ಹೆಗ್ಡೆ ಅವರ ಮಾತಿಗೆ ಆಕ್ರೋಶವಾಗಿಯೇ ಉತ್ತರಿಸಿದ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ಗೋವಿನ ಬಗ್ಗೆ ಕಾಳಜಿ ಇದ್ದುದರಿಂದಲೇ ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಗೋವುಗಳ ರಕ್ಷಣೆಗಾಗಿಯೇ ಜಿಲ್ಲಾಡಳಿತದಿಂದ 5 ಎಕರೆ ಜಾಗ ಪಡೆದು ಸುಮಾರು 50 ಲಕ್ಷ ವೆಚ್ಚದಲ್ಲಿ ಗೋ ಶಾಲೆ ಆರಂಭಿಸಲಾಗುವುದು ಎಂದಾಗ ಆಡಳಿತ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಕಾಂಗ್ರೆಸ್ ಸದಸ್ಯೆ ಯಮುನಾ ರಂಗೇಗೌಡ ಮಾತನಾಡಿ, ಗೋ ಮಾಂಸ ರಫ್ತು ಪ್ರಧಾನಿ ಮೋದಿಯವರ ಅವಧಿಯಲ್ಲೇ ಹೆಚ್ಚಾಗಿದೆ ಎಂದು ಆರೋಪಿಸಿದರು. ಇದರ ಹಿಂದೆ ಸಂಘ ಪರಿವಾರದವರೇ ಇದ್ದಾರೆ ಎಂದು ನೇರ ಆರೋಪ ಮಾಡಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಕೆಂಡಕಾರಿದರು. ಯಮುನಾ ರಂಗೇಗೌಡ ಒಂದು ಸಂದರ್ಭದಲ್ಲಿ ಮೇಯರ್ ಪೀಠದತ್ತ ತೆರಳಿ ಪ್ರತಿಭಟನೆ ನಡೆಸಲು ಮುಂದಾದರು.

ಉಪ ಮೇಯರ್ ಸುರೇಖಾ ಮುರಳೀಧರ್, ಸದಸ್ಯರು ಸಭಾ ನಡವಳಿಕೆ ಅನುಸರಿಸಬೇಕು. ಮಾತನಾಡುವಾಗ ಮೇಯರ್ ಅನುಮತಿ ಪಡೆಯಬೇಕೆಂದು ಸೂಚನೆ ನೀಡಿದರು. ಯಮುನಾ ರಂಗೇಗೌಡ ಮಾತನಾಡಿದ್ದು ತಪ್ಪು ಎಂದು ಸದಸ್ಯರಾದ ಶಂಕರ್ ಗನಿ ಮತ್ತು ವಿಶ್ವಾಸ್ ಆರೋಪಿಸಿ ಅವರು ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದರು. ಮಧ್ಯಪ್ರವೇಶಿಸಿದ ಉಪ ಮೇಯರ್ ಎರಡೂ ಪಕ್ಷದ ಸದಸ್ಯರನ್ನು ಸಮಾಧಾನಪಡಿಸಿದರು.

