September 27, 2020
Times of Deenabandhu
  • Home
  • ಮುಖ್ಯಾಂಶಗಳು
  • ಹೆಚ್.ವಿಶ್ವನಾಥರು ಜೊತೆಗಿದ್ದ ಮಾಜಿ ಅನರ್ಹ ಶಾಸಕರುಗಳು ಅರ್ಹರಾಗಿ ಅಧಿಕಾರ ಅನುಭವಿಸುತ್ತಿದ್ದಾರೆ…ಆದರೆ….?
ಮುಖ್ಯಾಂಶಗಳು ರಾಜಕೀಯ ರಾಜ್ಯ

ಹೆಚ್.ವಿಶ್ವನಾಥರು ಜೊತೆಗಿದ್ದ ಮಾಜಿ ಅನರ್ಹ ಶಾಸಕರುಗಳು ಅರ್ಹರಾಗಿ ಅಧಿಕಾರ ಅನುಭವಿಸುತ್ತಿದ್ದಾರೆ…ಆದರೆ….?

ಕು.ಸ.ಮಧುಸೂದನ ರಂಗೇನಹಳ್ಳಿ

ಅಡಗೂರು ವಿಶ್ವನಾಥರನ್ನು ದುರಂತ ನಾಯಕನೆಂದು ಕರೆಯಬೇಕೊ ಇಲ್ಲಾ ತಮ್ಮ ರಾಜಕೀಯ ಬದುಕಿನ ಗುಂಡಿಯನ್ನು ತಾವೇ ತೋಡಿಕೊಂಡ ಅಪ್ರತಿಮ ಮೇದಾವಿ ಎಂದು ಕರೆಯಬೇಕೊ  ಎಂದು ಜನ ಯೋಚಿಸುತ್ತಿದ್ದರೆ ದರಲ್ಲಿ ಅಚ್ಚರಿಯೇನಿಲ್ಲ. ತನ್ನ ಸಾಮರ್ಥ್ಯವನ್ನು ಇರುವುದಕ್ಕಿಂತ ಹೆಚ್ಚೆಂದು ನಂಬಿಕೊಂಡು ರಾಜಕೀಯ ಮಾಡುವ ರಾಜಕಾರಣಿಗಳ ಸ್ಥಿತಿಯೇ ಹೀಗೆ.

 ಹುಣಸೂರಿನ ಉಪಚುನಾವಣೆ ಸೋತನಂತರ  ವಿದಾನಸಭೆಯಿಂದ ವಿದಾನಸಭೆಗೆ ನಡೆಯುವ ಚುನಾವಣೆಯಲ್ಲಾದರು ತನಗೆ ಟಿಕೆಟ್ ಸಿಕ್ಕರೆ ಗೆದ್ದು ಮೇಲ್ಮನೆಯ ಸದಸ್ಯನಾಗಿ ಸಚಿವನಾಗಬಹುದೆಂಬ ನಿರೀಕ್ಷೆಯಲ್ಲಿದ್ದ ಹೆಚ್. ವಿಶ್ವನಾಥರಿಗೆ ಬಾರಿ ಭ್ರಮನಿರಸನವಾಗಿದೆ.

ಅಂತ ಶಾಸಕನ ಸ್ಥಾನವೂ ಇಲ್ಲ ಇತ್ತ ಪಕ್ಷವೊಂದರ ರಾಜ್ಯಾದ್ಯಕ್ಷ ಪದವಿಯೂ ಇಲ್ಲದಂತೆ ಅತಂತ್ರ ಸ್ಥಿತಿಯಲ್ಲಿರುವ ವಿಶ್ವನಾಥರ ಬಗ್ಗೆ ನಾವು ಮರುಕಪಡುವಂತಹುದ್ದೇನೂ ಇಲ್ಲ . ಯಾಕೆಂದರೆ ಅವರ ಇಂದಿನ ಸ್ಥಿತಿಗೆ ಸ್ವತ: ಅವರೇ ಕಾರಣ..

