Times of Deenabandhu
  • Home
  • ಪ್ರಧಾನ ಸುದ್ದಿ
  • ಮುಂಗಾರಿನ ಅಬ್ಬರಕ್ಕೆ 2 ಬಲಿ; ಹಲವೆಡೆ ಪ್ರವಾಹ ಭೀತಿ, ಗುಡ್ಡ ಕುಸಿತ, ಸೇತುವೆ ಮುಳುಗಡೆ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಮುಂಗಾರಿನ ಅಬ್ಬರಕ್ಕೆ 2 ಬಲಿ; ಹಲವೆಡೆ ಪ್ರವಾಹ ಭೀತಿ, ಗುಡ್ಡ ಕುಸಿತ, ಸೇತುವೆ ಮುಳುಗಡೆ

ಮಂಗಳೂರು/ ಶಿವಮೊಗ್ಗ/ ಮೈಸೂರು/ಬೆಳಗಾವಿ: ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಕೊಂಕಣ ಪ್ರದೇಶದಲ್ಲಿ ಬುಧವಾರ ಭರ್ಜರಿ ಮುಂಗಾರು ಮಳೆ ಸುರಿದಿದ್ದು, ಗುರುವಾರಕ್ಕೂ ಮುಂದುವರಿಯು ಮುನ್ಸೂಚನೆ ದೊರೆತಿದೆ. ಏಕಾಏಕಿ ಚುರುಕು ಪಡೆದುಕೊಂಡಿರುವ ಮಳೆರಾಯ ರಾಜ್ಯದ ಅಲ್ಲಲ್ಲಿಅನಾಹುತಗಳನ್ನು ಸೃಷ್ಟಿಸಿದ್ದಾನೆ. ಮೈಸೂರಿನ ಎಚ್‌.ಡಿ. ಕೋಟೆಯಲ್ಲಿ ಮರವೊಂದು ಉರುಳಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರೆ, ಚಿಕ್ಕಮಗಳೂರಿನ ಕಡೂರು ತಾಲೂಕಿನ ಜಕ್ಕನಹಳ್ಳಿಯಲ್ಲಿ ವಿದ್ಯುತ್‌ ತಂತಿ ತುಳಿದು ಕೃಷಿಕರೊಬ್ಬರು ಪ್ರಾಣ ಬಿಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಹಳ್ಳದ ನೀರಿನ ಸೆಳೆತಕ್ಕೆ ಬೈಕ್‌ ಸಮೇತ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದು, ಹುಡುಕಾಟ ಮುಂದುವರಿದಿದೆ.
ಮಂಗಳೂರು, ಕೊಡಗು, ಚಿಕ್ಕಮಗಳೂರು, ಸಕಲೇಶಪುರ, ಕುಂದಾಪುರ ಹಾಗೂ ಬೆಳಗಾವಿ ಹಾಗೂ ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ಹೆಚ್ಚು ಮಳೆ ಸುರಿದಿದೆ. ಇದರಿಂದಾಗಿ ರಾಜ್ಯದ ಪ್ರಮುಖ ನದಿಗಳು ತುಂಬಿ ಹರಿಯತೊಡಗಿದ್ದು, ಹಳ್ಳ, ಕೊಳ್ಳಗಳೂ ಭರ್ತಿಯಾಗಿವೆ. ಕೆಲವೆಡೆ ಸೇತುವೆಗಳ ಮೇಲೆ ನೀರು ಹರಿದ ಕಾರಣ ರಸ್ತೆ ಸಂಪರ್ಕ ಬಂದ್‌ ಆಗಿವೆ. ಘಾಟಿ ಪ್ರದೇಶದಲ್ಲಿ ರಸ್ತೆ ಮೇಲೆ ಮರಗಳು ಉರುಳಿ ಬಿದ್ದಿದ್ದರಿಂದ ಕಿಲೋಮೀಟರ್‌ ವಾಹನಗಳ ದಟ್ಟಣೆ ಉಂಟಾಯಿತು. ವಾಹನಗಳ ಒಳಗೆ ಸಿಲುಕಿಕೊಂಡ ಪ್ರಯಾಣಿಕರು ಪರದಾಡಿದರು.

