ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಸುಪ್ರೀಂಕೋರ್ಟ್ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ತಾತ್ಕಾಲಿಕ ತಡೆ ನೀಡಿ ತಜ್ಞರ ಸಮಿತಿ ರಚಿಸಿ ಆದೇಶಿಸಿದೆ.
ವಿವಾದಿತ ಕೃಷಿ ಮಸೂದೆ ಕುರಿತು ಸಲ್ಲಿಕೆಯಾಗಿರುವ ವಿವಿಧ ಅರ್ಜಿಗಳ ಕುರಿತು ವಿಚಾರಣೆ ನಡೆಸಿರುವ ಸರ್ವೋಚ್ಛ ನ್ಯಾಯಾಲಯವು, ಕೃಷಿ ಮಸೂದೆ ಕುರಿತ ಸಮಸ್ಯೆಗಳನ್ನು ಬಗೆಹರಿಸಲೇಬೇಕಿದ್ದು ನಾವು ಸಮಿತಿಯನ್ನು ರಚನೆ ಮಾಡುತ್ತಿದ್ದೇವೆ. ಪ್ರತಿಭಟನೆ ನಡೆಸುವುದೇ ಆದರೆ, ನಡೆಸಿ ಎಂದು ರೈತರಿಗೆ ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.
ಇನ್ನು ಮುಂದಿನ ಆದೇಶದವರೆಗೆ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಸುಪ್ರೀಂಕೋರ್ಟ್ ತಡೆನೀಡಿದ್ದು ಸಮಸ್ಯೆ ಇತ್ಯಾರ್ಥಕ್ಕೆ ನಾಲ್ವರು ತಜ್ಞರನ್ನೊಳಗೊಂಡ ಸಮಿತಿಯನ್ನ ರಚನೆ ಮಾಡಿದೆ.
ಹಾಗೆಯೇ ಸಮಸ್ಯೆ ಇತ್ಯಾರ್ಥಕ್ಕೆ ತಜ್ಞರ ಸಮಿತಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಈ ಮೂಲಕ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ 45 ದಿನಗಳಿಂದ ಹೋರಾಟ ನಡೆಸುತ್ತಿದ್ದ ರೈತರಿಗೆ ಗೆಲುವು ಸಿಕ್ಕಂತಾಗಿದೆ.
ವಿಚಾರಣೆ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಮೂರ್ತಿ, ‘ಕಾನೂನುಗಳ ಸಿಂಧುತ್ವದ ಬಗ್ಗೆ ಮತ್ತು ಪ್ರತಿಭಟನೆಯಿಂದಾಗಿ ಜನಜೀವನಕ್ಕೆ ಆಗುತ್ತಿರುವ ತೊಂದರೆ ಬಗ್ಗೆ ನಾವು ಕಾಳಜಿ ಹೊಂದಿದ್ದೇವೆ. ನಮ್ಮ ಅಧಿಕಾರ ವ್ಯಾಪ್ತಿಗೆ ಒಳಪಟ್ಟು ಈ ಸಮಸ್ಯೆಯನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ಒಂದೋ ಕಾಯ್ದೆಯನ್ನು ಅಮಾನತುಗೊಳಿಸಬಹುದು. ಅಥವಾ ಸಮಿತಿಯನ್ನು ರಚಿಸಬಹುದು. ಈ ಅಧಿಕಾರ ನಮಗಿದೆ,’ ಎಂದು ಹೇಳಿದರು.
ಕೃಷಿ ಕಾಯ್ದೆಯನ್ನು ಪ್ರಶ್ನೆ ಮಾಡಿರುವ ವಕೀಲ ಎಂ.ಎಲ್.ಶರ್ಮಾ ಈ ವೇಳೆ ಮಧ್ಯಪ್ರವೇಶಿಸಿ, ‘ನ್ಯಾಯಾಲಯ ರಚಿಸುವ ಯಾವುದೇ ಸಮಿತಿಯ ಮುಂದೆ ಹಾಜರಾಗುವುದಿಲ್ಲ ಎಂದು ರೈತರು ಹೇಳಿದ್ದಾರೆ,’ ಎಂದು ನ್ಯಾಯಾಲಯಕ್ಕೆ ಹೇಳಿದರು.
‘ಈ ಸಮಿತಿ ನಮಗಾಗಿ. ಸಮಸ್ಯೆಯನ್ನು ಪರಿಹರಿಸುವ ನಿರೀಕ್ಷೆಯಿರುವ ನೀವೆಲ್ಲರೂ ಈ ಸಮಿತಿಯ ಮುಂದೆ ಹೋಗಬೇಕು. ಅದು ಯಾವುದೇ ಆದೇಶವನ್ನಾಗಲಿ, ಶಿಕ್ಷೆಯನ್ನಾಗಲಿ ನೀಡುವುದಿಲ್ಲ. ಅದು ನಮಗೆ ವರದಿಯನ್ನು ಮಾತ್ರ ಸಲ್ಲಿಸುತ್ತದೆ,’ ಎಂದು ಸಿಜೆಐ ಹೇಳಿದರು.