ಸ್ಮಾರ್ಟ್ ಸಿಟಿ ಕಾಮಗಾರಿಗಳ ವಿಳಂಬ ಕುರಿತಂತೆಯೂ ಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಸದಸ್ಯ ನಾಗರಾಜ್ ಕಂಕಾರಿ ಮಾತನಾಡಿ, ನಗರದಲ್ಲಿ ನಡೆಯುತ್ತಿರುವ ಕಾಮಗಾರಿ ವಿಳಂಬವಾಗುತ್ತಿವೆ. ಎಲ್ಲಾ ರಸ್ತೆಗಳನ್ನು ಅಗೆಯಲಾಗಿದೆ. ಧೂಳಿನಿಂದ ಕೂಡಿದೆ. ಕಳಪೆ ಕಾಮಗಾರಿ ನಡೆಸಲಾಗಿದೆ. ನಿಗದಿತ ಅವಧಿಯೊಳಗೆ ಕೆಲಸ ಮುಗಿಯುತ್ತಿಲ್ಲ ಎಂದು ದೂರಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ರಮೇಶ್ ಹೆಗ್ಡೆ ಆಗಸ್ಟ್ ತಿಂಗಳಲ್ಲೇ ಕಾಮಗಾರಿಗಳು ಮುಗಿಯಬೇಕಿತ್ತು. ಆದರೆ, ಇನ್ನು ಶೇಕಡ 30 ರಷ್ಟು ಮಾತ್ರ ಕೆಲಸವಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳ ಕಿರಿಕಿರಿಗೆ ಜನರು ಆಕ್ರೋಶ ಹೊಂದಿದ್ದಾರೆ. ನಗರವೆಲ್ಲಾ ಧೂಳುಮಯವಾಗಿದೆ. ಶ್ವಾಸಕೋಶದ ಕಾಯಿಲೆ ಭಯ ಉಂಟಾಗಿದೆ. ಅಧಿಕಾರಿಗಳಿಗೆ ಕಿಂಚಿತ್ತೂ ಎಚ್ಚರಿಕೆ ಇಲ್ಲ. ಅವೈಜ್ಞಾನಿಕವಾಗಿ ವಿವಿಧ ಇಲಾಖೆಗಳು ರಸ್ತೆಗಳಲ್ಲಿ ಗುಂಡಿ ತೋಡುತ್ತಿದ್ದಾರೆ. ಬೇಕಾಬಿಟ್ಟಿ ಕೆಲಸವಾಗುತ್ತಿದೆ. ಈಗಾಗಲೇ ವಿಳಂಬವಾಗಿರುವುದರಿಂದ ಸ್ಮಾರ್ಟ್ ಸಿಟಿ ಕಾಮಗಾರಿಯ ಶೀಘ್ರ ಮುಕ್ತಾಯಕ್ಕೆ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಬೇಕು. ಈಗಾಗಲೇ ವಿಳಂಬ ಮಾಡಿರುವ ಹಿನ್ನಲೆಯಲ್ಲಿ ಅಧಿಕಾರಿಗಳಿಗೆ ದಂಡ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸದಸ್ಯರು ಇದಕ್ಕೆ ಸಹಮತ ವ್ಯಕ್ತಪಡಿಸಿ, ಸ್ಮಾರ್ಟ್ ಸಿಟಿ ಕಾಮಗಾರಿಗಳ ಪೂರ್ಣಗೊಳ್ಳುವುದಕ್ಕೆ ಸಮಯ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಕೊರೋನಾದ ನಡುವೆಯೂ ಸ್ಮಾರ್ಟ್ ಸಿಟಿ ಕೆಲಸ ನಡೆಯುತ್ತಿದೆ. ವಿಳಂಬ ನಿಜವಾದರೂ, ಜಿಲ್ಲಾ ಉಸ್ತುವಾರಿ ಸಚಿವರ ಆದೇಶದ ಮೇರೆಗೆ ಕಾಮಗಾರಿಗಳನ್ನು ಬೇಗ ಮುಗಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.

ಆಯುಕ್ತ ಚಿದಾನಂದ ವಠಾರೆ ಮೊದಲಾದವರು ಇದ್ದರು. ಮಧ್ಯಾಹ್ನವೂ ಸಭೆ ಮುಂದುವರೆದಿತ್ತು.

Related posts

ಆನಂದಪುರ-ಸಾಗರ ರೈಲ್ವೆ ಕ್ರಾಸಿಂಗ್ ತಾಂತ್ರಿಕ ಪರಿಶೀಲನೆ: ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿ ಆದೇಶ

Times fo Deenabandhu

ಜಿಲೆಟಿನ್ ಸ್ಪೋಟ ಪ್ರಕರಣ: ಘಟನಾ ಸ್ಥಳಕ್ಕೆ ಗಣಿ ಸಚಿವ ಮುರುಗೇಶ್ ನಿರಾಣಿ ಭೇಟಿ ಪರಿಶೀಲನೆ….

Times fo Deenabandhu

ಹುಣಸೋಡು ಕಲ್ಲುಕ್ವಾರೆ ಸ್ಪೋಟ ಪ್ರಕರಣ: ಅಚ್ಚರಿಯ ಫಲಿತಾಂಶದ ನಿರೀಕ್ಷೆ-ಆಯನೂರು ಮಂಜುನಾಥ್

Times fo Deenabandhu