September 27, 2020
Times of Deenabandhu
ಚಿತ್ರದುರ್ಗ ಜಿಲ್ಲೆ ಧರ್ಮ ಮುಖ್ಯಾಂಶಗಳು

ಬಸವ ಜಯಂತಿ

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

12ನೆಯ ಶತಮಾನ ಕನ್ನಡ ನಾಡಿನ ಇತಿಹಾಸದಲ್ಲಿ ಮಾತ್ರವಲ್ಲ ವಿಶ್ವದ ಸಾಹಿತ್ಯದಲ್ಲೇ ಸುವರ್ಣಾಕ್ಷರಗಳಿಂದ ದಾಖಲಿಸುವಂತಹುದು. ಈ ದಾಖಲೆಗೆ ಕಾರಣರಾದವರು ಬಸವಾದಿ ಶಿವಶರಣರು. ಅದಕ್ಕೆ ಕಾರಣ ಅಂದಿನ ಸಾಮಾಜಿಕ, ರಾಜಕೀಯ, ಧಾರ್ಮಿಕ ಅವ್ಯವಸ್ಥೆ. ಅಂದು ಹಲವು ಜನರು ಮಾತು ಕಳೆದುಕೊಂಡು ಮೂಕರಾಗಿದ್ದರು. ಯಾವಾಗಲೂ ಮತ್ತೊಬ್ಬರ ಅಡಿಯಾಳಾಗಿ ದುಡಿಯುವ ವಾತಾವರಣವಿತ್ತು. ದುಡಿಮೆ ಮಾಡಿದರೂ ಅದರ ಫಲ ದುಡಿದವರಿಗೆ ಸಿಗುತ್ತಿರಲಿಲ್ಲ. ದುಡಿಯುವ ವರ್ಗವೇ ಒಂದಾದರೆ ಅದರ ಫಲವನ್ನು ಪಡೆಯುವ ವರ್ಗವೇ ಮತ್ತೊಂದಾಗಿತ್ತು. ಎಷ್ಟೆಲ್ಲ ದುಡಿದರೂ ಹೊಟ್ಟೆ ತುಂಬ ಉಣ್ಣಲು, ಮನಸ್ಸಿಗೆ ಅನ್ನಿಸಿದ್ದನ್ನು ಹೇಳಲು ಅವರಿಗೆ ಅವಕಾಶವೇ ಇರಲಿಲ್ಲ. ಅಂಥ ಜನರಲ್ಲಿ ಆತ್ಮವಿಶ್ವಾಸ, ಮನೋಬಲ ತುಂಬಿ ತಲೆ ಎತ್ತಿ ಬಾಳುವ ಅವಕಾಶ ಕಲ್ಪಿಸಿದವರು ಬಸವಣ್ಣನವರು. ಅದಕ್ಕೆ ಪ್ರೇರಣೆ ನೀಡಿದ್ದು ಅನುಭವ ಮಂಟಪ. ನಾನು ಮಾತನಾಡಿದರೆ ಎಲ್ಲಿ ಆ ಮಾತುಗಳಲ್ಲಿ ದೋಷಗಳನ್ನು ಹುಡುಕುವರೋ ಎಂದು ಮೌನ ಧರಿಸಿದವರಿಗೆ ಬಸವಣ್ಣನವರು ಹೇಳುವುದು:

ಆಳಿಗೊಂಡಹರೆಂದು ಅಂಜಲದೇಕೆ? ನಾಸ್ತಿಕವಾಡಿಹರೆಂದು ನಾಚಲದೇಕೆ?

ಆರಾದಡಾಗಲಿ ಶ್ರೀಮಹಾದೇವಂಗೆ ಶರಣೆನ್ನಿ,

ಏನೂ ಅರಿಯೆನೆಂದು ಮೋನಗೊಂಡಿರಬೇಡ.

ಕೂಡಲಸಂಗಮದೇವರ ಮುಂದೆ ದಂದಣ ದತ್ತಣಯೆನ್ನಿ.

ನನ್ನ ಮಾತುಗಳಲ್ಲಿ ಯಾರಾದರೂ ದೋಷಗಳನ್ನು ಹುಡುಕಿದರೆ, ತಪ್ಪುಗಳನ್ನು ಎತ್ತಿ ಏಣಿಸಿದರೆ ಹೇಗೆ ಎಂದು ಅನೇಕರು ಬಾಯಿದ್ದೂ ಮೂಕನಂತಾಗಿದ್ದರು. ಅಂಥವರಿಗೆ ಬಸವಣ್ಣನವರು ಹೇಳುವುದು: ಯಾರು ಆಡಿಕೊಂಡರೇನು? ದೋಷಗಳನ್ನು ಹುಡುಕಿದರೇನು? ಅದಕ್ಕಾಗಿ ಚಿಂತಿಸದೆ ತಲೆ ಎತ್ತಿ ಮಾತನಾಡುವುದನ್ನು ರೂಢಿಸಿಕೊ ಎಂದು. ಆಡುವ ಮಾತಿನಲ್ಲಿ ಅರ್ಥ ಇದೆಯೋ ಇಲ್ಲವೋ ಎನ್ನುವುದು ಮುಖ್ಯವಲ್ಲ. ‘ದಂದಣ ದತ್ತಣ’ ಎನ್ನುವ ಪದಕ್ಕೆ ಅಂಥ ವಿಶೇಷ ಅರ್ಥವೇನೂ ಇಲ್ಲ. ನಿನಗೆ ತಿಳಿದದ್ದನ್ನು ಮಾತನಾಡು. ಹಾಗೆ ಮಾತನಾಡುತ್ತ ಮಾತನಾಡುತ್ತ ಮಾತನ್ನು ಕರಗತ ಮಾಡಿಕೊಂಡರೆ ಮನೋಬಲ ಹೆಚ್ಚುವುದು. ಆತ್ಮಸ್ಥೈರ್ಯ ಉದಯಿಸಿ ಕ್ರಮೇಣ ಒಳ್ಳೆಯ ಮಾತುಗಳು ತಾನಾಗಿಯೇ ಹೊರಹೊಮ್ಮುವವು. ಹೀಗೆ ಮಾತಿನ ಮೂಲಕ ಮೊದಲು ಜನರ ಮನಸ್ಸನ್ನು ಬದಲಾಯಿಸುವ ಕ್ರಿಯೆಯಲ್ಲಿ ಬಸವಣ್ಣನವರು ತಮ್ಮನ್ನು ತೊಡಗಿಸಿಕೊಂಡರು. ಮಾತನಾಡಲು ಕಲಿತ ಜನರಿಗೆ ಮತ್ತೊಂದು ಎಚ್ಚರಿಕೆ ನೀಡುವರು. ಮಾತು ಬರುತ್ತದೆ ಎಂದು ಏನೇನೋ ಅರ್ಥವಿಲ್ಲದ ವ್ಯರ್ಥ ಮಾತುಗಳನ್ನು ಆಡಬೇಡಿ. ಮಾತು ಮುತ್ತಾಗಬೇಕು, ಮಂತ್ರವಾಗಬೇಕು ಎಂದು ಹೇಳುವರು.

ನುಡಿದಡೆ ಮುತ್ತಿನ ಹಾರದಂತಿರಬೇಕು,

ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು,

ನುಡಿದಡೆ ಸ್ಪಟಿಕದ ಸಲಾಕೆಯಂತಿರಬೇಕು,

ನುಡಿದಡೆ ಲಿಂಗಮೆಚ್ಚಿ ಅಹುದಹುದನಬೇಕು,

ನುಡಿಯೊಳಗಾಗಿ ನಡೆಯದಿದ್ದಡೆ,

ಕೂಡಲಸಂಗಮದೇವನೆಂತೊಲಿವನಯ್ಯಾ?

