Times of Deenabandhu
  • Home
  • ಮುಖ್ಯಾಂಶಗಳು
  • ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಡಾ. ಬಿ.ಆರ್. ಅಂಬೇಡ್ಕರ್ ಕುರಿತ ಧಾರಾವಾಹಿ
ಪ್ರಧಾನ ಸುದ್ದಿ ಮುಖ್ಯಾಂಶಗಳು

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಡಾ. ಬಿ.ಆರ್. ಅಂಬೇಡ್ಕರ್ ಕುರಿತ ಧಾರಾವಾಹಿ

ಈ ಲಾಕ್‌ಡೌನ್ ಎಫೆಕ್ಟ್‌ನಿಂದಾಗಿ ಒಂದಷ್ಟು ಧಾರಾವಾಹಿಗಳು ಪ್ರಸಾರವನ್ನೇ ನಿಲ್ಲಿಸಿವೆ. ಅದರ ಮಧ್ಯೆ ಹೊಸ ಹೊಸ ಕಂಟೆಂಟ್‌ ಇರುವ ಧಾರಾವಾಹಿಗಳೂ ಕೂಡ ಶುರುವಾಗುತ್ತಲೇ ಇವೆ. ಇದೀಗ ಜೀ ಕನ್ನಡ ವಾಹಿನಿಯು ಜುಲೈ 4ರಿಂದ ಹೊಸ ಧಾರಾವಾಹಿಯೊಂದನ್ನು ಆರಂಭಿಸಲಿದೆ. ಭಾರತದ ಸಂವಿಧಾನ ರೂಪಿಸಿದ, ಶೋಷಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತಾದ ಧಾರಾವಾಹಿ ಇದಾಗಿದೆ.

‘ಜುಲೈ 4ರಿಂದ ಶನಿವಾರ ಮತ್ತು ಭಾನುವಾರ ಸಂಜೆ 6 ರಿಂದ 7 ಗಂಟೆಯವರೆಗೆ ಪ್ರಸಾರವಾಗಲಿರುವ ‘ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್’ ಧಾರಾವಾಹಿಯು ಜೀ ಕನ್ನಡದ ಪ್ರಯಾಣದಲ್ಲಿ ಮತ್ತೊಂದು ಮಹತ್ವಪೂರ್ಣ ಹೆಜ್ಜೆಯಾಗಿದೆ. ಭಾರತದ ಸಂವಿಧಾನ ಶಿಲ್ಪಿ, ಅಸಾಧಾರಣ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನದ ಗಾಥೆಯು ಕನ್ನಡದಲ್ಲಿ ಪ್ರಸಾರವಾಗುತ್ತಿರುವುದು ಇದೇ ಮೊದಲು’ ಎಂದು ವಾಹಿನಿ ಹೇಳಿಕೊಂಡಿದೆ.
ಬಾಲ್ಯದಿಂದಲೇ ಅಸ್ಪೃಶ್ಯತೆಯ ಸಂಕಷ್ಟ ಎದುರಿಸಿದರೂ ಕಂಗೆಡದೇ ತಮ್ಮ ವಿದ್ಯಾಭ್ಯಾಸ ಪೂರೈಸಿ ಶೋಷಿತರ ಹಕ್ಕುಗಳನ್ನು ಪ್ರತಿಪಾದಿಸಿದ, ಅವರ ಸ್ವಾತಂತ್ರ್ಯಕ್ಕಾಗಿ ಹೋರಾಡುವ ನಾಯಕನಾಗಿ ಬೆಳೆದವರು ಡಾ. ಬಿ.ಆರ್ ಅಂಬೇಡ್ಕರ್. ಅವರ ಈ ಬೆಳವಣಿಗೆಯ ಹಂತಗಳನ್ನು ಧಾರಾವಾಹಿಯಲ್ಲಿ ಎಳೆ ಎಳೆಯಾಗಿ ಮನಮುಟ್ಟುವಂತೆ ಚಿತ್ರಿಸಲಾಗಿದೆಯಂತೆ. ಭಾರತ ಸ್ವತಂತ್ರವಾದ ನಂತರ ಕಾನೂನು ಸಚಿವರಾಗಿ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅವರ ಕೊಡುಗೆ ಅನುಪಮವಾದುದು. ಅವರ ಸೇವೆಯನ್ನು ಗುರುತಿಸಿ 1990ರಲ್ಲಿ ಮರಣೋತ್ತರವಾಗಿ ಅವರಿಗೆ ‘ಭಾರತ ರತ್ನ’ ನೀಡಿ ಪುರಸ್ಕರಿಸಲಾಗಿದೆ.
‘ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್‌’ ಧಾರಾವಾಹಿ ಪ್ರಸಾರ ಕುರಿತು ಮಾತನಾಡಿರುವ ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ‘ಜನರು ಬಯಸುವ ಕಾರ್ಯಕ್ರಮಗಳನ್ನು ರೂಪಿಸುವುದರಲ್ಲಿ ಮುಂಚೂಣಿಯಲ್ಲಿರುವ ಜೀ ಕನ್ನಡ ಇದೀಗ ಭಾರತದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಜೀವನ ಕುರಿತಾದ ಧಾರಾವಾಹಿ ಪ್ರಸಾರ ಮಾಡುವ ಮೂಲಕ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಜೀ ಕನ್ನಡದ ಎಲ್ಲ ಧಾರಾವಾಹಿಗಳನ್ನು ಪ್ರೀತಿಯಿಂದ ವೀಕ್ಷಿಸುವ ಕನ್ನಡದ ವೀಕ್ಷಕರಿಗೆ ಈ ಧಾರಾವಾಹಿ ಇಷ್ಟವಾಗುತ್ತದೆ ಎಂಬ ನಂಬಿಕೆ ನಮ್ಮದು’ ಎನ್ನುತ್ತಾರೆ.

Related posts

ಫೆಬ್ರವರಿ 15ರಿಂದ ಬಹುಮುಖಿ ರಾಷ್ಟ್ರೀಯ ನಾಟಕೋತ್ಸವ ಆಯೋಜನೆ

Times fo Deenabandhu

 ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದರೆ ಮೊಕದ್ದಮೆ: ಸಚಿವ ಕೆ. ಸುಧಾಕರ್‌

ಮಕ್ಕಳಿಗೆ ಹೊರೆಯಾಗದಂತೆ ಪಠ್ಯಗಳನ್ನು ಸಂಕ್ಷಿಪ್ತಗೊಳಿಸಲಾಗುವುದು: ಸುರೇಶ್‌ ಕುಮಾರ್