September 27, 2020
Times of Deenabandhu
  • Home
  • ಪ್ರಧಾನ ಸುದ್ದಿ
  • ಬ್ರೆಟ್‌ ಲೀ ಪ್ರಕಾರ ಕ್ರಿಕೆಟ್‌ ದೇವರ 100 ಶತಕಗಳ ದಾಖಲೆ ಮುರಿಯುವ ಬ್ಯಾಟ್ಸ್‌ಮನ್‌ ಇವರೇ!
ಕ್ರೀಡೆ ಪ್ರಧಾನ ಸುದ್ದಿ ಮುಖ್ಯಾಂಶಗಳು

ಬ್ರೆಟ್‌ ಲೀ ಪ್ರಕಾರ ಕ್ರಿಕೆಟ್‌ ದೇವರ 100 ಶತಕಗಳ ದಾಖಲೆ ಮುರಿಯುವ ಬ್ಯಾಟ್ಸ್‌ಮನ್‌ ಇವರೇ!

ಮುಂಬೈ: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಮುಂದಿನ 7-8 ವರ್ಷಗಳ ಕಾಲ ಆಕ್ರಮಣಕಾರಿ ಬ್ಯಾಟಿಂಗ್‌ ಮಾಡಿದ್ದೇ ಆದಲ್ಲಿ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರ 100 ಶತಕಗಳ ದಾಖಲೆಯನ್ನು ಮುರಿಯಲಿದ್ದಾರೆಂದು ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್‌ ಲೀ ಅಭಿಪ್ರಾಯಪಟ್ಟಿದ್ದಾರೆ.

49 ಸೆಂಚೂರಿಗಳನ್ನು ಸಿಡಿಸಿರುವ ಸಚಿನ್‌ ತೆಂಡೂಲ್ಕರ್‌ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ದಾಖಲೆಯನ್ನು ಹೊಂದಿದ್ದಾರೆ. ಈ ದಾಖಲೆ ಮಾಡಿದವರ ಪಟ್ಟಿಯಲ್ಲಿ ವಿರಾಟ್‌ ಕೊಹ್ಲಿ 2ನೇ ಸ್ಥಾನದಲ್ಲಿ ಇದ್ದಾರೆ. ಕೊಹ್ಲಿ 248 ಪಂದ್ಯಗಳಿಂದ 43 ಶತಕಗಳನ್ನು ಸಿಡಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿಯೂ ಸಚಿನ್‌ ತೆಂಡೂಲ್ಕರ್‌ 51 ಸೆಂಚೂರಿಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ. ಈ ಮಾದರಿಯಲ್ಲಿಯೂ ನಾಯಕ ವಿರಾಟ್‌ ಕೊಹ್ಲಿ 86 ಟೆಸ್ಟ್‌ಗಳಿಂದ 27 ಶತಕಗಳನ್ನು ಗಳಿಸಿದ್ದಾರೆ. ಸಚಿನ್‌ ಅವರ ಈ ದಾಖಲೆ ಮುರಿಯಲು ಮೂರು ಅಂಶಗಳ ಅಗತ್ಯವಿದೆ. ಪ್ರತಿಭೆ, ಫಿಟ್ನೆಸ್‌ ಹಾಗೂ ಮಾನಸಿಕ ಶಕ್ತಿ ಈ ಮೂರು ಅಂಶಗಳು ಕೊಹ್ಲಿಯಲ್ಲಿ ಇವೆ ಎಂದು ಆಸೀಸ್‌ ಮಾಜಿ ವೇಗಿ ಹೇಳಿದ್ದಾರೆ.
“ಸಚಿನ್‌ ದಾಖಲೆ ಮುರಿಯುವ ಎಲ್ಲಾ ಪ್ರತಿಭೆ ಕೊಹ್ಲಿಯಲ್ಲಿದೆ. ಎರಡನೇ ಅಂಶವೆಂದರೆ ಫಿಟ್ನೆಸ್‌, ಟೀಮ್‌ ಇಂಡಿಯಾ ನಾಯಕ ಫಿಟ್ನೆಸ್‌ಗೆ ಹೆಚ್ಚು ಗಮನ ಕೊಡುವ ವ್ಯಕ್ತಿಯಾಗಿದ್ದಾರೆ. ತವರು ಹಾಗೂ ವಿದೇಶಗಳಲ್ಲಿ ಎದುರಾಗುವ ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಮಾನಸಿಕ ಶಕ್ತಿ ಅತ್ಯಗತ್ಯ. ಇದು ಕೊಹ್ಲಿಯಲ್ಲಿ ಕರಗತವಾಗಿದೆ. ಈ ಮೂರು ವಿರಾಟ್‌ ಕೊಹ್ಲಿಗೆ ಇದೆ ಎಂಬುದನ್ನು ನಾನು ನಂಬುತ್ತೇನೆ. ಇದರ ಹೊರತಾಗಿಯೂ ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ,” ಎಂದು ಬ್ರೆಟ್‌ ಲೀ ತಿಳಿಸಿದ್ದಾರೆ.

“ಮುಂದಿನ 7 ಅಥವಾ 8 ವರ್ಷಗಳ ಅವಧಿ ವಿರಾಟ್‌ ಕೊಹ್ಲಿಗೆ ಸಿಕ್ಕರೆ ಖಂಡಿತ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನು ಸುಲಭವಾಗಿ ಮುರಿಯುತ್ತಾರೆ,” ಎಂದು 76 ಟೆಸ್ಟ್‌ ಹಾಗೂ 221 ಏಕದಿನ ಪಂದ್ಯಗಳಾಡಿರುವ ಆಸಿಸ್‌ ವೇಗಿ ಹೇಳಿದ್ದಾರೆ.
24 ವರ್ಷಗಳ ಸುದೀರ್ಘಅವಧಿಯಲ್ಲಿ ಹಲವು ವಿಶಿಷ್ಠ ದಾಖಲೆಗಳನ್ನು ಮಾಡಿದ ಬಳಿಕ ಸಚಿನ್‌ ತೆಂಡೂಲ್ಕರ್‌ 2013ರಲ್ಲಿ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರು. ಪ್ರಸ್ತುತ ಮೂರೂ ಮಾದರಿಯಲ್ಲಿ ರನ್‌ ಹೊಳೆ ಹರಿಸುತ್ತಿರುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಸಚಿನ್‌ ತೆಂಡೂಲ್ಕರ್‌ ದಾಖಲೆಗಳನ್ನು ಮುರಿಯುವ ಆಟಗಾರರಲ್ಲಿ ಮುಂಚೂಣಿಯಲ್ಲಿದ್ದಾರೆ.

Related posts

ಭೂಗತ ಪಾತಕಿ ರವಿ ಪೂಜಾರಿಯನ್ನು ಮಾ.7ರ ವರೆಗೆ ಪೊಲೀಸ್​ ವಶಕ್ಕೆ ನೀಡಿದ ಕೋರ್ಟ್​

Times fo Deenabandhu

ಎಲ್‌ಐಸಿ ಗ್ರಾಹಕರಿಗೆ ರಿಯಾಯಿತಿ: ಪ್ರೀಮಿಯಂ ಕಟ್ಟಲು 1 ತಿಂಗಳು ಕಾಲಾವಕಾಶ

Times fo Deenabandhu

ಕೊರೊನಾ ನಡುವೆಯೂ ಪಾಕಿಗಳ ಕಾಟ: ಎಲ್‌ಒಸಿಯಲ್ಲಿ ಉಗ್ರರ ಸದೆಬಡಿದ ಸೇನೆ!