Times of Deenabandhu
  • Home
  • ಜಿಲ್ಲೆ
  • ಕೊರೋನಾ ವೈರಸ್ ನಿಯಂತ್ರಣಕ್ಕೆ ಸಾರ್ವಜನಿಕರ ಹೆಚ್ಚಿನ ಸಹಕಾರ ಅಗತ್ಯ ಪರಿಶೀಲನಾ ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ
ಜಿಲ್ಲೆ ಶಿವಮೊಗ್ಗ

ಕೊರೋನಾ ವೈರಸ್ ನಿಯಂತ್ರಣಕ್ಕೆ ಸಾರ್ವಜನಿಕರ ಹೆಚ್ಚಿನ ಸಹಕಾರ ಅಗತ್ಯ ಪರಿಶೀಲನಾ ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ

ಭದ್ರಾವತಿ, ಏ. ೧೦: ಕೊರೋನಾ ವೈರಸ್ ನಿಯಂತ್ರಣಕ್ಕೆ ನಗರದಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಸಹಕಾರ ಸಿಗುತ್ತಿಲ್ಲ. ಇದರಿಂದಾಗಿ ಜನದಟ್ಟಣೆ ನಿಯಂತ್ರಿಸುವುದು ಪೊಲೀಸ್ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. ಸಾರ್ವಜನಿಕರು ಪೂರಕವಾಗಿ ಸ್ಪಂದಿಸಿದ್ದಲ್ಲಿ ಮಾತ್ರ ಕೊರೋನಾ ನಿಯಂತ್ರಣ ಸಾಧ್ಯ. ಇದನ್ನು ಅರ್ಥಮಾಡಿಕೊಂಡು ಯಾರು ಸಹ ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಎಚ್ಚರವಹಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಮನವಿ ಮಾಡಿದರು.

ಅವರು ಶುಕ್ರವಾರ ನಗರಸಭೆ ಸಭಾಂಗಣದಲ್ಲಿ ಕೊರೋನಾ ವೈರಸ್ ನಿಯಂತ್ರಣ ಕುರಿತು ಹಮ್ಮಿಕೊಳ್ಳಲಾಗಿದ್ದ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕೊರೋನಾ ವೈರಸ್ ಎಲ್ಲೆಡೆ ತಾಂಡವವಾಡುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ದೃಢೀಕೃತ ಪ್ರಕರಣಗಳು ಪತ್ತೆಯಾಗದಿರುವುದು ಸ್ವಲ್ಪಮಟ್ಟಿಗೆ ನೆಮ್ಮೆದಿ ತಂದಿದೆ. ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆ, ಪೌರಕಾರ್ಮಿಕರು ಕೊರೋನಾ ನಿರ್ಮೂಲನೆಗೆ ಹೆಚ್ಚಿನ ಶ್ರಮವಹಿಸಿದ್ದಾರೆ. ಇವರ ಪರಿಶ್ರಮಕ್ಕೆ ಸಾರ್ವಜನಿಕರು ಬೆಲೆ ಕೊಡಬೇಕು. ಕರ್ಪ್ಯೂ ಜಾರಿಯಲ್ಲಿರುವವರೆಗೂ ಯಾರು ಸಹ ಮನೆಯಿಂದ ಹೊರಬರಬಾರದು. ಅಗತ್ಯ ಸಾಮಗ್ರಿಗಳನ್ನು ಒದಗಿಸಲು ಸ್ಥಳೀಯ ಆಡಳಿತ ಬದ್ಧವಾಗಿವೆ ಎಂದರು.

ನ್ಯಾಯಬೆಲೆ ಅಂಗಡಿಗಳು ಅನ್ಯಾಯಬೆಲೆ ಅಂಗಡಿಗಳಾಗಿವೆ. ತೂಕದಲ್ಲಿ ಮೋಸ, ಪಡಿತರ ನೀಡದೆ ವಂಚನೆ, ಹೆಬ್ಬೆಟ್ಟಿನ ಗುರುತು ಪಡೆಯುವುದು, ಮೊಬೈಲ್, ಆಧಾರ್ ಕಾರ್ಡ್ ಸೇರಿದಂತೆ ಇತ್ಯಾದಿಗಳನ್ನು ತರುವಂತೆ ಕಿರಿಕಿರಿ ಮಾಡುವುದು ಸೇರಿದಂತೆ ಇನ್ನಿತರ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಪ್ರಸ್ತುತ ಸಂದಿಗ್ದ ಪರಿಸ್ಥಿತಿಯಲ್ಲಿ ಸರ್ಕಾರ ಪಡಿತರ ಪಡೆಯಲು ಯಾವುದೇ  ಮಾನದಂಡ ವಿಧಿಸಿಲ್ಲ. ಸರಳ ವಿಧಾನದಲ್ಲಿ ಪಡಿತರ ವಿತರಿಸಲು ನಿರ್ದೇಶಿಸಿದೆ. ಆದರೂ ಸಹ ನ್ಯಾಯಬೆಲೆ ಅಂಗಡಿಗಳು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿವೆ. ಈ ಹಿನ್ನಲೆಯಲ್ಲಿ ಅನ್ಯಾಯವೆಸಗುವ ಹಾಗೂ ಅನಗತ್ಯವಾಗಿ ತೊಂದರೆ ಕೊಡುವ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.