ರಾಜ್ಯದ ಬಹುತೇಕ ನದಿಗಳ ನೀರು ಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಜಲಾಶಗಳಲ್ಲಿ ಜಲಮಟ್ಟ ಏರಿಕೆಯಾಗುತ್ತಿವೆ. ಕಬಿನಿ ಹಾಗೂ ಯಗಚಿ ಜಲಾಶಯಗಳು ತುಂಬಿರುವ ಕಾರಣ ನೀರು ಹೊರಕ್ಕೆ ಹರಿಯಬಿಡಲಾಗಿದೆ. ಕೊಡಗಿನ ಭಾಗಮಂಡಲದಲ್ಲಿ ಜಲಪ್ರಳಯ ಸೃಷ್ಟಿಯಾಗಿ ದ್ವೀಪದಂತೆ ಗೋಚರಿಸುತ್ತಿದೆ. ಈ ನಡುವೆ ಮಳೆ ಹಾನಿ ತುರ್ತು ಸಂದರ್ಭದಲ್ಲಿಬಳಸಲು 50 ಕೋಟಿ ರೂ. ಬಿಡುಗಡೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.
ದ.ಕನ್ನಡದಲ್ಲಿ ಅಲರ್ಟ್‌

ದ.ಕ. ಜಿಲ್ಲೆಯ ಲ್ಲಿಬುಧವಾರ ಸರಾಸರಿ ಜಿಲ್ಲೆಯಲ್ಲಿ ಸರಾಸರಿ 88.3 ಮಿಮೀ ಮಳೆಯಾಗಿದೆ. ಹವಾಮಾನ ಇಲಾಖೆ ಗುರುವಾರ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಬುಧವಾರ ಬೆಳಗ್ಗಿನಿಂದ ಒಂದೇ ಸಮನೆ ಮಳೆ ಸುರಿದಿದ್ದು, ರಾತ್ರಿ ಹೊತ್ತು ಜಾಸ್ತಿ ಮಳೆಯಾಗುವ ಸಂಭವವಿದೆ. ಹೀಗಾಗಿ ಆ. ಆ.9, 10ರಂದು ಮತ್ತೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ. ಸೋಮೇಶ್ವರ, ಉಳ್ಳಾಲ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಸೋಮೇಶ್ವರದಲ್ಲಿ ಮಂಗಳವಾರ 12 ಹಾಗೂ ಬುಧವಾರ 5 ಮನೆಗಳನ್ನು ಸ್ಥಳಾಂತರ ಮಾಡಲಾಗಿದೆ.

ಮಂಗಳೂರು ತಾಲೂಕು ವ್ಯಾಪ್ತಿಯ ಪೆರ್ಮನ್ನೂರು, ಕೆಂಜಾರು, ಪಣಂಬೂರು, ತೋಕೂರು, ಬಡಗ ಉಳಿಪಾಡಿ, ಮಳವೂರು, ತೆಂಕ ಎಡಪದವಿನಲ್ಲಿಒಟ್ಟು 10 ಮನೆಗಳು ಭಾಗಶಃ ಹಾನಿಯಾಗಿದೆ. ಕೆಲವೆಡೆ ಗುಡ್ಡ ಕುಸಿತ ಸಂಭವಿಸಿದರೆ, ಕೆಲವೆಡೆ ಮರ ಉರುಳಿ ಬಿದ್ದು ಹಾನಿಯಾಗಿವೆ. ತಗ್ಗು ಪ್ರದೇಶಗಳಲ್ಲಿನೀರು ನಿಂತಿದೆ. ಅದೇ ರೀತಿ ರಾತ್ರಿ ವಾಹನ ಸಂಚಾರ ನಿಷೇಧಗೊಂಡಿರುವ ಚಾರ್ಮಾಡಿ ಘಾಟಿ ರಸ್ತೆ ಮೇಲೆ ಮರ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದ್ದು ಬುಧವಾರ ಮಧ್ಯಾಹ್ನ ವೇಳೆಗೆ ತೆರವುಗೊಳಿಸಲಾಗಿದೆ.

