ಶಿವಮೊಗ್ಗ: ಎಪಿಎಂಸಿ ಮಾರುಕಟ್ಟೆ ಆಡಳಿತದಲ್ಲಿನ ಭ್ರಷ್ಟಾಚಾರದ ತನಿಖೆ ನಡೆಸಬೇಕೆಂದು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಇಂದು ಎಪಿಎಂಸಿ ಎದುರು ಪ್ರತಿಭಟನೆ ನಡೆಸಲಾಯಿತು.
ಎಪಿಎಂಸಿಯಲ್ಲಿ ದಿನಸಿ ಹಾಗೂ ಇತರೆ ಮಾರಾಟ ವಿಭಾಗದ ಮಳಿಗೆಗಳ ವಿತರಣೆ, ನಿರ್ವಹಣೆ ವಿಷಯದಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ. ಕಾಯ್ದೆಗಳನ್ನು ಉಲ್ಲಂಘಿಸಲಾಗಿದೆ. ಕೆಲವು ಪ್ರಭಾವಿಗಳು ಒಂದೇ ಕುಟುಂಬದವರು ಮಳಿಗೆಗಳನ್ನು ಪಡೆದುಕೊಂಡಿದ್ದಾರೆ. ರೈತರಲ್ಲದೇ, ಬೇರೆ ವ್ಯಾಪಾರಸ್ಥರಿಂದ ದಿನಸಿಗಳನ್ನು ಖರೀದಿಸಲಾಗುತ್ತಿದೆ. ಎಪಿಎಂಸಿ ಆವರಣದಲ್ಲಿಯೇ ಮಿನಿ ಕಾರ್ಕಾನೆಗಳಲ್ಲಿ ಪ್ಯಾಕ್ ಮಾಡುವಂತೆ ಪ್ಯಾಕಿಂಗ್ ಮಾಡಿ ಯಾವುದೇ ಐಎಸ್ಐ ಅಧಿಕೃತ ಮುದ್ರೆ ಇಲ್ಲದೇ ಚಿಲ್ಲರೆ ವ್ಯಾಪಾರ ನಡೆಸುವ ಮೂಲಕ ತೆರಿಗೆ ವಂಚಿಸುತ್ತಿದ್ದಾರೆ ಎಂದು ದೂರಿದರು.
ಎಪಿಎಂಸಿ ಮೂಲ ಉದ್ದೇಶವೇ ಇಲ್ಲವಾಗಿದೆ. ರೈತರ ಬದಲಾಗಿ ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಇದನ್ನು ಸರಿಪಡಿಸಬೇಕಾದ ಇಲ್ಲಿನ ಅಧಿಕಾರಿಗಳು ಮತ್ತು ಮಾರುಕಟ್ಟೆ ಸಮಿತಿ ಪದಾಧಿಕಾರಿಗಳು ರೈತರಿಗೆ ಅನುಕೂಲ ಮಾಡಿಕೊಡುವ ಬದಲು ವ್ಯಾಪಾರಸ್ಥರಿಗೆ ತಮ್ಮ ಬೆಂಬಲಿಗರಿಗೆ ಕುಟುಂಬದ ಸದಸ್ಯರಿಗೆ ಅನುಕೂಲವಾಗುವಂತೆ ಮಳಿಗೆಗಳನ್ನು ನಿವೇಶನಗಳನ್ನು ನೀಡುತ್ತಿದ್ದಾರೆ ಎಂದು ದೂರಿದರು.
ಹೊಸದಾಗಿ ಮಳಿಗೆ ಹಂಚಿಕೆ ಮಾಡಬೇಕು. ಇದುವರೆಗೂ ನಿಯಮಗಳ ಉಲ್ಲಂಘನೆ ಮಾಡಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರೇ ವ್ಯಾಪಾರ ಮಾಡುವಂತಹ ವಾತಾವರಣ ನಿರ್ಮಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ನಾಗೇಶ್, ಸಂತೋಷ್, ನಾಗರಾಜ್, ಶಿವಣ್ಣ, ನಯನ, ಪರಶುರಾಮಪ್ಪ, ಲೋಕೇಶ್, ಆಸೀಫ್, ರಾಜು, ಲಕ್ಷ್ಮಣ, ಫಯಾಜ್, ರಾಜು ನಾಯ್ಕ್, ಅಶ್ರಫ್ ಸೇರಿದಂತೆ ಹಲವರಿದ್ದರು.
