Times of Deenabandhu
  • Home
  • ಪ್ರಧಾನ ಸುದ್ದಿ
  •  ಕೋವಿಡ್ ನಿರ್ವಹಣೆಯಲ್ಲಿ ಅಕ್ರಮ ಚರ್ಚೆ: ‘ಕೈ’ ಆರೋಪಕ್ಕೆ ಲೆಕ್ಕ ಕೊಟ್ಟ ಸರ್ಕಾರ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಕೋವಿಡ್ ನಿರ್ವಹಣೆಯಲ್ಲಿ ಅಕ್ರಮ ಚರ್ಚೆ: ‘ಕೈ’ ಆರೋಪಕ್ಕೆ ಲೆಕ್ಕ ಕೊಟ್ಟ ಸರ್ಕಾರ

ಬೆಂಗಳೂರು: ‘ಕೋವಿಡ್ ನಿರ್ವಹಣೆ, ಆಹಾರ ಕಿಟ್ ವಿತರಣೆ ಸೇರಿದಂತೆ ಎಲ್ಲಿಯೂ ಭ್ರಷ್ಟಾಚಾರ ನಡೆದಿಲ್ಲ. ಕೋವಿಡ್ ಬೆಂಕಿಯಲ್ಲಿ ರಾಜಕೀಯ ರೊಟ್ಟಿ ಬೇಯಿಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್‌ ನಾಯಕರು ಮಾಡುತ್ತಿದ್ದಾರೆ’ ಎಂದು ಬಿಜೆಪಿಯ ಐವರು ಸಚಿವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಉಪಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹಾಗೂ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ ಅವರು, ಇಲ್ಲಿಯವರೆಗಿನ ಖರ್ಚಿನ ದಾಖಲೆಗಳನ್ನು ಮುಂದಿಟ್ಟು ಕಾಂಗ್ರೆಸ್ ಆರೋಪ ನಿರಾಧಾರ ಎಂದು ಸಾರಿದರು. ಕೌರವರ ಆರೋಪಕ್ಕೆ ಪಂಚ ಪಾಂಡವರು ಉತ್ತರ ನೀಡಿದ್ದೇವೆ ಎಂದರು.
‘ಆರೋಗ್ಯ ಇಲಾಖೆಯಿಂದ ₹290 ಕೋಟಿ ಮಾತ್ರ ಖರ್ಚು ಮಾಡಲಾಗಿದೆ. ಬೇಡಿಕೆ ಹಾಗೂ ಗುಣಮಟ್ಟ, ಸೌಲಭ್ಯ ಆಧರಿಸಿ ₹330 ರಿಂದ ₹700 ವರೆಗಿನ ದರದಲ್ಲಿ ಪಿಪಿಇ ಕಿಟ್‌ ಖರೀದಿ ಮಾಡಲಾಗಿದೆ. ₹2,100 ರಲ್ಲಿ ಕಿಟ್ ಖರೀದಿ ಮಾಡಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಆಕ್ಸಿಜನ್ ಖರೀದಿ ಮಾಡಿಯೇ ಇಲ್ಲ. ₹11.40 ರ ದರದಲ್ಲಿ ಗ್ಲೋವ್ಸ್ ಖರೀದಿ ಮಾಡಿದ್ದೇವೆ. ಅದಕ್ಕೆ ₹40 ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಜನರನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ಇಂತಹ ಆರೋಪ ಮಾಡಿದ್ದಾರೆ’ ಎಂದು ಅಶ್ವತ್ಥನಾರಾಯಣ ಹೇಳಿದರು.