ಬೆಳ್ತಂಗಡಿ ದಿಡುಪೆ ಕಲ್ಲೆಟ್ಟು ಎಂಬಲ್ಲಿ ಕಿರುಸೇತುವೆಯೊಂದು ಕುಸಿದಿದೆ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರ, ನಂದಿನಿ, ಶಾಂಭವಿ, ಫಲ್ಗುಣಿ, ಪಯಸ್ವಿನಿ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳಗೊಂಡಿದ್ದು, ಮಳೆ ಇದೇ ರೀತಿ ಮುಂದುವರಿದರೆ ಪ್ರವಾಹ ಭೀತಿ ಎದುರಾಗಲಿದೆ.

ರಾತ್ರಿ ವಾಹನ ಸಂಚಾರ ನಿಷೇಧವಾಗಿರುವ ಚಾರ್ಮಾಡಿ ಘಾಟಿ ರಸ್ತೆ ಮೇಲೆ ಮರಗಳು ಉರುಳಿಬಿದ್ದು ಸಂಚಾರಕ್ಕೆ ತಡೆಯಾಗಿತ್ತು.
ಕಾವೇರಿ, ಹೇಮಾವತಿ ನದಿ ಪಾತ್ರದಲ್ಲಿ ಮಳೆ ಅಬ್ಬರ

ಕಾವೇರಿ ಹಾಗೂ ಹೇಮಾವತಿ ನದಿ ಪಾತ್ರದಲ್ಲಿ ಮಳೆ ಅಬ್ಬರ ಜೋರಾಗಿದೆ. ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಮರ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಎಚ್‌. ಮಹದೇವೇಗೌಡ (55) ಎಂದು ಗುರುತಿಸಲಾಗಿದೆ. ಗಾಳಿ ಮಳೆಯಿಂದ ಹಲವೆಡೆ ಮರಗಳು ಧರೆಗುರುಳಿದ್ದು ಸಂಪರ್ಕ ಕಡಿತಗೊಂಡಿದೆ.

ಹಾಸನ ಜಿಲ್ಲೆಯ ಸಕಲೇಶಪುರ ವ್ಯಾಪ್ತಿಯಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. 40ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿತಗೊಂಡಿವೆ. 180ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ.

ಕೊಡಗಿನಲ್ಲಿ ಬುಧವಾರ ಮತ್ತು ಗುರುವಾರ ಹೈ ಅಲರ್ಟ್‌ ಘೋಷಿಸಲಾಗಿದೆ. ಕಾವೇರಿ, ಲಕ್ಷತ್ರ್ಮಣ ತೀರ್ಥ ಸೇರಿದಂತೆ ಪ್ರಮುಖ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಭರ್ತಿ ಆಗಿದ್ದು, ಭಾಗಮಂಡಲ-ಮಡಿಕೇರಿ ಮತ್ತು ಭಾಗಮಂಡಲ – ನಾಪೋಕ್ಲು ನಡುವಿನ ರಸ್ತೆ ಸಂಪರ್ಕ ಕಡಿತವಾಗಿದೆ. ಕತ್ತಲೆಕಾಡು-ಸಿದ್ದಾಪುರ ಮಾರ್ಗದಲ್ಲಿ ಭೂಕುಸಿತ ಆಗಿರುವುದರಿಂದ ಮಡಿಕೇರಿ-ಸಿದ್ದಾಪುರ ಮಧ್ಯೆ ರಸ್ತೆ ಸಂಚಾರ ಕಡಿತವಾಗಿದೆ. ಹಾಕತ್ತೂರು-ಮರಗೋಡು-ಸಿದ್ದಾಪುರ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.

ಕೇರಳ ಹಾಗೂ ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದಿಂದ 50 ಸಾವಿರಕ್ಕೂ ಅಧಿಕ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗಿದೆ. ಇದರಿಂದ ನದಿಪಾತ್ರದ ಪ್ರದೇಶಗಳಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದ್ದು ನಂಜನಗೂಡಿನಲ್ಲಿ ಪ್ರವಾಹ ಭೀತಿ ಶುರುವಾಗಿದೆ.

