Times of Deenabandhu
  • Home
  • ಪ್ರಧಾನ ಸುದ್ದಿ
  •  ಚಿರು ಸರ್ಜಾ ಜೊತೆಗಿನ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಅರ್ಜುನ್ ಸರ್ಜಾ ಪುತ್ರಿ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಚಿರು ಸರ್ಜಾ ಜೊತೆಗಿನ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಅರ್ಜುನ್ ಸರ್ಜಾ ಪುತ್ರಿ

ಕನ್ನಡ ಚಿತ್ರರಂಗದ ಭರವಸೆಯ ಪ್ರತಿಭೆ ಚಿರಂಜೀವಿ ಸರ್ಜಾ ವಯಸ್ಸಲ್ಲದ ವಯಸ್ಸಿನಲ್ಲಿ ಅಕಾಲಿಕಾ ಮರಣ ಹೊಂದಿದ್ದು, ಸ್ಯಾಂಡಲ್‌ವುಡ್‌ಗೆ ತುಂಬಲಾರದ ನಷ್ಟ ಉಂಟು ಮಾಡಿದೆ. ಕಳೆದ ಭಾನುವಾರ (ಜೂನ್‌ 07) ಮಧ್ಯಾಹ್ನ ಹೃದಯಾಘಾತದಿಂದ ಚಿರು ಸರ್ಜಾ ಮನೆಯಲ್ಲಿ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ವೈದ್ಯರು ತೀವ್ರ ಪ್ರಯತ್ನಪಟ್ಟರೂ ಚಿರು, ‘ಚಿರಂಜೀವಿ’ಯಾಗಿ ಬದುಕಿ ಬರಲೇ ಇಲ್ಲ! ಅವರ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಚಿತ್ರರಂಗದ ಗಣ್ಯರು, ಚಿರು ಆಪ್ತರು ಆಸ್ಪತ್ರೆಯತ್ತ ಧಾವಿಸಿ ಬಂದರು.