ಬಸವರಾಜ ಬೊಮ್ಮಾಯಿ, ‘₹2 ಸಾವಿರ ಕೋಟಿ ಅಕ್ರಮ ಮಾಡಲಾಗಿದೆ ಎಂದು ಕಾಂಗ್ರೆಸ್‌ನವರು ಆರೋಪಿಸಿದ್ದಾರೆ. ಖರೀದಿಗಾಗಿ ನಾವು ಖರ್ಚು ಮಾಡಿರುವುದೇ ₹506 ಕೋಟಿ ಮಾತ್ರ. ಸಾವಿರ ವೆಂಟಿಲೇಟರ್ ಖರೀದಿಯಾಗಿದೆ ಎಂದಿದ್ದಾರೆ, ಇಲ್ಲಿಯವರೆಗೆ 250 ವೆಂಟಿಲೇಟರ್ ಮಾತ್ರ ಖರೀದಿಸಲಾಗಿದೆ. ಸುಳ್ಳಿನ ಸಹಕಾರ ಅವರಿಗಿದ್ದರೆ, ಸತ್ಯದ ಬಲ ನಮಗಿದೆ’ ಎಂದರು.

ಆರ್. ಅಶೋಕ, ‘ಜಿಲ್ಲಾಧಿಕಾರಿಗಳಿಗೆ ₹720 ಕೋಟಿ ಕೊಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಹಸಿ ಸುಳ್ಳು ಹೇಳಿದ್ದಾರೆ. ಇಲ್ಲಿಯವರೆಗೆ ₹232 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳಿಗೆ ಒಟ್ಟಾರೆಯಾಗಿ ವಲಸೆ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ₹56 ಕೋಟಿ, ಕೋವಿಡ್‌ ನಿಯಂತ್ರಿಸುವ ಪರೀಕ್ಷೆ, ಕ್ವಾರಂಟೈನ್‌ ವೆಚ್ಚಕ್ಕಾಗಿ ₹35 ಕೋಟಿ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ₹65 ಕೋಟಿ ಕೊಡಲಾಗಿದೆ’ ಎಂದು ವಿವರಿಸಿದರು.

ಶಿವರಾಂ ಹೆಬ್ಬಾರ, ‘ಕಾರ್ಮಿಕ ಇಲಾಖೆಯಲ್ಲಿ ₹1 ಸಾವಿರ ಕೋಟಿ ಅವ್ಯವಹಾರ ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದಾರೆ. ನಮ್ಮ ಇಲಾಖೆಯಿಂದ ₹892 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 16.32 ಲಕ್ಷ ಕಾರ್ಮಿಕರ ಖಾತೆಗಳಿಗೆ ತಲಾ ₹5 ಸಾವಿರದಂತೆ ನೆರವು ಹಂಚಲಾಗಿದ್ದು, ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾದ ಹಣ ₹816 ಕೋಟಿ. ಊಟದ ವ್ಯವಸ್ಥೆಗಾಗಿ ₹25.27 ಕೋಟಿ, ಆಹಾರ ಕಿಟ್‌ಗೆ ₹46.89 ಕೋಟಿ ಹಾಗೂ ಸಾಗಣೆ ಸೇರಿದಂತೆ ಇತರೆ ವೆಚ್ಚಕ್ಕೆ ₹5.69 ಕೋಟಿ ವಿನಿಯೋಗ ಮಾಡಲಾಗಿದೆ’ ಎಂದರು.

Related posts

 24 ಗಂಟೆಗಳಲ್ಲಿ 20 ಸಾವಿರ ಸಮೀಪಕ್ಕೆ ಕೊರೊನಾ ಪ್ರಕರಣ: ದೇಶದಲ್ಲಿ 5 ಲಕ್ಷ ದಾಟಿದ ಸೋಂಕಿತರ ಸಂಖ್ಯೆ!

ವಾಯುವ್ಯ ಕರ್ನಾಟಕ ಸಾರಿಗೆಯಲ್ಲಿ 2814 ಹುದ್ದೆಗಳ ನೇಮಕ: ಅರ್ಜಿ ಆಹ್ವಾನ

Times fo Deenabandhu

ಮುಂದುವರೆದ ಕೊರೊನಾ ಮರಣ ಮೃದಂಗ, ವಿಶ್ವದಲ್ಲಿ ಒಂದು ಲಕ್ಷ ದಾಟಿದ ಸಾವಿನ ಸಂಖ್ಯೆ

Times fo Deenabandhu