ಇವತ್ತು ಮುತ್ತಿನ ಹಾರದಂತಹ, ಮಾಣಿಕ್ಯದ ದೀಪ್ತಿಯಂತಹ, ಸ್ಫಟಿಕದ ಸಲಾಕೆಯಂತಹ ಅಷ್ಟೇ ಏಕೆ ಲಿಂಗ ಮೆಚ್ಚು ಹೌದು, ಹೌದು ಎನ್ನುವಂತೆ ಮಾತನಾಡುವ ಮಹಾನುಭಾವರು ಸಾಕಷ್ಟು ಜನರಿದ್ದಾರೆ. ಅವರ ಮಾತುಗಳನ್ನು ಜನರು ಮೆಚ್ಚಿ ಚಪ್ಪಾಳೆ ತಟ್ಟುವ ಹಾಗೆ, ತಲೆದೂಗುವ ಹಾಗೆ ಮಾಡುವ ಕಲೆ ಕೆಲವು ಜನರಿಗೆ ಹರಳು ಹುರಿದಷ್ಟೆ ಸುಲಭ. ಆದರೆ ಇಲ್ಲಿ ಶರಣರು ನೀಡುವ ಮತ್ತೊಂದು ಎಚ್ಚರಿಕೆಯ ಮಾತು ಗಮನಾರ್ಹ. ನುಡಿಯೊಳಗಾಗಿ ನಡೆಯಬೇಕು ಎನ್ನುವುದು. ಹಾಗೆ ನಡೆ ನುಡಿ ಒಂದಾಗದಿದ್ದರೆ ದೇವರು ಒಲಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸುವರು. ಜನರು ಮೆಚ್ಚುವಂತೆ ಮಾತನಾಡುವುದು ಸುಲಭ. ಆದರೆ ದೇವರು ಒಲಿಯುವಂತೆ ಮಾತನಾಡುವುದು ಅಷ್ಟು ಸುಲಭವಲ್ಲ. ಹಾಗಾಗಿ ಆಡುವ ಮಾತುಗಳು ಆಚರಣೆಯಲ್ಲಿ ಪರ್ಯವಸಾನವಾಗಬೇಕು. ಮಾತು, ಕೃತಿ ಬೇರೆ ಬೇರೆ ಆದರೆ ದೇವರು ಅದೆಂದು ಒಲಿಯುವನು ಎಂದು ಪ್ರಶ್ನಿಸುವರು. ಮಾತು, ಕೃತಿ ಬೇರೆ ಬೇರೆ ಆಗಿದ್ದರೆ ಅಂಥವರನ್ನು ಯಾರೂ ಒಪ್ಪರು. ಅವರ ಬದುಕು ಅರಳದು ಎನ್ನುವ ವಿಚಾರವನ್ನು ವ್ಯಕ್ತಪಡಿಸುವ ಬಸವಣ್ಣನವರು ಆಡುವ ಮಾತುಗಳು ಹೇಗಿರಬೇಕು ಎನ್ನುವುದನ್ನು ಮೇಲಿನ ವಚನದಲ್ಲಿ ಹೇಳಿದರೆ ಮುಂದಿನ ವಚನದಲ್ಲಿ ಅವರು ಪ್ರಸ್ಥಾಪಿಸುವುದನ್ನು ಗಮನಿಸಿ.

ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ,

ನಡೆಯೊಳಗೆ ನುಡಿಯ ಪೂರೈಸುವೆ.

ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.

ಒಂದು ಜವೆ ಕೊರತೆಯಾದಡೆ

ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ.

ನಡೆ ನುಡಿಗಳಲ್ಲಿ ಅಂತರವಿರಬಾರದು. ಮಾತು ಕೃತಿ ಒಂದಾಗಿರಬೇಕು. ಆಗ ಆ ಮಾತುಗಳು ದೇವರಿಗೆ ಪ್ರಿಯವಾಗುವವು. ಇಲ್ಲವಾದರೆ ವ್ಯಕ್ತಿಯ ಬಾಳು ನಾಯಿಯ ಬಾಳಿನಂತಾಗುವುದು. ಹೀಗೆ ಬಸವಣ್ಣನವರು ಮೃದುನುಡಿಗಳನ್ನು ಆಡುವುದಷ್ಟೇ ಮುಖ್ಯವಲ್ಲ; ಆ ನುಡಿಗನುಗುಣವಾದ ನಡೆಯೂ ಇರಬೇಕು ಎನ್ನುವುದನ್ನು ಒತ್ತಿ ಹೇಳುವರು. ಅದು ಅವರು ಬೇರೆಯವರಿಗೆ ಹೇಳುವ ಕಾರ್ಯವನ್ನು ಮಾತ್ರ ಮಾಡಿದವರಲ್ಲ. ಮೊದಲು ಅಂಥ ಮಾತುಗಳನ್ನು ತಮಗೆ ತಾವೇ ಹೇಳಿಕೊಂಡು ತಮ್ಮ ಬದುಕನ್ನು ಕಟ್ಟಿಕೊಂಡರು. ನಂತರ ಸಮಾಜದ ಬದುಕನ್ನು ಕಟ್ಟುವ ಕಾರ್ಯಕ್ಕೆ ಮುಂದಾದರು. ಅವರು ಒತ್ತುಕೊಟ್ಟದ್ದು ವ್ಯಕ್ತಿಗತ ಶುದ್ಧಿಗೆ. ಅಂತರಂಗ ಮತ್ತು ಬಹಿರಂಗ ಶುದ್ಧಿಗೆ. ಇವತ್ತು ಎಷ್ಟೋ ಜನರು ಸಾಮಾಜಿಕ ಶುದ್ಧಿಗೆ ಒತ್ತು ಕೊಡುವರು. ಜೊತೆಗೆ ತಾವು ಬಾಹ್ಯವಾಗಿ ಶುದ್ಧರಾಗಬೇಕೆಂದು ಸ್ನಾನ ಮಾಡಿ ಮಡಿಯುಟ್ಟು ಹೊರಗೆ ಸುಂದರವಾಗಿ ಕಾಣುವಂತೆ ವ್ಯವಹರಿಸುವರು. ಸುಲಭವಾಗಿ ಇತರರ ದೋಷಗಳನ್ನು ಎತ್ತಿ ಹೇಳುವರು. ಆದರೆ ತಮ್ಮ ವ್ಯಕ್ತಿಗತ ದೋಷಗಳನ್ನು ಮುಚ್ಚಿಕೊಳ್ಳುವರು. ಅದಕ್ಕೆ ಬಸವಣ್ಣನವರು ಹೇಳುವುದು:

ಲೋಕದ ಡೊಂಕ ನೀವೇಕೆ ತಿದ್ದುವಿರಿ?

ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;

ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.

ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ

ಕೂಡಲಸಂಗಮದೇವ.

‘ಮನೆಮುಂದೆ ಆಳುದ್ದ ತಗ್ಗು ಇಟ್ಟುಕೊಂಡು ಇತರರ ಮನೆಮುಂದಿನ ಗೇಣುದ್ದ ತಗ್ಗಿಗೆ ಮಣ್ಣು ಹಾಕಲು ಹೋದ’ ಎನ್ನುವ ಗಾದೆ ಮಾತಿನಂತೆ ಇಲ್ಲಿ ಬಸವಣ್ಣನವರ ಆಶಯವನ್ನು ಗಮನಿಸಬೇಕು. ನಮ್ಮ ಲೋಪದೋಷಗಳನ್ನು ಮರೆತು ಅವರು ಹಾಗೆ, ಇವರು ಹೀಗೆ ಎಂದು ಸದಾಕಾಲ ಇತರರ ದೋಷಗಳತ್ತ ಬೆರಳು ಮಾಡಿ ತೋರಿಸುವುದು, ತನ್ಮೂಲಕ ತಾವು ಅಂಥವರಲ್ಲ ಎಂದು ಬಿಂಬಿಸುವುದು ಹಲವರ ಸ್ವಭಾವ. ಅದನ್ನು ಒಪ್ಪದ ಬಸವಣ್ಣನವರು ಮೊದಲು ನಿಮ್ಮ ಬದುಕನ್ನು ಸರಿಪಡಿಸಿಕೊಳ್ಳಿ. ನಾವು ಸರಿಯಾಗದೆ ಬೇರೆಯವರ ದೋಷಗಳನ್ನು ಹೇಳುವುದು ಆತ್ಮವಂಚನೆ ಎನ್ನುವರು. ಹಾಗಂತ ಬೇರೆಯವರ ದೋಷಗಳನ್ನು ಎತ್ತಿ ಹೇಳಬಾರದು, ತಿದ್ದಬಾರದು ಎಂದು ಹೇಳಿಲ್ಲ. ಬದಲಾಗಿ ಹಾಗೆ ಹೇಳುವ, ಅವರ ದೋಷಗಳನ್ನು ತಿದ್ದುವ ಅರ್ಹತೆ ನಿಮಗಿದೆಯೇ ಎನ್ನುವ ಪ್ರಶ್ನೆ ಮಾಡುವರು. ವ್ಯಕ್ತಿ ಪ್ರಾಮಾಣಿಕನಾಗಿ ಅಂತರಂಗದ ಅವಲೋಕನ ಮಾಡಿಕೊಳ್ಳಬೇಕು. ತಾನು ಶುದ್ಧಿಯಾದರೆ ಆಗ ಇನ್ನೊಬ್ಬರಿಗೆ ಹೇಳುವ ನೈತಿಕ ಹಕ್ಕು ಬರುವುದು. ಅಂದರೆ ಅವರು ವ್ಯಕ್ತಿಗತ ಶುದ್ಧಿಗೆ ಒತ್ತು ಕೊಟ್ಟರು. ತಾವು ಮೊದಲು ನೀತಿವಂತರಾದರು, ಪ್ರಾಮಾಣಿಕರಾದರು, ಸತ್ಯ ಸಂಧತೆ ಮೈಗೂಡಿಸಿಕೊಂಡರು, ಚಾರಿತ್ರ್ಯ ಶುದ್ಧಿಯನ್ನು ಕಾಪಾಡಿಕೊಂಡರು. ಆ ಮೂಲಕ ಸಮಾಜವನ್ನು ತಿದ್ದುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆ ನಿಟ್ಟಿನಲ್ಲಿ ಶರಣರ ಜಯಂತಿಯ ಆಚರಣೆ ಮಾಡುವುದು ಎಂದರೆ ಅವರ ಹತ್ತಾರು ವಚನಗಳನ್ನು ಹೇಳುವುದು ಮಾತ್ರವಲ್ಲ; ಆ ವಚನಗಳನ್ನು ಪಚನ ಮಾಡಿಕೊಂಡು ವ್ಯಕ್ತಿಗತ ಬದುಕಿನಲ್ಲಿ ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಹಾಗೆ ಅನುಷ್ಠಾನಕ್ಕೆ ತಂದಾಗ ಮಾತ್ರ ಬದುಕು ಸಾರ್ಥಕವಾಗುವುದು. ಬಸವಣ್ಣ ಮತ್ತಿತರ ಶರಣರು ಕಂಡ ಕನಸು ನನಸಾಗುವುದು. ಬಸವಣ್ಣ ಮುಂತಾದ ಶರಣರು ನಿದ್ರೆಯಲ್ಲಿ ಕನಸು ಕಂಡವರಲ್ಲ. ಇವತ್ತು ಅನೇಕ ಜನರು ಕನಸು ಕಾಣುವುದು ಮಲಗಿ ನಿದ್ರಿಸುವಾಗ ಮಾತ್ರ. ಆದರೆ ಅವರು ಎಚ್ಚರವಿದ್ದಾಗಲೇ ಕನಸು ಕಂಡರು. ಅವರು ಕಂಡ ಕನಸಿನ ವಿಷಯವಾದರೂ ಸ್ವಾರ್ಥದ್ದಲ್ಲ. ಸಮಾಜಮುಖಿ ಮತ್ತು ಲೋಕೋದ್ಧಾರದ ಚಿಂತನೆಯಾಗಿತ್ತು. ಜೊತೆಗೆ ಆತ್ಮೋದ್ಧಾರದ ಚಿಂತನೆಯೂ ಅವರಲ್ಲಿತ್ತು. ಅಂಥ ಕನಸುಗಳನ್ನು ಅವರು ಕಂಡದ್ದು ಮಾತ್ರವಲ್ಲ; ಅವುಗಳನ್ನು ತಮ್ಮ ಬದುಕಿನ ಅವಧಿಯಲ್ಲೇ ನನಸು ಮಾಡಿಕೊಂಡಿದ್ದರು. ಆದರೆ ಇವತ್ತು ಅವರ ಕನಸನ್ನು ಕಾಣುವ ಮನಸ್ಸು ಮಾಡುತ್ತಿಲ್ಲ.

