Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು

ಕೊರೊನಾ ಬಲೆಯಲ್ಲಿ ಏಷ್ಯಾದ ಅತಿದೊಡ್ಡ ಸ್ಲಂ..!

 

ಮುಂಬೈನಲ್ಲಿರುವ ಧಾರಾವಿ ವರ್ಲ್ಡ್‌ ಫೇಮಸ್‌. ಏಷ್ಯಾದ ಅತಿ ದೊಡ್ಡ ಸ್ಲಂ ಆಗಿರುವ ಧಾರಾವಿಯನ್ನು ಸದ್ಯ ಕಾಪಾಡೋರು ಯಾರು ಎಂಬ ಮಾತುಗಳು ಎಲ್ಲ ಕಡೆಯಿಂದ ಕೇಳಿಬರುತ್ತಿವೆ. ಏಕೆಂದರೆ, ಇಡೀ ಜಗತ್ತನ್ನೇ ಬೆಂಬಿಡದೇ ಕಾಡುತ್ತಿರುವ ಕೊರೊನಾ ವೈರಸ್‌ ಧಾರಾವಿಗೆ ವಕ್ಕರಿಸಿ ದಿನಗಳೇ ಉರುಳಿವೆ. ಬೇರೆ ಕಡೆ ಬಂದಂಗೆ ಅಲ್ಲೂ ಕೊರೊನಾ ಬಂದಿದೆ. ನಿಯಂತ್ರಣಕ್ಕೆ ಬರುತ್ತದೆ ಎಂದು ಅಂದುಕೊಂಡರೆ ಅದರಷ್ಟು ಮೂರ್ಖತನ ಯಾವುದು ಇಲ್ಲ.

ಧಾರಾವಿ ಇರುವುದು ಬರೋಬ್ಬರಿ 520 ಎಕರೆ ಪ್ರದೇಶ. ನಮ್ಮ ರಾಷ್ಟ್ರಪತಿ ಭವನ ಇದೆಯಲ್ಲ ಅದರ ಎರಡು ಪಟ್ಟು ವ್ಯಾಪ್ತಿಯನ್ನು ಧಾರಾವಿ ವಿಸ್ತರಿಸಿರಬಹುದು. ಆದರೆ, ಇಲ್ಲಿನ ಜನಸಂಖ್ಯೆ 10 ಲಕ್ಷಕ್ಕೂ ಹೆಚ್ಚು ಎಂದು ಹೇಳಲಾಗುತ್ತಿದ್ದು, ಖಚಿತ ಮಾಹಿತಿ ಇದುವರೆಗೂ ಸಿಕ್ಕಿಲ್ಲ. 520 ಎಕರೆ ಪ್ರದೇಶ, 10 ಲಕ್ಷಕ್ಕೂ ಹೆಚ್ಚು ಜನ ಯೋಚನೆ ಮಾಡಿ. ಹೇಗೆ ತಾನೇ ಇಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಕೊರೊನಾದಂತಹ ವೈರಸ್‌ ಇಲ್ಲಿ ತನ್ನ ಆರ್ಭಟವನ್ನು ಮುಂದುವರಿಸಿದರೆ ಇಡೀ ಧಾರಾವಿಗೆ ಧಾರಾವಿಯೇ ಸ್ಮಶಾನ ಆಗುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಮುಂಬೈ ರಾಷ್ಟ್ರದಲ್ಲಿಯೇ ಅತಿಹೆಚ್ಚು ಕೊರೊನಾ ಸೋಂಕಿತರನ್ನು ನೀಡಿದ ನಗರ ಎಂಬ ಕುಖ್ಯಾತಿಗೆ ಒಳಗಾಗಿದ್ದು, ಅದೇ ಮುಂಬೈ ನಗರದಲ್ಲಿಯೇ ಈ ಧಾರಾವಿ ಇದೆ.

ಕೊರೊನಾದಿಂದ ಇಲ್ಲಿವರೆಗೂ ಸಾವನ್ನಪ್ಪಿದ್ದಾರೆ. ಏಪ್ರಿಲ್‌ 2 ರಂದು ಧಾರಾವಿಯಲ್ಲಿ ಮೊದಲ ಕೊರೊನಾ ವೈರಸ್‌ ಪಾಸಿಟಿವ್‌ ಕಂಡುಬಂದಿತ್ತು. ಅಲ್ಲಿಂದ ಇಲ್ಲಿಯವರೆಗೂ ಸರಾಸರಿ 10 ಪ್ರಕರಣಗಳಂತೆ ಏಷ್ಯಾದ ಅತಿದೊಡ್ಡ ಸ್ಲಂನಲ್ಲಿ ಕೊರೊನಾ ಕೇಸ್‌ ವರದಿಯಾಗಿವೆ. ಸೋಂಕಿತರ ಸಂಖ್ಯೆ ಏರುಗತಿಯಲ್ಲಿರುವುದು ಅಧಿಕಾರಿಗಳಿಗೆ, ಸರಕಾರಕ್ಕೆ ದೊಡ್ಡ ತಲೆನೋವಾಗಿದೆ.

