Times of Deenabandhu
  • Home
  • ಮುಖ್ಯಾಂಶಗಳು
  • ಕಾಳಜಿಯಿಲ್ಲದ ಕೆಟ್ಟ ಸರ್ಕಾರ ಕೇಂದ್ರದಲ್ಲಿದೆ, ಪ್ರಶ್ನಿಸುವ ಧೈರ್ಯವಿಲ್ಲದ ಹೇಡಿ ಸರ್ಕಾರ ರಾಜ್ಯದಲ್ಲಿದೆ: ಸಿದ್ದರಾಮಯ್ಯ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

ಕಾಳಜಿಯಿಲ್ಲದ ಕೆಟ್ಟ ಸರ್ಕಾರ ಕೇಂದ್ರದಲ್ಲಿದೆ, ಪ್ರಶ್ನಿಸುವ ಧೈರ್ಯವಿಲ್ಲದ ಹೇಡಿ ಸರ್ಕಾರ ರಾಜ್ಯದಲ್ಲಿದೆ: ಸಿದ್ದರಾಮಯ್ಯ

 

ಬೆಂಗಳೂರು: ರಾಜ್ಯಗಳ ಬಗ್ಗೆ ಕಾಳಜಿಯೇ ಇಲ್ಲದಿರುವ ಅತ್ಯಂತ ಕೆಟ್ಟ ಸರ್ಕಾರ ಕೇಂದ್ರದಲ್ಲಿದ್ದರೆ, ಅದನ್ನು ಪ್ರಶ್ನಿಸುವ ಧೈರ್ಯವಿಲ್ಲದ ಹೇಡಿ ಸರ್ಕಾರ ನಮ್ಮ ರಾಜ್ಯದಲ್ಲಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯೇತರ ರಾಜ್ಯ ಸರ್ಕಾರಗಳು, ಕೇಂದ್ರವು ಜಿಎಸ್‌ಟಿ ಪರಿಹಾರ ನೀಡದಿರುವ ನಿರ್ಧಾರವನ್ನು ವಿರೋಧ ಮಾಡಿವೆ. ರಾಜ್ಯ ಸರ್ಕಾರಕ್ಕೆ ಧೈರ್ಯವಿದ್ದರೆ ನೀವೇ ಸಾಲ ತೆಗೆದುಕೊಂಡು ನಮಗೆ ಜಿಎಸ್‌ಟಿ ಪರಿಹಾರ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಕೇಳಲಿ ಮತ್ತು ಸರ್ವ ಪಕ್ಷ ನಿಯೋಗ ಕೊಂಡೊಯ್ದು ಕೇಂದ್ರದ ಮೇಲೆ ಒತ್ತಡ ಹೇರಲಿ. ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸವನ್ನು ರಾಜ್ಯ ಸರ್ಕಾರ ಈಗ ಮಾಡಬೇಕು ಎಂದು ಒತ್ತಾಯಿಸಿದ್ದಾರೆ

