Times of Deenabandhu
  • Home
  • ಪ್ರಧಾನ ಸುದ್ದಿ
  • ದಶಕಗಳ ಕನಸು ನನಸು, ರಾಮಮಂದಿರ ನಿರ್ಮಾಣಕ್ಕೆ ಮುಹೂರ್ತ, ಅಯೋಧ್ಯೆ ಸರ್ವ ಸಜ್ಜು
ಪ್ರಧಾನ ಸುದ್ದಿ ಮುಖ್ಯಾಂಶಗಳು

ದಶಕಗಳ ಕನಸು ನನಸು, ರಾಮಮಂದಿರ ನಿರ್ಮಾಣಕ್ಕೆ ಮುಹೂರ್ತ, ಅಯೋಧ್ಯೆ ಸರ್ವ ಸಜ್ಜು

ಅಯೋಧ್ಯೆ: ದೇವನಗರಿಯಂತೆ ಕಂಗೊಳಿಸುತ್ತಿರುವ ಅಯೋಧ್ಯೆಯು ಜನ್ಮಭೂಮಿಯಲ್ಲೇ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಭೂಮಿಪೂಜೆಯ ಐತಿಹಾಸಿಕ ಕ್ಷಣವನ್ನು ಸಾಕ್ಷೀಕರಿಸಲು ಸಜ್ಜಾಗಿ ನಿಂತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಧ್ಯಾಹ್ನ 12.30ರಿಂದ 12.40ರ ನಡುವೆ ಅಭಿಜಿನ್‌ ಮುಹೂರ್ತದಲ್ಲಿರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಸರಯೂ ನದಿ ತೀರದ ಪುಣ್ಯ ನಗರಿಯಲ್ಲಿಗೌರಿಗಣೇಶ ಪೂಜೆಯೊಂದಿಗೆ ಸೋಮವಾರವೇ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ. ಅಯೋಧ್ಯೆ, ದಿಲ್ಲಿ, ವಾರಾಣಸಿ, ತಮಿಳುನಾಡಿನ ಕಂಚಿ ಮಂಗಳವಾರವೂ ರಾಮಚರಿತೆ ಪಠಣ ನಡೆಯಿತು. ಬುಧವಾರ ಬೆಳಗ್ಗೆಯಿಂದಲೇ ಪೂಜೆ, ಪುನಸ್ಕಾರಗಳು ನಡೆಯಲಿವೆ. ಮನೆಗಳ ಮುಂದೆ ರಂಗೋಲಿ, ತಳಿರು-ತೋರಣಗಳಿಂದ ಸಿಂಗರಿಸಲಾಗಿದೆ. ರಸ್ತೆಗಳು ಹೊಸ ರೂಪ ಪಡೆದಿವೆ. ಕಟ್ಟಡಗಳಿಗೆ ಹಳದಿ ಬಣ್ಣ ಬಳಿಯಲಾಗಿದ್ದು ನಗರದಲ್ಲಿಸಡಗರ ಮರೆ ಮೀರಿದೆ. ಅಯೋಧ್ಯೆಗೆ ಸಾಗುವ ರಸ್ತೆಗಳ ಇಕ್ಕೆಲಗಳಲ್ಲಿಉದ್ದೇಶಿತ ಮಂದಿರ ಹಾಗೂ ಶ್ರೀರಾಮನ ಚಿತ್ರಗಳನ್ನು ಒಳಗೊಂಡ ಬೃಹತ್‌ ಹೋರ್ಡಿಂಗ್‌ಗಳನ್ನು ಅಳವಡಿಸಲಾಗಿದೆ. ‘ರಾಮ್‌ ಲಲ್ಲಾ’ನ ಭಿತ್ತಿಚಿತ್ರಗಳಿಂದ ಅಲಂಕಾರಗೊಂಡಿರುವ ಗೋಡೆಗಳು ರಾಮಾಯಣದ ಕತೆ ಹೇಳುತ್ತಿವೆ. ಸರಯೂ ತೀರದ ದೇಗುಲಗಳಲ್ಲಿಮಂಗಳವಾರ ರಾತ್ರಿ ಲಕ್ಷ ಹಣತೆಗಳನ್ನು ಬೆಳಗಲಾಗಿದೆ. ಭೂಮಿಪೂಜೆ ನೆರವೇರುವ ದಿನವೂ ದೇಗುಲಗಳು ಮಾತ್ರವಲ್ಲದೆ, ನಗರದ ಮನೆಮನೆಗಳಲ್ಲಿಯೂ ಹಣತೆ ಬೆಳಗಲಾಗುತ್ತದೆ.
​ಪ್ರಧಾನಿ ನರೇಂದ್ರ ಮೋದಿ ಸೇರಿ 175 ಗಣ್ಯರಿಗೆ ಆಹ್ವಾನ
ಪ್ರಧಾನಿಯವರು 40 ಕೆ.ಜಿ ತೂಕದ ಬೆಳ್ಳಿ ಇಟ್ಟಿಗೆಗಳನ್ನು ಇಟ್ಟು ಶಿಲಾನ್ಯಾಸ ನೆರವೇರಿಸಿದ ಬಳಿಕ ನಡೆಯುವ ಸಮಾರಂಭದ ವೇದಿಕೆಯಲ್ಲಿಪ್ರಧಾನಿ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ಉತ್ತರ ಪ್ರದೇಶ ರಾಜ್ಯಪಾಲರಾದ ಆನಂದಿಬೆನ್‌ ಪಟೇಲ್‌, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸ್‌ ಮಾತ್ರ ಆಸೀನರಾಗುವರು. ಬಾಬ್ರಿ ಮಸೀದಿ ದಾವೆದಾರ ಇಕ್ಬಾಲ್‌ ಅನ್ಸಾರಿ, ಪದ್ಮಶ್ರೀ ಪುರಸ್ಕೃತ ಸಮಾಜಸೇವಕ ಮೊಹಮದ್‌ ಷರೀಫ್‌ ಸೇರಿ 175 ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿಸಾಮಾಜಿಕ ಅಂತರ ಕಾಪಾಡಿಕೊಂಡು ಆಸನ ವ್ಯವಸ್ಥೆ ಮಾಡಲಾಗಿದೆ. ಗುರುವಾರದಿಂದಲೇ ನಿರ್ಮಾಣ ಕಾಮಗಾರಿ ಆರಂಭವಾಗಲಿದ್ದು, ಮೂರರಿಂದ ಮೂರೂವರೆ ವರ್ಷಗಳಲ್ಲಿಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