ಯಾವುದೆ ತತ್ವ ಸಿದ್ದಾಂತವಿರದ ಮಾಮೂಲಿ ರಾಜಕಾರಣಿಯಾಗಿದ್ದರೆ ವಿಶ್ವನಾಥರ ಬಗ್ಗೆ ನಾವು ಚರ್ಚಿಸುವ ಅಗತ್ಯವಿರಲಿಲ್ಲ. ಆದರೆ ವಿಶ್ವನಾಥರು ನಮ್ಮ ರಾಜ್ಯದ ಹಿಂದುಳಿದ ಸಮುದಾಯದಿಂದ ಬಂದು ಅಹಿಂದದ ಜೊತೆ ಗುರುತಿಸಿಕೊಂಡು ಸಂಘಟನೆಯನ್ನು ಪ್ರಬಲಗೊಳಿಸಲು ಶ್ರಮಿಸಿದವರು. ಸಮಾಜವಾದಿ ಚಿಂತನೆಯನ್ನು ಮೈಗೂಡಿಸಿಕೊಂಡು ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸರ ಕೈಲಿ ಬೆನ್ನು ತಟ್ಟಿಸಿಕೊಂಡು ಅವರ ರಾಜಕೀಯ ಗರಡಿಯಲ್ಲಿ ಪಳಗಿದವರು. ರಾಜ್ಯದ ಶಿಕ್ಷಣ ಮಂತ್ರಿಯಾಗಿದ್ದು ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ಇಲಾಖೆಯಲ್ಲಿ ತಂದವರು. ಶಿಕ್ಷಣ ಇಲಾಖೆಯಲ್ಲಿ ಅವರು ಜಾರಿಗೆ ತರಲು ಪ್ರಯತ್ನಿಸಿದ ಕೆಲವು  ಬದಲಾವಣೆಗಳ ಕಾರಣಕ್ಕೆ ಹಲವು ಪ್ರಬಲ ಮಠಾದೀಶರ ಕೆಂಗಣ್ಣಿಗೆ ಗುರಿಯಾಗಿದ್ದರೂ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ ಹೊಂದಿದ್ದವರು. ಇಂತಹ ವಿಶ್ವನಾಥರು ಒಂದು ಶಾಸಕ ಸ್ಥಾನ ಪಡೆಯಲು ಬಿ.ಜೆ.ಪಿ. ನಾಯಕರುಗಳ ಮುಂದೆ ವಿನೀತರಾಗಿ ನಿಂತಿರುವುದನ್ನು ನೋಡಿದರೆ ಬೇಸರ ಮತ್ತು ವಿಷಾದ ಏಕಕಾಲಕ್ಕೆ ಉಂಟಾಗುತ್ತದೆ.

ಕಾಂಗ್ರೇಸಲ್ಲಿದ್ದಾಗ ಅವತ್ತಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಏನೇ ಭಿನ್ನಮತವಿದ್ದರೂ ಪಕ್ಷ ಬಿಡುವ ನಿರ್ದಾರವನ್ನು ಅವರು ತೆಗೆದುಕೊಳ್ಳಬಾರದಿತ್ತೆನಿಸುತ್ತೆ. ಯಾಕೆಂದರೆ ಸಿದ್ದರಾಮಯ್ಯನವರೇನು ಶಾಶ್ವತ ಮುಖ್ಯಮಂತ್ರಿಯಾಗಿರಲಿಲ್ಲ. ಸಹನೆಯಿಂದ ಇದ್ದಿದ್ದರೆ ಪಕ್ಷ ಅವರ ಬೆನ್ನಿಗೆ ನಿಲ್ಲುತ್ತಿತ್ತು. ಕಾಂಗ್ರೆಸ್ ತೊರೆದು ವಿಶ್ವನಾಥ್ ಮೊದಲ ತಪ್ಪು ಮಾಡಿದ್ದಂತು ನಿಜ.

ಹೋಗಲಿ ಒಂದಷ್ಟು ದಿನ, ವಾತಾವರಣ ಮತ್ತು ರಾಜಕೀಯ ಗೊಂದಲಗಳು ತಿಳಿಯಾಗುವವರೆಗು, ಅವರು ತಟಸ್ಥರಾಗಿದ್ದು ಕಾಯಬಹುದಿತ್ತು. ಆದರೆ ಅವಸರಕ್ಕೆ ಬಿದ್ದು ಜಾತ್ಯಾತೀತ ಜನತಾದಳಕ್ಕೆ ಸೇರಿ ಎರಡನೇ ತಪ್ಪು ಮಾಡಿದರು. ಆ ಪಕ್ಷದಲ್ಲಿ ದೇವೇಗೌಡರ ಕುಟುಂಬದ ಹೊರತಾದ ಯಾವ  ಹಿರಿಕಿರಿ ನಾಯಕನ  ಮಾತಿಗೂ ಕವಡೆಕಾಸಿನ ಕಿಮ್ಮತ್ತಿಲ್ಲವೆಂಬುದು ವಿಶ್ವನಾಥರಿಗೆ ಗೊತ್ತಿರದ ವಿಷಯವೇನಾಗಿರಲಿಲ್ಲ. ಪಕ್ಷದ ರಾಜ್ಯಾಕ್ಷರಾದರೂ  ತನ್ನೊಬ್ಬ ಹಿಂಬಾಲಕನಿಗೆ ನಗರಸಭೆಯ ಟಿಕೇಟು ಕೊಡಿಸಲಾಗದಷ್ಟು  ಅಧಿಕಾರಹೀನರಾಗಿಯೇ ರಾಜ್ಯಾದ್ಯಕ್ಷ ಹುದ್ದೆ ನಿಬಾಯಿಸಬೇಕಾದ ಪರಿಸ್ಥಿತಿಯಲ್ಲಿ ವಿಶ್ವನಾಥರಿದ್ದರು. ಇನ್ನು ಮೈತ್ರಿ ಸರಕಾರದಲ್ಲಿ ಸಚಿವಗಿರಿಯಿರಲಿ. ಸಮನ್ವಯ ಸಮಿತಿಯ ಸದಸ್ಯರಾಗುವ ಅವಕಾಸವೂ ಅವರಿಗೆ ಸಿಗಲಿಲ್ಲ.

