ಸಿಡ್ನಿ: ಸಿಡ್ನಿಯಲ್ಲಿ ನಡೆದ 2ನೇ ಟಿ-20 ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಟಿ20 ಸರಣಿ ಕೈವಶ ಮಾಡಿಕೊಂಡಿದೆ. ಏಕದಿನ ಪಂದ್ಯದಲ್ಲಿ ಎರಡು ಪಂದ್ಯಗಳಲ್ಲಿ ಸೋತು ಮುಖಭಂಗ ಅನುಭವಿಸಿದ ಕೊಹ್ಲಿ ಪಡೆ ಇದೀಗ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಮೊದಲ ಟಿ20 ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ್ದ ಟೀಂ ಇಂಡಿಯಾಗೆ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 195 ರನ್ ಗಳ ಬೃಹತ್ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಪರ ಶಿಖರ್ ಧವನ್, ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಆಡುವ ಮೂಲಕ ಗೆಲುವು ತಂದುಕೊಟ್ಟಿದ್ದಾರೆ. ಆಸೀಸ್ ನೀಡಿದ 195 ರನ್ ಟಾರ್ಗೆಟ್ ಚೇಸ್ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡೋ ಮೂಲಕ ಆಸೀಸ್ ತಂಡಕ್ಕೆ ಸ್ಪಷ್ಟ ಸೂಚನೆ ನೀಡಿದರು.
ಕೆಎಲ್ ರಾಹುಲ್ 22 ಎಸತದಲ್ಲಿ 30 ರನ್ ಸಿಡಿಸಿ ಔಟಾದರು. ಶಿಖರ್ ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟದಿಂದ ಟೀಂ ಇಂಡಿಯಾ ಮತ್ತೆ ಹೋರಾಟ ಮುಂದುರಿಸಿತು. ದಿಟ್ಟ ಹೋರಾಟ ನೀಡಿದ ಶಿಖರ್ ಧವನ್ ಅರ್ಧಶತಕ ಸಿಡಿಸಿದರು.
ಧವನ್ 36 ಎಸೆತದಲ್ಲಿ 52 ರನ್ ಸಿಡಿಸಿ ಔಟಾದರು. ಬ್ಯಾಟಿಂಗ್ ಆರ್ಡರ್ನಲ್ಲಿ ಬಡ್ತಿ ಪಡೆದು ಬಂದ ಸಂಜು ಸಾಮ್ಸನ್ ಅಬ್ಬರಿಸುವ ಸೂಚನೆ ನೀಡಿದರು. ಆದರೆ 15 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು.
ನಂತರ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಕೊಹ್ಲಿ 24 ಎಸೆದಲ್ಲಿ 40 ರನ್ ಸಿಡಿಸಿ ಔಟಾದರು. ಕೊಹ್ಲಿ ವಿಕೆಟ್ ಪತನ ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಯಿತು.
ಇತ್ತ ಹಾರ್ದಿಕ್ ಪಾಂಡ್ಯ ಹಾಗೂ ಶ್ರೇಯಸ್ ಅಯ್ಯರ್ ಆಸರೆಯಾದರು. ಅಂತಿಮ 12 ಎಸೆತದಲ್ಲಿ ಟೀಂ ಇಂಡಿಯಾ ಗೆಲುವಿಗೆ 25 ರನ್ ಅವಶ್ಯಕತೆ ಇತ್ತು. ಪಾಂಡ್ಯ ಹಾಗೂ ಅಯ್ಯರ್ ಹೋರಾಟ ಆಸೀಸ್ ತಂಡಕ್ಕೆ ತಲೆನೋವಾಯಿತು. ಸತತ 2 ಭರ್ಜರಿ ಸಿಕ್ಸರ್ ಸಿಡಿಸಿದ ಹಾರ್ದಿಕ್ ಪಾಂಡ್ಯ ಇನ್ನು 2 ಎಸೆತ ಬಾಕಿ ಇರುವಂತೆ ಟೀ ಇಂಡಿಯಾಗೆ 6 ವಿಕೆಟ್ ಗೆಲುವು ತಂದುಕೊಟ್ಟರು. ಪಾಂಡ್ಯ 22 ಎಸೆತದಲ್ಲಿ ಅಜೇಯ 42 ರನ್ ಸಿಡಡಿಸಿದರೆ, ಅಯ್ಯರ್ ಅಜೇಯ 12 ರನ್ ಸಿಡಿಸಿದರು. ಈ ಮೂಲಕ ಭಾರತ 2-0 ಅಂತರದಲ್ಲಿ ಸರಣಿಗೆದ್ದುಕೊಂಡಿದೆ.