​ಉಗ್ರರ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಭಾರಿ ಭದ್ರತೆ
ಉಗ್ರ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿಭಾರಿ ಭದ್ರತೆ ಕೈಗೊಳ್ಳಲಾಗಿದೆ. ಪ್ರತಿ ವಾಹನ ತಡೆದು ಮಾಹಿತಿ ಕಲೆಹಾಕಲಾಗುತ್ತಿದೆ. ”ಏನೂ ಕೆಲಸ ಇಲ್ಲದೇ ಅಯೋಧ್ಯೆ ಪ್ರವೇಶಿಸಲು ಹೊರಗಿನವರಿಗೆ ಅವಕಾಶ ನೀಡುತ್ತಿಲ್ಲ. ಭದ್ರತೆಯ ಸಮಸ್ಯೆ ಜತೆಗೆ ಕೋವಿಡ್‌ ಭೀತಿಯೂ ಇರುವುದರಿಂದ ಹೆಚ್ಚು ನಿಗಾ ವಹಿಸಲಾಗುತ್ತಿದೆ” ಎಂದು ಜಿಲ್ಲಾ ಪೊಲೀಸ್‌ ವರಿಷ್ಠ ದೀಪಕ್‌ ಕುಮಾರ್‌ ತಿಳಿಸಿದ್ದಾರೆ. ಎರಡು ದಿನ ಹೊರಗಿನವರಿಗೆ ಅಯೋಧ್ಯೆಯಲ್ಲಿಉಳಿದುಕೊಳ್ಳಲು ಕೂಡ ಅವಕಾಶ ಇಲ್ಲ. ಗಸ್ತಿಗೆ ಡ್ರೋನ್‌ಗಳನ್ನೂ ಬಳಸಿಕೊಳ್ಳಲಾಗುತ್ತಿದೆ.

