Times of Deenabandhu
  • Home
  • ಮುಖ್ಯಾಂಶಗಳು
  •  ವಿಮಾನ ದುರಂತದ ಹಿಂದೆ ಉದಾಸೀನದ ಕರಿನೆರಳು, ರನ್‌ ವೇ ಫ್ರಿಕ್ಷನ್‌ ಟೆಸ್ಟ್‌ ಕಡೆಗಣಿಸಿದ್ದ ನಿಲ್ದಾಣ ಸಿಬ್ಬಂದಿ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ವಿಮಾನ ದುರಂತದ ಹಿಂದೆ ಉದಾಸೀನದ ಕರಿನೆರಳು, ರನ್‌ ವೇ ಫ್ರಿಕ್ಷನ್‌ ಟೆಸ್ಟ್‌ ಕಡೆಗಣಿಸಿದ್ದ ನಿಲ್ದಾಣ ಸಿಬ್ಬಂದಿ

ಕೋಳಿಕ್ಕೋಡ್‌: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಬೋಯಿಂಗ್‌ ವಿಮಾನ ದುರಂತಕ್ಕೆ ಕಾರಣ ಪತ್ತೆ ಹಚ್ಚುವ ಕಾರ್ಯ ತ್ವರಿತಗೊಂಡಿದೆ. ಟೇಬಲ್‌ಟಾಪ್‌ ನಿಲ್ದಾಣಗಳಲ್ಲಿ ಕಡ್ಡಾಯವಾಗಿದ್ದ ‘ರನ್‌ ವೇ ಫ್ರಿಕ್ಷನ್‌ ಟೆಸ್ಟ್‌’ (ವಿಮಾನ ಚಕ್ರಕ್ಕೆ ಸ್ಪಂದಿಸುವ ರನ್‌ ವೇ ಸಾಮರ್ಥ್ಯ) ಅನ್ನು ಇಲ್ಲಿ ನಡೆಸದೇ ಉದಾಸೀನ ತೋರಿರುವುದು ದುರಂತದ ಕಾರಣಗಳಲ್ಲಿ ಒಂದು ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಧಾರಾಕಾರ ಮಳೆ ಮತ್ತು ಬಿರುಗಾಳಿಯ ತೀವ್ರತೆ ಇದ್ದಾಗ ವಿಮಾನಗಳನ್ನು ಟೇಬಲ್‌ಟಾಪ್‌ ನಿಲ್ದಾಣಗಳಲ್ಲಿ ಇಳಿಸಲು ತುಂಬ ಸಿದ್ಧತೆ ಬೇಕಾಗುತ್ತದೆ. ವ್ಯತಿರಿಕ್ತ ಹವಾಮಾನ ಇದ್ದಾಗ ಇಂತಹ ಕಡೆಗಳಲ್ಲಿ ವಿಮಾನ ಇಳಿಸುವುದನ್ನೇ ರದ್ದುಗೊಳಿಸಲಾಗುತ್ತದೆ. ಒಂದು ವೇಳೆ ಇಳಿಸುವ ನಿರ್ಧಾರ ಮಾಡಿದರೆ, ಅದಕ್ಕೆ ಪೂರ್ವಭಾವಿಯಾಗಿ ರನ್‌ ವೇ ಫ್ರಿಕ್ಷನ್‌ ಟೆಸ್ಟ್‌ ನಡೆಸುವುದು ಕಡ್ಡಾಯವಾಗಿರುತ್ತದೆ. ಆದರೆ ಶುಕ್ರವಾರ ರಾತ್ರಿ ಕೆಟ್ಟ ಹವಾಮಾನದ ನಡುವೆ ಬೋಯಿಂಗ್‌ 737 ಇಳಿಸುವ ಮೊದಲು ಈ ಯಾವ ಎಚ್ಚರದ ಕ್ರಮಗಳನ್ನೂ ಕೈಗೊಂಡಿರಲಿಲ್ಲ ಎನ್ನುವುದು ಬೆಳಕಿಗೆ ಬಂದಿದೆ.
ಮುಂಗಾರು ಆರಂಭದಿಂದಲೂ ಕೇರಳದಲ್ಲಿ ಮಳೆಯ ರುದ್ರ ನರ್ತನ ನಡೆದಿದೆ. ರಸ್ತೆ, ರೈಲು ಮತ್ತು ವಿಮಾನ ಸಂಚಾರಕ್ಕೆ ಅಡ್ಡಿ ಎದುರಾಗಿದೆ. ವಿಮಾನಯಾನವಂತೂ ಸಾಹಸದ ನಡೆ ಎನಿಸಿದೆ. ಕೊಯಿಕ್ಕೋಡ್‌ ಸಮೀಪದ ಕರಿಪೂರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗುಡ್ಡದ ಮೇಲೆ ಇರುವುದರಿಂದ ಮಳೆಗಾಲದಲ್ಲಿ ಕಟ್ಟೆಚ್ಚರ ವಹಿಸುವುದು ಅನಿವಾರ್ಯ. ಇದಕ್ಕೆಂದೇ ಚೆನ್ನೈನಿಂದ ಫ್ರಿಕ್ಷನ್‌ ಟೆಸ್ಟಿಂಗ್‌ ವಾಹನವನ್ನು ಇಲ್ಲಿಗೆ ತರಿಸಲಾಗಿತ್ತು. ಆದರೆ ಅದರ ಬಳಕೆಯನ್ನೇ ಮಾಡದೆ ಕಡೆಗಣಿಸಿದ್ದರಿಂದ ದೊಡ್ಡ ದುರಂತ ಘಟಿಸಿತು ಎಂದು ಅಧಿಕಾರಿಗಳು ಬೇಸರ ತೋಡಿಕೊಂಡಿದ್ದಾರೆ.
​ಏನಿದು ಫ್ರಿಕ್ಷನ್‌ ಟೆಸ್ಟಿಂಗ್‌?
ರನ್‌ ವೇ, ಟ್ಯಾಕ್ಸಿ ವೇ ಮತ್ತು ಹೈ ವೇಗಳಲ್ಲಿ ಘರ್ಷಣೆಯ ಪ್ರಮಾಣ ಅಳೆಯಲು ಫ್ರಿಕ್ಷನ್‌ ಟೆಸ್ಟಿಂಗ್‌ ಮಾನದಂಡ ಬಳಕೆ ಮಾಡಲಾಗುತ್ತದೆ. ಇದರಿಂದ ಲ್ಯಾಂಡ್‌ ಆಗುವ ವಿಮಾನದ ಚಕ್ರಗಳ ಸುರಕ್ಷಿತ ಚಲನೆ ಮತ್ತು ನಿಲುಗಡೆ ಸಾಧ್ಯತೆಯನ್ನು ಖಚಿತ ಪಡಿಸಿಕೊಳ್ಳಬಹುದಾಗಿದೆ. ಇಂತಹ ಮುಖ್ಯ ಪರೀಕ್ಷೆಯನ್ನು ಕೋಳಿಕ್ಕೋಡ್‌ ನಿಲ್ದಾಣದ ಸಿಬ್ಬಂದಿ ಕಡೆಗಣಿಸಿದ್ದರು.

