Times of Deenabandhu
ಕ್ರೈಮ್ ಪ್ರಧಾನ ಸುದ್ದಿ ಮುಖ್ಯಾಂಶಗಳು

13 ವರ್ಷದ ಬಾಲಕಿಯನ್ನು ಕೊಂದವರು ಯಾರು…? : ಪಕ್ಕದಲ್ಲೇ ಇದ್ದನಾ ಹಂತಕ…?

ಕೊಲೆಯಾಗಿದ್ದು ಬಾಲಕಿ. ಈಕೆಯ ಶವ ಹುಡುಕುತ್ತಿದ್ದ ಪೊಲೀಸ್ ತಂಡದಲ್ಲಿದ್ದ ವ್ಯಕ್ತಿ ಮೇಲೆಯೇ ಇತ್ತು ಕೊಲೆಯ ಅನುಮಾನ…!
ಅವಳು ಆಡುವ ವಯಸ್ಸಿನ ಹುಡುಗಿ. ಆಗಿನ್ನೂ ಜಗತ್ತನ್ನು ಅರಿಯುತ್ತಿದ್ದಳು. ಆಕೆಗೆ ಆಗ 13 ವರ್ಷ ವಯಸ್ಸು. ಅಪ್ಪ ಅಮ್ಮನ ಮುದ್ದಿನ ಮಗಳಾಗಿ ಬೆಳೆಯುತ್ತಿದ್ದಳು ಈ ಬಾಲಕಿ. ಮನೆ ತುಂಬಾ ಚುರುಕಿನಿಂದ ಓಡಾಡುತ್ತಾ ಬೆಳೆಯುತ್ತಿದ್ದ ಈ ಬಾಲಕಿಯ ಬದುಕು ಬರೀ 13ನೇ ವಯಸ್ಸಿನಲ್ಲೇ ಕೊನೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಅದೊಂದು ದಿನ ಈ ಬಾಲಕಿಯ ಬದುಕಿನಲ್ಲಿ ಘೋರ ಘಟನೆಯೊಂದು ನಡೆದೇ ಹೋಗಿತ್ತು. ಮನೆಯಿಂದ ಹೊರಗೆ ಹೋಗಿದ್ದ ಹುಡುಗಿ ಅಂದು ಮತ್ತೆ ಜೀವಂತವಾಗಿ ಬರಲೇ ಇಲ್ಲ. ಈಕೆಯ ಶವ ಸಿಕ್ಕಿದ್ದು ಕೂಡಾ ನಾಪತ್ತೆಯಾದ ಸುಮಾರು ಹತ್ತು ದಿನಗಳ ಬಳಿಕ…!
ಇದು ಆಸ್ಟ್ರೇಲಿಯಾದಲ್ಲಿ ನಡೆದ ಘಟನೆ. ಟ್ಯಾಸ್ಮೆನಿಯಾದ ಉಲ್ವರ್‌ಸ್ಟೋನ್ ಬಳಿಯ ನಾರ್ತ್ ಮೋಟನ್ ಗ್ರಾಮದ ಕ್ರಿಸ್ಸಿ ಕ್ಲೇರ್ ವೆನ್ ಈ ಸುದ್ದಿಯ ದುರಂತ ನಾಯಕಿ. 1907ರ ಜುಲೈ 25ರಂದು ಜನಿಸಿದ್ದ ಕ್ರಿಸ್ಸಿಯ ಬದುಕು ಬರೀ 13 ವರ್ಷದಲ್ಲೇ ಕೊನೆಯಾಗಿತ್ತು. ಅದು 1921ರ ಫೆಬ್ರವರಿ 20. ಅಂದು ಸಂಜೆ ಸುಮಾರು ಐದು ಗಂಟೆಗೆ ಮನೆಯಿಂದ ಹೋಗಿದ್ದ ಕ್ರಿಸ್ಸಿ ಕ್ಲೇರ್ ಅಂದು ಮನೆಗೆ ಬಂದಿರಲಿಲ್ಲ. ಇತ್ತ, ರಾತ್ರಿಯಾದರೂ ಪುತ್ರಿ ಮನೆಗೆ ಬಾರದ ಕಾರಣ ಹೆತ್ತವರು ಕಂಗಾಲಾಗಿ ಹೋಗಿದ್ದರು. ಜೊತೆಗೆ ರಾತ್ರಿಯೆಲ್ಲಾ ಹುಡುಕಾಟ ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಪೊಲೀಸರಿಗೂ ವಿಷಯ ಮುಟ್ಟಿತ್ತು. ಹೀಗಾಗಿ, ಬಾಲಕಿಗಾಗಿ ನಿರಂತರ ಹುಡುಕಾಟ ನಡೆಯುತ್ತಿತ್ತು…
