Times of Deenabandhu
ಕ್ರೈಮ್ ಪ್ರಧಾನ ಸುದ್ದಿ ಮುಖ್ಯಾಂಶಗಳು

8 ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದವರು ಯಾರು? : ಬಯಲಾಗಿಲ್ಲ ರಹಸ್ಯ!

 

ಎಂಟು ಮಂದಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೊಡಲಿಯಿಂದ ಕೊಚ್ಚಿ ಇವರು ಕೊಲ್ಲಲಾಗಿತ್ತು…! ಅಂದಿನಿಂದ ಇಂದಿನ ತನಕ ಈ ಪ್ರಕರಣ ನಿಗೂಢ…!

ಯಾವುದೇ ಕೊಲೆ ನಡೆದರೂ ಹಂತಕರು ಯಾವುದಾದರೂ ಒಂದು ಕ್ಲೂ ಬಿಟ್ಟು ಹೋಗಿರುತ್ತಾರೆ ಎಂಬುದು ನಂಬಿಕೆ. ಇದು ನಿಜ ಕೂಡಾ. ಅದೆಷ್ಟೋ ತನಿಖೆಗಳಲ್ಲಿ ಇದು ಸಾಬೀತು ಕೂಡಾ ಆಗಿದೆ. ಸಿಕ್ಕ ಸಣ್ಣ ಸುಳಿವಿನ ಜಾಡು ಹಿಡಿದು ಹೊರಟ ಪೊಲೀಸರು ದೊಡ್ಡ ತಿಮಿಂಗಿಲಗಳನ್ನೇ ಬಲೆಗೆ ಕೆಡವಿದ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದೆ ಇವೆ. ಆದರೆ, ಕೆಲವೊಂದು ಪ್ರಕರಣಗಳಲ್ಲಿ ಈ ನಂಬಿಕೆಯೇ ಬುಡಮೇಲಾಗಿದ್ದೂ ಇದೆ. ಈಗ ತಂತ್ರಜ್ಞಾನದ ನೆರವಿದೆ. ಹೀಗಾಗಿ, ಯಾವುದೇ ಕ್ರಿಮಿನಲ್ ಪ್ರಕರಣಗಳ ತನಿಖೆಗೆ ಹಲವು ದಾರಿಗಳಿವೆ. ಅದೇ ನೂರು ವರ್ಷ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ. ತಂತ್ರಜ್ಞಾನದ ನೆರವು ಈಗಿನಷ್ಟು ಆಗ ಇರಲಿಲ್ಲ. ಆದರೂ ಅದೆಷ್ಟೋ ಸವಾಲಾದಂತಹ ಪ್ರಕರಣಗಳನ್ನೂ ಚಾಣಾಕ್ಷ ಅಧಿಕಾರಿಗಳು ಭೇದಿಸಿ ಸೈ ಎನಿಸಿಕೊಂಡಿದ್ದರು. ಆದರೆ, ಕೆಲವೊಂದು ಸಂದರ್ಭದಲ್ಲಿ ಕೆಲ ಪ್ರಕರಣಗಳು ತನಿಖೆಯಲ್ಲಿ ಚತುರರಾದ ಅಧಿಕಾರಿಗಳನ್ನೇ ಕೈಸೋಲುವಂತೆ ಮಾಡಿದ್ದೂ ಇದೆ. ಅಂತಹ ಪ್ರಕರಣಗಳಲ್ಲಿ ಇದು ಒಂದು…

