Times of Deenabandhu
  • Home
  • ಪ್ರಧಾನ ಸುದ್ದಿ
  • ‘ಕೆಜಿಎಫ್‌ 2’ ತೆಲುಗು ವರ್ಷನ್‌ಗೆ ಭರ್ಜರಿ ಬೇಡಿಕೆ! ರೈಟ್ಸ್‌ ಮೊತ್ತ ಕೇಳಿ ಟಾಲಿವುಡ್‌ ವಿತರಕರು ಶಾಕ್!
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

‘ಕೆಜಿಎಫ್‌ 2’ ತೆಲುಗು ವರ್ಷನ್‌ಗೆ ಭರ್ಜರಿ ಬೇಡಿಕೆ! ರೈಟ್ಸ್‌ ಮೊತ್ತ ಕೇಳಿ ಟಾಲಿವುಡ್‌ ವಿತರಕರು ಶಾಕ್!

 

‘ರಾಕಿಂಗ್ ಸ್ಟಾರ್‌’ ಯಶ್ ನಾಯಕತ್ವದ ‘ಕೆಜಿಎಫ್‌ ಚಾಪ್ಟರ್‌ 2’ ರಿಲೀಸ್ ಆಗೋಕೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಎಲ್ಲ ಅಂದುಕೊಂಡಂತೆ ನಡೆದರೆ, ಅಕ್ಟೋಬರ್ 23ರಂದು ವಿಶ್ವಾದ್ಯಂತ ಈ ಬಹುನಿರೀಕ್ಷಿತ ಸಿನಿಮಾ ತೆರೆಗೆ ಬರುವುದು ಖಚಿತ. ಆದರೆ, ಅದಕ್ಕೂ ಮೊದಲೇ ‘ಕೆಜಿಎಫ್‌’ ಕೆಲವೊಂದು ವಿಚಾರಗಳಿಂದಾಗಿ ಸದ್ದು ಮಾಡುತ್ತಿದೆ. ಟಿವಿ, ಡಿಜಿಟಲ್‌ ಹಕ್ಕುಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಸಾಕಷ್ಟು ಸುದ್ದಿಗಳು ಹರಿದಾಡಿವೆ. ಈಗಿನದು ವಿತರಣೆ ಹಕ್ಕಿನ ಕುರಿತಾದದ್ದು!

‘ಕೆಜಿಎಫ್‌ 2’ ತೆಲುಗು ವರ್ಷನ್‌ಗೆ ಮುಗಿಬಿದ್ದ ವಿತರಕರು!

2018ರ ಡಿಸೆಂಬರ್‌ನಲ್ಲಿ ತೆರೆಕಂಡ ‘ಕೆಜಿಎಫ್‌ ಚಾಪ್ಟರ್‌ 1’ ತೆಲುಗು ಡಬ್ಬಿಂಗ್‌ ವರ್ಷನ್‌ ವಿತರಣೆಯನ್ನು ಪಡೆದುಕೊಂಡವರು ನಿರ್ಮಾಪಕ ಸಾಯಿ ಕೊರ್ರಪಟಿ. ಈಗಾಗಲೇ ತೆಲುಗಿನಲ್ಲಿ ‘ಈಗ’, ‘ಲೆಜೆಂಡ್‌’ ಸೇರಿ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ ಖ್ಯಾತಿ ಅವರದು. ಅವರಿಗೆ ‘ಕೆಜಿಎಫ್‌ 1’ ವಿತರಣೆಯಿಂದ ಲಾಭವೇ ಆಯಿತು. ಈಗ ಪಾರ್ಟ್‌ 2 ವಿತರಣೆ ಮಾಡುವುದಕ್ಕೆ ಅವರು ಮುಂದಾಗಿದ್ದಾರಂತೆ. ಆದರೆ, ಅಲ್ಲೊಂದು ಟ್ವಿಸ್ಟ್ ಇದೆ!

ದುಬಾರಿ ಬೆಲೆಗೆ ವಿತರಣೆ!

‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರದ ಡಿಜಿಟಲ್‌ ಮತ್ತು ಟಿವಿ ಪ್ರಸಾರದ ಹಕ್ಕುಗಳಿಂದಲೇ 175 ಕೋಟಿ ರೂ. ಹಣ ಸಿಕ್ಕಿದೆ ಎಂಬ ಸುದ್ದಿ ಕೇಳಿಬಂದಿದೆ. ಈಗ ವಿತರಣೆಯಲ್ಲೂ ಸಖತ್ ಡಿಮಾಂಡ್ ಸೃಷ್ಟಿಯಾಗಿದೆಯಂತೆ! ‘ಕೆಜಿಎಫ್‌ 2’ ತೆಲುಗು ವರ್ಷನ್‌ಗೆ 20 ಕೋಟಿ ರೂ.ವರೆಗೂ ನೀಡುವುದಕ್ಕೆ ಸಾಯಿ ರೆಡಿ ಇದ್ದಾರಂತೆ. ಆದರೆ, ನಿರ್ಮಾಪಕರು 40ರಿಂದ 50 ಕೋಟಿ ರೂ.ಗಳವರೆಗೂ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಯಾಕೆಂದರೆ, ‘ಕೆಜಿಎಫ್‌ 2’ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಮೊದಲ ಭಾಗವೇ 200 ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಮಾಡಿದೆ ಎಂಬ ಮಾಹಿತಿ ಇದೆ. ಇನ್ನು, ಪಾರ್ಟ್‌ 2 ಅದಕ್ಕಿಂತಲೂ ದುಪ್ಪಟ್ಟು ಹಣ ಕಲೆ ಹಾಕುವುದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ನಿರ್ಮಾಪಕರು ಜಾಸ್ತಿ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.

ಸಾಯಿ ಮಾತ್ರವಲ್ಲದೆ, ಟಾಲಿವುಡ್‌ನ ಖ್ಯಾತ ನಿರ್ಮಾಪಕ, ವಿತರಕ ‘ದಿಲ್‌’ ರಾಜು ಸೇರಿದಂತೆ ಇನ್ನೂ ಒಂದಷ್ಟು ಮಂದಿ ‘ಕೆಜಿಎಫ್’ ವಿತರಣೆ ಮಾಡುವ ಮನಸ್ಸು ಮಾಡಿದ್ದಾರಂತೆ. ಆದರೆ, ಅಂತಿಮವಾಗಿ ಯಾರಿಗೆ ಇದರ ಹಕ್ಕುಗಳು ಸಿಗಲಿವೆ ಎಂದು ಕಾದು ನೋಡಬೇಕು. ಪ್ರಶಾಂತ್ ನೀಲ್‌ ನಿರ್ದೇಶನದ ‘ಕೆಜಿಎಫ್ ಚಾಪ್ಟರ್‌ 2’ಗೆ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ಶ್ರೀನಿಧಿ ಶೆಟ್ಟಿ, ಸಂಜಯ್ ದತ್‌, ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Related posts

ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಏಪ್ರಿಲ್ 14ರವರೆಗೆ ರಜೆ ವಿಸ್ತರಣೆ

Times fo Deenabandhu

ಲಾಕ್‌ಡೌನ್‌ ನಡುವೆಯೇ ರಾಜ್ಯದ ಹಲವು ಕಡೆ ಭರಪೂರ ಬಾಲ್ಯವಿವಾಹ!

Times fo Deenabandhu

ಚೀನಾ ಕೊಟ್ಟ ಕೊರೊನಾ ಸೋಂಕು ಅಂಕಿಅಂಶದ ಬಗ್ಗೆ ಅಮೆರಿಕದ ಟ್ರಂಪ್‌ಗೂ ಸಂದೇಹ