Times of Deenabandhu
ಕ್ರೀಡೆ ಪ್ರಧಾನ ಸುದ್ದಿ ಮುಖ್ಯಾಂಶಗಳು

 ಧೋನಿ ನಾಯಕಪಟ್ಟಕ್ಕೆ ಏರಿದ ಗುಟ್ಟು ಬಿಚ್ಚಿಟ್ಟ ಸಚಿನ್

ನವದೆಹಲಿ: ಮಹೇಂದ್ರಸಿಂಗ್ ಧೋನಿ 2007ರ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ನಾಯಕತ್ವ ಗಳಿಸಿದ್ದು ಹೇಗೆ ಎಂಬ ಗುಟ್ಟನ್ನು ದಿಗ್ಗಜ ಸಚಿನ್ ತೆಂಡೂಲ್ಕರ್ ಮಂಗಳವಾರ ಬಿಚ್ಚಿಟ್ಟಿದ್ದಾರೆ.

’ಧೋನಿ ಕೀಪಿಂಗ್ ಮಾಡುವಾಗ ನಾನು ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದೆ. ಅವರು ಪಂದ್ಯದ ಪ್ರತಿಯೊಂದು ಎಸೆತ ಮತ್ತು ಸ್ಥಿತಿಗತಿಯನ್ನು ಅವಲೋಕಿಸುತ್ತಿದ್ದ ರೀತಿಯನ್ನು ನೋಡುತ್ತಿದ್ದೆ. ಅವರು ಪರಿಪಕ್ವಗೊಳ್ಳುತ್ತಿದ್ದ ಲಕ್ಷಣಗಳು ಢಾಳಾಗಿ ಗೋಚರಿಸುತ್ತಿದ್ದವು. ಟಿ20 ವಿಶ್ವಕಪ್ ಆಡಲು ದಕ್ಷಿಣ ಆಫ್ರಿಕಾಗೆ ಹೋಗದಿರಲು ನಾನು ನಿರ್ಧರಿಸಿದ್ದೆ. ಬೆನ್ನು ನೋವು ಮತ್ತು ಗಾಯಗಳಿದ್ದ ಕಾರಣ ಹಿಂದೆ ಸರಿದಿದ್ದೆ. ಆಗ ಬಿಸಿಸಿಐ ಕೆಲವು ಹಿರಿಯ ಅಧಿಕಾರಿಗಳು ನನ್ನ ಬಳಿ ನಾಯಕತ್ವದ ಹೊಣೆಯನ್ನು ಯಾರಿಗೆ ವಹಿಸುವುದು ಎಂದು ಕೇಳಿದಾಗ ಧೋನಿ ಹೆಸರನ್ನು ಸಲಹೆ ನೀಡಿದ್ದೆ‘ ಎಂದಿದ್ದಾರೆ.

ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅನುಭವಿಗಳಾದ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಕೂಡ ಆಡಿರಲಿಲ್ಲ. ಜೂನಿಯರ್ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಹಿರಿಯರಿಗೆ ವಿಶ್ರಾಂತಿ ನೀಡಲಾಗಿತ್ತು.

’ಇನ್ನೊಬ್ಬರ ಮನವೋಲಿಸುವಲ್ಲಿ ಧೋನಿಗೆ ಒಳ್ಳೆಯ ಹಿಡಿತ ಇತ್ತು. ಅಲ್ಲದೇ ನನ್ನ ಮತ್ತು ಅವರ ಮನೋಭೂಮಿಕೆ ಒಂದೇ ಇದ್ದ ಕಾರಣ ಪರಸ್ಪರ ಉತ್ತಮ ಸ್ನೇಹ, ಹೊಂದಾಣಿಕೆ ಸಾಧ್ಯವಾಗಿತ್ತು‘ ಎಂದು ಸಚಿನ್ ಹೇಳಿದ್ದಾರೆ.

