Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಬಿಜೆಪಿಯಲ್ಲಿ ಶುರುವಾಗಿದೆ ಮುಸುಕಿನ ಗುದ್ದಾಟ

 

ಬೆಂಗಳೂರು: ಕೊರೊನಾ ವಿಪತ್ತಿನಿಂದ ಜನ ಪ್ರಯಾಸ ಪಡುತ್ತಿರುವುದರ ನಡುವೆಯೇ, ರಾಜ್ಯ ಬಿಜೆಪಿಯೊಳಗೆ ಬಣ ರಾಜಕೀಯ ತಲೆ ಎತ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ವರಸೆ ಬದಲಿಸಿರುವ ಅತೃಪ್ತರು ‘ನಾವು ಜೋಳದ ರೊಟ್ಟಿ, ಮಾವಿನ ಹಣ್ಣು ತಿನ್ನಲು ಒಟ್ಟಿಗೆ ಸೇರಿದ್ದೆವು’ ಎಂದು ಜಾರಿಕೊಳ್ಳಲು ಯತ್ನಿಸಿದ್ದಾರೆ! ಈ ನಡುವೆಯೂ ಬಿಜೆಪಿಯಲ್ಲಿನ ಬಂಡಾಯ ಚಟುವಟಿಕೆ ಬೂದಿ ಮುಚ್ಚಿದ ಕೆಂಡದಂತಿದೆ.

ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ ಸೇರಿದಂತೆ ಬಿಜೆಪಿಯ ಕೆಲ ಶಾಸಕರು ಗುರುವಾರ ರಾತ್ರಿ ಮಾಜಿ ಸಚಿವ ಉಮೇಶ ಕತ್ತಿ ಮನೆಯಲ್ಲಿ ಸೇರಿದ್ದರು. ಇವರಲ್ಲಿ ಕತ್ತಿ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ. ತಮ್ಮ ಸಹೋದರ ರಮೇಶ್‌ ಕತ್ತಿಗೆ ರಾಜ್ಯಸಭೆ ಟಿಕೆಟ್‌ ಕೊಡಿಸಬೇಕು ಎನ್ನುವುದೂ ಇವರ ಅಪೇಕ್ಷೆ. ಹಾಗೆಯೇ ಇನ್ನೂ ಕೆಲವು ಶಾಸಕರು ಸಚಿವ ಸ್ಥಾನದ ಆಸೆ ಹೊಂದಿದ್ದಾರೆ. ‘ಫೈರ್‌ ಬ್ರ್ಯಾಂಡ್‌’ ಯತ್ನಾಳ್‌ ಅವರೂ ನಾನಾ ಕಾರಣದಿಂದ ಮುನಿಸಿಕೊಂಡಿದ್ದಾರೆ. ಇವರೆಲ್ಲ ಸೇರಿ ಯಡಿಯೂರಪ್ಪ ಅವರಿಗೆ ಚುರುಕು ಮುಟ್ಟಿಸುವ ಪ್ಲಾನ್‌ ಹಾಕಿಕೊಂಡಿದ್ದರು ಎನ್ನಲಾಗಿದೆ.

ಆದರೆ, ಈ ಭೋಜನ ಕೂಟದ ರಾಜಕಾರಣ ಅತೃಪ್ತ ಶಾಸಕರು ಅಂದುಕೊಂಡಷ್ಟು ಪರಿಣಾಮ ಕೊಟ್ಟಿಲ್ಲ. ಈ ಬೆಳವಣಿಗೆ ಗಮನಕ್ಕೆ ಬರುತ್ತಿದ್ದಂತೆ ಕೆಲ ಶಾಸಕರಿಗೆ ಕರೆ ಮಾಡಿದ ಸಿಎಂ ಯಡಿಯೂರಪ್ಪ ಅವರು ಬಿಸಿ ಮುಟ್ಟಿಸಿದ್ದಾರೆ. ಉಮೇಶ್‌ ಕತ್ತಿ ಅವರಿಗೆ ಮುಂದಿನ ಹಂತದಲ್ಲಿ ಸಚಿವ ಸ್ಥಾನದ ಭರವಸೆ ನೀಡಲಾಗಿದೆ. ಹಾಗಾಗಿ ಇಂತಹ ಗೊಂದಲವನ್ನು ಯಾಕೆ ಸೃಷ್ಟಿಸುತ್ತಿದ್ದೀರಿ ಎಂದು ಕತ್ತಿಗೂ ಸಿಎಂ ಪ್ರಶ್ನಿಸಿದ್ದಾರೆ. ಮತ್ತೆ ಹೀಗೆ ಸಮಸ್ಯೆ ಮಾಡದಂತೆಯೂ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