ಕಪಿಲಾ ನದಿಯಲ್ಲಿ ಹೊರಹರಿವು ಹೆಚ್ಚಾಗಿರುವುದರಿಂದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಸ್ನಾನಘಟ್ಟ, ಮಲ್ಲನಮೂಲೆ ಗುರುಕಂಬಳೀಶ್ವರ ಮಠ, ಸಂಗಮದಲ್ಲಿರುವ ಶ್ರೀಮಹದೇವತಾತಾ ಐಕ್ಯಸ್ಥಳ ಹಾಗೂ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಸ್ನಾನಘಟ್ಟಗಳು ಮುಳುಗಡೆಗೊಂಡಿವೆ. ಪಾರಂಪರಿಕ ಹದಿನಾರು ಕಾಲುಮಂಟಪ ಭಾಗಶಃ ಮುಳುಗಡೆಯಾಗಿದ್ದು ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಆಗಮಿಸುವ ಭಕ್ತರು ಪ್ರವಾಹ ಭೀತಿಯಲ್ಲೂ ಪುಣ್ಯಸ್ನಾನಕ್ಕೆ ಮುನ್ನುಗ್ಗುತ್ತಿರುವುದರಿಂದ ದೇವಾಲಯದ ಸಿಬ್ಬಂದಿಗಳು ನದಿಗಿಳಿಯುವ ಭಕ್ತರನ್ನು ನಿಯಂತ್ರಿಸಲು ಪರದಾಡುತ್ತಿದ್ದಾರೆ.

ಸಕಲೇಶಪುರ ತಾಲೂಕಿನ ಹಾನುಬಾಳು, ಹೆತ್ತೂರು, ಯಸಳೂರು, ಬೆಳಗೂಡು ಹಾಗೂ ಕಸಬ ಹೋಬಳಿ ವ್ಯಾಪ್ತಿಯಲ್ಲಿ ಹಲವೆಡೆ ನೂರಾರು ಮರಗಳು ಬುಡಮೇಲಾಗಿವೆ. ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಮರಗಳು ಅಡ್ಡಲಾಗಿ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಡ ಅಲ್ಲಲ್ಲಿ ಮರಗಳು ಉರುಳಿದ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿದೆ. ಕೆಲವು ಗ್ರಾಮಗಳು ಹೊರಜಗತ್ತಿನ ಸಂಪರ್ಕ ಕಡಿದುಕೊಂಡಿವೆ.

ಹೇಮಾವತಿ ನದಿ ನೀರಿನ ಮಟ್ಟ ಒಂದೆ ಸಮನೆ ಏರಿಕೆಯಾಗಿ ಉಕ್ಕಿ ಹರಿದು, ಪಟ್ಟಣದ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಮಟ್ಟಕ್ಕೆ ಬಂದಿದ್ದು, ಗರ್ಭಗುಡಿಗೆ ನೀರು ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೂಡಿಗೆರೆ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿರುವ ಪರಿಣಾಮ ನದಿ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿದ್ದು, ತಾಲೂಕು ಆಡಳಿತ ನದಿ ಅಕ್ಕಪಕ್ಕದಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ.

ಯಗಚಿ ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಐದು ಕ್ರಸ್ಟ್‌ಗೇಟ್‌ಗಳ ಮೂಲಕ 1700 ಕ್ಯೂಸೆಕ್‌ ನೀರನ್ನು ಬುಧವಾರ ನದಿಗೆ ಹರಿಸಲಾಯಿತು.
ಕೆಆರ್‌ಎಸ್‌ ಮಟ್ಟ 108 ಅಡಿಗೆ ಏರಿಕೆ

ಕೊಡಗಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ‘ಜೀವನಾಡಿ’ ಕೆಆರ್‌ಎಸ್‌ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಂಡಿದೆ. ಬುಧವಾರ ಸಂಜೆ 29,855 ಕ್ಯೂಸೆಕ್‌ ಒಳ ಹರಿವು ದಾಖಲಾಗಿದ್ದು, ಇದು ಈ ವರ್ಷದ ಗರಿಷ್ಠ ಪ್ರಮಾಣದ ಒಳ ಹರಿವಾಗಿದೆ.