ಅತ್ತ ಚಿರು ಅವರ ಮಾವ, ನಟ ಅರ್ಜುನ್ ಸರ್ಜಾ ಚೆನ್ನೈನಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣವೇ ಕಾರಿನಲ್ಲಿ ಕುಟುಂಬದ ಜೊತೆ ಅವರು ಹೊರಟು ಬಂದರು. ಚಿರುವನ್ನು ಎತ್ತಿ ಆಡಿಸಿ ಬೆಳೆಸಿದವರು ಅರ್ಜುನ್. ಚಿರು ಸರ್ಜಾ ಹೀರೋ ಆಗಬೇಕು ಎಂದು, ತಮ್ಮದೇ ಹೋಮ್ ಬ್ಯಾನರ್‌ ಮೂಲಕ ಸಿನಿಮಾ ನಟನನ್ನಾಗಿ ಮಾಡಿದರು. ಚಿರು ಅವರ ಮತ್ತೋರ್ವ ಮಾವ ಕಿಶೋರ್ ಸರ್ಜಾ ಆ ‘ವಾಯುಪುತ್ರ’ ಸಿನಿಮಾಕ್ಕೆ ನಿರ್ದೇಶನ ಮಾಡಿ, ಚಿರುಗೆ ಗ್ರ್ಯಾಂಡ್ ಎಂಟ್ರಿ ಕೊಡಿಸಿದರು. ಆದರೆ, ಚಿತ್ರರಂಗಕ್ಕೆ ಬಂದ ಹನ್ನೊಂದೇ ವರ್ಷದಲ್ಲಿ ಅವರು ಸಾವನ್ನಪ್ಪಿದ್ದಾರೆ. ಈ ಆಘಾತದಿಂದ ಸರ್ಜಾ ಕುಟುಂಬ ತೀವ್ರ ನೋವಿನಲ್ಲಿದೆ. ಈ ವೇಳೆ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ, ಚಿರು ಜೊತೆಗಿನ ಬಾಲ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸರ್ಜಾ ಕುಟುಂಬದ ಮಕ್ಕಳೆಲ್ಲರು ಒಟ್ಟಿಗೆ ಬೆಳೆದವರು. ಅರ್ಜುನ್ ಸರ್ಜಾ ಅವರ ಸಹೋದರಿ ಅಮ್ಮಾಜಿ ಅವರ ಮಕ್ಕಳಾದ ಚಿರು ಸರ್ಜಾ, ಧ್ರುವ ಸರ್ಜಾ, ಕಿಶೋರ್‌ ಸರ್ಜಾ ಅವರ ಮಗನಾದ ಸೂರಜ್ ಸರ್ಜಾ, ಅರ್ಜುನ್ ಪುತ್ರಿಯರಾದ ಐಶ್ವರ್ಯಾ ಮತ್ತು ಅಂಜನಾ ಹೀಗೆ ಎಲ್ಲರು ಒಟ್ಟಿಗೆ ಆಡಿಕೊಂಡು ಬೆಳೆದವರು. ಚಿರು ಅವರನ್ನು ಕಳೆದುಕೊಂಡಿರುವ ದುಃಖ ಎಲ್ಲರಿಗೂ ಕಾಡುತ್ತಿದೆ. ಬಾಲ್ಯದಲ್ಲಿ ಚಿರು ಜೊತೆಗೆ ತೆಗೆಸಿಕೊಂಡ ಫೋಟೋಗಳನ್ನು ಶುಕ್ರವಾರ ಐಶ್ವರ್ಯಾ, ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋಗಳಲ್ಲಿ ಚಿರು, ಧ್ರುವ, ಐಶ್ವರ್ಯಾ, ಅವರ ಸಹೋದರಿ ಅಂಜನಾ, ಹಾಗು ಸೂರಜ್‌ ಇದ್ದಾರೆ. ಈ ಫೋಟೋಗಳಿಗೆ 45 ಸಾವಿರಕ್ಕೂ ಅಧಿಕ ಲೈಕ್ಸ್‌ ಬಂದಿವೆ.
ಐಶ್ವರ್ಯಾ ತಮಿಳಿನಲ್ಲಿ ನಟಿಯಾಗಿ ಸಿನಿಮಾರಂಗ ಪ್ರವೇಶ ಮಾಡಿದ್ದರು. ಆದರೆ, ಅರ್ಜುನ್ ಸರ್ಜಾಗೆ ಮಗಳನ್ನು ಕನ್ನಡದಲ್ಲಿ ನಟಿಯನ್ನಾಗಿ ಲಾಂಚ್ ಮಾಡಬೇಕು ಎಂಬ ಆಸೆ ಇತ್ತು. ಅದಕ್ಕಾಗಿ ಅವರೇ ಸ್ವತಃ ‘ಪ್ರೇಮ ಬರಹ’ ಹೆಸರಿನ ಸಿನಿಮಾವನ್ನು ನಿರ್ದೇಶನ ಮಾಡೋಕೆ ಮುಂದಾದರು. ಅದರ ನಿರ್ಮಾಣವೂ ಅವರದ್ದೇ ಆಗಿತ್ತು. ಕನ್ನಡ-ತಮಿಳಿನಲ್ಲಿ ಏಕಕಾಲಕ್ಕೆ ಸಿನಿಮಾ ತಯಾರಾಯ್ತು. ವಿಶೇಷವೆಂದರೆ, ಈ ಚಿತ್ರದ ಒಂದು ಹಾಡಿನಲ್ಲಿ ಚಿರಂಜೀವಿ ಸರ್ಜಾ ಕಾಣಿಸಿಕೊಂಡಿದ್ದರು. ಅವರು ಮಾತ್ರವಲ್ಲದೆ, ‘ಚಾಲೆಂಜಿಂಗ್ ಸ್ಟಾರ್‌’ ದರ್ಶನ್‌, ಧ್ರುವ ಸರ್ಜಾ ಅವರ ಜೊತೆಗೆ ಅರ್ಜುನ್ ಸರ್ಜಾ ಕೂಡ ಹಾಡಿನಲ್ಲಿ ಮಿಂಚಿದ್ದರು. ಹೀಗೆ ಐಶ್ವರ್ಯಾ ನಟನೆಯ ಕನ್ನಡ ಸಿನಿಮಾಕ್ಕೆ ಚಿರು ಸಾಥ್ ನೀಡಿದ್ದರು.
ವಿಧಿ ಕ್ರೂರಿ ಎಂದಿದ್ದರು ಅರ್ಜುನ್‌