2008ರಲ್ಲಿ ಧೋನಿ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಾಗ ಸಚಿನ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ಹರಭಜನ್ ಸಿಂಗ್ ಮತ್ತು ಜಹೀರ್ ಖಾನ್ ಅವರಂತಹ ಅನುಭವಿ ಆಟಗಾರರು ಬಳಗದಲ್ಲಿದ್ದರು.

ಹಿರಿಯ ಆಟಗಾರರನ್ನು ಧೋನಿ ನಿರ್ವಹಿಸಿದ ಬಗೆಯ ಕುರಿತು ಪ್ರತಿಕ್ರಿಯಿಸಿದ ಸಚಿನ್, ’ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ. ನಾಯಕನಾಗುವ ಯಾವುದೇ ಆಕಾಂಕ್ಷೆ ನನ್ನಲ್ಲಿರಲಿಲ್ಲ. ಆದರೆ ತಂಡಕ್ಕಾಗಿ ಚೆನ್ನಾಗಿ ಆಡಿ ಗೆಲುವಿನ ರೂವಾರಿಯಾಗುವ ಮಹತ್ವಾಕಾಂಕ್ಷೆ ಮಾತ್ರ ಇತ್ತು. ಆದ್ದರಿಂದ ಯಾರೇ ನಾಯಕರಾದರೂ ಆಟದ ಮೇಲೆ ಮಾತ್ರ ನನ್ನ ಗಮನ ಕೇಂದ್ರಿಕೃತವಾಗಿರುತ್ತಿತ್ತು. ನಮಗೆ ತೋಚಿದ ಸಲಹೆಗಳನ್ನು ಅವರಿಗೆ ಹೇಳುತ್ತಿದ್ದೆ. ಅವರಿಂದ ಬರುವ ಸೂಚನೆಗಳನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿತ್ತು‘ ಎಂದರು.

’ಗೆಳೆತನ ಮತ್ತು ಕ್ರಿಕೆಟ್ ಬೇರೆ ಬೇರೆ. ನಾಯಕನಾಗಿರುವ ಸ್ನೇಹಿತನು ನಿರ್ಧಾರ ಕೈಗೊಳ್ಳುವಾಗ ಗೆಳೆತನ ಅಡ್ಡಿಯಾಗಬಾರದು. ನಾಯಕನಾದವನು ಇನ್ನೊಬರ ಪರ ಮತ್ತು ನನ್ನ ವಿರುದ್ಧ ನಿರ್ಧಾರ ಕೈಗೊಂಡಾಗ ಅದನ್ನು ಪಾಲಿಸುವುದು ತಂಡದ ಆಟಗಾರನಾಗಿ ಕರ್ತವ್ಯವಾಗುತ್ತದೆ. ಆದರೆ ನಮ್ಮ ಸ್ನೇಹ ಮುಂದುವರಿಯುತ್ತದೆ. ಅದಕ್ಕೆ ಯಾವುದೇ ಚ್ಯುತಿ ಬರಬಾರದು‘ ಎಂದು ಸಚಿನ್ ಮಾರ್ಮಿಕವಾಗಿ ಹೇಳಿದ್ದಾರೆ.

Related posts

 ಹೊಸದಾಗಿ 2,958 ಪ್ರಕರಣ, ಸೋಂಕಿತರ ಸಂಖ್ಯೆ 49,391ಕ್ಕೆ

 ಗೋವಿಂದ ಪೈ ಪ್ರಶಸ್ತಿಗೆ ಪ್ರೊ.ಅ.ಸುಂದರ ಆಯ್ಕೆ

Times fo Deenabandhu

ವಯಸ್ಸಿಗೆ ಬಂದವರು ಐಶ್ವರ್ಯ ರೈ ಬೇಕು ಅಂತಾರೆ: ಅದ್ರೆ ಇರೋದು ಒಬ್ಬರೇ ತಾನೇ- ಮತ್ತೆ ವಿವಾದಕ್ಕೆ ಗುರಿಯಾದ ಸಚಿವ ಕೆ.ಎಸ್ ಈಶ್ವರಪ್ಪ…

Times fo Deenabandhu