ಮಂಗಳವಾರ ಬೆಳಗ್ಗೆ 5056 ಕ್ಯೂಸೆಕ್‌ ಇದ್ದ ಒಳ ಹರಿವಿನ ಪ್ರಮಾಣ ಸಂಜೆ ವೇಳೆಗೆ 9778 ಕ್ಯೂಸೆಕ್‌ಗೆ ಹೆಚ್ಚಾಗಿತ್ತು. ಜತೆಗೆ ನೀರಿನ ಮಟ್ಟವೂ 106.10 ತಲುಪಿತ್ತು. ಆದರೆ, ಬುಧವಾರ ಬೆಳಗ್ಗೆ 20,488 ಕ್ಯೂಸೆಕ್‌ ಒಳಹರಿವಿನೊಂದಿಗೆ ಜಲಾಶಯದ ಮಟ್ಟ 107.17 ಅಡಿಗೇರಿತ್ತು. ಪುನಃ ಸಂಜೆ ವೇಳೆಗೆ ಒಳ ಹರಿವಿನ ಪ್ರಮಾಣ 29,855 ಕ್ಯೂಸೆಕ್‌ಗೆ ಹೆಚ್ಚಾಗಿದ್ದರಿಂದ ಜಲಾಶಯದ ನೀರಿನ ಮಟ್ಟ ಕೇವಲ 12 ತಾಸುಗಳಲ್ಲಿ ಒಂದು ಅಡಿಯಷ್ಟು ಹೆಚ್ಚಾಗಿ 108.40 ಅಡಿ ದಾಖಲಾಗಿದೆ. ಇದೇ ಪ್ರಮಾಣದ ನೀರು ಜಲಾಶಯಕ್ಕೆ ಹರಿದು ಬಂದರೆ ಆಗಸ್ಟ್‌ ಮಾಸಾಂತ್ಯದ ವೇಳೆಗೆ ಕನ್ನಂಬಾಡಿಕಟ್ಟೆ ಭರ್ತಿಯಾಗುವ ಸಾಧ್ಯತೆಯಿದೆ.

​ಬೆಳಗಾವಿಯಲ್ಲಿ ಜನ ಜೀವನ ತತ್ತರ

ಭಾರೀ ವರ್ಷಧಾರೆಯಿಂದ ಬುಧವಾರ ಜಿಲ್ಲೆಯ ಅಲ್ಲಲ್ಲಿಅನಾಹುತಗಳು ಸಂಭವಿಸಿವೆ. ಚಿಕ್ಕೋಡಿ ಭಾಗದಲ್ಲಿಕೃಷ್ಣಾ ನದಿ ನೀರು ಹೆಚ್ಚಳದಿಂದ ಕೆಳ ಹಂತದ ಎರಡು ಸೇತುವೆಗಳ ಜಲಾವೃತಗೊಂಡಿವೆ. ಕ್ಯಾಸಲ್‌ರಾಕ್‌ ಬಳಿ ಗುಡ್ಡ ಕುಸಿತಗೊಂಡಿದ್ದರಿಂದ ಬುಧವಾರ ಬೆಳಗ್ಗೆ ದೆಹಲಿಯಿಂದ ಗೋವಾಕ್ಕೆ ತೆರಳುತ್ತಿದ್ದ ನಿಜಾಮುದ್ದೀನ್‌ ಎಕ್ಸಪ್ರೆಸ್‌ ರೈಲು ಸಂಚಾರಕ್ಕೆ ತಡೆಯಾಗಿದೆ. ಬೆಳಗ್ಗೆ 5 ಗಂಟೆ ಸಮಯದಲ್ಲಿ ರೈಲ್ವೆ ಹಳಿ ಮೇಲೆ ಅಪಾರ ಮಣ್ಣು ಬಿದ್ದಿದ್ದನ್ನು ಕಂಡ ಚಾಲಕ ತಕ್ಷಣ ರೈಲು ನಿಲ್ಲಿಸಿದ್ದಾರೆ. 149 ಪ್ರಯಾಣಿಕರು ರೈಲಿನಲ್ಲಿ ಇದ್ದರು. ಮಧ್ಯಾಹ್ನದವರೆಗೆ ಮಣ್ಣು ತೆರವುಗೊಳಿಸಿ ಬಳಿಕ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಬೆಳಗಾವಿ ನಗರದ ಬಸವನ ಗಲ್ಲಿಯಲ್ಲಿ ರಸ್ತೆ ಪಕ್ಕ ನಿಂತಿದ್ದ ಕಾರಿನ ಮೇಲೆ ಮನೆಯ ಗೋಡೆ ಕುಸಿದು ಬಿದ್ದಿದೆ. ಮಳೆ ನೀರಿನಿಂದ ನೆನೆದ ಹಳೇ ಮನೆಯ ಗೋಡೆ ಕುಸಿದು ಬಿದ್ದಿದ್ದರಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ. ಬೆಳಗಾವಿ ನಗರದ ಎಪಿಎಂಸಿ ಮಾರುಕಟ್ಟೆಯ ಆವರಣ ಗೋಡೆ ಕೂಡ ಕುಸಿದು ಬಿದ್ದಿದ್ದು ಸಂಚಾರ ಸ್ಥಗಿತಗೊಂಡಿದೆ. ಅಲ್ಲದೆ, ಬೆಳಗಾವಿ ನಗರದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿದ್ದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