ರಾಜ್ಯದಲ್ಲಿ ಉಂಟಾದ ಪ್ರವಾಹದ ಬಗ್ಗೆ ಮಾತನಾಡಿದ ಅವರು, ಈ ವರ್ಷ ಪ್ರವಾಹದಿಂದಾಗಿ 56 ತಾಲೂಕುಗಳ 1000 ಹಳ್ಳಿಗಳು ಬಾಧಿಸಲ್ಪಟ್ಟಿದೆ. ಸುಮಾರು 1 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ, ಸಾವಿರಾರು ಮನೆಗಳು ಕುಸಿದುಬಿದ್ದಿವೆ, ಜಾನುವಾರುಗಳು ಸಾವಿಗೀಡಾಗಿವೆ. ರಾಜ್ಯ ಸರ್ಕಾರವೇ ಸುಮಾರು ರೂ.4 ಸಾವಿರ ಕೋಟಿಗಳಷ್ಟು ನಷ್ಟವಾಗಿದೆ ಎಂದಿದೆ. ಕಳೆದ ಬಾರಿಯ ಪ್ರವಾಹ ಪರಿಹಾರ ಧನವನ್ನೇ ಕೇಂದ್ರ ಸರ್ಕಾರ ಸರಿಯಾಗಿ ಕೊಟ್ಟಿಲ್ಲ. ರೂ.35,000 ಕೋಟಿ ಪರಿಹಾರ ಕೇಳಿದ್ದರೆ ಬರೀ ರೂ.1800 ಕೋಟಿ ಪರಿಹಾರ ಮಾತ್ರ ಕೇಂದ್ರದಿಂದ ಬಂದಿದೆ. ಇನ್ನೂ ಹಲವೆಡೆ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಟ್ಟಿಲ್ಲ, ಹಳ್ಳಿಗಳ ಸ್ಥಳಾಂತರವಾಗಿಲ್ಲ, ಶಾಲೆಗಳ ಪುನರ್ ನಿರ್ಮಾಣ ಕಾರ್ಯವೂ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೇ, ಯಡಿಯೂರಪ್ಪನವರು ಹೆಲಿಕಾಪ್ಟರ್ ಮೂಲಕ ಸರ್ವೇ ಮಾಡಿದರು, ಆದರೆ ಸರ್ಕಾರದ ಬೇರೆ ಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಜನರ ಬಳಿಗೆ ಹೋಗಿ ಅವರ ಕಷ್ಟ ಆಲಿಸಬೇಕೋ ಬೇಡವೋ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸಚಿವರಾದ ಅಶೋಕ್ ಅವರು ಕೇಂದ್ರದಿಂದ ಪರಿಹಾರ ಕೇಳಿದ್ದೇವೆ, ಅವರ ತಂಡ ಬಂದು ಸರ್ವೇ ಮಾಡಿ ಪರಿಹಾರ ನೀಡುತ್ತದೆ ಎನ್ನುತ್ತಾರೆ, ಆದರೆ ಅಧಿಕಾರಿಗಳು ಹೇಳುವ ಮಾತೇ ಬೇರೆ. ಕೇಂದ್ರದ ವಿತ್ತ ಸಚಿವರನ್ನು ಭೇಟಿ ಮಾಡಿ ಮನವಿ ಕೊಟ್ಟು, ಪ್ರಧಾನಿಗಳ ಮನವೊಲಿಸಿ ಪರಿಹಾರ ಸಿಗುವವರೆಗೂ ಪಟ್ಟು ಬಿಡಬಾರದು. ನಮ್ಮ ಸರ್ಕಾರವಿದ್ದಾಗ ಪದೇ ಪದೇ ಪ್ರಧಾನಿಗಳನ್ನು ಭೇಟಿ ಮಾಡಿ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದೆವು, ಆದರೆ ರಾಜ್ಯ ಬಿಜೆಪಿ ನಾಯಕರು ಪ್ರಧಾನಿಗಳನ್ನು ಭೇಟಿ ಮಾಡೋಕೇ ಹೆದರುತ್ತಾರೆ. ಇದೊಂದು ಮಹಾ ಪುಕ್ಕಲು ಸರ್ಕಾರ ಎಂದು ಛೇಡಿಸಿದರು.

ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿದ್ದರಾಮಯ್ಯ, ಈ ವಿಚಾರದಲ್ಲಿ ರಾಜ್ಯ ಸರ್ಕಾರ ಬೇಗನೆ ಒಂದು ನಿರ್ಧಾರ ತೆಗೆದುಕೊಂಡಿದ್ದರೆ ಇಂದು ರಾಯಣ್ಣ ವರ್ಸಸ್ ಶಿವಾಜಿ, ಕನ್ನಡಿಗರು ವರ್ಸಸ್ ಮರಾಠಿಗರು ಎಂಬ ಪರಿಸ್ಥಿತಿಯೇ ನಿರ್ಮಾಣವಾಗುತ್ತಿರಲಿಲ್ಲ ಎಂದರು. ಅಲ್ಲದೇ, ಸರ್ಕಾರದ ನಿರ್ಲಕ್ಷ ಧೋರಣೆಯೇ ಇಂದಿನ ರಾಯಣ್ಣ ಪ್ರತಿಮೆ ವಿವಾದಕ್ಕೆ ನೇರ ಕಾರಣ. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿಯವರಿಗೆ 2 ಬಾರಿ ಕರೆ ಮಾಡಿ ಮಾತನಾಡಿದ್ದೇನೆ. ರಾಯಣ್ಣನಂಥ ಮಹಾನ್ ವ್ಯಕ್ತಿಗಳ ವಿಚಾರವನ್ನು ವಿವಾದ ಮಾಡಿಕೊಳ್ಳುವುದೇ ದೊಡ್ಡ ತಪ್ಪು. ಸರ್ಕಾರ ನಿನ್ನೆ ಮಾಡಿದ ಕೆಲಸವನ್ನು ಮೊದಲೇ ಮಾಡಿದ್ದರೆ ರಾಯಣ್ಣನ ಪ್ರತಿಮೆ ನಿರ್ಮಾಣದ ವಿಚಾರ ವಿವಾದವೇ ಆಗುತ್ತಿರಲಿಲ್ಲ ಎಂದರು. ಅಲ್ಲದೇ ಶಿವಾಜಿಯೂ ಸ್ವಾತಂತ್ರ್ಯ ಹೋರಾಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಶಿವಾಜಿಯಂತೆ ರಾಯಣ್ಣ ಕೂಡ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರು. ಇಬ್ಬರೂ ಗೌರವಕ್ಕೆ ಸಮಾನ ಅರ್ಹರು. ಇಂತಹಾ ಮಹಾನ್ ವ್ಯಕ್ತಿಗಳ ಮಧ್ಯೆ ಸಂಘರ್ಷ ಉಂಟಾಗಲು ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದು ಹೇಳಿದರು.