ಬಹುಶ; ಹಂತದಲ್ಲಿಯೇ ವಿಶ್ವನಾಥರು ಹತಾಶರಾಗಿ ಬಿ.ಜೆ.ಪಿ. ನಾಯಕರ ಸಂಪರ್ಕಕ್ಕೆ ಬಂದಿದ್ದು. ಇವತ್ತಿಗು ಅರ್ಥವಾಗದೆ ಇರುವುದೆಂದರೆ ಮೈತ್ರಿ ಸರಕಾರ ಉರುಳಿಸಲು      ಮುಂದಾದ ವಿಶ್ವನಾಥರ ನಿಜವಾದ ಕೋಪ ಯಾರ ಮೇಲಿತ್ತೆಂಬುದಾಗಿದೆ.ಸಮನ್ವಯ ಸಮಿತಿಯ ಅದ್ಯಕ್ಷರಾಗಿದ್ದ ಸಿದ್ದರಾಮಯ್ಯನವರ ಮೇಲೊ ಇಲ್ಲ ತನ್ನನ್ನು ಸಚಿವರನ್ನಾಗಿ ಮಾಡದ ಕುಮಾರಸ್ವಾಮಿಯವರ ಮೇಲೊ ಎಂಬುದನ್ನು  ಅವರು ಪ್ರಾಮಾಣಿಕವಾಗಿ ಆತ್ಮಸಾಕ್ಷಿಯಿಂದ ಹೇಳಲು ನಾವವರ ಮುಂದಿನ ಪುಸ್ತಕಕ್ಕೆ ಕಾಯಬೇಕೇನೊ.

ಒಟ್ಟಿನಲ್ಲಿ ಯಾರ ಮೇಲಿನ ಕೋಪಕ್ಕೊ ಅಧಿಕಾರರಹಿತ  ಸ್ಥಿತಿಯ ಅಸಹಾಯಕತೆ ತಂದ ಹತಾಶೆಯೊ. ವಿಶ್ವನಾಥ್ ಬಂಡಾಯ ಶಾಸಕರಾಗಿ ಬಿ.ಜೆ.ಪಿ.ಯತ್ತ ನಡೆದರು. ಇದು ಅವರ ರಾಜಕೀಯ ಜೀವನದ ಮೂರನೇ ಮತ್ತು ಅತಿ ದೊಡ್ಡ ತಪ್ಪೆಂದು ಹೇಳಬಹುದು. ಯಾಕೆಂದರೆ ದಶಕಗಳ ಕಾಲ ಅವರು ಯಾವ ಕೋಮುವಾದವನ್ನು, ಬಲಪಂಥೀಯ ರಾಜಾರಣವನ್ನು ಉಗ್ರವಾಗಿ ವಿರೋಧಿಸುತ್ತ ಬರುತ್ತಿದ್ದರೋ ಪಕ್ಷವನ್ನೇ ಸೇರಿ ತಾವು ಮೈಗೂಡಿಸಿಕೊಂಡಿದ್ದ ಸಮಾಜವಾದಿ ಚಿಂತನೆಗಳನ್ನು ಮಣ್ನುಗೂಡಿಸಿ, ಅಹಿಂದಾ ಸಮುದಾಯವನ್ನು ನಡುನೀರಿನಲ್ಲಿ ಕೈಬಿಟ್ಟು ತಾವೂ ಅತಂತ್ರರಾಗಿಬಿಟ್ಟರು.