ಇಂದು ನಾವು ಬಸವಣ್ಣನವರು ಕಂಡ ಕನಸನ್ನು ಕಾಣುತ್ತ ಆ ಕನಸನ್ನು ನನಸು ಮಾಡುವ ಸಂಕಲ್ಪ ತಳೆದರೆ ಬಸವಜಯಂತಿ ಅರ್ಥಪೂರ್ಣವಾಗುವುದು. ಬಸವÀ ಜಯಂತಿ ಅಂತರಂಗದ ಅವಲೋಕನಕ್ಕೆ ದಾರಿಯಾಗಬೇಕು. ನಾವು ಹೊಗಳಿಕೆಯಿಂದ ಹಿಂದೆ ಸರಿದು ಮಾಡುವ ಕಾರ್ಯದತ್ತ ಗಮನಹರಿಸಬೇಕು. ಬಸವಣ್ಣನವರು ಹೊಗಳಿಕೆಯನ್ನು ಹೊನ್ನಶೂಲ ಎಂದು ಕರೆಯುವರು.

ಎನ್ನವರೊಲಿದು ಹೊನ್ನ ಶೂಲದಲ್ಲಿಕ್ಕಿದರೆನ್ನ ಹೊಗಳಿ, ಹೊಗಳಿ,

ಎನ್ನ ಹೊಗಳತೆ ಎನ್ನನಿಮ್ಮೈಗೊಂಡಿತ್ತಲ್ಲಾ-

ಅಯ್ಯೋ, ನೊಂದೆನು, ಸೈರಿಸಲಾರೆನು!

ಅಯ್ಯೋ, ನಿಮ್ಮ ಮನ್ನಣೆಯ ಮಸೆದಲಗಾಗಿ ತಾಗಿತ್ತಲ್ಲಾ-

ಅಯ್ಯೋ ನೊಂದೆನು, ಸೈರಿಸಲಾರೆನು.

ಕೂಡಲಸಂಗಮದೇವಾ,

ನೀನೆನಗೆ ಒಳ್ಳಿದನಾದಡೆ

ಎನ್ನ ಹೊಗಳತೆಗಡ್ಡ ಬಾರಾ, ಧರ್ಮೀ!

ಹೊಗಳಿಕೆ ತುಂಬಾ ಅಪಾಯಕಾರಿ. ಅದು ಯಾರನ್ನು ಏನು ಮಾಡುತ್ತದೆ ಎಂದು ಹೇಳಲಾಗದು. ಹೊಗಳಿಕೆ ಒಂದುರೀತಿಯ ಹರಿತವಾದ ಹೊನ್ನ ಶೂಲ ಇದ್ದಂತೆ. ಕತ್ತಿ ಚಿನ್ನದ್ದಾದರೇನು, ಕಬ್ಬಿಣದ್ದಾದರೇನು? ಅದು ಚುಚ್ಚಿದರೆ ನೋವಾಗದಿರಲು ಸಾಧ್ಯವೇ? ಆದ್ದರಿಂದ ನನಗೆ ನೀನು ಒಳ್ಳೆಯದು ಮಾಡುವ ಆಶಯವಿದ್ದಲ್ಲಿ ಅಂಥ ಹೊಗಳಿಕೆಗೆ ಅಡ್ಡ ಬಾ ಎಂದು ಬೇಡುವರು. ಬಸವಣ್ಣನವರು ಜಾತಿಯ ಭೂತವನ್ನು ಕಳೆಯಲು ನೀಲ-ಶೀಲರ ಕಲ್ಯಾಣ ಮಾಡಿಸಿದರು. ಉತ್ತಮ ಕುಲವೆಂಬುದು ಹೊರಲಾಗದ ಹೊರೆ ಎಂದು ತಮ್ಮ ಕುಲದ ಕಲಂಕವನ್ನು ಕಳೆಯುವ ಪ್ರಯತ್ನ ಮಾಡಿದರು. ‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ’ ಎನ್ನುವ ಮೂಲಕ ಮಾನವ ಮಾನವರಲ್ಲ ಜಾತಿಯ ಕಾರಣಕ್ಕಾಗಿ ಗೋಡೆಗಳನ್ನು ಕಟ್ಟುವುದು ಸಲ್ಲದೆಂದರು. ಉತ್ತಮಿಗೆ ಇರುವುದು ಜಾತಯಲ್ಲಲ್ಲ; ನಡಾವಳಿಕೆಯಲ್ಲಿ ಎನ್ನುವರು. ಅವರು ಕಾಯಕಕ್ಕೆ ವಿಶೇಷ ಮಹತ್ವ ನೀಡಿದರು. ಶರಣರ ಪರಿಭಾಷೆಯ ಕಾಯಕ ತತ್ತ್ವ ಜಾರಿಯಲ್ಲಿ ಬಂದರೆ ವೃತ್ತಿಗೌರವ ಬೆಳೆಯುವುದು. ಯಾರೂ ಕೀಳಲ್ಲ; ಯಾರೂ ಮೇಲಲ್ಲ. ಎಲ್ಲರೂ ಸಮಾನರು ಎನ್ನುವ ಮನೋಭಾವ ಮೈದಾಳುವುದು.