ಸವದತ್ತಿ-ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತಗೊಂಡಿದೆ. ಕಳೆದ ಬಾರಿಯ ಪ್ರವಾಹ ಸಂದರ್ಭದಲ್ಲಿ ಕೊಚ್ಚಿಹೋಗಿದ್ದ ಈ ಸೇತುವೆಯ ಪುನರ್‌ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಪರ್ಯಾಯ ರಸ್ತೆ ಮೂಲಕ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿತ್ತು. ಆದರೆ, ಮಳೆ ನೀರು ಹೆಚ್ಚಿದ್ದರಿಂದ ಕಾಮಗಾರಿ ಪ್ರದೇಶ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಚಾರ್ಮಾಡಿಯಲ್ಲಿ ಗುಡ್ಡ ಕುಸಿತ

ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಕಳೆದ ಎರಡು ದಿನದಿಂದ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಆಗುತ್ತಿದ್ದು, ಜಿಲ್ಲೆಯ ವಿವಿಧೆಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿದು ಹೆದ್ದಾರಿ ಸಂಚಾರ ಬಂದ್‌ ಆಗಿದೆ. ವಾಹನಗಳನ್ನು ಕೊಟ್ಟಿಗೆಹಾರದಲ್ಲಿಯೇ ತಡೆದು ನಿಲ್ಲಿಸಲಾಗಿದೆ.

ಮಂಗಳವಾರ ರಾತ್ರಿ ಮೂಡಿಗೆರೆ ಹ್ಯಾಂಡ್‌ಪೋಸ್ಟ್‌ ಹಾಗೂ ಬಿದರಹಳ್ಳಿಯಲ್ಲಿರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ಬಾರಿ ಗಾತ್ರದ 2 ಮರ ಬಿದಿದ್ದರಿಂದ ಮೂಡಿಗೆರೆ, ಸಕಲೇಶಪುರ, ಬೇಲೂರು, ಮಂಗಳೂರು, ಹೊರನಾಡು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಬುಧವಾರ ಮರ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಇನ್ನು ವಿದ್ಯುತ್ ತಂತಿ ತುಳಿದು ಕಡೂರು ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ರೈತರೊಬ್ಬರು ಅಸುನೀಗಿದ್ದಾರೆ. ತೋಟದಿಂದ ಹಿಂದಿರುಗುತ್ತಿದ್ದ ರೈತ ಪರಮೇಶ್ವರಪ್ಪ (38) ಭಾರೀ ಗಾಳಿ-ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ್ದಾರೆ.

Related posts

ದೇಶದಲ್ಲಿ 23,452 ಕ್ಕೇರಿದ ಕೊರೊನಾ ವೈರಸ್‌ ಪ್ರಕರಣಗಳು.

Times fo Deenabandhu

ದೀಪಿಕಾ ಪಡುಕೋಣೆ ನಟನೆಯ ಚಪಾಕ್​ ಚಿತ್ರ ತಂಡದ ಮನವಿಯನ್ನು ತಿರಸ್ಕರಿಸಿದ ಕೌಶಲಾಭಿವೃದ್ಧಿ ಸಚಿವಾಲಯ

Times fo Deenabandhu

ಪದೇ ಪದೇ ಅದೇ ತಪ್ಪೆಸಗಿ ಭಾರಿ ದಂಡ ತೆತ್ತ ಟೀಮ್‌ ಇಂಡಿಯಾ!

Times fo Deenabandhu