​ರಾವಣ ಮಂದಿರದಲ್ಲೂ ಸಂಭ್ರಮ
ಅಯೋಧ್ಯೆಯಿಂದ 650 ಕಿ.ಮೀ ದೂರದಲ್ಲಿರುವ ರಾವಣನ ದೇವಸ್ಥಾನದಲ್ಲೂರಾಮ ಮಂದಿರ ಭೂಮಿ ಪೂಜೆಯ ಸಂಭ್ರಮಾಚರಣೆ ಗರಿಗೆದರಿದೆ. ರಾವಣನ ದೇವಸ್ಥಾನವು ಗೌತಮಬುದ್ಧ ನಗರ ಜಿಲ್ಲೆಯ ಬಿಸ್ರಾಖ್‌ನಲ್ಲಿದೆ. ಲಂಕಾಧೀಶ ರಾವಣ ಹತನಾದದ್ದು ರಾಮನಿಂದ. ಆತನಿಗೂ ಇಲ್ಲಿಪೂಜೆ ಸಲ್ಲುತ್ತದೆ. ರಾವಣ ದೇವಸ್ಥಾನದ ಅರ್ಚಕ ಮಹಾಂತ ರಾಮದಾಸ್‌ ಅವರು ಬುಧವಾರದ ಕಾರ್ಯಕ್ರಮವನ್ನು ಹರ್ಷದಿಂದ ಎದುರು ನೋಡುತ್ತಿದ್ದಾರೆ. ”ಅಯೋಧ್ಯೆ ಭೂಮಿ ಪೂಜೆ ನೆರವೇರಿದ ಬಳಿಕ ನಾವಿಲ್ಲಿಸಿಹಿ ಹಂಚಿ ಸಂಭ್ರಮಿಸುತ್ತೇವೆ,” ಎಂದು ಅವರು ತಿಳಿದರು. ”ರಾಮ-ರಾವಣನದ್ದು ತದ್ವಿರುದ್ಧ ವ್ಯಕ್ತಿತ್ವವಾಗಿದ್ದರೂ ಇಬ್ಬರ ನಡುವೆ ಬಿಡಿಸಲಾಗದ ಬಂಧ ಇದೆ. ಅಂದು ರಾವಣ ಇಲ್ಲದಿದ್ದರೆ ಇಂದು ರಾಮ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಅದೇ ರೀತಿ ರಾಮ ಇಲ್ಲದಿದ್ದರೆ ರಾವಣನ ಅಸ್ತಿತ್ವಕ್ಕೆ ಬೆಲೆ ಇರುತ್ತಿರಲಿಲ್ಲ. ಜನಪದ ಕಾವ್ಯಗಳ ಪ್ರಕಾರ ರಾವಣನ ಜನ್ಮಭೂಮಿ ‘ಬಿಸ್ರಾಖ್‌’. ಇದನ್ನು ನಾವು ರಾವಣ ಜನ್ಮಭೂಮಿ ಎಂದು ಕರೆಯುತ್ತೇವೆ. ಹೀಗಾಗಿ ರಾವಣನ ಮಂದಿರವಿದೆ. ರಾತ್ರಿ ವೇಳೆಯೂ ಈ ಮಂದಿರ ತೆರೆದಿರುತ್ತದೆ,” ಎನ್ನುತ್ತಾರೆ ರಾಮದಾಸ್‌.