ಬಸವಣ್ಣನವರು ಲೋಕದ ದೋಷಗಳನ್ನು ಕಂಡು ಮರುಗಿದ್ದು ಮಾತ್ರವಲ್ಲ, ಅವುಗಳಿಗೆ ಸೂಕ್ತ ಪರಿಹಾರವನ್ನು ಹುಡುಕಿದರು. ಧರ್ಮ ದೇವರುಗಳಿಗೆ ಹೊಸ ವ್ಯಾಖ್ಯಾನ ನೀಡಿದರು. ಭಯವೇ ಧರ್ಮ ಎಂದು ಜನರನ್ನು ಭಯದ ನೆರಳಿನಲ್ಲಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ಪೂಜಾರಿ ಪುರೋಹಿತರಿಗೆ ಪೆಟ್ಟು ಕೊಡುವಂತೆ ಬಸವಣ್ಣನವರು ಹೇಳಿದ್ದು ‘ದಯವೇ ಧರ್ಮದ ಮೂಲ’ ಎಂದು. ಏನೇನೋ ತಿಂದು ಬದುಕುವ ಜನರಿಗೆ ಬಸವಣ್ಣನವರ ಧರ್ಮ ಅರ್ಥವಾಗುವುದು ತುಂಬಾ ಕಷ್ಟ. ನಿಜಕ್ಕೂ ಸಮಾಜದಲ್ಲಿ ಬಸವ ತತ್ತ್ವದಂತೆ ಬಾಳುವ ಸಂಕಲ್ಪ ಮಾಡಿದರೆ ವ್ಯಕ್ತಿ ಕಲ್ಯಾಣ, ತನ್ಮೂಲಕ ಲೋಕಕಲ್ಯಾಣದ ಕನಸು ನನಸಾಗುವುದು. ಇಂದು ಸಮಾಜದಲ್ಲಿ ಅನೇಕ ರೋಗಗಳು ಉಲ್ಬಣಿಸಿ ಸಾಮಾಜಿಕ ಆರೋಗ್ಯ ತುಂಬಾ ಹದಗೆಡುತ್ತಿರುವುದಕ್ಕೆ ಕಾರಣ ಬಸವ ಸಂದೇಶ ಜಾರಿಯಲ್ಲಿ ಬಾರದಿರುವುದು. ನಿಜಕ್ಕೂ ಬಸವ ಸಂದೇಶದಂತೆ ಬದುಕನ್ನು ರೂಪಿಸಿಕೊಳ್ಳುವ ಗಟ್ಟಿಮನಸ್ಸು ನೇತಾರರಿಗೆ ಮತ್ತು ಮತದಾರರಿಗೆÉ ಬಂದಲ್ಲಿ ಕಲ್ಯಾಣ ರಾಜ್ಯ ನೆಲೆಗೊಳ್ಳುವುದು.

ಸ್ವಾಮಿಗಳಿಗೆ, ನೇತಾರರಿಗೆ ಬಸವಣ್ಣನವರು ಹೇಳುವುದು ಪರಧನದಾಮಿಷ, ಪರಸ್ತ್ರೀಯ ಮೋಹವನ್ನು ಮೊದಲು ತೊರೆಯಿರಿ ಎಂದು. ಹೌದು ಇವತ್ತಿನ ಏನೆಲ್ಲ ಅನಿಷ್ಟಗಳಿಗೆ ಕಾರಣ ಪರಧನದಾಸೆ ಮತ್ತು ಪರಸ್ತ್ರೀ ಮೋಹ. ಅದರಲ್ಲೂ ಅಧಿಕಾರದಲ್ಲಿರುವ ಜನರಿಗೆ ಬಸವಣ್ಣನವರು ‘ನಂಟುಭಕ್ತಿ ನಾಯಕ ನರಕವೆಂದು’ ಹೇಳುವ ಮೂಲಕ ನೀವು ನಿಮ್ಮ ಬಂಧು ಬಾಂಧವರನ್ನು ಹತ್ತಿರ ಬಿಟ್ಟುಕೊಳ್ಳಬೇಡಿರೆಂದು ಸೂಚಿಸುವರು. ಇವತ್ತು ರಾಜಕೀಯ, ಧಾರ್ಮಿಕ ಮತ್ತಿತರ ಕ್ಷೇತ್ರಗಳನ್ನು ನೋಡಿದರೆ ಅಲ್ಲಿ ಒತ್ತು ಕೊಡುವುದು ನಂಟು ಭಕ್ತಿಗೆ. ಅದರಿಂದಾಗಿಯೇ ಅವರು ಅನೇಕ ಆರೋಪಗಳಿಗೆ ತುತ್ತಾಗುವರು. ರಾಜಕಾರಣಿಗಳನ್ನೇ ತೆಗೆದುಕೊಳ್ಳಿ; ಅಪ್ಪನ ಅಧಿಕಾರವನ್ನು ಮಗನೋ, ಅಳಿಯನೋ, ಮಗಳೋ ದುರುಪಯೋಗ ಮಾಡಿಕೊಂಡು ನಾಳೆ ಆ ರಾಜಕಾರಣಿ ಮುಖವೆತ್ತಿ ತಿರುಗದಂತಹ ಪರಿಸ್ಥಿತಿ ತರುವರು. ಅವರ ಭ್ರಷ್ಟತೆ ಮಿತಿಮೀರಿ ಕೊನೆಗೆ ಸೆರೆಮನೆ ಸೇರುವ ಪ್ರಸಂಗ ಉದ್ಭವಿಸುವುದು. ಅವರು ಬಸವಣ್ಣನವರ ‘ನಂಟುಭಕ್ತಿ ನಾಯಕ ನರಕ’ ಎನ್ನುವ ವಚನವನ್ನು ಪಾಲಿಸಿದ್ದರೆ ಆ ಪರಿಸ್ಥಿತಿಯೇ ಬರುತ್ತಿರಲಿಲ್ಲ.

ಸಂಗ್ರಹ ಪದ್ಧತಿ ಸಲ್ಲದು ಎನ್ನುವರು ಬಸವಣ್ಣನವರು. ಇಂದಿಂಗೆ ನಾಳಿಂಗೆ, ಮಡದಿ ಮಕ್ಕಳಿಗೆಂದು ಕೂಡಿಡುವುದು ಸಲ್ಲದು ಎಂದು ಹೇಳಿದ್ದು ಮಾತ್ರವಲ್ಲ ಅದರಂತೆ ಬಸವಣ್ಣನವರು ಬಾಳಿದರು. ಅದು ಇಂದು ಎಲ್ಲ ಜನರಿಗೂ ಆದರ್ಶವಾಗಬೇಕಿದೆ. ಕೋಟಿ ಕೋಟಿ ಸಂಗ್ರಹ ಮಾಡುವ ದುರ್ಬುದ್ಧಿ ಇಂದು ಎಲ್ಲರಲ್ಲೂ ಅತಿಯಾಗಿದೆ. ಚಿನ್ನ, ಬೆಳ್ಳಿ, ಒಡವೆ, ಹಣ, ಆಹಾರ ಪದಾರ್ಥ ಕೂಡಿಟ್ಟು ಕೂಡಿಟ್ಟು ಕೊನೆಗೆ ಲೋಕಾಯುಕ್ತರ ದಾಳಿಗೆ ಒಳಗಾಗಿ ತಮ್ಮ ಗೌರವಕ್ಕೆ ತಾವೇ ಚ್ಯುತಿ ತಂದುಕೊಳ್ಳುವ ದೊಡ್ಡವರು ಹೆಚ್ಚಾಗಿದ್ದಾರೆ. ಅಂಥವರಿಗೆಲ್ಲ ಬಸವಣ್ಣನವರ ‘ಅನ್ನದೊಳಗೊಂದಗುಳ, ಚಿನ್ನದೊಳಗೊಂದೊರೆಯ ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ತಲೆದಂಡ’ ಎನ್ನುವ ಮಾತುಗಳು ಅರ್ಥವಾಗುವುದು ಕಷ್ಟ. ಬಸವ ಜಯಂತಿಯ ಆಚರಣೆ ಮಾಡುವುದು ಎಂದರೆ ಕೇವಲ ಬಸವಣ್ಣನವರ ಭಾವಚಿತ್ರ ಮೆರವಣಿಗೆ ಮಾಡುವುದಲ್ಲ. ಅವರ ವಿಚಾರಗಳ ಮೆರವಣಿಗೆ ಆಗಬೇಕು. ಆ ವಿಚಾರಗಳು ನಮ್ಮ ಬದುಕಿನಲ್ಲಿ ಅಳವಡಬೇಕು. ಆಗ ಬಸವಜಯಂತಿಗೆ ಅರ್ಥ ಬರುವುದು.

ಹೇಂಗೆ ಮನ ಹಾಂಗೆ ಘನ

ತನುಶುಚಿಯಿಲ್ಲದವನ ದೇಹಾರವೇಕೆ?

ದೇವರು ಕೊಡನೆಂಬ ಭ್ರಾಂತದೇಕೆ?

ಮನಕ್ಕೆ ಮನವೆ ಸಾಕ್ಷಿ, ಸಾಲದೆ ಲಿಂಗ ತಂದೆ?

ಹೇಂಗೆ ಮನ ಹಾಂಗೆ ಘನ ತಪ್ಪದು,

ಕೂಡಲಸಂಗಮದೇವಾ.

