Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

    ಧೋನಿ ಸಿನಿಮಾ ಹೀರೋ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ

ಮುಂಬೈ: ‘ಎಂ.ಎಸ್‌.ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ’ ಸಿನಿಮಾದಲ್ಲಿ ನಾಯಕನಾಗಿ ಮಿಂಚಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಾಂದ್ರಾದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಭಾನುವಾರ ಮಧ್ಯಾಹ್ನ ವರದಿಯಾಗಿದೆ.
ಸುಶಾಂತ್ ನಿವಾಸಕ್ಕೆ ಪೊಲೀಸರು ಧಾವಿಸಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಲಾಕ್‌ಡೌನ್‌ ವೇಳೆ ಸುಶಾಂತ್‌ ಅವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ನಾಲ್ಕು ದಿನಗಳ ಹಿಂದಷ್ಟೇ ಸುಶಾಂತ್ ಸಿಂಗ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಿಂದ ಸುಶಾಂತ್ ಬಹಳ ಬೇಸರಗೊಂಡಿದ್ದರು ಎನ್ನಲಾಗಿದೆ.

ಪವಿತ್ರ ರಿಷ್ತಾದಿಂದ ಆರಂಭವಾದ ಪಯಣ

ಕಿರುತೆರೆಯಿಂದ ಬಾಲಿವುಡ್‌ಗೆ ಬಂದು ಮಿಂಚಿದ ನಟ ಸುಶಾಂತ್ ಸಿಂಗ್ ರಜಪೂತ್. ಸ್ಟಾರ್‌ ಪ್ಲಸ್‌ನಲ್ಲಿ ಕಿಸ್ ದೇಶ್ ಮೇ ಹೈ ಮೇರಾ ದಿಲ್ (2008)ರಲ್ಲಿ ಕಿರುತರೆಗೆ ಕಾಲಿಟ್ಟಿದ್ದರೂ ಜೀ ಟಿವಿಯಲ್ಲಿ ಪ್ರಸಾರವಾಗಿದ್ದ ಪವಿತ್ರ ರಿಷ್ತಾ ಎಂಬ ಧಾರವಾಹಿಯಲ್ಲಿ ಮಾನವ್ ದೇಶ್‌ಮುಖ್ ಎಂಬ ಪಾತ್ರ ಗಮನ ಸೆಳೆದಿತ್ತು. ಅಂಕಿತಾ ಲೋಖಂಡೆ ಮತ್ತು ಸುಶಾಂತ್ ಸಿಂಗ್ ಜೋಡಿ ಧಾರವಾಹಿಯಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ಹತ್ತಿರವಾಗಿದ್ದ ಕಾಲವದು. ಸಿನಿಮಾ ನಿರ್ಮಾಣದ ಬಗ್ಗೆ ವಿದೇಶದಲ್ಲಿ ಕಲಿಯಲು ಸುಶಾಂತ್ ಪವಿತ್ರ ರಿಷ್ತಾದಿಂದ ಹೊರಗೆ ಹೋಗಿದ್ದರು.
ಕಿರುತರೆ ನಟನೆ ಜತೆ ಝರಾ ನಚ್‌ಕೇ ದಿಖಾ -2, ಝಲಕ್ ದಿಖ್‌ಲಾಜಾ -4 ಡ್ಯಾನ್ಸ್ ರಿಯಾಲಿಟಿ ಶೋನಲ್ಲಿಯೂ ಭಾಗವಹಿಸಿದ್ದರು.
ಆನಂತರ ‘ಕೈ ಪೋ ಚೇ’ ಸಿನಿಮಾದಲ್ಲಿ ಕಾಣಿಸಿಕೊಂಡ ಸುಶಾಂತ್, ಪರಿಣಿತಿ ಚೋಪ್ರಾ ಜತೆ ‘ಶುದ್ಧ್ ದೇಸಿ ರೊಮ್ಯಾನ್ಸ್’ , ಅಮಿರ್ ಖಾನ್ ಅಭಿನಯದ ಪಿಕೆ ಚಿತ್ರದಲ್ಲಿ ಅನುಷ್ಕಾ ಶರ್ಮಾಳ ಪ್ರಿಯಕರನಾಗಿ ಕಾಣಿಸಿಕೊಂಡಿದ್ದರು. ಅವರು ನಟಿಸಿದ ‘ಡಿಟೆಕ್ಟಿವ್ ಬ್ಯೋಮ್‌ಕೇಶ್ ಭಕ್ಷಿ’ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಇದಾದ ನಂತರ ಎಸ್ ಧೋನಿ ಚಿತ್ರದಲ್ಲಿ ನಾಯಕ ನಟನಾಗಿ ಮಿಂಚಿದರು.