ನಾಪತ್ತೆಯಾದ ದಿನದಿಂದಲೂ ಕ್ರಿಸ್ಸಿಗಾಗಿ ಎಲ್ಲರೂ ಕಂಡ ಕಂಡಲ್ಲಿ ಹುಡುಕಾಟ ನಡೆಸಿದ್ದರು. ಅಂದರೆ ಫೆಬ್ರವರಿ 20ರಿಂದಲೇ ಕ್ರಿಸ್ಸಿಯನ್ನು ಮನೆಯವರು, ಪೊಲೀಸರು ಹುಡುಕುತ್ತಿದ್ದರು. ಆದರೆ, ಫಲಿತಾಂಶ ಶೂನ್ಯವಾಗಿತ್ತು. ಆದರೆ, ಮಾರ್ಚ್ 1ರ ಬೆಳಗ್ಗೆ ಕ್ರಿಸ್ಸಿಯ ಮೃತದೇಹ ಪತ್ತೆಯಾಗಿತ್ತು. ರಸ್ತೆಯ ಪಕ್ಕದ ಟೊಳ್ಳಾದ ಮರದ ಪಕ್ಕದಲ್ಲಿ ಕ್ರಿಸ್ಸಿ ಮೃತದೇಹ ಬಿದ್ದಿತ್ತು. ಇದೇ ದಾರಿಯಲ್ಲಿ ಕ್ರಿಸ್ಸಿ ಸದಾ ತನ್ನ ಊರಾದ ಮೋಟನ್‌ಗೆ ಸಾಗುತ್ತಿದ್ದಳು. ದುರಂತ ಎಂದರೆ ಅದೇ ದಾರಿಯ ಮರದ ಪಕ್ಕ, ತಾನು ಸದಾ ನೋಡಿಕೊಂಡು ಸಾಗುತ್ತಿದ್ದ ಮರದ ಬುಡದಲ್ಲೇ ಕ್ರಿಸ್ಸಿ ಉಸಿರು ಚೆಲ್ಲಿ ಬಿದ್ದಿದ್ದಳು.
ಫೆಬ್ರವರಿ 20ರಂದು ಕ್ರಿಸ್ಸಿ ನಾಪತ್ತೆಯಾಗಿದ್ದರೂ ಫೆಬ್ರವರಿ 26ರಂದು ಇವಳು ಕೊಲೆಯಾಗಿದ್ದಳು ಎಂದು ಹೇಳಲಾಗುತ್ತಿದೆ. ಉಸಿರುಗಟ್ಟಿಸಿ, ಕತ್ತು ಹಿಸುಕಿ ಕ್ರಿಸ್ಸಿಯನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಅಧಿಕಾರಿಗಳು ನೆತ್ತರು ಹರಿಸಿದ್ದು ಯಾರು ಎಂಬ ಶೋಧಕ್ಕಿಳಿದರು. ಅಲ್ಲದೆ, ಕ್ರಿಸ್ಸಿನ ಕೊಲೆ ಕೇಸ್ ಎಲ್ಲರಿಗೂ ಆಘಾತ ತಂದಿತ್ತು. ಆದರೆ, ಇದಕ್ಕಿಂತಲೂ ಮತ್ತೊಂದು ಆಘಾತಕಾರಿ ಅಂಶವಿತ್ತು. ಅದೇನೆಂದರೆ, ಕ್ರಿಸ್ಸಿಗಾಗಿ ಹುಡುಕಾಟ ನಡೆಸಿದ್ದ ತಂಡದಲ್ಲಿದ್ದ ಪೊಲೀಸ್ ಮೇಲೆಯೇ ಈ ಕೊಲೆಯ ಅನುಮಾನ ವ್ಯಕ್ತವಾಗಿತ್ತು. ಜಾರ್ಜ್‌ ವಿಲಿಯಂ ಕಿಂಗ್ ಆ ಶಂಕಿತ. 35 ವರ್ಷದ ಜಾರ್ಜ್‌ ವಿಲಿಯಂ ಪೊಲೀಸ್ ಆಗಿದ್ದ. ಇವನೂ ಕ್ರಿಸ್ಸಿ ನಾಪತ್ತೆಯಾದ ಬಳಿಕ ಆಕೆಗಾಗಿ ಹುಡುಕಾಟ ನಡೆಸಿದ್ದ.
