Times of Deenabandhu
  • Home
  • ಪ್ರಧಾನ ಸುದ್ದಿ
  •  ‘ಜೆಡಿಎಸ್‌ಗೆ ವರ್ಷದಿಂದ ಮಂಕು, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ’: ‘ದಳ’ಪತಿಗಳಿಗೆ ದೇವೇಗೌಡರ ಪತ್ರ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ

 ‘ಜೆಡಿಎಸ್‌ಗೆ ವರ್ಷದಿಂದ ಮಂಕು, ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿ’: ‘ದಳ’ಪತಿಗಳಿಗೆ ದೇವೇಗೌಡರ ಪತ್ರ

ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್‌ ಕಳೆದೊಂದು ವರ್ಷದಿಂದ ಮಂಕು ಹಾಗೂ ನಿಸ್ತೇಜಗೊಂಡಿದ್ದು, ಮುಂದಿನ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ತಾವೆಲ್ಲರೂ ಕ್ರಿಯಾಶೀಲರಾಗಬೇಕೆಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಪಕ್ಷದ ಎಲ್ಲಮುಖಂಡರಿಗೂ ಪತ್ರ ಬರೆದಿದ್ದಾರೆ.

ಶಾಸಕರು, ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿಗಳು, ವಿಧಾನ ಪರಿಷತ್‌ ಸದಸ್ಯರು, ಜಿಲ್ಲಾ ಪಂಚಾಯತಿ‌ ಸದಸ್ಯರು ಸೇರಿ ಎಲ್ಲ ಮುಖಂಡರಿಗೆ ಅವರು ಪತ್ರ ಬರೆದು ಪಕ್ಷ ಸಂಘಟನೆಗೆ ಶ್ರಮಿಸುವಂತೆ ಮನವಿ ಮಾಡಿದ್ದಾರೆ.
ನಮ್ಮಿಂದ ತಪ್ಪಾಗಿದೆ
ಇನ್ನು ಒಂದು ವರ್ಷದ ನಂತರ ರಾಜ್ಯದಲ್ಲಿ ಚುನಾವಣಾ ಬಿಸಿ ಆರಂಭವಾಗುತ್ತದೆ. ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧರಾಗಿ ಇಷ್ಟು ವರ್ಷ ಕೆಲಸ ಮಾಡಿಕೊಂಡು ಬಂದಿರುವ ನಿಮ್ಮ ಭವಿಷ್ಯ ಉಜ್ವಲವಾಗಬೇಕೆಂಬುದು ನನ್ನ ಆಸೆ. ದುರಾದೃಷ್ಟವಶಾತ್‌ ಸಮ್ಮಿಶ್ರ ಸರಕಾರದಲ್ಲಿ ನಮ್ಮ ಪಕ್ಷ ಪಾಲುದಾರವಾಗಿದ್ದು, ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ನಿಮ್ಮ ಹಿತ ರಕ್ಷಿಸುವಲ್ಲಿ ನಾವು ಎಡವಿದ್ದೇವೆ. ನಾವು ತಪ್ಪು ಮಾಡಿದ್ದೇವೆ ಎಂಬುದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಅದೇ ರೀತಿ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆಗೆ ಮಾಡಿಕೊಂಡ ಹೊಂದಾಣಿಕೆಯಿಂದ ಉಂಟಾದ ವೈಪರೀತ್ಯಗಳು, ವಿರೋಧಾಭಾಸಗಳಿಂದ ನೀವು ಮುಜುಗರಕ್ಕೊಳಗಾಗಿದ್ದರೂ ಪಕ್ಷದ ತೀರ್ಮಾನಕ್ಕೆ ಬದ್ದರಾಗಿ ಕೆಲಸ ಮಾಡಿದ್ದಿರಿ. ನೀವು ಉತ್ಸಾಹ ಹಾಗೂ ಸ್ಥೈರ್ಯ ಕಳೆದುಕೊಂಡಿರುವುದು ಪಕ್ಷಕ್ಕೆ ದೊಡ್ಡ ಹಾನಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಡವರ ವಿರುದ್ಧವಾಗಿವೆ. ಬಿಜೆಪಿ ಸರಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯಿದೆ ಹಾಗೂ ಎಪಿಎಂಸಿ ಕಾಯಿದೆ ಹೇಗೆ ಜನವಿರೋಧಿ ಎಂಬುದನ್ನು ಜನರಿಗೆ ಅರ್ಥಮಾಡಿಸಿಕೊಡಬೇಕು ಎಂದು ಹೇಳಿದ್ದಾರೆ. ನಿಮ್ಮ ಹಾಗೂ ಪಕ್ಷದ ಭವಿಷ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಕೊರೊನಾ ವಾತಾವರಣ ತಿಳಿಯಾಗುವವರೆಗೂ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಒಂದು ವರ್ಷದಿಂದ ನಿಷ್ಕ್ರಿಯ
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಜೆಡಿಎಸ್‌ ಅಕ್ಷರಶಃ ನಿಷ್ಕ್ರಿಯಗೊಂಡಿದೆ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ರಾಜ್ಯಾಧ್ಯಕ್ಷ ಸ್ಥಾನ ತ್ಯಾಗ ಮಾಡಿದ ಬಳಿಕ ಹಿರಿಯ ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ ಕೊರೊನಾ ಸಂದರ್ಭದಲ್ಲಿ ಪಕ್ಷದಲ್ಲಿ ಯಾವುದೇ ಚಟುವಟಿಕೆ ಕಂಡು ಬಂದಿಲ್ಲ.

ನಾಯಕರ ವರ್ತನೆ ಬಗ್ಗೆ ಪ್ರಮುಖ ಮುಖಂಡರಾದ ಮಧು ಬಂಗಾರಪ್ಪ, ವೈ.ಎಸ್‌.ವಿ.ದತ್ತ, ರಮೇಶ್‌ ಬಾಬು ಮೊದಲಾದವರು ಮುನಿಸಿಕೊಂಡಿದ್ದರು. ಇನ್ನಷ್ಟು ಶಾಸಕರು ವಲಸೆ ಹೋಗಬಹುದೆಂಬ ಭೀತಿ ಈಗ ಜೆಡಿಎಸ್‌ನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಮುಖಂಡರಿಗೆ ಪತ್ರ ಬರೆದು ಸಂಘಟನೆಯ ಪಾಠ ಮಾಡಿದ್ದಾರೆ.

Related posts

ಈ ದೇಗುಲದಲ್ಲಿರುವ ಕಂಬಗಳನ್ನು ಇದುವರೆಗೆ ಯಾರಿಗೂ ಸರಿಯಾಗಿ ಲೆಕ್ಕ ಹಾಕಲು ಸಾಧ್ಯವಾಗಿಲ್ಲ…!

Times fo Deenabandhu

ಯುಪಿ ರೇಪ್‌ ಕ್ಯಾಪಿಟಲ್‌ , ಒಂದೇ ವರ್ಷದಲ್ಲಿ 86 ರೇಪ್‌!

Times fo Deenabandhu

 ಬಾಲಿವುಡ್‌ನ ಖ್ಯಾತ ನಟ ಅಮಿತಾಬ್ ಬಚ್ಚನ್‌ಗೆ ಕೋವಿಡ್-19 ದೃಢ