ಮೂಲಕ ಸ್ಲಂನಲ್ಲಿರುವ ಜನರನ್ನು ಪೊಲೀಸರು ಮಾನಿಟರ್‌ ಮಾಡುತ್ತಿದ್ದು, ಜನ ಹೊರಗಡೆ ಬರದಂತೆ ತಡೆಯುತ್ತಿದ್ದಾರೆ. ಧಾರಾವಿಯಲ್ಲಿ ಮೊದಲ ಕೊರೊನಾ ಪ್ರಕರಣ ಕಂಡುಬಂದ ನಂತರ 5 ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದ್ದು, ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಯಾರು ಹೊರಗಡೆ ಹೋಗುವಂತಿಲ್ಲ, ಒಳಗಡೆ ಬರುವಂತಿಲ್ಲ. ದಿನಸಿ ಅಂಗಡಿ ಸಹಿತ ಎಲ್ಲವನ್ನೂ ಬಂದ್‌ ಮಾಡಲಾಗಿದೆ ಎಂದು ನಗರದ ಅಧಿಕಾರಿ ದಿಘಾವ್ಕರ್‌ ಹೇಳುತ್ತಾರೆ. ಶಾಲೆಗಳನ್ನು, ಕ್ರೀಡಾ ಸಮುಚ್ಛಯಗಳನ್ನು ಹಾಗೂ ಕಾರ್ಯನಿರ್ವಹಿಸದ ಆಸ್ಪತ್ರೆಗಳನ್ನು ಸೋಂಕಿತರಿಗೆ ಹಾಗೂ ಅವರ ಸಂಪರ್ಕಿತರಿಗೆ ಕ್ವಾರಂಟೈನ್‌ ಮಾಡಲು ಬಳಸಲಾಗುತ್ತಿದೆ.

ಅಧಿಕಾರಿ ಕಿರಣ್‌ ದಿಘಾವ್‌ಕರ್‌ ಹೇಳುತ್ತಾರೆ. ಅದಲ್ಲದೇ, ಧಾರಾವಿಯಲ್ಲಿ ಸ್ವಚ್ಛತೆಯ ಮಾತು ಬಹಳ ದೂರ ಇದ್ದು, ವೈರಸ್‌ ಹರಡಲು ಯಾವ ಪರಿಸರ ಬೇಕು. ಆ ಪರಿಸರ ಧಾರಾವಿಯಲ್ಲಿದೆ ಎಂದರೆ ಯಾವುದೇ ತಪ್ಪಿಲ್ಲ. ಇಂತಹ ಸ್ಲಂನಲ್ಲಿ ಕೊರೊನಾ ವೈರಸ್‌ ನಿಯಂತ್ರಣ ಮಾಡುವುದೆಂದರೆ ಸಾಮಾನ್ಯವಾದ ಕೆಲಸವಲ್ಲ. ಧಾರಾವಿಯೊಂದರಲ್ಲಿಯೇ 2,500 ಜನ ಕೊರೊನಾ ವಾರಿಯರ್ಸ್‌ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಆರೋಗ್ಯ ಸಿಬ್ಬಂದಿ, ಸ್ವಚ್ಛತೆ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರ ಕಾರ್ಯದಿಂದ ಕೊರೊನಾ ಸೋಂಕಿತರ ಸಂಖ್ಯೆ 200ರ ಆಸುಪಾಸಿನಲ್ಲಿದ್ದು, ಸಾವಿನ ಸಂಖ್ಯೆಯು ಕಡಿಮೆ ಇದೆ.