ಇದು ಭಯಾನಕ… ಅಷ್ಟೇ ಭೀಭತ್ಸ ಕೂಡಾ…! ಅಂದು ರಕ್ತದ ಮಡುವಿನಲ್ಲಿ ಒಂದೇ ಮನೆಯಲ್ಲಿ ಉಸಿರು ಚೆಲ್ಲಿದ್ದವರು ಬರೋಬ್ಬರಿ ಎಂಟು ಮಂದಿ. ಇದರಲ್ಲಿ ದಂಪತಿ ಮತ್ತು ನಾಲ್ವರು ಮಕ್ಕಳು ಒಂದೇ ಕುಟುಂಬದವರು. ಇನ್ನಿಬ್ಬರು ಪುಟಾಣಿಗಳು ಈ ದಂಪತಿಯ ಮಕ್ಕಳ ಸ್ನೇಹಿತರು…! ಈ ಎಂಟು ಮಂದಿಯೂ ಅಂದು ರಾತ್ರಿ ಮಲಗಿ ಬೆಳಕಾಗುವಷ್ಟರಲ್ಲಿ ಸಾವಿನ ಮನೆಗೆ ಸೇರಿದ್ದರು. ಆದರೆ, ಈ ಹತ್ಯೆಯ ರಹಸ್ಯದ ಸುಳಿ ಇಂದಿಗೂ ಬಿಡಿಸಲಾರದಂತಹ ಕಗ್ಗಂಟು. ಇದು ನಡೆದದ್ದು ಅಮೇರಿಕಾದ ಅಯೋವಾದ ವಿಲ್ಲಿಸ್ಕಾ ಪಟ್ಟಣದಲ್ಲಿ. 1912ರ ಜೂನ್‌ನಲ್ಲಿ ಈ ಇಡೀ ವಿಲ್ಲಿಸ್ಕಾ ಪಟ್ಟಣವೇ ಬೆಚ್ಚಿಬಿದ್ದಿತ್ತು. ಯಾಕೆಂದರೆ, ಯಾರೂ ಊಹಿಸದೇ ಇದ್ದಂತಹ ಘಟನೆಗೆ ಈ ಪಟ್ಟಣ ಸಾಕ್ಷಿಯಾಗಬೇಕಾಗಿತ್ತು. ಅಂದು ಈ ಘಟನೆಯನ್ನು ನೆನಪಿಸಿಕೊಂಡಾಗಲೇ ಜನರ ಎದೆ ಬಡಿತ ಹೆಚ್ಚಾಗುತ್ತಿತ್ತು…!

ಜೋಸಾಯ (43) ಮತ್ತು ಸರಾ ಮೋರ್ (39) ದಂಪತಿ, ತನ್ನ ಮಕ್ಕಳಾದ ಹರ್ಮನ್ (11), ಮೇರಿ (10), ಆರ್ಥರ್ (7) ಮತ್ತು ಪೌಲ್ (5) ಇಲ್ಲಿ ಸುಖವಾದ ಜೀವನ ಕಟ್ಟಿಕೊಂಡಿದ್ದರು. ಈ ಊರಿನಲ್ಲಿ ಇವರಿಗೊಂದು ವಿಶೇಷ ಮರ್ಯಾದೆ ಇತ್ತು. ಅದು 1912ರ ಜೂನ್ 10ನೇ ತಾರೀಕು. ಈ ಮೋರ್ ದಂಪತಿಯ ಪುತ್ರಿ ತನ್ನ ಸ್ನೇಹಿತೆಯರಾದ ಇನಾ (8) ಮತ್ತು ಲೀನಾ ಸ್ಟಿಲಿಂಜರ್ (12)ಳನ್ನು ಮನೆಗೆ ಕರೆದಿದ್ದಳು. ಆ ದಿನ ಇವರೆಲ್ಲಾ ಮನೆಯಲ್ಲಿ ಒಟ್ಟಿಗೆ ಇದ್ದರು. ಅಂದು ಸಂಜೆ ಇವರೆಲ್ಲಾ ಪ್ರೆಸ್ಬಿಟೇರಿಯನ್ ಚರ್ಚ್‌ನಲ್ಲಿ ನಡೆದಿದ್ದ ಮಕ್ಕಳ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ಮನೆಗೆ ಮರಳಿದ್ದರು. ಸರಾ ಮೋರ್ ಅವರೇ ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು. ರಾತ್ರಿ ಸುಮಾರು 9:30ಕ್ಕೆ ಈ ಕಾರ್ಯಕ್ರಮ ಮುಗಿದಿತ್ತು. ಇದಾದ ಬಳಿಕ ಇವರೆಲ್ಲಾ ನಡೆದುಕೊಂಡೇ ಮನೆಗೆ ಸೇರಿದ್ದರು. ಇವರು ಮನೆಗೆ ಬರುವಾಗ 9:45 ರಿಂದ 10 ಗಂಟೆಯಾಗಿತ್ತು.