‘ಮನಸ್ಸಿನಂತೆ ಮಹಾದೇವ’ ಎನ್ನುವ ಅಭಿಪ್ರಾಯವನ್ನು ಈ ವಚನದಲ್ಲಿ ಬಸವಣ್ಣನವರು ಪ್ರತಿಪಾದಿಸಿದಂತಿದೆ. ನಾವು ದೇವರನ್ನು ಪೂಜೆ ಮಾಡಲು ಬೆಳಗ್ಗೆ ಎದ್ದು ಸ್ನಾನ ಮಾಡಿ, ಮಡಿಬಟ್ಟೆಯುಟ್ಟು ಶುಚಿರ್ಭೂತರಾಗಿ ದೇವಸ್ಥಾನಕ್ಕೆ ಹೋಗುತ್ತೇವೆ. ಗಂಟೆಗಟ್ಟಲೆ ಪೂಜೆ ಮಾಡುತ್ತೇವೆ. ಗಂಟೆ ಬಾರಿಸುತ್ತೇವೆ. ಎಡೆ ಹಿಡಿಯುತ್ತೇವೆ. ಕಾಯಿ ಒಡೆಯುತ್ತೇವೆ. ಹೀಗೆ ನಿರಂತರ ಮಡಿ-ಹುಡಿಯಿಂದ ಪೂಜೆ ಮಾಡುತ್ತಿದ್ದರೂ ಯಾಕೋ ದೇವರು ಇನ್ನೂ ಒಲಿವಲ್ಲ, ಕಣ್ಬಿಡಲೊಲ್ಲ, ಇಷ್ಟು ದಿನ ಪೂಜೆ ಮಾಡಿದ್ದು ವ್ಯರ್ಥವಾಯ್ತಲ್ಲ ಎಂದು ಅನೇಕರು ಪ್ರಶ್ನಿಸುತ್ತಾರೆ. ಆದರೆ ದೇಹ ಶುಚಿಯಾಗುವುದು ಎಂದರೆ ಸ್ನಾನ ಮಾಡುವುದೇ? ಮಡಿಬಟ್ಟೆಗಳನ್ನು ತೊಟ್ಟುಕೊಳ್ಳುವುದೇ? ದೇವರ ಪೂಜೆಗೆಂದು ಹಣ್ಣು, ಕಾಯಿ, ಕರ್ಪುರ, ಊದುಬತ್ತಿ ಒಯ್ಯುವುದೇ? ಇದಾವುದೂ ಅಲ್ಲ. ದೇಹದ ಗುಣಗಳನ್ನು ಕಳೆದುಕೊಳ್ಳುವಂತಹುದು. ದೇಹದಲ್ಲಿ ಮನೆಮಾಡಿಕೊಂಡಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎನ್ನುವ ದುರ್ಗುಣಗಳನ್ನು ಕಳೆದುಕೊಳ್ಳುವುದು. ಅವುಗಳಿಂದ ಮಲಿನವಾದ ಒಡಲನ್ನು ಶುಚಿ ಮಾಡಿಕೊಳ್ಳುವುದು. ದೇಹದ ಗುಣಗಳನ್ನು ಕಳೆದುಕೊಂಡಾಗ ದೇವರು ಹತ್ತಿರ ಬರುತ್ತಾನೆ. ಆಗ ದೇವರ ಪೂಜೆ ಮಾಡಿದ್ದು ಸಾರ್ಥಕವಾಗಿ ದೇವರು ಒಲಿಯುತ್ತಾನೆ.

ದೇಹ ದಿವ್ಯವಾಗಬೇಕು. ದಿವ್ಯ ಆಗಬೇಕು ಎಂದರೆ ಪವಿತ್ರವಾಗಬೇಕು. ಪವಿತ್ರವಾಗಬೇಕೆಂದು ಗಂಗಾ, ತುಂಗಾ ಜಲ, ಸಾಬೂನು ಬಳಸಿ ದೇಹವನ್ನು ಸ್ವಚ್ಛ ಮಾಡಿಕೊಳ್ಳುವುದಷ್ಟೇ ಅಲ್ಲ. ಹೀಗೆ ಮಾಡುವುದರಿಂದ ದೇಹ ಸ್ವಚ್ಛ ಆಯ್ತು ಎನ್ನುವ ಭ್ರಮೆಯಿಂದ ಮನುಷ್ಯ ಮೊದಲು ಮುಕ್ತವಾಗಬೇಕು. ಮನಸ್ಸಿನಲ್ಲಿ ಇನ್ನಿಲ್ಲದ ಕಾಮನೆಗಳನ್ನು ಅಡಗಿಸಿಕೊಂಡರೆ, ಆಶೋತ್ತರಗಳನ್ನು ತುಂಬಿಕೊಂಡರೆ ಎಷ್ಟುಗಂಟೆ ಪೂಜೆ ಮಾಡಿದರೂ ಅದು ವ್ಯರ್ಥ.

ಅಗ್ಘವಣಿ ಪತ್ರೆ ಪುಷ್ಪ ಧೂಪ ದೀಪ ನೀವಾಳಿಯಲ್ಲಿ

ಪೂಜಿಸಿ ಪೂಜಿಸಿ ಬಳಲುತ್ತೈದಾರೆ.

ಏನೆಂದರಿಯರು ಎಂತೆಂದರಿಯರು.

ಜನ ಮರುಳೊ ಜಾತ್ರೆ ಮರುಳೊ ಎಂಬಂತೆ;

ಎಲ್ಲರೂ ಪೂಜಿಸಿ, ಏನನೂ ಕಾಣದೆ,

ಲಯವಾಗಿ ಹೋದರು ಗುಹೇಶ್ವರಾ.

ಕಣ್ಣಿಗೆ ಕಟ್ಟಿದ ಹಾಗೆ ಸಮಾಜದ ಚಿತ್ರಣವನ್ನು ಅಲ್ಲಮಪ್ರಭುದೇವರು ವಿವರಿಸದ್ದಾರೆ ಈ ವಚನದಲ್ಲಿ. ದೇವರ ಪೂಜೆಗಂದು ಬಂಡಿಗಟ್ಟಲೆ ಪತ್ರೆ ತಂದದ್ದೇ. ಕೊಡಗಟ್ಟಲೆ ನೀರು ಸುರಿದದ್ದೇ. ಊದುಬತ್ತಿ ಉರಿಸಿದ್ದೇ. ಕರ್ಪುರ ಸುಟ್ಟದ್ದೇ. ಇವುಗಳ ಮೂಲಕ ಪೂಜೆ ಮಾಡಿದೆವೆಂದು ಹೇಳುವರು. ಇದು ವ್ಯರ್ಥ ಶ್ರಮ. ಇದಕ್ಕೆ ಅವರು ‘ಜನಮರುಳೊ ಜಾತ್ರೆ ಮರುಳೊ’ ಎನ್ನುವರು. ಜಾತ್ರೆಗೆ ಹೋದವರು ಏನೇನೋ ಉದ್ದೇಶಗಳನ್ನು ಇಟ್ಟುಕೊಂಡಿರ್ತಾರೆ. ಅವರಿಗೆ ಒಂದು ನಿಶ್ಚಿತವಾದ ಗುರಿ ಇರುವುದಿಲ್ಲ. ಹಾಗೆಯೇ ಉದ್ದೇಶವಿಲ್ಲದ ಪೂಜೆ ಕೂಡ ವ್ಯರ್ಥ ಪೂಜೆಯಾಗುವುದು. ಹಾಗೆ ವ್ಯರ್ಥ ಪೂಜೆ ಆಗಬಾರದು ಎಂದರೆ ಬಾಹ್ಯವಾಗಿ ಬಳಸುವ ಪರಿಕರಗಳು ಮುಖ್ಯವಾಗದೆ ಅಂತರಂಗ ಅರಳಬೇಕು. ಮನಸ್ಸಿನ ಕಾಮನೆಗಳನ್ನು ಎಡೆ ಹಿಡಿಯಬೇಕು. ದೇಹವನ್ನೇ ಕಾಯಾಗಿ ಒಡೆಯಬೇಕು. ದೇಹವೇ ಹಣ್ಣಾಗಬೇಕು. ದೇಹವೇ ವಿಭೂತಿ ಆಗಬೇಕು. ದೇಹವೇ ಕರ್ಪುರವಾಗಬೇಕು. ಆಗ ಭಗವಂತ ತನ್ನಷ್ಟಕ್ಕೆ ತಾನೇ ಒಲಿಯುತ್ತಾನೆ. ಭಗವಂತನನ್ನು ಒಲಿಸಲು ಬೇಕಾದ ಅರ್ಹತೆಗಳು ನನ್ನಲ್ಲಿವೆಯೇ ಇಲ್ಲವೇ ಎಂದು ಬೇರೆಯವರು ಹೇಳುವ ಅಗತ್ಯ ಇಲ್ಲ. ‘ಮನವರಿಯದ ಕಳ್ಳತನವಿಲ್ಲ’. ನಮ್ಮ ಮನಸ್ಸಿಗೆ ನಾವೇ ಸಾಕ್ಷಿ. ಅಂತಃಸಾಕ್ಷಿ ಎನ್ನುವುದು ಪ್ರತಿಯೊಬ್ಬರಲ್ಲೂ ಇದೆ. ಅಂತಃಸಾಕ್ಷಿಯನ್ನು ಎಚ್ಚರಗೊಳಿಸಿದರೆ ಅದೇ ನಾವು ಹೋಗಬೇಕಾದ ದಾರಿಯನ್ನು ತೋರಿಸುತ್ತದೆÉ.

