ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಪ್ರಾಣಹಾನಿ ನೋವು ತಂದಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಶೀಘ್ರವೇ ಗಾಯಗೊಂಡವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲಾ ಸಹಾಯ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಶಿವಮೊಗ್ಗ ಹೊರವಲಯದ ಹುಣಸೋಡು ಗ್ರಾಮದ ಬಳಿಯಿರುವ ಕ್ರಷರ್ನಲ್ಲಿ ನಿನ್ನೆ ರಾತ್ರಿ ದೊಡ್ಡ ಪ್ರಮಾಣದಲ್ಲಿ ಸಂಭವಿಸಿರುವ ಸ್ಫೋಟಕಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿದ್ದು, ಗಾಯಗೊಂಡವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮೂಲಕ ಶಿವಮೊಗ್ಗದ ಕಲ್ಲು ಗಣಿಗಾರಿಕೆ ಕ್ವಾರಿಯಲ್ಲಿ ಸ್ಫೋಟದ ಸಂತ್ರಸ್ತ ಕುಟುಂಬಗಳಿಗೆ ಸಂತಾಪ ಸೂಚಿಸಲಾಗಿದೆ. ಭವಿಷ್ಯದಲ್ಲಿ ಇದೇ ರೀತಿಯ ದುರಂತಗಳನ್ನು ತಪ್ಪಿಸಲು ಇಂತಹ ಘಟನೆಗಳು ಆಳವಾದ ತನಿಖೆಗೆ ಕರೆ ನೀಡುತ್ತವೆ ಎಂದರು.
ದುಃಖಕರವಾದ ಹಾಗೂ ಆತಂಕಕಾರಿಯಾದ ಸುದ್ದಿಯಾಗಿದೆ. ರಾಜ್ಯ ಸರ್ಕಾರ ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ಸಹಾಯವನ್ನು ನೀಡುವಂತೆ ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅಕ್ರಮ ಗಣಿಗಾರಿಕೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ”- ಮಾಜಿ ಸಿಎಂ ಸಿದ್ಧರಾಮಯ್ಯ ಆಗ್ರಹ
ಈ ಕುರಿತು ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶಿವಮೊಗ್ಗ ನಗರ ಸಮೀಪ ಜಿಲೆಟಿನ್ ಸ್ಪೋಟಗೊಂಡು ಹಲವು ಮಂದಿ ಕಾರ್ಮಿಕರು ಸಾವಿಗೀಡಾದ ಸುದ್ದಿ ಕೇಳಿ ಸಂಕಟವಾಯಿತು ಎಂದು ಟ್ವೀಟ್ ಮಾಡಿದ್ದಾರೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ಕಾರ್ಮಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ಮೃತರ ಶೋಕತಪ್ತ ಕುಟುಂಬಕ್ಕೆ ನನ್ನ ಸಂತಾಪಗಳು. ನಿರ್ಲಕ್ಷ್ಯ ತೋರುವ ಮೂಲಕ ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಹಲವೆಡೆ ಅಕ್ರಮ ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿರುವ ಆರೋಪ ಕೇಳಿಬರುತ್ತಿದ್ದು, ಅವುಗಳ ಮೇಲೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.