ಅದು 1912ರ ಜೂನ್ 11ನೇ ತಾರೀಕು. ಅಂದರೆ ಮರುದಿನ. ಮೋರ್ ದಂಪತಿಯ ಮನೆಯ ಬಾಗಿಲು ತುಂಬಾ ಹೊತ್ತಾದರೂ ತೆರೆದಿರಲಿಲ್ಲ. ಇದನ್ನು ಕಂಡು ನೆರೆಮನೆಯವರಿಗೆ ಅನುಮಾನ ಬಂದಿತ್ತು. ಯಾಕೆಂದರೆ, ಪ್ರತಿದಿನ ಇವರು ಬೆಳಗ್ಗೆ ಬೇಗ ಏಳುತ್ತಿದ್ದರು. ಹೀಗಾಗಿ, ಅನುಮಾನಗೊಂಡ ನೆರೆಮನೆಯಾಕೆ ಬಾಗಿಲು ಬಡಿದಿದ್ದರು. ಆದರೆ, ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅನುಮಾನಗೊಂಡ ಇವರು ಜೋಸಾಯ ಅವರ ಸಹೋದರ ರೋಸ್ ಮೋರ್ ಅವರಿಗೆ ವಿಷಯ ತಿಳಿಸಿದ್ದರು. ತಕ್ಷಣ ಬಂದ ರೋಸ್ ಬಾಗಿಲು ಬಡಿದಿದ್ದರು. ಆಗಲೂ ಮನೆಯೊಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ, ತನ್ನ ಬಳಿ ಇದ್ದ ನಕಲಿ ಕೀಯಿಂದ ಇವರು ಮನೆ ಬಾಗಿಲು ತೆರೆದು ಒಳ ಹೋಗಿದ್ದರು. ಆಗ ಕಂಡ ದೃಶ್ಯ ನೋಡಿ ಇವರೆಲ್ಲಾ ಬೆಚ್ಚಿ ಬಿದ್ದಿದ್ದರು… ಯಾಕೆಂದರೆ, ಮನೆಯ ಒಂದೊಂದು ಕೋಣೆಯಲ್ಲಿ ಎಂಟು ಮಂದಿಯ ಶವ ಬಿದ್ದಿತ್ತು…!

ಕೊಲೆಯಾದ ಎಂಟು ಮಂದಿಯ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಮಧ್ಯರಾತ್ರಿಯಿಂದ ಸುಮಾರು ಮುಂಜಾನೆ ಐದು ಗಂಟೆಯ ನಡುವೆ ಈ ಕೊಲೆ ನಡೆದಿರಬಹುದು ಎಂದು ಅಂದಾಜಿಸಿದ್ದರು. ಕೊಡಲಿಯಿಂದ ಕೊಚ್ಚಿ ಇವರೆಲ್ಲರನ್ನೂ ಕೊಲೆ ಮಾಡಲಾಗಿತ್ತು. ಈ ಕೊಡಲಿ ಕೂಡಾ ಕೊಲೆ ನಡೆದ ಸ್ಥಳದಲ್ಲೇ ಇತ್ತು. ಗುರುತೇ ಸಿಗದಷ್ಟು ಭೀಕರವಾಗಿ ಇವರನ್ನು ಕೊಚ್ಚಿ ಕೊಲ್ಲಲಾಗಿತ್ತು. ಈ ಕೊಲೆಯ ದೃಶ್ಯ ಕಂಡು ಅಂದು ಇಡೀ ಊರಿಗೆ ಊರೇ ಬಿಚ್ಚಿ ಬಿದ್ದಿತ್ತು. ಜೊತೆಗೆ, ಕೊಲೆಗೈದವರು ಯಾರು ಎಂಬ ಕುತೂಹಲವೂ ಎಲ್ಲರಲ್ಲಿ ಹೆಚ್ಚಾಗಿತ್ತು.

ಈ ಕೊಲೆ ಮಾಡಿದ್ದು ಒಬ್ಬನಾ ಅಥವಾ ಅದಕ್ಕಿಂತ ಹೆಚ್ಚು ಮಂದಿಯಾ ಎಂಬುದು ಅಸ್ಪಷ್ಟ. ಆದರೆ, ಯಾರೇ ಆಗಿದ್ದರೂ ಎಷ್ಟೇ ಜನ ಆಗಿದ್ದರೂ ಕೊಲೆಗೈಯಲು ಬಂದಿದ್ದವರು ಮನೆಯೊಳಗೇ ಅವಿತಿದ್ದರು ಎನ್ನಲಾಗುತ್ತಿದೆ. ಸಂಜೆ ಮೋರ್ ಕುಟುಂಬ ಚರ್ಚ್‌ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ಹಂತಕ ಅಥವಾ ಹಂತಕರು ಮನೆಯೊಳಗೆ ಬಂದು ಬಚ್ಚಿಟ್ಟುಕೊಂಡಿದ್ದಾಗಿ ಒಂದು ಅನುಮಾನ. ಇದಕ್ಕೆ ಪೂರಕ ಎಂಬಂತೆ ಎರಡು ಸಿಗರೇಟುಗಳೂ ಅಲ್ಲಿ ಸಿಕ್ಕಿತ್ತು. ಬಹುಶಃ ಈ ಹಂತಕರು ಅಥವಾ ಹಂತಕ ಮೋರ್ ಕುಟುಂಬ ಮಲಗುವುದನ್ನೇ ಕಾಯುತ್ತಾ ಕುಳಿತಿರಬೇಕು. ಆಗ ಎಳೆದ ಸಿಗರೇಟು ಇದೆನಿಸುತ್ತದೆ. ಹೀಗೆ ಕೊಲೆಗೈದವರು ನೀಟಾಗಿ ತಮ್ಮ ಕೆಲಸ ಮುಗಿಸಿ ಅಲ್ಲಿಂದ ಪರಾರಿಯಾಗಿದ್ದರು ಅಥವಾ ಪರಾರಿಯಾಗಿದ್ದ. ಇನ್ನು ಮೇರಿ ಮೃತದೇಹದಲ್ಲಿ ಒಳ ಉಡುಪು ಕೂಡಾ ಇರಲಿಲ್ಲ. ಬಹುಶಃ ಹಂತಕರು ಈಕೆಯನ್ನು ಕೊಲ್ಲುವ ಮೊದಲು ಲೈಂಗಿಕ ದೌರ್ಜನ್ಯ ಎಸಗಿರಬಹುದು ಅಥವಾ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರಬಹುದು ಎಂದು ಸಂಶಯ ಪೊಲೀಸರಲ್ಲಿ ಮೂಡಿತ್ತು.

