Times of Deenabandhu
  • Home
  • ಪ್ರಧಾನ ಸುದ್ದಿ
  •  ಕಾರ್ಮಿಕರ ಕೆಲಸದ ಅವಧಿ ಹೆಚ್ಚಳದ ಅಧಿಸೂಚನೆ ವಾಪಸ್,‌ ಹೈಕೋರ್ಟ್‌ ಎಚ್ಚರಿಕೆಗೆ ಬಗ್ಗಿದ ಸರಕಾರ
ಪ್ರಧಾನ ಸುದ್ದಿ ಮುಖ್ಯಾಂಶಗಳು

 ಕಾರ್ಮಿಕರ ಕೆಲಸದ ಅವಧಿ ಹೆಚ್ಚಳದ ಅಧಿಸೂಚನೆ ವಾಪಸ್,‌ ಹೈಕೋರ್ಟ್‌ ಎಚ್ಚರಿಕೆಗೆ ಬಗ್ಗಿದ ಸರಕಾರ

ಬೆಂಗಳೂರು: ಹೈಕೋರ್ಟ್‌ ಎಚ್ಚರಿಕೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಾರ್ಮಿಕರ ಪ್ರತಿ ದಿನದ ಕೆಲಸದ ಅವಧಿಯನ್ನು 9 ತಾಸುಗಳಿಂದ 10 ಗಂಟೆಗಳಿಗೆ ಹೆಚ್ಚಳ ಮಾಡಿ ಮೇ 22ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಶುಕ್ರವಾರ ಹಿಂಪಡೆದಿದೆ.
ಕೊರೊನಾ ಬಿಕ್ಕಟ್ಟನ್ನು ಸಾರ್ವಜನಿಕ ತುರ್ತು ಪರಿಸ್ಥಿತಿಯಾಗಿ ಪರಿಗಣಿಸಿ ಕಾರ್ಮಿಕರ ಕೆಲಸದ ಅವಧಿಯನ್ನು ಹೆಚ್ಚಿಸಿ ಕೈಗಾರಿಕೆಗಳ ಕಾಯಿದೆಯ ಸೆಕ್ಷನ್‌ 5ರಡಿ ಅಧಿಸೂಚನೆ ಹೊರಡಿಸಿದ್ದ ರಾಜ್ಯ ಸರಕಾರದ ಕ್ರಮವನ್ನು ಒಪ್ಪದ ಹೈಕೋರ್ಟ್‌, ಅಧಿಸೂಚನೆ ವಾಪಸ್‌ ಪಡೆಯದಿದ್ದರೆ ತಡೆ ನೀಡುವುದಾಗಿ ಗುರುವಾರ ಎಚ್ಚರಿಕೆ ನೀಡಿತ್ತು. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಸರಕಾರವು ತಕ್ಷಣವೇ ಅಧಿಸೂಚನೆ ಹಿಂಪಡೆದಿದ್ದು, ಆ ಕುರಿತ ಮಾಹಿತಿಯನ್ನು ಶುಕ್ರವಾರ ಹೈಕೋರ್ಟ್‌ಗೆ ನೀಡಿದೆ.

ಅಧಿಸೂಚನೆ ರದ್ದು ಕೋರಿ ಬೆಂಗಳೂರಿನ ದೀಪಾಂಜಲಿನಗರದ ಎಚ್.‌ ಮಾರುತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ‌ ನೇತೃತ್ವದ ವಿಭಾಗೀಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತ್ತು.
ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿಣ್ಣಪ್ಪ, “ಅಧಿಸೂಚನೆ ಹಿಂಪಡೆಯಲಾಗಿದೆ,” ಎಂದು ಪೀಠಕ್ಕೆ ತಿಳಿಸಿದರು. ಜತೆಗೆ, ಮೇ 22ರ ಅಧಿಸೂಚನೆ ಹಿಂಪಡೆದು ಕಾರ್ಮಿಕ ಇಲಾಖೆಯ ಉಪ ಕಾರ್ಯದರ್ಶಿ ಸಂಧ್ಯಾ ಎಲ್‌ ನಾಯಕ್‌ ಹೊರಡಿಸಿದ ಆದೇಶದ ಪ್ರತಿಯನ್ನು ಮೆಮೊ ಸಹಿತವಾಗಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.

“ಕೊರೊನಾ ಬಿಕ್ಕಟ್ಟನ್ನು ಸಾರ್ವಜನಿಕ ತುರ್ತು ಪರಿಸ್ಥಿತಿಯಾಗಿ ಪರಿಗಣಿಸಿದ ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಿರುವುದಾಗಿ ಸರಕಾರ ಹೇಳಿದೆ. ಆದರೆ, ಕಾನೂನು ಪ್ರಕಾರ ಕೊರೊನಾ ಬಿಕ್ಕಟ್ಟು ಸಾರ್ವಜನಿಕ ತುರ್ತು ಪರಿಸ್ಥಿತಿಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ ಸರಕಾರದ ಅಧಿಸೂಚನೆ ರದ್ದುಗೊಳಿಸಬೇಕು,” ಎಂದು ಅರ್ಜಿದಾರರು ಕೋರಿದ್ದರು.

Related posts

ದೆಹಲಿಯಲ್ಲಿ ಕೇಜ್ರಿವಾಲ್ ಗೆದ್ದಿದ್ದು ಹೇಗೆ?

Times fo Deenabandhu

ಬಾಲ್ಯದಲ್ಲಿ ಕೆರೆಗೆ ಬಿದ್ದ ಬಾಲಕ ಪೇಜಾವರ ಶ್ರೀಗಳನ್ನು ಬದುಕಿಸಿದ್ದ ದಲಿತ!

Times fo Deenabandhu

 ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಡಿಎಂಕೆ ನಾಯಕ ಸ್ಟಾಲಿನ್‌ ಕಿಡಿ

Times fo Deenabandhu