ಅತೃಪ್ತಿ ಶಮನಕ್ಕೆ ಸಿಎಂ ಅವರು ಉತ್ತರ ಕರ್ನಾಟಕ ಭಾಗದ ಶಾಸಕರ ಸಭೆ ಕರೆದಿದ್ದಾರೆ ಎಂಬ ಸುದ್ದಿ ಶುಕ್ರವಾರ ಬೆಳಗ್ಗೆ ಹರಿದಾಡಿತು. ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿದ ಸಿಎಂ ಬಿಎಸ್‌ವೈ ‘ಯಾವುದೇ ಶಾಸಕರ ತುರ್ತು ಸಭೆ ಕರೆದಿಲ್ಲ’ ಎಂದು ಸ್ಪಷ್ಟ ಪಡಿಸಿದರು. ಇದರ ಬೆನ್ನಿಗೇ ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ. ಸಿ.ಎನ್‌. ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಸಚಿವರಾದ ಕೆ.ಎಸ್‌.ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಸುರೇಶ್‌ ಕುಮಾರ್‌, ರಮೇಶ್‌ ಜಾರಕಿಹೊಳಿ ಸೇರಿದಂತೆ ಹಲವರು ಯಡಿಯೂರಪ್ಪ ಪರ ದನಿ ಹೊರಡಿಸಿದರು.

ತಾತ್ಕಾಲಿಕ ಶಮನ

ಕೋವಿಡ್‌-19 ನಿರ್ವಹಣೆಯಲ್ಲಿ ಸರಕಾರ ಹಾಗೂ ಸಿಎಂ ನಿರತವಾಗಿರುವುದರಿಂದ ಅತೃಪ್ತ ಶಾಸಕರ ಚಟುವಟಿಕೆ ಮೇಲ್ನೋಟಕ್ಕೆ ತಾತ್ಕಾಲಿಕವಾಗಿ ಶಮನವಾಗಿದೆ. ಇಂತಹ ಸಂದರ್ಭದಲ್ಲಿ ಭಿನ್ನಮತದ ಚಟುವಟಿಕೆ ನಡೆಸಿದರೆ ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎನ್ನುವುದೂ ಶಾಸಕರಿಗೆ ಅರ್ಥವಾದಂತಿದೆ. ಹಾಗಾಗಿ ರಾತ್ರಿ ಬೆಳಗಾಗುವುದರಲ್ಲಿ ಇವರ ಉತ್ಸಾಹ ಇಳಿದಿದೆ. ಆದರೆ, ಭವಿಷ್ಯದಲ್ಲಿ ಇವರ ಅಸಮಾಧಾನ ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದು.

ಉಕ ನಾಯಕತ್ವಕ್ಕೆ ವೇದಿಕೆ

ಈ ಶಾಸಕರ ಚಟುವಟಿಕೆ ಹಿಂದೆ ಉತ್ತರ ಕರ್ನಾಟಕದ ನಾಯಕತ್ವಕ್ಕೆ ವೇದಿಕೆ ಸಜ್ಜುಗೊಳಿಸುವ ಯತ್ನವೂ ಇದೆ. ಯಡಿಯೂರಪ್ಪ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಪಕ್ಷದಲ್ಲಿದೆ. ಪಕ್ಷಕ್ಕೆ ಹೆಚ್ಚು ಬೆಂಬಲ ಸಿಗುವ ಉತ್ತರ ಕರ್ನಾಟಕದಿಂದಲೇ ಮುಂದಿನ ನಾಯಕರ ಆಯ್ಕೆಯಾದರೆ ಒಳಿತು ಎನ್ನುವ ಲೆಕ್ಕಾಚಾರವಿದೆ. ಇದಲ್ಲದೆ ಈ ಶಾಸಕರ ಚಟುವಟಿಕೆಯ ಹಿಂದೆ ಬೇರೆಯದೇ ಸೂತ್ರಧಾರರು ಎನ್ನಲಾಗುತ್ತಿದೆ.

 

Related posts

 ತಮಿಳುನಾಡಿಗೂ ರಾಷ್ಟ್ರೀಯತಾವಾದಿ ಮನೋಭಾವ ತರಲು ಶ್ರಮ: ಅಣ್ಣಾಮಲೈ

Times fo Deenabandhu

ಸಾರ್ವಜನಿಕರು ಮಾಸ್ಕ್‌ ಧರಿಸುವ ಅಗತ್ಯವಿಲ್ಲ: ಶ್ರೀರಾಮುಲು

Times fo Deenabandhu

ಲಾಕ್‌ಡೌನ್‌ ಮುಕ್ತಾಯ ಹಂತದಲ್ಲಿ ಕೆಂಪು ವಲಯದತ್ತ ದಾವಣಗೆರೆ: ಮಹಿಳೆಗೆ ಸೋಂಕು ದೃಢ

Times fo Deenabandhu