ನಮ್ಮ ಸಾಕ್ಷಿಪ್ರಜ್ಞೆ ಯಾವಾಗಲೂ ನಮ್ಮನ್ನು ಎಚ್ಚರಿಸುತ್ತಲೇ ಇರುತ್ತದೆ. ನೀನು ಮಾಡುವುದು ಸರಿಯಿಲ್ಲ, ತಿದ್ದಿಕೊ ಎಂದು. ಆದರೆ ನಾವು ಅದರ ತಲೆಯ ಮೇಲೆ ತಟ್ಟಿ ನಾನು ಹೋಗುವುದೇ ಸರಿ ಇದೆ ಕೂತ್ಕೋ ಎನ್ನುತ್ತೇವೆ. ಅಂದರೆ ಸಾಕ್ಷಿಪ್ರಜ್ಞೆಯನ್ನ ತಟ್ಟಿ ಮಲಗಿಸಿಬಿಟ್ಟರೆ ದೇವರು ಹೇಗೆ ಒಲಿಯಲಿಕ್ಕೆ ಸಾಧ್ಯ? ಆವಾಗ ಅಂದುಕೊಳ್ಳುತ್ತೇವೆ: ಅಯ್ಯೋ ಇಷ್ಟೆಲ್ಲ ಪೂಜೆ ಮಾಡಿದ್ದು ವ್ಯರ್ಥ; ಇನ್ನು ನಾಸ್ತಿಕನಾಗುವುದೇ ಒಳ್ಳೆಯದು ಎಂದು. ಆಸ್ತಿಕ, ನಾಸ್ತಿಕ ಅನ್ನುವುದನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೇವೆ? ನಿಜವಾದ ಆಸ್ತಿಕ ಯಾರು? ಎಲ್ಲ ರೀತಿಯ ದುರ್ಗುಣಗಳನ್ನು ದೂರ ಇಟ್ಟು, ಸದ್ಗುಣಗಳನ್ನು ಮೈಗೂಡಿಸಿಕೊಂಡು, ಸಚ್ಚಾರಿತ್ರ್ಯವಂತನಾಗಿ ಬಾಳಿದರೆ ಅವನು ಆಸ್ತಿಕ. ಅದನ್ನು ಬಿಟ್ಟು ವೇದ ಓದಿದೆ, ಪುರಾಣ ಓದಿದೆ, ಭಗವದ್ಗೀತೆ ಓದಿದೆ, ನಿತ್ಯ ಗುಡಿಗೆ ಹೋಗುತ್ತಿದ್ದೇನೆ, ಎಡೆ ಹಿಡಿಯುತ್ತಿದ್ದೇನೆ, ದಾನ ಮಾಡುತ್ತಿದ್ದೇನೆ ಎಂದು ಹೇಳಿದಾಕ್ಷಣ ಒಬ್ಬರನ್ನು ಆಸ್ತಿಕರು ಎಂದು ಹೇಳಲಿಕ್ಕೆ ಸಾಧ್ಯ ಆಗುವುದಿಲ್ಲ. ಒಬ್ಬ ವ್ಯಕ್ತಿ ನಾಸ್ತಿಕನೇ ಇರಬಹುದು. ಅವನೆಂದೂ ದೇವರನ್ನು ಪೂಜೆ ಮಾಡದೆ ಇರಬಹುದು. ದೇವರನ್ನು ನೆನೆಯದೆ ಇರಬಹುದು. ಆದರೆ ಅವನು ಸನ್ಮಾರ್ಗದಲ್ಲಿ ಸಾಗುತ್ತಿದ್ದರೆ, ಸತ್ಯವನ್ನೇ ನುಡಿಯುತ್ತಿದ್ದರೆ ಅವನೇ ನಿಜವಾದ ಆಸ್ತಿಕ ಎಂದು ಹೇಳಬೇಕಾಗುತ್ತದೆ. ಅವನಿಗೆ ಭಗವಂತ ಒಲಿಯುತ್ತಾನೆ. ಹಾಗಾಗಿಯೇ ಗಾಂಧಿಜಿಯವರು ‘ಸತ್ಯವೇ ದೇವರು’ ಎಂದು ಹೇಳಿದ್ದು. ಅವರು ‘ದೇವರು ಸತ್ಯ’ ಎನ್ನಲಿಲ್ಲ. ಸತ್ಯ ಮಾತನಾಡಿದರೆ ದೇವರು ಒಲಿಯುವನು, ಸುಳ್ಳು ಹೇಳಿದರೆ ದೇವರು ಎಂದೂ ಒಲಿಯಲಿಕ್ಕೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮನಸ್ಸಿನ ಶುದ್ಧಿಯನ್ನು ಮಾಡಿಕೊಂಡಾಗ ಮಹಾದೇವ ಅಲ್ಲೇ ನೆಲೆಗೊಳ್ಳುತ್ತಾನೆ. ಮನಸ್ಸು ಮಲಿನವಾಗಿತ್ತು ಅಂದರೆ ಮಹಾದೇವ ಮನಸ್ಸಿನಿಂದ ಹೊರಟು ಹೋಗುತ್ತಾನೆ. ಇದಕ್ಕೆ ಒಳ್ಳೆಯವರ ಸಹವಾಸವೂ ಬೇಕು. ಆಂತರಿಕವಾಗಿ ಶುದ್ಧವಾಗಿದ್ದೇವೆ ಎಂದರೆ ಅಷ್ಟೇ ಸಾಲದು. ನಮ್ಮ ಸುತ್ತಮುತ್ತಣ ಪರಿಸರವೂ ಅಂಥವರಿಂದ ಕೂಡಿರಬೇಕು. ಅದನ್ನೇ ‘ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ, ದುರ್ಜನರ ಸಂಗವದು ಬಚ್ಚಲ ನೀರ ಮಿಂದಂತೆ’ ಎನ್ನುವರು.

ಬಚ್ಚಲ ನೀರು ಬಹಳ ತಿಳಿಯಾಗಿರಬಹುದು. ತಿಳಿಯಾಗಿದೆ ಎಂದು ಆ ನೀರಿನಿಂದ ಸ್ನಾನ ಮಾಡಲು ಸಾಧ್ಯವೇ? ಒಂದುವೇಳೆ ಬಚ್ಚಲ ನೀರಿನಲ್ಲಿ ಸ್ನಾನ ಮಾಡಿದರೆ ಏನಾಗುತ್ತೆ? ಮೈಯೆಲ್ಲ ಕಡ್ತ ಷುರುವಾಗಿ ಆರೋಗ್ಯ ಕೆಡಬಹುದು. ಚರ್ಮರೋಗ ಬರಬಹುದು. ಆದ್ದರಿಂದ ತಿಳಿಯಾಗಿದೆ ಎಂದು ಬಚ್ಚಲ ನೀರಿನಲ್ಲಿ ಸ್ನಾನ ಮಾಡುವುದಲ್ಲ. ಸಜ್ಜನರ ಸಂಗದಲ್ಲಿ ಸ್ನಾನ ಮಾಡಬೇಕು. ಸ್ನಾನ ಮಾಡುವುದು ಎಂದರೆ ಸದ್ವಿಚಾರಗಳನ್ನು ಕೇಳುವುದು. ಅವುಗಳನ್ನು ಮನಸ್ಸಿನಾಳಕ್ಕೆ ಇಳಿಸಿಕೊಳ್ಳುವುದು, ಆಚರಣೆಯಲ್ಲಿ ತರುವುದು. ಆಗ ಭಗವಂತನ ಪೂಜೆ ಮಾಡಿದ್ದು ಸಾರ್ಥಕವಾಗುತ್ತದೆ. ಅದಕ್ಕಾಗಿಯೇ ‘ಹೇಂಗೆ ಮನ ಹಾಂಗೆ ಘನ’ ಎಂದು ಹೇಳುವುದು. ಮನಸ್ಸು ಹೇಗಿದೆಯೋ ಹಾಗೇ ದೇವರು. ಅದನ್ನೇ ‘ಮನಸ್ಸಿದ್ದಲ್ಲಿ ಮಾರ್ಗ’ ಎನ್ನುವರು. ಮನಸ್ಸು ಸದ್ಗುಣಗಳನ್ನು ಮೈಗೂಡಿಸಿಕೊಂಡಿದ್ದರೆ ಭಗವಂತ ಅಲ್ಲೇ ಇರ್ತಾನೆ. ಆ ಹಿನ್ನೆಲೆಯಲ್ಲಿ ಮನಸ್ಸಿಗೆ ಸಂಸ್ಕಾರ ಕೊಡುವಂತಹದ್ದು ಬಹಳ ಮುಖ್ಯ ಎನ್ನುವುದನ್ನು ಬಸವಣ್ಣನವರು ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ.

ಆಗಮದ ಮೂಗ ಕೊಯಿವೆ

ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,

ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ.