ಕೋವಿಡ್‌ ಕಾರಣ ವಿದೇಶದಿಂದ ವಾಪಸಾಗುತ್ತಿರುವ ಭಾರತೀಯರನ್ನು ಕರೆತರಲು ಆರಂಭಿಸಿರುವ ‘ವಂದೇ ಭಾರತ್‌’ ಅಭಿಯಾನದ ಭಾಗವಾಗಿ ಬೋಯಿಂಗ್‌ 737 ಶುಕ್ರವಾರ ದುಬೈನಿಂದ 184 ಪ್ರಯಾಣಿಕರು , ಪೈಲಟ್‌ ಸೇರು ಆರು ಸಿಬ್ಬಂದಿಯನ್ನು ಹೊತ್ತು ತಂದಿತ್ತು. ಮಳೆ ಗಾಳಿಯ ನಡುವೆ, ಸ್ಪಷ್ಟ ಚಿತ್ರಣ ಇಲ್ಲದೇ ರನ್‌ ವೇ ಶುರುವಾಗುವ ಜಾಗಕ್ಕಿಂತ 1000 ಮೀಟರ್‌ ಮೊದಲೇ ಟ್ಯಾಕ್ಸಿ ವೇನಲ್ಲಿ ವಿಮಾನ ಇಳಿದು ಸ್ಕಿಡ್‌ ಆಗಿತ್ತು. 2000 ಮೀಟರ್‌ ಚಲಿಸಿ ಕಂದಕಕ್ಕೆ ಉರುಳಿ ದುರಂತಕ್ಕೀಡಾಯಿತು. ಇಳಿಸಿಯೇ ತೀರಬೇಕು ಎನ್ನುವ ಪೈಲಟ್‌ ಹಠಮಾರಿತನ ಮತ್ತು ನಿಲ್ದಾಣ ಸಿಬ್ಬಂದಿಯ ಫ್ರಿಕ್ಷನ್‌ ಟೆಸ್ಟಿಂಗ್‌ ಕಡೆಗಣನೆಯಂತಹ ಸಂಗತಿಗಳು ಈಗ ಲೋಪದ ಪಟ್ಟಿಯ ಮುಂಚೂಣಿಗೆ ಬಂದು ನಿಂತಿವೆ.
ಸೇವೆಗೆ ಮೂರು ವಿಶೇಷ ವಿಮಾನ ಬಳಕೆ