ಯಾರಾದರೂ ಕೊಲೆಗೈದಿರಬಹುದಾ ಎಂಬ ಶಂಕೆಯೂ ಪೊಲೀಸರಿಗಿತ್ತು. ಹೀಗಾಗಿ, ಜೋಸಾಯಿಗೆ ಬೆದರಿಕೆ ಹಾಕಿದ್ದ ಸಂಬಂಧಿ ಸ್ಯಾಮ್‌ನನ್ನು ವಿಚಾರಣೆ ನಡೆಸಲಾಗಿತ್ತು. ಆದರೂ ಯಾವುದೇ ಫಲ ಸಿಕ್ಕಿರಲಿಲ್ಲ. ಕೆಲವೊಂದು ಸರಣಿ ಹಂತಕರ ವಿಚಾರಣೆಯೂ ನಡೆದಿತ್ತು. ಆದರೆ, ಯಾವ ಸಾಕ್ಷ್ಯವೂ ಸತ್ಯದ ಸನಿಹಕ್ಕೆ ಪೊಲೀಸರನ್ನು ಕೊಂಡೊಯ್ಯಲೇ ಇಲ್ಲ. ಹೀಗಾಗಿ, ಈ ಕೊಲೆ ಇಂದಿನವರೆಗೂ ನಿಗೂಢವಾಗಿಯೇ ಉಳಿದಿದೆ. ಹಂತಕರು ಯಾರು…? ಒಬ್ಬನೇನಾ…? ಅಥವಾ ಹಲವರಿದ್ದರಾ…? ಇಷ್ಟು ಭೀಕರವಾಗಿ ಕೊಲ್ಲುವಂತಹ ದ್ವೇಷ, ಉದ್ದೇಶ ಏನಿತ್ತು…? ಹೀಗೆ ಪ್ರಶ್ನೆಗಳು ಬೆಳೆಯುತ್ತಲೇ ಹೋಗುತ್ತವೆ. ಆದರೆ, ಈ ಯಾವ ಪ್ರಶ್ನೆಗೂ ಸಮರ್ಪಕ ಉತ್ತರ ಸಿಕ್ಕಿಲ್ಲ. ಅಂತೆ ಕಂತೆಗಳ ಕತೆ ಸಾವಿರಾರು ಸೃಷ್ಟಿಯಾಗಿರಬಹುದು. ಆದರೆ, ಪ್ರಕರಣಕ್ಕೊಂದು ತಾರ್ತಿಕ ಅಂತ್ಯ ಸಿಗದೆ ಈ ಕೇಸ್ ಇನ್ನೂ ಪ್ರಶ್ನೆಗಳ ಮೂಟೆಯಾಗಿಯೇ ಉಳಿದು ಬಿಟ್ಟಿದೆ.

Related posts

ಸದ್ಯ ಕೋವಿಡ್‌ಗೆ ಲಸಿಕೆಯಿಲ್ಲ, ಜಾಗತಿಕ ಐಕ್ಯತೆ ಮುಖ್ಯ: ವಿಶ್ವಸಂಸ್ಥೆ

ನಂಜನಗೂಡಿನ ವ್ಯಕ್ತಿಗೆ ಕೊರೊನಾ ಬಂದಿದ್ದು ಹೇಗೆ..? ಆತನಿಂದ ಐವರಿಗೆ ಹರಡಿತಾ..? ಅಡುಗೆ ಕೆಲಸದಾಕೆಗೂ ತಪಾಸಣೆ..!

Times fo Deenabandhu

ಎದುರಾಬದರಾ ಊಟಕ್ಕೆ ಕುಳಿತರು ಬದ್ಧ ರಾಜಕೀಯ ಎದುರಾಳಿಗಳು..!

Times fo Deenabandhu