ಮಹಾದಾನಿ ಕೂಡಲಸಂಗಮದೇವಾ,

ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ.

ಈ ವಚನದಲ್ಲಿ ಬಸವಣ್ಣನವರು ಅಭಿಮಾನದಿಂದ ಹೇಳಿಕೊಳ್ಳುವ ಮಾತು ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ ಎನ್ನುವುದು. ಎಲ್ಲರಿಗೂ ಗೊತ್ತಿರುವ ಹಾಗೆ ಬಸವಣ್ಣನವರು ಹುಟ್ಟಿದ್ದು ಬ್ರಾಹ್ಮಣ ಕುಲದಲ್ಲಿ. ಆದರೆ ಬ್ರಾಹ್ಮಣ ಜನಾಂಗದಲ್ಲಿರುವಂಥ ಕರ್ಮಠತನಗಳನ್ನು ಕಂಡು ಕನಲಿ, ಅದರಿಂದ ಹೊರಬಂದವರು. ಮುಂದೆ ಇಷ್ಟಲಿಂಗಧಾರಿಗಳಾಗಿ ತಮ್ಮದೇ ಆದ ಮಾರ್ಗವನ್ನು ಅನುಭವಮಂಟಪದ ಮೂಲಕ ರೂಪಸಿಕೊಂಡವರು. ಈಗ ಅವರು ಜಾತಿಯ ಭೂತದಿಂದ ಹೊರಬಂದಿದ್ದಾರೆ. ಇವನಾರವ, ಇವನಾರವ ಎನ್ನದೆ ಇವನಮ್ಮವ ಇವನಮ್ಮವ ಎಂದು ಎಲ್ಲರನ್ನೂ ಸಮಾನವಾಗಿ ನೋಡುವ ದೃಷ್ಟಿಕೋನವನ್ನು ಮೈಗೂಡಿಸಿಕೊಂಡಿದ್ದಾರೆ. ಆದರೂ ಸಮಾಜದ ಜನರು ಬಸವಣ್ಣ ಬ್ರಾಹ್ಮಣರವನು, ಚೆನ್ನಯ್ಯ ಮಾದರವನು ಎಂದಿರಬೇಕು. ಹೀಗೆ ಒಬ್ಬ ವ್ಯಕ್ತಿಯನ್ನು ಅವನು ಹುಟ್ಟಿದ ಜಾತಿಯ ಆಧಾರದ ಮೇಲೆ ಗುರುತಿಸುವ ಕೆಟ್ಟ ಪರಂಪರೆ ಈ ಕಾಲಕ್ಕೂ ಇದೆ, ಅಂದೂ ಇತ್ತು. ಆಗ ಬಸವಣ್ಣನವರು ನಾನು ಮಾದಾರ ಚೆನ್ನಯ್ಯನವರ ಮನೆಯ ಮಗ ಎಂದು ಹೇಳುತ್ತಾರೆ. ನಾನು ಬ್ರಾಹ್ಮಣರ ಮಾದರಸ ಮಾದಲಾಂಬಿಕೆಯರ ಗರ್ಭದಲ್ಲಿ ಬಂದವನಲ್ಲ ಎಂದು ಮಾನಸಿಕ ಹುಟ್ಟನ್ನು ಸೃಷ್ಟಿಸಿಕೊಳ್ತಾರೆ. ಮಾದಾರ ಚೆನ್ನಯ್ಯನವರ ಮಗ ಎಂದು ಅಭಿಮಾನದಿಂದ ಹೇಳಿಕೊಳ್ತಾರೆ.

ಮಾದಾರ ಚೆನ್ನಯ್ಯನ ಮಗ ಎಂದು ಹೇಳಿಕೊಳ್ಳುವ ಹಿನ್ನೆಲೆಯಲ್ಲಿ ವೇದ, ಆಗಮ, ಶಾಸ್ತ್ರ, ತರ್ಕ ಅಡ್ಡಗೋಡೆಗಳಾಗಿ ನಿಲ್ಲುತ್ತವೆ. ಕೆಳವರ್ಗದವರು ವೇದವನ್ನು ಓದದ ಹಾಗೆ ಮಾಡುತ್ತವೆ. ನೀವು ಕೇಳಿರಬಹದು: ಯಾರಾದರೂ ಒಬ್ಬ ಶೂದ್ರ ವೇದ ಮಂತ್ರಗಳನ್ನು ಓದ್ತಾನೆ ಅಂದರೆ, ಓದುವುದಿರಲಿ ಕೇಳ್ತಾನೆ ಅಂದ್ರೆ ಅವನ ಕಿವಿಯಲ್ಲಿ ಕಾಯಿಸಿದ ಸೀಸ ಸುರಿಯಬೇಕು. ನಾಲಗೆಯಿಂದ ಮಂತ್ರದ ಪಠಣ ಮಾಡಿದರೆ ಆ ನಾಲಗೆಯನ್ನು ಕೊಯ್ಯಬೇಕು. ಯಜ್ಞ ಯಾಗಗಳನ್ನು ಕಣ್ಣಿನಿಂದ ನೋಡಿದರೆ ಅಂಥವನ ಕಣ್ಣುಗಳನ್ನು ಕೀಳಬೇಕು. ಇಂಥ ವಿಚಿತ್ರವಾದ ಶಿಕ್ಷೆಯನ್ನು ಕೊಡುವ ಪದ್ಧತಿ ಆ ಕಾಲದಲ್ಲಿ ಇತ್ತು. ಈ ವೇದ, ಶಾಸ್ತ್ರ, ತರ್ಕ ಇವೆಲ್ಲವೂ ಮೇಲ್ವರ್ಗದ ಜನರ ಸೊತ್ತುಗಳಾಗಿದ್ದವು. ಕೆಳವರ್ಗದವರನ್ನು ಅವುಗಳಿಂದ ಸಂಪೂರ್ಣವಾಗಿ ದೂರ ಇಟ್ಟಿದ್ದರು. ಆಗ ಬಸವಣ್ಣನವರಿಗೆ ಬಂದ ಯೋಚನೆ: ಜನಪರವಾಗಿ ಇರದ ವೇದಗಳಾಗಲಿ, ಶಾಸ್ತ್ರಗಳಾಗಲಿ, ಆಗಮಗಳಾಗಲಿ, ತರ್ಕವಾಗಲಿ ಬೇಕೇ? ಬೇಡ. ಅವುಗಳನ್ನೇ ದೂರ ಇಟ್ಬಿಡೋಣ ಎನ್ನುವರು. ಎಷ್ಟು ಕಟುವಾಗಿ ಅವುಗಳನ್ನು ಟೀಕೆ ಮಾಡ್ತಾರೆ ಅಂದರೆ ವೇದಕ್ಕೆ ವರೆಯ ಕಟ್ಟುವೆ ಎನ್ನುವರು. ಖಡ್ಗ ಹಾಕುವ ಒರೆ ಇರುತ್ತಲ್ಲ ಅದರಲ್ಲಿ ವೇದಗಳನ್ನು ಹಾಕಿ ಒಂದುಕಡೆ ಇಟ್ಬಿಡ್ತೇನೆ. ಶಾಸ್ತ್ರಕ್ಕೆ ನಿಗಳವನಿಕ್ಕುವೆ ಎನ್ನುವರು. ದೊಡ್ಡ ದೊಡ್ಡ ಶಾಸ್ತ್ರಗ್ರಂಥಗಳನ್ನು ತೋರಿಸಿ ಅವುಗಳ ಮೂಲಕ ಜನರನ್ನು ಮೋಸ ಮಾಡುವ ಪುರೋಹಿತರು ಇರ್ತಾರೆ. ಅಂಥವರಿಗೆ ಹೇಳ್ತಾರೆ: ನಿಮ್ಮ ಶಾಸ್ತ್ರಕ್ಕೆ ಬೇಡಿ ತೊಡಿಸ್ತೇನೆ ಎಂದು. ಕಳ್ಳ ಸಿಕ್ಕಿದರೆ ಪೋಲಿಸರು ಏನ್ ಮಾಡ್ತಾರೆ? ಅವನ ಕೈಗೆ ಬೇಡಿ ತೊಡಿಸಿ ಜೈಲಿನಲ್ಲಿ ಕೂಡ್ತಾರೆ. ಹಾಗೆ ನಿಮ್ಮ ಶಾಸ್ತ್ರಗಳಿಗೆ ಬೇಡಿ ತೊಡಿಸ್ತೇನೆ. ಅವೂ ಒಂದು ರೀತಿ ಕಳ್ಳತನ ಮಾಡಿದ ಹಾಗೆ. ಆದ್ದರಿಂದ ಅವುಗಳಿಗೆ ಬೇಡಿ ತೊಡಿಸುವೆ ಎಂದು ಕಟುವಾಗಿ ನುಡಿಯುವರು. ‘ತರ್ಕದ ಬೆನ್ನ ಬಾರನೆತ್ತುವೆ’. ಕತ್ತೆಗೆ ಹೇಗೆ ಬಾರಿಸ್ತಾರೋ ಹಾಗೆ ತರ್ಕದ ಬೆನ್ನಮೇಲೆ ಬಾರಿಸ್ತೇನೆ. ತರ್ಕ ಹುರುಳಿಲ್ಲದ್ದು. ನಿಜಾರ್ಥದಲ್ಲಿ ತರ್ಕ ಅರ್ಥಪೂರ್ಣವಾದುದೇ. ಆ ತರ್ಕದ ಮೂಲಕ ನವನೀತ ಪಡಿಯಬೇಕು. ಆದರೆ ಇಲ್ಲಿ ನವನೀತವನ್ನು ಪಡೆಯುತ್ತಿಲ್ಲ. ಬದಲಾಗಿ ಜೊಳ್ಳನ್ನು ಕುಟ್ಟಿ ಪರಿಶ್ರಮಪಟ್ಟ ಹಾಗೆ ಆಗ್ತಿದೆ. ಹಾಗಾಗಿ ಇಂಥ ತರ್ಕದ ಅಗತ್ಯ ಇಲ್ಲ. ಇನ್ನು ‘ಆಗಮದ ಮೂಗ ಕೊಯುವೆ’ ಎನ್ನುತ್ತಾರೆ. ಮನುಷ್ಯನ ಮುಖಕ್ಕೆ ಸೌಂದರ್ಯ ಮೂಗು. ಆ ಮೂಗನ್ನೇ ಕೊಯ್ದರೆ ಅಂದಗೆಡ್ತಾನೆ. ಸೂರ್ಪನಖಿಯ ಮೂಗನ್ನು ಲಕ್ಷ್ಮಣ ಕೊಯ್ದ. ಮೂಗಿನ ಸೌಂದರ್ಯ ಹೋಯ್ತು. ಅಲ್ಲಿಂದಲೇ ಸೇಡು ಷುರುವಾಯ್ತು. ಅದೇ ರೀತಿ ಆಗಮದ ಮೂಗನ್ನೇ ಕೊಯ್ದು ಹಾಕಿದರೆ? ನೋಡಿ ಬಸವಣ್ಣನವರು ಹೇಗೆ ಯೋಚನೆ ಮಾಡ್ತಾರೆ ಎನ್ನುವುದನ್ನ ಗಮನಿಸಿ. ಕೆಳವರ್ಗದವರ ಬಗ್ಗೆ ಇದ್ದಂತಹ ಪ್ರೀತಿ, ಅಭಿಮಾನ ಅವರನ್ನು ಈ ರೀತಿಯ ಮಾತುಗಳನ್ನಾಡ್ಲಿಕ್ಕೆ ಪ್ರೇರೇಪಿಸುವುದು.

