ಶಿವಮೊಗ್ಗ: 5 ತಲೆಮಾರು, 6 ದಶಕಗಳ ಕಾಲ ಕೇವಲ ಗರಿಬೀ ಹಠಾವೋ ಎಂದ ಪಕ್ಷವಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದರು.
ನಗರದಲ್ಲಿ ನಡೆದ ಜನಸೇವಕ್ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಬಿಜೆಪಿಯನ್ನು ದೋ ನಂಬರ್ ಪಾರ್ಟಿ ಎಂದು ಹೀಯಾಳಿಸುತ್ತಿದ್ದರು. ಅದನ್ನೆಲ್ಲಾ ಸಹಿಸಿಕೊಂಡು, ಸೈದಾಂತಿಕವಾಗಿ ಹೋರಾಟ ಮಾಡಿಕೊಂಡು ಬಿಜೆಪಿ ಇಂದು ಗಟ್ಟಿಯಾಗಿದೆ. ದೇಶದಲ್ಲಿಂದು ಬಿಜೆಪಿ ಸಂಸದರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮ ಮಟ್ಟದಲ್ಲಿ ಕೂಡ ಬಿಜೆಪಿಯ ಸಂಘಟನೆಯ ಇಂದು ಬಲಿಷ್ಟವಾಗುತ್ತಿದೆ. ನೂತನ ಸದಸ್ಯರು ಅಭಿವೃದ್ಧಿ ಕಾರ್ಯಗಳ ಕಡೆ ಹೆಚ್ಚಿನ ಒಲವು ತೋರಿಸಬೇಕು ಎಂದರು.
ಮೋದಿ ನೇತೃತ್ವದ ಕೇಂದ್ರ ಸರಕಾರ ಗ್ರಾಮ ವಿಕಾಸದ ಕಲ್ಪನೆಯಲ್ಲಿ ಕೆಲಸ ಮಾಡುತ್ತಿದೆ.
ಆದರೆ ಹಿಂದೆ ಇದ್ದವರು 50 ವರ್ಷಗಳ ಕಾಲ ಕೇವಲ ಗರಿಭೀ ಹಠಾವೋ ಅನ್ನುವುದರಲ್ಲೇ ಕಾಲ ಕಳೆದರು. ಅಜ್ಜ, ಅಜ್ಜಿ, ಮಗ, ಸೊಸೆ, ಮಕ್ಕಳು, ಮೊಮ್ಮಕ್ಕಳು ಎಲ್ಲರು ಗರೀಭೀ ಹಠಾವೋ ಎನ್ನುತ್ತಲೇ ಬಂದರು ಎಂದು ಆರೋಪಿಸಿದರು.
ಸಿಎಎ ಕಾಯ್ದೆ ಬಂದ ಬಳಿಕ ಪಾಕಿಸ್ತಾನಕ್ಕೆ ಕಳಿಸುತ್ತಾರೆ ಎಂದು ಅಪಪ್ರಚಾರ ಮಾಡಲಾಯಿತು. ಅಗತ್ಯವಿದ್ದರೆ ಅಂಥಹವರನ್ನು ಪಾಕಿಸ್ತಾನಕ್ಕೆ ಕಳಿಸೋಣ. ಈಗ ಯಾರಿಗೆ ಪಾಕಿಸ್ತಾನಕ್ಕೆ ಕಳಿಸಿದ್ದಾರೆ…? ಎಂದು ಪ್ರಶ್ನಿಸಿದರು.
ಅದೇರೀತಿ ಈಗ ಕೃಷಿ ನೀತಿ ವಿರುದ್ಧ ಅಪಪ್ರಚಾರ ನಡೆದಿದೆ ಎಂದು ದೂರಿದ ಅವರು, ಅಧಿಕಾರದ ಪಿತ್ತ ನಮ್ಮ ಹತ್ತಿರಕ್ಕೂ ಬಾರದಂತೆ ನೋಡಿಕೊಳ್ಳಿ. ಪ್ರಧಾನಿಯೇ ನಾನು ಜನ ಸೇವಕ ಎಂದು ಕರೆದುಕೊಂಡಿದ್ದಾರೆ. ನೀವು ಕೂಡ ಜನಸೇವಕರಾಗಿ ಇರಿ ಎಂದರು.
ಕಾಂಗ್ರೆಸ್ನಲ್ಲಿ ಸರಿಯಾದ ನಾಯಕತ್ವ ಇಲ್ಲದಂತಾಗಿದೆ. ನಮ್ಮ ಹಿರಿಯರ ಪ್ರೇರಣೆಯಿಂದ ಪ್ರಸ್ತುತ ರಾಮಮಂದಿರ ನಿರ್ಮಾಣವಾಗುತ್ತಿದೆ. ಓಟಿಗಾಗಿ ರಾಮಮಂದಿರನಾ ಅಂತಾ ಹಿಂದೆ ಕಾಂಗ್ರೆಸ್ ನವರು ಕೇಳುತ್ತಿದ್ದರು. ಆದರೆ, ಇಂದು ರಾಮಮಂದಿರ ನಿರ್ಮಾಣವಾಗುತ್ತಿದ್ದು, ಇದು ನಮ್ಮ ಸಂಕಲ್ಪ.ನಾವು ನುಡಿದಂತೆ, ನಡೆದಿದ್ದೆವೆ. ಸಿಎಎ, ಕಾಶ್ಮೀರದ ವಿಚಾರ, ಕೃಷಿ ನೀತಿ ಸೇರಿದಂತೆ, ಎಲ್ಲವೂ ಹೇಳಿದಂತೆ ನಡೆದುಕೊಂಡಿದ್ದೆವೆ ಎಂದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಇಲ್ಲಿನ ಹಿರಿಯರ ಶ್ರಮದಿಂದ ಬಿಜೆಪಿ ಭದ್ರಕೋಟೆಯಾಗಿದೆ. ಮುಂದಿನ ದಿನಗಳಲ್ಲಿ ಇಡೀ ಶಿವಮೊಗ್ಗ ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕೆಂದು ಕರೆ ನೀಡಿದರು.
1,508 ಜನ ಬಿಜೆಪಿ ಕಾರ್ಯಕರ್ತರು ಗ್ರಾ.ಪಂ. ಸದಸ್ಯರಾಗಿರುವುದು ಸಂತಸ ತಂದಿದೆ. ಅದರಲ್ಲೂ ಅತಿ ಹೆಚ್ಚು ಮಹಿಳೆಯರು ಗ್ರಾ.ಪಂ. ಸದಸ್ಯರಾಗಿದ್ದಾರೆ. ಒಂದು ಕಾಲದಲ್ಲಿ ಶಿವಮೊಗ್ಗ ಸಮಾಜವಾದಿ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಆದರೆ, ಇಂದು ಹಿರಿಯರ ಶ್ರಮದಿಂದ ಬಿಜೆಪಿ ಕ್ಷೇತ್ರವಾಗಿ ಬದಲಾಗಿದೆ ಎಂದರು.