ಇಷ್ಟಕ್ಕೂ ಜಾರ್ಜ್‌ ವಿಲಿಯಂ ಕಿಂಗ್ ಮೇಲೆ ಈ ಹತ್ಯೆಯ ಅನುಮಾನ ಶುರುವಾಗಲು ಕಾರಣ ಆತನ ಕೈಯ ಮೇಲಿದ್ದ ಗಾಯ. ಕ್ರಿಸ್ಸಿಯನ್ನು ಹತ್ಯೆಗೈಯುವ ಸಂದರ್ಭದಲ್ಲಾದ ಗಾಯ ಇದು ಎಂಬ ಸಂಶಯ ಬಲಗೊಂಡಿದ್ದರಿಂದ ಮಾರ್ಚ್ 8ರಂದು ಈತನನ್ನು ಬಂಧಿಸಲಾಗಿತ್ತು. ಜೂನ್‌ನಿಂದ ಈತನ ವಿಚಾರಣೆ ಆರಂಭವಾಗಿತ್ತು. ಆದರೆ, ಈ ಪ್ರಕರಣದಲ್ಲಿ ಈತನ ಮೇಲಿನ ಆರೋಪ ಸಾಬೀತಾಗಲಿಲ್ಲ. ಹೀಗಾಗಿ, ಆಗಸ್ಟ್ 11ರಂದು ವಿಲಿಯಂ ಖುಲಾಸೆಯಾಗಿದ್ದ. ಇದಾದ ಬಳಿಕ ಈ ಪ್ರಕರಣದಲ್ಲಿ ದೊಡ್ಡ ಪ್ರಗತಿಯೇನು ಆಗಲಿಲ್ಲ. ಪೊಲೀಸರು ಸಾಕಷ್ಟು ಪ್ರಯತ್ನಪಟ್ಟು ಕೊಲೆಗಾರ ಅಥವಾ ಕೊಲೆಗಾರರಿಗೆ ಹುಡುಕಾಟ ನಡೆಸಿದರೂ ಸತ್ಯ ಕಂಡು ಹಿಡಿಯಲು ಕಷ್ಟವಾಗಿತ್ತು. ಹೀಗಾಗಿ, ಈ ಪ್ರಕರಣ ರಹಸ್ಯವಾಗಿಯೇ ಉಳಿದಿದೆ. ಯಾವ ಕಾರಣಕ್ಕಾಗಿ ಕ್ರಿಸ್ಸಿಯನ್ನು ಕೊಲ್ಲಲಾಗಿದೆ…? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಘಟನೆಯಾಗಿ ನೂರು ವರ್ಷ ಸಮೀಪಿಸುತ್ತಿದೆ. ಇನ್ನು ಈ ಪ್ರಕರಣದ ಸತ್ಯಾಸತ್ಯತೆ ಹೊರಬರುತ್ತದೆ ಎಂಬ ವಿಶ್ವಾಸವೂ ಯಾರಲ್ಲೂ ಉಳಿದಿಲ್ಲ. ಮೋಟನ್‌ನ ಮೆಥೋಡಿಸ್ಟ್‌ ಸ್ಮಶಾನದಲ್ಲಿ ಕ್ರಿಸ್ಸಿಯ ಸಮಾಧಿ ಇದೆ. ಆದರೆ, ಇಲ್ಲಿ ಕ್ರಿಸ್ಸಿಯ ಪ್ರೇತಾತ್ಮ ಈಗಲೂ ಅಲೆದಾಡುತ್ತಿದೆ ಎಂಬ ನಂಬಿಕೆಯೂ ಇದೆ…

Related posts

ಶೃಂಗೇರಿಯಲ್ಲಿ ಬಂದ್‌; ವಿವಾದ, ಪ್ರತಿಭಟನೆ, ಪ್ರತಿರೋಧದ ನಡುವೆ ನಡೆದ ಸಮ್ಮೇಳನ

Times fo Deenabandhu

ಮಂಗಳೂರಲ್ಲಿ ‘ಪೌರತ್ವ’ ಪ್ರತಿಭಟನೆ ಉದ್ವಿಗ್ನ; ನಾಳೆ ಮಧ್ಯರಾತ್ರಿವರೆಗೂ ಕರ್ಫ್ಯೂ ಜಾರಿ, ಕಂಡಲ್ಲಿ ಗುಂಡು ಆದೇಶ

Times fo Deenabandhu

ನವೆಂಬರ್ 1ರಿಂದ ಶುರು ರಾಜ್ಯದಲ್ಲಿ ಹಿಂಗಾರು ಮಳೆ ಅಬ್ಬರ

Times fo Deenabandhu