Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜ್ಯ

ಮತ್ತೆ ಲಾಕ್‌ಡೌನ್‌ ಅನುಮಾನ

 

ಬೆಂಗಳೂರು: ಕೋವಿಡ್‌–19ರ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಆಡಳಿತ ಮತ್ತು ವಿರೋಧ ಪಕ್ಷಗಳ ಕೆಲವು ಶಾಸಕರು ಮತ್ತೆ ಲಾಕ್‌ಡೌನ್‌ ವಿಧಿಸಬೇಕೆಂಬ ಬೇಡಿಕೆ ಮಂಡಿಸಲು ಆರಂಭಿಸಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ವಕ್ಷೇತ್ರ ಕನಕಪುರವನ್ನು ಲಾಕ್‌ಡೌನ್‌ ಮಾಡಿಸಿದ್ದಾರೆ.

 

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ತಾವು ಪ್ರತಿನಿಧಿಸುವ ರಾಮನಗರ ಮತ್ತು ಅವರ ಪತ್ನಿ ಅನಿತಾಕುಮಾರ ಸ್ವಾಮಿ ಪ್ರತಿನಿಧಿಸುವ ಚನ್ನಪಟ್ಟಣ ಕ್ಷೇತ್ರಗಳಲ್ಲಿ ಲಾಕ್‌ಡೌನ್‌ ಮಾಡಬೇಕು ಎಂದು ಅವರಿಬ್ಬರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. 

 

‘ಯಾವುದೇ ಶಾಸಕರು ಲಾಕ್‌ಡೌನ್‌ ವಿಧಿಸಲೇಬೇಕು ಎಂಬ ಒತ್ತಡವನ್ನು ಮುಖ್ಯಮಂತ್ರಿ ಮೇಲೆ ಹೇರಿಲ್ಲ. ಕೆಲವು ಶಾಸಕರು ವೈಯಕ್ತಿಕವಾಗಿ ಒತ್ತಾಯಿಸಿದ್ದಾರೆ. ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಕೆಲವು ಸಚಿವರು ಈ ವಿಷಯ ಪ್ರಸ್ತಾಪಿಸಲಿದ್ದಾರೆ.  ಆದರೆ, ಸಚಿವರ ಕಾರ್ಯಪಡೆ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿಲ್ಲ. ಹೀಗಾಗಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ತೀರಾ ಕಡಿಮೆ’ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗುವುದರಿಂದ ಲಾಕ್‌ಡೌನ್‌ ಬಗ್ಗೆ ತೀರ್ಮಾನ ತೆಗೆದುಕೊಳ್ಳುವು ದಿಲ್ಲ. ಲಾಕ್‌ಡೌನ್‌ ಮಾಡಿದರೆ, ಪರೀಕ್ಷಾ ಪ್ರಕ್ರಿಯೆಗೆ ಅಡ್ಡಿ ಆಗುತ್ತದೆ. ಕಂಟೈನ್‌ಮೆಂಟ್‌ ವಲಯದಲ್ಲಿರುವ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿಯವರೂ ಪರೀಕ್ಷೆ ಮುಗಿಯುವವರೆಗೆ ಈ ಸಂಬಂಧ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

 

ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ, ಈಗಿನ ಸ್ಥಿತಿ ನೋಡಿದರೆ, ಲಾಕ್‌ಡೌನ್‌ ಇರಬೇಕಿತ್ತು ಎನ್ನಿಸುತ್ತದೆ ಎಂದು ಹೇಳಿದ್ದರು. ಈ ಮಾತು ಸಾಕಷ್ಟು ವ್ಯಾಖ್ಯಾನಗಳಿಗೆ ಕಾರಣವಾಗಿತ್ತು.

 

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರು  ‘ಲಾಕ್‌ಡೌನ್‌ ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು.

 

Related posts

ಸಾವಿರಾರು ರೂ. ಖರ್ಚು ಮಾಡಿ ಇಟಲಿಗೆ ಅಮೇರಿಕಾದ ಮಣ್ಣು ತಂದ ಯೋಧ…! : ಯಾಕೆ ಗೊತ್ತಾ…?

Times fo Deenabandhu

ನಿಖಿಲ್‌ ವಿವಾಹದಲ್ಲಿ ಲಾಕ್‌ಡೌನ್‌ ಉಲ್ಲಂಘನೆ ಆರೋಪ: ವರದಿ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್‌ ಸೂಚನೆ

Times fo Deenabandhu

ಪ್ರಿಕಾಷನ್‌ ತಗೊಳ್ಳಿ, ಪ್ಯಾನಿಕ್‌ ಆಗಬೇಡಿ, ಅನಗತ್ಯ ದೂರ ಪ್ರಯಾಣ ಬಿಡಿ: ಜನತೆಗೆ ಮೋದಿ ಸಲಹೆ

Times fo Deenabandhu