ವಿಮಾನ ದುರಂತದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತ ಕುಟುಂಬಗಳ ನೆರವಿಗಾಗಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆ ಕೇರಳಕ್ಕೆ ಶನಿವಾರ ಮೂರು ವಿಶೇಷ ವಿಮಾನಗಳನ್ನು ಕಳಿಸಿಕೊಟ್ಟಿದೆ. ನಾಗರಿಕ ವಿಮಾನ ಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಕೂಡ ಕೊಳಿಕ್ಕೋಡ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಏರ್‌ ಇಂಡಿಯಾ ಅಧ್ಯಕ್ಷ, ನಿರ್ವಹಕ ನಿರ್ದೇಶಕ ರಾಜೀವ್‌ ಬನ್ಸಾಲ್‌ ಮತ್ತು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಕೆ. ಶ್ಯಾಮ್‌ ಸುಂದರ್‌ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತೆರವು ಕಾರ್ಯಾಚರಣೆಯ ನಿಗಾ ವಹಿಸಿದರು.

”ಕೊಳಿಕೋಡ್‌, ಮುಂಬಯಿ, ದಿಲ್ಲಿ ಮತ್ತು ದುಬೈನಲ್ಲಿ ಇರುವ ಸಂಸ್ಥೆಗಳ ಜತೆಗೆ ತುರ್ತು ಸೇವೆಗಳ ನಿರ್ದೇಶನಾಲಯವು ಸಂಪರ್ಕ ಸಾಧಿಸಿದ್ದು, ಇದರಿಂದ ಪರಿಹಾರ ಹಾಗೂ ಮಾಹಿತಿ ಕಾರ್ಯಗಳಿಗೆ ನೆರವಾಗಿದೆ. ಎಎಐಬಿ (ವಿಮಾನ ಅಪಘಾತ ತನಿಖಾ ಬ್ಯೂರೊ) ಮತ್ತು ಡಿಜಿಸಿಎ (ನಾಗರಿಕ ವಿಮಾನ ಯಾನ ನಿರ್ದೇಶನಾಲಯ) ಅಧಿಕಾರಿಗಳ ತಂಡ ದುರ್ಘಟನೆಯ ತನಿಖೆ ಆರಂಭಿಸಿದೆ ” ಎಂದು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ತಿಳಿಸಿದೆ.
​20 ಲಕ್ಷ ರೂ. ಪರಿಹಾರ

ಕೇರಳ ಸರಕಾರ ದುರಂತದಲ್ಲಿ ಮಡಿದವರ ಪ್ರತಿ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. 18 ಮಂದಿ ಮೃತಪಟ್ಟಿದ್ದು, 149 ಪ್ರಯಾಣಿಕರು ಗಾಯಗೊಂಡಿದ್ದಾರೆ. ಇವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ. ಏರ್‌ ಇಂಡಿಯಾ ಸಹ ತಲಾ 10 ಲಕ್ಷ ರೂ. ಮಧ್ಯಂತರ ಪರಿಹಾರ ಘೋಷಿಸಿದೆ.

ಮೃತ ಪ್ರಯಾಣಿಕರ ಮರಣೋತ್ತರ ಪರೀಕ್ಷೆ ಜತೆಗೆ ಕೋವಿಡ್‌-19 ಪರೀಕ್ಷೆಯನ್ನು ಕೂಡ ಮಾಡಲಾಗಿದೆ. ಮೃತರ ಪೈಕಿ ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ 50ಕ್ಕೂ ಅಧಿಕ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