​ಮನೆಮನೆಯಲ್ಲೂ ದೀಪಾವಳಿ
ಐತಿಹಾಸಿಕ ಭೂಮಿ ಪೂಜೆಯನ್ನು ದೇಶಾದ್ಯಂತ ದೀಪಾವಳಿಯಂತೆ ಆಚರಣೆ ಮಾಡಬೇಕು. ಎಲ್ಲಾ ಮನೆಗಳಿಗೆ ತಳಿರು ತೋರಣ ಕಟ್ಟಿ, ದೀಪಾಲಂಕಾರ ಮಾಡುವ ಮೂಲಕ ಪವಿತ್ರ ಆಚರಣೆಯಲ್ಲಿಪಾಲ್ಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮನವಿ ಮಾಡಿದೆ. ಕೋವಿಡ್‌ ಕಾರಣ ಬಯಸಿದವರೆಲ್ಲರಿಗೂ ಅಯೋಧ್ಯೆಗೆ ಬರಲು ಸಾಧ್ಯವಾಗುತ್ತಿಲ್ಲ. ಹಾಗೆಂದು ಮನೆಯಲ್ಲಿಯೇ ಇದ್ದು ರಾಮನನ್ನು ಜಪಿಸಲು ಅಡ್ಡಿಯಿಲ್ಲ. ಕಾರ್ಯಕ್ರಮದ ಸಂದರ್ಭ ಜನತೆ ಅಯೋಧ್ಯೆಯತ್ತ ಮುಖ ಮಾಡಿ ‘ರಾಮನಾಮ ಜಪ’ ಮಾಡಬೇಕು. ಸಾಧ್ಯವಾದ ಕಡೆಗಳಲ್ಲಿರಾಮ ಭಜನೆಗೆ ವ್ಯವಸ್ಥೆ ಮಾಡಬೇಕು ಎಂದು ಸಲಹೆ ಮಾಡಿದೆ.

​ಮಂದಿರ ನಿರ್ಮಾಣಕ್ಕೆ ಅಂದಾಜು 1,000 ಕೋಟಿ ರೂ. ವೆಚ್ಚ
ರಾಮಮಂದಿರ ಮತ್ತು ಸಂಕೀರ್ಣದ ನಿರ್ಮಾಣ ವೆಚ್ಚ ಎಷ್ಟಾಗಬಹುದು ಎನ್ನುವುದರ ನಿಖರ ಅಂದಾಜು ಇನ್ನೂ ಸಿಕ್ಕಿಲ್ಲ. ಸದ್ಯದ ಮಾಹಿತಿಯಂತೆ 1,000 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಸದ್ಯ ಟ್ರಸ್ಟ್‌ ಬಳಿ 15 ಕೋಟಿ ರೂ. ಮೂಲಧನವಿದೆ. ಅದರಲ್ಲಿ10 ಕೋಟಿ ರೂ.ಗಳನ್ನು ಹಿಂದಿನ ರಾಮ ಜನ್ಮಭೂಮಿ ನ್ಯಾಸ್‌ ವರ್ಗಾಯಿಸಿದ್ದರೆ, ಹೊಸ ಟ್ರಸ್ಟ್‌ ರಚನೆಯಾದ ಬಳಿಕ ಐದು ಕೋಟಿ ರೂ. ದೇಣಿಗೆ ಬಂದಿದೆ. ವಿಶ್ವ ಹಿಂದೂ ಪರಿಷತ್‌ ದೇಶದ ಐದು ಲಕ್ಷ ಹಳ್ಳಿಗಳ 10 ಕೋಟಿ ಕುಟುಂಬಗಳನ್ನು ಸಂಪರ್ಕಿಸಿ ಪ್ರತಿ ಕುಟುಂಬದಿಂದ ಕನಿಷ್ಠ 100 ರೂ. ದೇಣಿಗೆ ಸಂಗ್ರಹಿಸುವ ಯೋಜನೆ ಹಾಕಿಕೊಂಡಿದೆ. ನಿರ್ಮಾಣ ಕಾಮಗಾರಿ ಆರಂಭವಾದ ದಿನದಿಂದ ಮೂರುವರೆ ವರ್ಷದೊಳಗೆ ಮುಕ್ತಾಯಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.

Related posts

ಜಮಾತ್‌ ಧಾರ್ಮಿಕ ಸಭೆಯಲ್ಲಿ ರಾಜ್ಯದ 45 ಜನ ಭಾಗಿ, ಕೊರೊನಾ ದಲ್ಲಾಳಿಯಾಯ್ತಾ ದಿಲ್ಲಿಯ ಮಸೀದಿ..?

Times fo Deenabandhu

 ಗಡಿಯಲ್ಲಿ ಚೀನಾ ಅಟ್ಟಹಾಸ: ಕರ್ನಲ್‌ ಸೇರಿ 20 ಯೋಧರು ಬಲಿ

ಎಲ್ಲಾ ಅಪಾಯ ಎದುರಿಸಿ ನಿಲ್ಲುವುದು ಭಾರತದ ಗುಣ :ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ವಿಶ್ವಾಸ!