ಶಿವಮೊಗ್ಗ: ಹುಣಸೋಡು ಕಲ್ಲು ಕ್ವಾರೆ ಸ್ಪೋಟ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಕರ್ನಾಟಕ ಸ್ಟೇಟ್ ಕನ್ ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಹುಣಸೋಡು ಕಲ್ಲು ಕ್ವಾರೆಯಲ್ಲಿ ನಡೆದ ದುರಂತಕ್ಕೆ ಕಾರಣ ಯಾರು? ಸ್ಪೋಟಕ ವಸ್ತುಗಳು ಎಲ್ಲಿಂದ ಬಂದವು? ಅಕ್ರಮ ಗಣಿಗಾರಿಕೆಗೆ ಜಿಲ್ಲಾಡಳಿತ ಅವಕಾಶ ಕೊಟ್ಟಿದ್ದಾದರೂ ಏಕೆ? ಅರಣ್ಯ ಮತ್ತು ಪರಿಸರ ಇಲಾಖೆಗಳು ಸುಮ್ಮನೆ ಇದ್ದಾವೆಯೇ? ಎಂಬುದರ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಆಗ್ರಹಿಸಿದರು.
ಕ್ವಾರೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ನೋಂದಾವಣೆ ಆಗಬೇಕು. ಅವರಿಗೆ ಗುರುತಿನ ಚೀಟಿ ನೀಡಬೇಕು. ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕು. ಆರೋಗ್ಯ ಶಿಬಿರಗಳ ಮೂಲಕ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಬೇಕು. ಕಾರ್ಮಿಕರ ಸುರಕ್ಷತೆ ಬಗ್ಗೆ ಕ್ರಮಕೈಗೊಳ್ಳದ ಕ್ವಾರೆ ಮಾಲೀಕರ ಪರವಾನಿಗೆ ರದ್ದು ಮಾಡಬೇಕು. ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಈಘ ಘೋಷಿಸಿದ ಪರಿಹಾರ ಸಾಲದು, ಪರಿಹಾರದ ಮೊತ್ತವನ್ನು ಕನಿಷ್ಠ 15 -20 ಲಕ್ಷ ರೂ. ಗೆ ಹೆಚ್ಚಿಸಬೇಕು. ಇನ್ನು ಮುಂದಾದರೂ ಕಾರ್ಮಿಕರಿಗೆ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ನಾಗರಾಜ್, ಶೇಖರ್, ಚಂದ್ರಶೇಖರ್, ಆಂತೋಣಿ, ಕೃಷ್ಣ, ನಾಗೇಂದ್ರ ರೆಡ್ಡಿ, ಐತಾಳ್, ಚೇತನ್, ನಾಗರಾಜ್, ಆರ್ಮುಗಂ, ಮಣಿಕಂಠ ಮೊದಲಾದವರಿದ್ದರು.