ಸಾರ್ವಜನಿಕ ಶೌಚಾಲಯಗಳನ್ನು ಪ್ರತಿದಿನ ಸೋಂಕುಮುಕ್ತಗೊಳಿಸಲಾಗುತ್ತಿದೆ. ಧಾರಾವಿ ನಿವಾಸಸಿಗಳಿಗೆ ಕ್ವಾರಂಟೈನ್‌ ಸೌಲಭ್ಯ ಒದಗಿಸಲಾಗಿದೆ. ಸದ್ಯ ಇಲ್ಲಿನ ಜನ ಆತಂಕಕ್ಕೊಳಗಾಗಿದ್ದಾರೆ. ಆದ್ದರಿಂದ ನಾವು ಇನ್ನಷ್ಟು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹಿರಿಯ ಆರೋಗ್ಯ ಅಧಿಕಾರಿ ದಕ್ಷಾ ಶಾ ಹೇಳುತ್ತಾರೆ. ಎನ್‌ಜಿಒಗಳ ಜತೆ ಸೇರಿ ಇಲ್ಲಿನ ಅಧಿಕಾರಿಗಳು ಔಷಧಿಗಳನ್ನು ಹಾಗೂ ಆಹಾರವನ್ನು ವಿತರಿಸುತ್ತಿದ್ದಾರೆ. ರೋಟಿ ಬ್ಯಾಂಕ್‌ ಫೌಂಡೇಶನ್‌ನಿಂದ ಪ್ರತಿದಿನ 4,500 ಧಾರಾವಿ ನಿವಾಸಿಗಳಿಗೆ ಊಟ ನೀಡುತ್ತಿದ್ದು, ಮುಂಬೈ ನಗರದಾದ್ಯಂತ 32,000 ಜನರಿಗೆ ಆಹಾರ ನೀಡುವ ಕೆಲಸ ನಡೆಯುತ್ತಿದೆ.

ಧಾರಾವಿ ರೂಪುಗೊಂಡಿದ್ದು ಹೇಗೆ..?

 

ಮುಂಬೈ ಭಾರತದ ವಾಣಿಜ್ಯ ರಾಜಧಾನಿ, ಭಾರತದ ಮ್ಯಾಂಚೆಸ್ಟರ್‌ ಎಂದಲೇ ಕರೆಸಿಕೊಳ್ಳುತ್ತದೆ. ಇದು ಸಮುದ್ರ ತೀರದಲ್ಲಿರುವುದರಿಂದ ಬ್ರಿಟಿಷ್‌ ಆಳ್ವಿಕೆಯ ಕಾಲದಿಂದಲೂ ಇಲ್ಲಿ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಹೆಚ್ಚಿವೆ. ಕೈಗಾರಿಕಾ ಕ್ರಾಂತಿಯ ಅವಧಿಯಲ್ಲಿ ಅತಿಹೆಚ್ಚು ಕೈಗಾರಿಕೆಗಳು ಕೊಲ್ಕತ್ತಾ ಹಾಗೂ ಬಾಂಬೆಯಲ್ಲಿ ಸ್ಥಾಪನೆಗೊಂಡವು. ಆ ಸಂದರ್ಭದಲ್ಲಿ ದೇಶದ ನಾನಾ ಮೂಲೆಗಳಿಂದ ಬಡವರು ಕೆಲಸ ಹುಡುಕಿಕೊಂಡು ಈ ನಗರಗಳಿಗೆ ವಲಸೆ ಹೋದರು. ಆದರೆ, ಅವರು ದುಡಿಯುವ ದುಡ್ಡಿನಲ್ಲಿ ಜಾಗ ಖರೀದಿಸುವುದು ಅಥವಾ ಉತ್ತಮ ಬಾಡಿಗೆ ಮನೆಗಳನ್ನು ಹೊಂದುವುದು ಅಸಾಧ್ಯವಾಗಿತ್ತು. ಇದರಿಂದಲೇ 1883ರಲ್ಲಿ ಧಾರಾವಿ ಸ್ಲಂ ರೂಪುಗೊಂಡಿತು. ಇದರ ಜೊತೆ ಹಲವು ಸಣ್ಣಪುಟ್ಟ ಸ್ಲಂಗಳು ಮುಂಬೈನಲ್ಲಿ ನಿರ್ಮಾಣವಾದವೂ. ಆದರೆ, ಕಾಲ ಕ್ರಮೇಣ ಎಲ್ಲವೂ ಧಾರಾವಿ ಜೊತೆ ಬೆಸೆಯುತ್ತಾ ಸಾಗಿದವು.

Related posts

ಹೈದರಾಬಾದ್​​ನಲ್ಲಿ ಮತ್ತಿಬ್ಬರು ಕೊರೊನಾ ವೈರಸ್​ ಪೀಡಿತರು ಪತ್ತೆ: ಪ್ರಾಥಮಿಕ ವರದಿಯಲ್ಲಿ ಸೋಂಕು ಹರಡಿರುವುದು ದೃಢ

ಬೆಳಗಾವಿಯಲ್ಲೂ ನಡೆದಿತ್ತು ಹೈದರಾಬಾದ್‌ ಮಾದರಿ ಎನ್‌ಕೌಂಟರ್‌

Times fo Deenabandhu

ಪುನೀತ್‌ ರಾಜ್‌ಕುಮಾರ್‌ 2 ಸಿನಿಮಾಗಳು ನೇರವಾಗಿ ಆನ್‌ಲೈನ್‌ನಲ್ಲಿ ರಿಲೀಸ್ ಸಾಧ್ಯತೆ

Times fo Deenabandhu