ದೇವರು ಮಹಾದಾನಿ. ನಾನು ಇಷ್ಟೆಲ್ಲ ಮಾಡಿದರೂ ಅವನು ನನ್ನ ಮೇಲೆ ಬೇಸರ ಆಗುವುದಿಲ್ಲ. ಬಹಳ ಜನರು ಹೇಳುವುದೇನು? ಇವನು ವೇದ ನಿಂದಕ. ಆದ್ದರಿಂದ ದೇವರು ಇವನಿಗೆ ಸರಿಯಾದ ಶಿಕ್ಷೆ ಕೊಡ್ತಾನೆ. ಇವನು ಶಾಸ್ತ್ರಗಳನ್ನು ನಿಂದಿಸಿ, ಆಗಮಗಳನ್ನು ಟೀಕಿಸಿದ್ದಾನೆ. ಆದ್ದರಿಂದ ಇವನಿಗೆ ರೌರವ ನರಕ ಕಾದಿದೆ ಎನ್ನುವರು. ಅದಕ್ಕೆ ಅವರು ಹೇಳ್ತಾರೆ: ಕೂಡಲಸಂಗಮದೇವ ಮಹಾದಾನಿ. ಅವನು ಯಾವ ಶಿಕ್ಷೆಯನ್ನೂ ನನಗೆ ಕೊಡಲಿಕ್ಕೆ ಸಾಧ್ಯವಿಲ್ಲ. ಯಾವುದು ಜನಪರವಾಗಿ ಇರುವುದಿಲ್ಲವೋ ಅದನ್ನು ವಿರೋಧ ಮಾಡಬೇಕಾದದ್ದೇ ನಮ್ಮ ಧರ್ಮ. ಆದ್ದರಿಂದ ಅದನ್ನು ನಾನು ವಿರೋಧ ಮಾಡಿದ್ದೇನೆ. ಕೆಳವರ್ಗದ ಜನರ ಜೊತೆಗೆ ಗುರುತಿಸಿಕೊಳ್ಳುವುದರ ಮೂಲಕ ಅರ್ಥಪೂರ್ಣ ಬದುಕಿಗೆ ಬೇಕಾದ ಸತ್ವವನ್ನು ಮಾತ್ರ ಹೇಳ್ತಾರೆ. ಬದಲಾಗಿ ಜೊಳ್ಳನ್ನು, ಠೊಳ್ಳನ್ನು ಹೇಳುವ ಪ್ರಯತ್ನವನ್ನು ಬಸವಣ್ಣನವರು ಎಂದೂ ಮಾಡುವುದಿಲ್ಲ. ಹಾಗಾಗಿಯೇ ಇವತ್ತು ಎಲ್ಲ ವರ್ಗದ ಜನರೂ ಅವರಿಗೆ ಗೌರವ ಕೊಡುವುದು. ಬಸವಣ್ಣನವರು ದೇಹ ಬಿಟ್ಟು 850 ವರ್ಷಗಳ ಮೇಲಾಯ್ತು. ಅವರ ದೇಹ ನಮ್ಮಿಂದ ಮರೆಯಾಗಿರಬಹುದು. ಆದರೆ ಆ ದೇಹದ ಮೂಲಕ ಮಾಡಿದಂತಹ ಸಾಧನೆಗಳು, ಸಮಾಜಕ್ಕೆ ಕೊಟ್ಟಂತಹ ಕೊಡುಗೆಗಳು, ಅವರ ವಚನಗಳು ನಿತ್ಯ ನಮ್ಮ ಪಠಣಕ್ಕೆ ಅರ್ಹವಾಗಿವೆ. ಅವು ಸದಾ ನಮ್ಮನ್ನು ಪ್ರಚೋದಿಸುತ್ತವೆ. ಸನ್ಮಾರ್ಗದಲ್ಲಿ ಸಾಗಲಿಕ್ಕೆ ಬೇಕಾದಂತಹ ಸತ್ವವನ್ನು ತುಂಬುತ್ತಿವೆ. ಅಂಥ ಸತ್ವವನ್ನು ಮನುಷ್ಯ ತುಂಬಿಕೊಂಡಾಗ ಅವನೂ ಬಸವಣ್ಣನವರಂತೆ ಜಂಗಮನಾಗಲಿಕ್ಕೆ ಸಾಧ್ಯವಿದೆ. ಇವತ್ತು ನಾವೆಲ್ಲ ಜಂಗಮರಾಗದೆ ಸ್ಥಾವರವಾಗುತ್ತಿದ್ದೇವೆ. ಸ್ಥಾವರ ಅಂದರೆ ಜಡಗಟ್ಟಿ ಹೋಗುವುದು. ಚೈತನ್ಯವನ್ನು ಉಡುಗಿಸಿಕೊಳ್ಳುವುದು. ಮನುಷ್ಯ ಒಂದು ರೀತಿ ಕಲ್ಲು, ಮಣ್ಣು ಆಗುವುದು. ಕಲ್ಲು, ಮಣ್ಣಿನ ಜಡತ್ವವನ್ನು ನೀಗಿಸಿಕೊಂಡು ಜಂಗಮ ಆಗಬೇಕು ಅಂದರೆ ಅವನು ಸದಾ ಪ್ರಗತಿಪರ ಚಿಂತನೆಗಳನ್ನು ಮಾಡಬೇಕು ಎನ್ನುವುದನ್ನು ಈ ವಚನದ ಮೂಲಕ ಬಸವಣ್ಣನವರು ಮನವರಿಕೆ ಮಾಡಿಕೊಡ್ತಿದ್ದಾರೆ.

 

 

 

 

 

 

 

 

 

 

Related posts

ಚಿಕ್ಕಮಗಳೂರು ಹಬ್ಬದ ಪ್ರಚಾರ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಚಾಲನೆ

Times fo Deenabandhu

ಪ್ರತಿಯೊಬ್ಬ ಮಕ್ಕಳೂ ಲಸಿಕೆಯನ್ನು ಪಡೆಯಬೇಕು

Times fo Deenabandhu

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾದ್ರೆ ಕರ್ನಾಟಕದ ಈ ಗೌಡರಿಗ್ಯಾಕೆ ಭಯ.. .. ?

Times fo Deenabandhu