ಪಟನಾದ ಈ ಯುವಕ ವಾಯುಪಡೆಯಲ್ಲಿ ಪೈಲೆಟ್ ಆಗುವ ಕನಸು ಹೊಂದಿದ್ದರು. ಎಂಜಿನಿಯರ್, ವಕೀಲರ ಕುಟುಂಬದಿಂದ ಬಂದ ಈತ ಎಂಜಿನಿಯರ್ ಆಗಬೇಕೆಂದು ಹೆತ್ತವರ ಆಸೆಯಾಗಿತ್ತು. ಹಾಗಾಗಿ ದೆಹಲಿ ಎಂಜಿನಿಯರಿಂಗ್ ಕಾಲೇಜಿಗೆ ಸೇರಿಸಲಾಯಿತು.
ಸುಶಾಂತ್ ಅವರು ಶಾರುಖ್ ಖಾನ್ ಅವರ ಅಭಿಮಾನಿ. ಮಾತು ಕಡಿಮೆ, ಕಾಲೇಜಿನಲ್ಲಿಯೂ ತನ್ನ ಪಾಡಿಗೆ ಇರುತ್ತಿದ್ದ ಈತನಿಗೆ ಸ್ಟಾನ್‌ಫೋರ್ಡ್ ಯುನಿವರ್ಸಿಟಿಯಲ್ಲಿ ಸ್ಕಾಲರ್‌ಶಿಪ್ ಕೂಡಾ ಸಿಕ್ಕಿತ್ತು. ಆಮೇಲೆ ಶೈಮಾಕ್ ಧಾವರ್ ಅವರ ನೃತ್ಯ ಅಕಾಡೆಮಿಗೆ ಸೇರಿದ ಇವರು ಮುಂಬೈಗೆ ಬಂದರು. ಬಾಲಿವುಡ್‌ನಲ್ಲಿ ಅವಕಾಶ ಸಿಕ್ಕಾಗ ಇಂಜಿನಿಯರ್ ಕಲಿಕೆಗೆ ಸಮಯ ಸಾಕಾಗುತ್ತಿರಲಿಲ್ಲ. ಹಾಗಾಗಿ ಅರ್ಧಕ್ಕೆ ಶಿಕ್ಷಣ ಕೈಬಿಡಬೇಕಾಗಿ ಬಂದಿತ್ತು.

ನಟಿಸಿದ ಸಿನಿಮಾಗಳು
ಕೈ ಪೋ ಚೇ, ಶುದ್ಧ್ ದೇಸೀ ರೊಮ್ಯಾನ್ಸ್, ಡಿಟೆಕ್ಟಿವ್ ಬ್ಯೋಮ್‌ಕೇಶ್ ಭಕ್ಷಿ, ಪಿಕೆ, ಎಂ.ಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ,
ರಾಬ್ತಾ, ವೆಲ್‌ಕಂ ಟು ನ್ಯೂಯಾರ್ಕ್, ಕೇದಾರ್‌ನಾಥ್, ಸೊನ್ಚಿರಿಯಾ, ಚಿಚೋರೆ, ಡ್ರೈವ್.

Related posts

ಬಜರಂಗದಳದ ಮಾಜಿ ಮುಖಂಡ ಮಹೇಂದ್ರ ಕುಮಾರ್ ವಿಧಿವಶ

Times fo Deenabandhu

ಲಾಕ್‌ಡೌನ್‌ನಲ್ಲಿ ಮತ್ತಷ್ಟು ಸಡಿಲಿಕೆ: ಬುಕ್‌ಸ್ಟಾಲ್‌, ಮೊಬೈಲ್‌ ರೀಚಾರ್ಜ್‌ ಅಂಗಡಿಗಳಿಗೆ ವಿನಾಯಿತಿ

Times fo Deenabandhu

ಮದ್ಯ ಮುಕ್ತ ರಾಜ್ಯಕ್ಕೆ ಸುವರ್ಣಾವಕಾಶ – ಶ್ರೀ ಡಾ. ಪಂಡಿತಾರಾಧ್ಯ ಶ್ರೀಗಳು

Times fo Deenabandhu