Times of Deenabandhu
  • Home
  • ಮುಖ್ಯಾಂಶಗಳು
  • ಭಾರತ ಮೊದಲ ಸಲ ಏಕದಿನ ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡದ್ದು ಇದೇ ದಿನ
ಕ್ರೀಡೆ ಪ್ರಧಾನ ಸುದ್ದಿ ಮುಖ್ಯಾಂಶಗಳು

ಭಾರತ ಮೊದಲ ಸಲ ಏಕದಿನ ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡದ್ದು ಇದೇ ದಿನ

ಜೂನ್‌ 25 ಭಾರತ ಕ್ರಿಕೆಟ್‌ ಪಾಲಿಗೆ ಎಂದೂ ಮರೆಯಲಾಗದ ದಿನ. ಇಂದಿಗೆ ಬರೋಬ್ಬರಿ 37 ವರ್ಷಗಳ ಹಿಂದೆ ಇದೇ ದಿನ (1983ರ ಜೂನ್‌ 25) ಭಾರತ ಏಕದಿನ ಕ್ರಿಕೆಟ್‌ನಲ್ಲಿ ಮೊದಲಸಲ ವಿಶ್ವಕಪ್‌ ಗೆದ್ದ ಸಾಧನೆ ಮಾಡಿತ್ತು.
ಮೊದಲ ಎರಡು (1975, 1979ರ) ಟೂರ್ನಿಗಳಲ್ಲಿ ಚಾಂಪಿಯನ್ ಎನಿಸಿದ್ದ ದೈತ್ಯ ಪಡೆ ವೆಸ್ಟ್ ಇಂಡೀಸ್‌ ಸತತ ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿತ್ತು. ಆದರೆ, ವೆಸ್ಟ್‌ ಇಂಡೀಸ್‌ ತಂಡದ ಕನಸನ್ನು ಕಪಿಲ್ ದೇವ್‌ ನೇತೃತ್ವದ ಭಾರತ ನುಚ್ಚುನೂರು ಮಾಡಿತ್ತು. ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭಾರತ, ವಿಂಡೀಸ್‌ ತಂಡವನ್ನು 43 ರನ್‌ಗಳಿಂದ ಮಣಿಸಿ ಟ್ರೋಫಿಗೆ ಮುತ್ತಿಕ್ಕಿತ್ತು.
ಮೊದಲು ಬ್ಯಾಟ್‌ ಮಾಡಿದ ಭಾರತ ಪರ ಎಸ್‌. ಶ್ರೀಕಾಂತ್‌ 38, ಮೋಹಿಂದರ್‌ ಅಮರ್‌ನಾಥ್‌ 26, ಸಂದೀಪ್‌ ಪಾಟಿಲ್‌ 27 ರನ್‌ ಗಳಿಸಿದ್ದು ಬಿಟ್ಟರೆ ಉಳಿದವರು ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲರಾಗಿದ್ದರು. ಸುನೀಲ್‌ ಗಾವಸ್ಕರ್‌ (2) ಹಾಗೂ ನಾಯಕ ಕಪಿಲ್ (15)‌ ವೈಫಲ್ಯ ಕಂಡಿದ್ದರು. ಹೀಗಾಗಿ ಭಾರತ 54.4 ಓವರ್‌ಗಳಲ್ಲಿ ಕೇವಲ 183 ರನ್‌ ಗಳಿಸಿ ಅಲೌಟಾಗಿತ್ತು.

ಸುಲಭ ಗುರಿ ಬೆನ್ನತ್ತಿದ್ದ ವಿಂಡೀಸ್‌, ಭಾರತದ ಸಂಘಟಿತ ದಾಳಿ ಎದುರು ಕಂಗೆಟ್ಟಿತ್ತು.

ಮದನ್‌ ಲಾಲ್‌ 12 ಓವರ್‌ಗಳಲ್ಲಿ 31 ರನ್‌ ನೀಡಿ ಮೂರು ವಿಕೆಟ್‌ ಕಿತ್ತರೆ, ಅಮರ್‌ನಾಥ್‌ 7 ಓವರ್‌ಗಳಲ್ಲಿ ಕೇವಲ 12ರನ್‌ ನೀಡಿ 3 ವಿಕೆಟ್‌ ಉರುಳಿಸಿದ್ದರು. ಉಳಿದಂತೆ ಬಲ್ವಿಂದರ್‌ ಸಂದು 2 ಮತ್ತು ಕಪಿಲ್, ರೋಜರ್ ಬಿನ್ನಿ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡಿದ್ದರು. ಹೀಗಾಗಿ ಕ್ಲೈವ್‌ ಲಾಯ್ಡ್‌ ಬಳಗ 52 ಓವರ್‌ಗಳಲ್ಲಿ 140 ರನ್‌ ಗಳಿಸಿ ಆಲೌಟ್‌ ಮಾಡಿತ್ತು.
ಆಲ್‌ರೌಂಡ್‌ ಪ್ರದರ್ಶನ ನೀಡಿದ್ದ ಅಮರ್‌ನಾಥ್‌ (26 ರನ್‌ ಹಾಗೂ 12ಕ್ಕೆ3) ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಈ ಟೂರ್ನಿಯಲ್ಲಿ ಕಪಿಲ್‌ ಪಡೆ ಪ್ರಶಸ್ತಿ ಗೆದ್ದ ಬಳಿಕ ದೇಶದಲ್ಲಿ ಕ್ರಿಕೆಟ್ ಜನಪ್ರಿಯ ಕ್ರೀಡೆಯಾಗಿ ಬೆಳೆಯಿತು.

Related posts

ಇನ್ನೆರಡು ದಿನಗಳಲ್ಲಿ ಮುಂಗಾರು ಪ್ರವೇಶ?

ಯೆಸ್‌ ಬ್ಯಾಂಕ್‌ ಸಾಲ 2,41,999 ಕೋಟಿಗೆ ಏರಿದ್ದೇಗೆ? ಚಿದಂಬರಂ ಪ್ರಶ್ನೆ, ಎಸ್‌ಬಿಐ ಹೂಡಿಕೆಗೆ ಕಿಡಿ

ಜಗತ್ತಿನಾದ್ಯಂತ ಕೊರೊನಾ ಕರಿಛಾಯೆ: 3 ವಾರದಲ್ಲಿ ನಿಯಂತ್ರಣಕ್ಕೆ ಬರದಿದ್ರೆ ಕಷ್ಟ ಅಂದ್ರು ನಿರ್ಮಲಾ

Times fo Deenabandhu