 

ಇದಲ್ಲದೇ ಈ ಹೋರಾಟದಲ್ಲಿ ದಾಖಲಾದ ಎಲ್ಲರ ಮೇಲಿನ ಮೊಕದ್ದಮೆಗಳನ್ನು ತಕ್ಷಣವೇ ಸರ್ಕಾರ ವಾಪಾಸು ಪಡೆಯಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಟಿಪ್ಪು ಸುಲ್ತಾನ್ ವಿಚಾರದಲ್ಲಿ ವಿಧಾನ ಪರಿಷತ್ ಸದಸ್ಯರಾದ ವಿಶ್ವನಾಥ್ ಅವರು ಸತ್ಯವನ್ನೇ ಹೇಳಿದ್ದಾರೆ ಎಂದ ಸಿದ್ದರಾಮಯ್ಯ, ಅವರು ಸತ್ಯಕ್ಕೆ ಸಮರ್ಥನೆ ನೀಡುವ ಅಗತ್ಯವೇ ಇಲ್ಲ. ತಮ್ಮ ಹೇಳಿಕೆಗೆ ಮುಂದೆಯೂ ಬದ್ಧರಾಗಿದ್ದರೆ ಸಾಕು. ಹಾಗೆಯೇ ಟಿಪ್ಪು ಈ ಮಣ್ಣಿನ ಮಗ ಎಂಬುದನ್ನು ಬಿಜೆಪಿಯವರು ಒಪ್ಪಿಕೊಳ್ಳಲಿ ಎಂದು ಹೇಳಿದರು.

ತಮ್ಮ ಆರೋಗ್ಯದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಕೊರೊನಾ ಸೋಂಕಿಗೆ ಒಳಗಾಗಿದ್ದ ನಾನು ಇದೀಗ ಸಂಪೂರ್ಣ ಗುಣಮುಖನಾಗಿದ್ದೇನೆ. ಕೊರೊನಾ ವಾಸಿಯಾಗದ ಕಾಯಿಲೆ ಏನಲ್ಲ. ಆದರೆ, ಮುಂಜಾಗ್ರತೆ ವಹಿಸುವುದು ಅವಶ್ಯಕ. ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಕಡ್ಡಾಯವಾಗಿ ಬಳಸಿದರೆ ಸೋಂಕು ತಗುಲುವುದರಿಂದ ದೂರವಿರಬಹುದು. ವೈದ್ಯರ ಸಲಹೆ ಮೇರೆಗೆ ನಾನು ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದೆ. ಇಂದಿನಿಂದ ಮತ್ತೆ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗುತ್ತೇನೆ. ಮುಂದಿನ ವಾರ ಬಾದಾಮಿಗೆ ಸಹ ಭೇಟಿ ನೀಡುವವನಿದ್ದೇನೆ ಎಂದು ತಿಳಿಸಿದರು.

Related posts

ಇವರೇ ನಮ್ಮ ‘ಅರ್ಹ’ ಸಚಿವರು …

Times fo Deenabandhu

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಡಾ. ಬಿ.ಆರ್. ಅಂಬೇಡ್ಕರ್ ಕುರಿತ ಧಾರಾವಾಹಿ

ಕೊರೊನಾಗೆ ಕನಿಷ್ಠ 40 ಮಂದಿ ಭಾರತೀಯ–ಅಮೆರಿಕನ್ನರು ಬಲಿ; 1,500 ಜನರಿಗೆ ಸೋಂಕು

Times fo Deenabandhu