ಸಂದಿಗ್ದ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಇಲಾಖೆಗಳಿಗೆ ವಿವಿಧ ಯೋಜನೆಯಡಿ ಅನುದಾನ ಬಿಡುಗಡೆಗೊಳಿಸಿವೆ. ತಕ್ಷಣ ಇಲಾಖೆಗಳು ಸೂಕ್ತ ಫಲಾಭವಿಗಳನ್ನು ಗುರುತಿಸಿ ಪಟ್ಟಿ ಸಿದ್ದಪಡಿಸಿಕೊಡುವಂತೆ ಸೂಚಿಸಿದರು. ಅಲ್ಲದೆ ಜಿಲ್ಲೆಯ ಸಾಗರ, ಸೊರಬ, ತೀರ್ಥಹಳ್ಳಿ ತಾಲೂಕುಗಳಲ್ಲಿ ಮಂಗನ ಕಾಯಿಲೆ ಬಾಧೆ ಹೆಚ್ಚಾಗಿದ್ದು, ತಾಲೂಕಿನಲ್ಲಿ ಆರೋಗ್ಯ ಇಲಾಖೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.

ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಮಾತನಾಡಿ, ಘೋಷಿತ ಕೊಳಚೆ ಪ್ರದೇಶಗಳ ಸುಮಾರು ೯ ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಉಚಿತ ಹಾಲು ವಿತರಿಸಲಾಗುತ್ತಿದೆ. ಆರಂಭದಲ್ಲಿ ೧ ಲೀಟರ್ ನೀಡುವಂತೆ ಸರ್ಕಾರ ಸೂಚಿಸಿತ್ತು. ಮೊದಲ ೨ ದಿನ ೫೦೦೦ ಲೀಟರ್ ಹಾಲು ಬಂದಿದ್ದು, ನಂತರ ೪,೫೦೦ ಲೀಟರ್ ಹಾಲು ಬರುತ್ತಿದೆ. ಎಲ್ಲಾ ಕುಟುಂಬಗಳಿಗೂ ೧ ಲೀಟರ್ ಹಾಲು ವಿತರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಅರ್ಧ ಲೀಟರ್ ನೀಡುವಂತೆ ಸರ್ಕಾರ ಸೂಚಿಸಿದೆ. ಆದರೂ ೫೦೦ ಲೀಟರ್ ಹಾಲು ಕಡಿಮೆ ಬರುತ್ತಿದೆ. ಇದನ್ನು ಸರಿದೂಗಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ನ್ಯಾಯಬೆಲೆ ಅಂಗಡಿಗಳ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಶೀಲಿಸಲಾಗಿದೆ. ಈ ಸಂಬಂಧ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ತಿಳುವಳಿಕೆ ಸಹ ನೀಡಲಾಗಿದೆ. ಪಡಿತರದಾರರಿಂದ ಹೆಬ್ಬೆಟ್ಟಿನ ಗುರುತು ಪಡೆಯದಂತೆ ಸೂಚಿಸಲಾಗಿದೆ. ಕೇವಲ ಪಡಿತರ ಚೀಟಿಯಲ್ಲಿ ನಮೂದಿಸಿ ಪಡಿತರ ವಿತರಿಸಲು ತಿಳಿಸಲಾಗಿದೆ. ಆದರೂ ಹಲವು ದೂರುಗಳು ಕೇಳಿ ಬರುತ್ತಿವೆ. ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ ಅಥವಾ ಲೋಪದೋಷಗಳು ಕಂಡು ಬಂದಲ್ಲಿ ಮಾಹಿತಿ ನೀಡಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಆರ್ ಗಾಯತ್ರಿ ಮಾತನಾಡಿ, ಕೊರೋನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿದೇಶದಿಂದ ತಾಲೂಕಿಗೆ ಬಂದಿರುವ ೬೮ ಮಂದಿಯಲ್ಲಿ ೨೫ ಮಂದಿ ನಿಗಾ ಅವಧಿ ಪೂರೈಸಿದ್ದಾರೆ. ಉಳಿದಂತೆ ಹೊರ ಜಿಲ್ಲೆಗಳಿಂದ ತಾಲೂಕಿಗೆ ೫೬೮೯ ಮಂದಿ ಹಾಗೂ ಹೊರ ರಾಜ್ಯಗಳಿಂದ ೧೯೬ ಮಂದಿ ಆಗಮಿಸಿದ್ದಾರೆ. ದೆಹಲಿಯಿಂದ ಬಂದಿರುವ ೩ ಜನರನ್ನು ಶಿವಮೊಗ್ಗಕ್ಕೆ ಕಳುಹಿಸಲಾಗಿದೆ. ಉಳಿದ ೨ ಇಬ್ಬರು ಆಂಧ್ರ ಪ್ರದೇಶದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಓ. ಮಲ್ಲಪ್ಪ, ಕಾರ್ಮಿಕ ನಿರೀಕ್ಷಕ ಭೀಮೇಶ್ ಸೇರಿದಂತೆ ಇನ್ನಿತರರು ಮಾಹಿತಿ ನೀಡಿದರು.

ತಹಸೀಲ್ದಾರ್ ಸೋಮಶೇಖರ್, ನಗರಸಭೆ ಪೌರಾಯುಕ್ತ ಮನೋಹರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

 

 

Related posts

ಕುಷ್ಠರೋಗ ಜಾಗೃತಿ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸೋಣ: ಆರ್.ಕೆ.ಜಿ.ಎಂ.ಎಂ. ಮಹಾಸ್ವಾಮಿ

Times fo Deenabandhu

ವಿದ್ಯಾರ್ಥಿಗಳ ಜೀವನ ಉಜ್ವಲಗೊಳಿಸಲು ಶಿಕ್ಷಣ ಸಂಸ್ಥೆಗಳಿಂದ ಸಾಧ್ಯ: ಕೆ.ಸಿ.ರತನ್

ಜ.೧೨ರಿಂದ ೧೪ರ ವರೆಗೆ ಆದಿವಾಸಿ ಸಾಂಸ್ಕೃತಿಕ ಸಮಾವೇಶ

Times fo Deenabandhu