ಚಿರಂಜೀವಿ ಸರ್ಜಾ ನಿಧನರಾಗಿದ್ದಕ್ಕೆ ಮಾವ ಅರ್ಜುನ್ ಸರ್ಜಾ ತೀವ್ರ ಬೇಸರದಲ್ಲಿದ್ದಾರೆ. ಚಿರು ಪ್ರತಿ ಬಾರಿಯೂ, ‘ನನ್ನ ಗಾಡ್ ಫಾದರ್ ನನ್ನ ಮಾವ’ ಎಂದು ಹೇಳುತ್ತಿದ್ದರು. ಆರಂಭದಲ್ಲಿ ಚಿರು ಸಿನಿಮಾಗಳನ್ನು ಆಯ್ಕೆ ಮಾಡುತ್ತಿದ್ದವರು ಅರ್ಜುನ್ ಅವರೇ ಆಗಿದ್ದರು. ಐಶ್ವರ್ಯಾ ನಟನೆಯ ಮೊದಲ ಕನ್ನಡ ಚಿತ್ರಕ್ಕೆ ಚಿರು ಹಾಡಿನಲ್ಲಿ ಕಾಣಿಸಿಕೊಂಡಂತೆ, ಅಂದು ‘ವಾಯುಪುತ್ರ’ ತೆರೆಕಂಡಾಗ ಅದರಲ್ಲಿ ಅರ್ಜುನ್ ಸರ್ಜಾ ನಟಿಸಿದ್ದರು. ಅವರು ಕೂಡ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಚಿರು ಜೊತೆಗೆ ಬಹಳ ಸಂತೋಷದಿಂದ ಕಳೆದ ಕ್ಷಣವೊಂದರ ಫೋಟೋವನ್ನು ಹಂಚಿಕೊಂಡು, ‘ನನ್ನ ಪ್ರೀತಿಯ ಹುಡುಗನೇ, ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ವಿಧಿ ಎಂಬುದು ತುಂಬ ಕ್ರೂರಿ’ ಎಂದು ಬರೆದುಕೊಂಡಿದ್ದರುಅಣ್ಣ-ತಮ್ಮ ಎಂದರೆ, ಚಿರು ಮತ್ತು ಧ್ರುವ ಸರ್ಜಾ ಥರ ಇರಬೇಕು ಅನ್ನುವಷ್ಟರ ಮಟ್ಟಿಗೆ ಈ ಸಹೋದರರು ಖ್ಯಾತರಾಗಿದ್ದರು. ಈ ಸಹೋದರರ ಅನ್ಯೋನ್ಯತೆಗೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿರುವ ಹಲವು ವಿಡಿಯೋಗಳೇ ಸಾಕ್ಷಿ. ಇದೀಗ ಧ್ರುವ ಕೂಡ ಅಣ್ಣನ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದಾರೆ. ಚಿರು ನಿಧನರಾಗುವುದಕ್ಕೂ ಒಂದು ದಿನದ ಹಿಂದೆ, ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಫೋಟೋ ಹಾಕಿದ್ದರು. ಧ್ರುವ ಹಾಗೂ ಸೂರಜ್‌ ಸರ್ಜಾ ಜೊತೆಗೆ ಚಿಕ್ಕವರಿದ್ದಾಗ ತೆಗೆಸಿಕೊಂಡ ಫೋಟೋವನ್ನು ಮತ್ತು ಇತ್ತೀಚೆಗೆ ಅವರ ಜೊತೆ ತೆಗೆಸಿಕೊಂಡ ಫೋಟೋವನ್ನು ಕೊಲಾಜ್‌ ಮಾಡಿ, ಅಪ್‌ಲೋಡ್ ಮಾಡಿದ್ದರು. ಧ್ರುವ ಕೂಡ ಅದೇ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಗೆ ಅಪ್‌ಲೋಡ್ ಮಾಡಿ, ‘ನೀನು ನನಗೆ ಮತ್ತೆ ಬೇಕು. ನೀನಿಲ್ಲದೇ ಇರಲು ಆಗುತ್ತಿಲ್ಲ’ ಎಂದು ಕ್ಯಾಪ್ಷನ್ ನೀಡಿದ್ದಾರೆ.

Related posts

 ಪಾಕಿಸ್ತಾನ ವಿಮಾನ ದುರಂತ: ಸಿಬ್ಬಂದಿ ಸೇರಿ ಎಲ್ಲಾ 107 ಪ್ರಯಾಣಿಕರ ದುರ್ಮರಣ

ಅಮೆರಿಕ ವಿರುದ್ಧ ಭಾರತ ಕೆಂಡಾಮಂಡಲ

Times fo Deenabandhu

ಚೀನಾದಿಂದ ಬಂದ 24 ಟನ್ ಚಿಕಿತ್ಸಾ ಸಾಮಗ್ರಿ

Times fo Deenabandhu