​ರನ್‌ ವೇ ಚಿರಪರಿಚಿತ

ಅನುಭವಿ ಪೈಲಟ್‌ ಸಾಠೆ ಅವರಿಗೆ ಕರಿಪೂರ್‌ ವಿಮಾನ ನಿಲ್ದಾಣ ಚಿರಪರಿಚಿತವಾಗಿತ್ತು. ದುರಂತಕ್ಕೆ ಮೊದಲು ಅವರು ಇದೇ ನಿಲ್ದಾಣದಲ್ಲಿ ಪ್ರಯಾಣಿಕ ವಿಮಾನವನ್ನು 27 ಬಾರಿ ಲ್ಯಾಂಡಿಂಗ್‌ ಮಾಡಿಸಿದ್ದರು. ಹೀಗಾಗಿ ರನ್‌ವೇ ಉದ್ದ ಮತ್ತು ಸುರಕ್ಷತೆಯ ಪ್ರಮಾಣದ ಬಗ್ಗೆ ಅವರಿಗೆ ಪರಿಪೂರ್ಣ ಮಾಹಿತಿ ಇತ್ತು. ಇದರಿಂದಲೇ ಅವರು ಮಳೆಯ ನಡುವೆಯೂ ಅಂದಾಜಿನ ಮೇಲೆ ಶುಕ್ರವಾರ ವಿಮಾನ ಇಳಿಸುವ ದುಸ್ಸಾಹಸ ಮಾಡಿದರು ಎಂದು ಮೂಲಗಳು ತಿಳಿಸಿವೆ.

​ಜೀವ ಉಳಿಸಿದ ಪೈಲಟ್‌

ಭೂಸ್ಪರ್ಶದ ವೇಳೆ ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳದ ಕಾರಣ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಮಳೆಯಿಂದ ರನ್‌ವೇ ಒದ್ದೆಯಾಗಿದ್ದರಿಂದಾಗಿ ವಿಮಾನದ ಚಕ್ರಗಳು ರನ್‌ವೇ ಸ್ಪರ್ಶಿಸಿದಾಗ ಘರ್ಷಣೆಯಾಗಿ ಬೆಂಕಿ ಹೊತ್ತಿಕೊಳ್ಳಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಬೆಂಕಿ ಹೊತ್ತಿಕೊಳ್ಳದೇ ಇರುವುದರ ನಿಜವಾದ ಕಾರಣ ಬಹಿರಂಗವಾಗಿದೆ. ಲ್ಯಾಂಡಿಂಗ್‌ನಲ್ಲಿ ಸಮಸ್ಯೆಯಾಗುತ್ತಿರುವುದು ಅರಿವಿಗೆ ಬಂದ ತಕ್ಷಣ ಸಾಠೆ ಅವರು ಮೂರು ಸಲ ಆಗಸದಲ್ಲಿ ಹಾರಾಟ ನಡೆಸಿದರು. ಅವರ ಉದ್ದೇಶ ಇಂಧನವನ್ನು ಸಾಧ್ಯವಾದಷ್ಟು ಖಾಲಿ ಮಾಡುವುದಾಗಿತ್ತು. ಮೂರನೇ ಸಲ ಭೂಸ್ಪರ್ಶ ಮಾಡುತ್ತಿದ್ದಂತೆಯೇ ಎಂಜಿನ್‌ ಆಫ್‌ ಮಾಡಿದರು. ಇದರಿಂದ ಬೆಂಕಿ ಹೊತ್ತಿಕೊಳ್ಳಲಿಲ್ಲ ಎಂದು ತಿಳಿದುಬಂದಿದೆ. ಕೊನೆ ಕ್ಷಣದಲ್ಲಿ ಸಮಯಪ್ರಜ್ಞೆ ಮೆರೆದು ನೂರಾರು ಜನ ಜೀವ ಉಳಿಸಿದ ಸಾಠೆ ಅವರ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Related posts

ಸೈದ್ಧಾಂತಿಕ ಚರ್ಚೆಗೆ ಸಮಯವಲ್ಲ – ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ಬಹಿರಂಗ ಪತ್ರ

Times fo Deenabandhu

ಕೊರೊನಾ ಲಕ್ಷಣಗಳಿಲ್ಲದ ಸೋಂಕಿತರ ಸಂಖ್ಯೆ ಹೆಚ್ಚಳ, ತಲೆನೋವು ತಂದ ಹೊಸ ಬೆಳವಣಿಗೆ

Times fo Deenabandhu

ಪೌರತ್ವ ತಿದ್ದುಪಡಿ ಕಾನೂನು ಬಗ್ಗೆ ವದಂತಿ ಹರಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ದಾಖಲು

Times fo Deenabandhu