ನಂತರ ಬಂದ ಉಪಚುನಾವಣೆಯಲ್ಲಿ ಬಿ.ಜೆ.ಪಿ.ಪಕ್ಷ                    ಸ್ಪರ್ದಿಸಬೇಡಿ ನಿಮಗೆ ವಿದಾನಪರಿಷತ್ತಿನ ಟಿಕೇಟು ನೀಡುತ್ತೇವೆಂದು ಹೇಳಿದರೂ ಕೇಳದೆ ಹಠಕ್ಕೆ ಬಿದ್ದು ಹುಣಸೂರಿನಲ್ಲಿ  ಸ್ಪರ್ದಿಸಿದ್ದು ಅವರ ನಾಲ್ಕನೆಯ ತಪ್ಪು. ಚುನಾವಣೆಯಲ್ಲಿಅವರು ಸೋಲುತ್ತಾರೆಂಬ ಸತ್ಯ ಅವರೊಬ್ಬರನ್ನು ಬಿಟ್ಟು ಮತ್ತೆಲ್ಲರಿಗು ಗೊತ್ತಿತ್ತು. ತಾವು ವಿರೋಧಿಸಿದ ತಮ್ಮದೆ ಜಿಲ್ಲೆಯ ಸಿದ್ದರಾಮಯ್ಯ ಮತ್ತು ತಮ್ಮ ಪಕ್ಷ ತೊರೆದುಹೋದ ಕೋಪದಲ್ಲಿದ್ದ ದೇವೇಗೌಡರ ಕುಟುಂಬ ಅಷ್ಟು ಸುಲಭದಲ್ಲಿ ತಮ್ಮನ್ನು ಗೆಲ್ಲಲು ಬಿಡುವುದಿಲ್ಲವೆಂಬ ಕಹಿಸತ್ಯ ವಿಶ್ವನಾಥರಿಗೆ ಗೊತ್ತಿರಬೇಕಿತ್ತು.

ಇದೀಗ ವಿಶ್ವನಾಥರು ಏಕಾಂಗಿಯಾಗಿ ನಿಂತಿದ್ದಾರೆ. ಅವರ ಜೊತೆಗಿದ್ದ ಮಾಜಿ ಅನರ್ಹ ಶಾಸಕರುಗಳು ಅರ್ಹರಾಗಿ ಅಧಿಕಾರ ಅನುಭವಿಸುತ್ತಿದ್ದಾರೆ.

ಇಂತಹ ಸಮಯದಲ್ಲಿ ವಿಶ್ವನಾಥರ ಮುಂದೆ ಆಶಾಕಿರಣವೊಂದು ಉಳಿದಿದ್ದರೆ ಅದು ವಿದಾನಪರಿಷತ್ತಿಗೆ ಸಾಹಿತ್ಯದ ಕೋಟಾದಡಿ ನಾಮಕರಣಗೊಂಡು ಸಚಿವರಾಗುವುದು.ಬಹುಶ: ಕೊಟ್ಟ ಮಾತನ್ನು ಎಂದೂ ತಪ್ಪದ ಯಡಿಯೂರಪ್ಪನವರು ಇದಕ್ಕೆ ಮುಂದಾದರೂ ಅವರ ಪಕ್ಷದ ವರಿಷ್ಠರು ಮತ್ತು ಪಕ್ಷದೊಳಗಿನ ಅವರ ವಿರೋಧಿ ಗುಂಪಿನವರು ಇದನ್ನು ಆಗಗೊಡಲು ಬಿಡುತ್ತಾರೆಯೇ ಎಂಬುದೇ ಯಕ್ಷ ಪ್ರಶ್ನೆ!

 

Related posts

ಕಚೇರಿ ಬಳಿಕ ಕಂಗನಾ ಮನೆ ಕೆಡವಲು ಮುಂಬೈ ಪಾಲಿಕೆ ನಿರ್ಧಾರ!

Times fo Deenabandhu

ಜನರಿಗೆ ಮೋದಿಯಷ್ಟು ನಂಬಿಕೆ ದ್ರೋಹ ಮಾಡಿದವರು ಬೇರೆ ಯಾರೂ ಇಲ್ಲ: ಸಾಹಿತಿ ದೇವನೂರು ಮಹಾದೇವ

Times fo Deenabandhu

ಪುಲ್ವಾಮಾ ಸ್ಫೋಟ ಪ್ರಕರಣದಲ್ಲಿ ಉಗ್ರರಿಗೆ ಬಾಂಬ್​ ತಯಾರಿಸಲು ನೆರವು ನೀಡಿದ್ದ ತಂದೆ, ಮಗಳು ಬಂಧನ