ಬೆಂಗಳೂರು: ನಿನ್ನೆ ಸಚಿವ ಸಂಪುಟ ವಿಸ್ತರಣೆಯಾಗಿದ್ದು 7 ಮಂದಿ ಶಾಸಕರು ಸಿಎಂ ಬಿಎಸ್ ವೈ ಸಂಪುಟ ಸೇರ್ಪಡೆಯಾಗಿದ್ದಾರೆ. ಈ ಮಧ್ಯೆ ಶಾಸಕರ ಅಸಮಾಧಾನ ಸ್ಫೋಟಗೊಂಡಿದ್ದು ಈ ಕುರಿತು ಮಾತನಾಡಿರುವ ಸಿಎಂ ಬಿಎಸ್ ಯಡಿಯೂರಪ್ಪ, ಅಸಮಾಧಾನವಿರುವ ಶಾಸಕರು ದೆಹಲಿಗೆ ಹೋಗಿ ವರಿಷ್ಠರಿಗೆ ದೂರು ನೀಡಲಿ ಎಂದು ಹೇಳಿದ್ದಾರೆ.
ಶಾಸಕರ ಅಸಮಾಧಾನ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಯಾವ ಶಾಸಕರಿಗೆ ಅಸಮಾಧಾನ ಇದೆಯೋ ಅಂತವರು ದೆಹಲಿಗೆ ಹೋಗಿ ವರಿಷ್ಟರಿಗೆ ದೂರು ನೀಡಲಿ ನನ್ನ ಅಭ್ಯಂತರವಿಲ್ಲ. ಮನಸ್ಸಿಗೆ ಬಂದಂತೆ ಮಾತನಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡಬೇಡಿ. ಏನೇ ಬೆಳವಣಿಗೆಯಾದರೂ ಪಕ್ಷದ ವರಿಷ್ಟರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.
ಪಕ್ಷದ ವರಿಷ್ಟರಿಗೆ ಯಾವುದು ಸರಿ ತಪ್ಪು ಎಂಬುದು ತಿಳಿದಿದೆ. ನಮ್ಮ ಶಾಸಕರು ವಿನಾಕಾರಣ ಹೇಳಿಕೆ ನೀಡುವ ಬದಲು ವರಿಷ್ಟರಿಗೆ ದೂರು ನೀಡಲಿ. ಪಕ್ಷದ ವರ್ಚಸ್ಸು ಕುಂದಿಸುವ ಕೆಲಸವನ್ನು ಯಾರೂ ಮಾಡದಂತೆ ಸಿಎಂ ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ನನ್ನ ಇತಿಮಿತಿಯಲ್ಲಿ ನಾನು ಸಂಪುಟ ವಿಸ್ತರಣೆ ಮಾಡಿದ್ದೇನೆ. 10-12 ಶಾಸಕರು ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಬೇಸರಗೊಂಡಿದ್ದಾರೆ. ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದರು.
ಇನ್ನು ಸಿಡಿ ವಿಚಾರವಾಗಿ ಮಾತನಾಡಿದ ಯಡಿಯೂರಪ್ಪ, ನನಗೆ ಕೇಂದ್ರದ ನಾಯಕರ ಆಶೀರ್ವಾದವಿದೆ. ಏನೇ ದೂರು ನೀಡಿದರೂ ನಾನು ಎಲ್ಲವನ್ನೂ ಎದುರಿಸಲು ಸಿದ್ಧ. ಸಿಡಿ ವಿಚಾರವಾಗಿ ಯಾರಿಗೂ ಹೆದರುವ ಅಗತ್ಯವಿಲ್ಲ ಎಂದು ಹೇಳಿದರು.
