September 27, 2020
Times of Deenabandhu
ಪ್ರಧಾನ ಸುದ್ದಿ ಮುಖ್ಯಾಂಶಗಳು ಶಿಕ್ಷಣ

ಶಾಲಾ ಶುಲ್ಕದ ಹೊರೆ ಇಳಿಸಿ, ಪೋಷಕರಿಂದ ಮನವಿ ಪೂರ್ವಕ ಒತ್ತಾಯ

ಬೆಂಗಳೂರು: ಲೌಕ್‌ಡೌನ್‌ನಿಂದಾಗಿ ಎಲ್ಲೆಡೆ ಸಂಕಷ್ಟದ ಪರಿಸ್ಥಿತಿ ಇರುವುದರಿಂದ ಪೋಷಕರ ಮೇಲಿನ ಹೊರೆ ತಗ್ಗಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ಶಾಲಾ ಶುಲ್ಕವನ್ನು ಈ ಬಾರಿ ಹೆಚ್ಚಿಸಬಾರದು, ಸಾಧ್ಯವಾದರೆ ಕಳೆದ ಬಾರಿಗಿಂತ ತುಸು ತಗ್ಗಿಸಬೇಕು ಎಂಬ ಮನವಿ ಪೂರ್ವಕ ಒತ್ತಾಯ ಪೋಷಕರು, ಶಿಕ್ಷಣ ತಜ್ಞರಿಂದ ಕೇಳಿ ಬಂದಿದೆ.

ಬೆಂಗಳೂರಿನ ಕೇಂದ್ರ ಪಠ್ಯಕ್ರಮದ ಕೆಲವು ಶಾಲೆಗಳು ಈಗಾಗಲೇ ಶಾಲಾ ಶುಲ್ಕ ಹೆಚ್ಚಳ ಮಾಡದಿರಲು ನಿರ್ಧರಿಸಿ ಮೇಲ್ಪಂಕ್ತಿ ಹಾಕಿವೆ. ಈಗಾಗಲೇ ಹೆಚ್ಚುವರಿ ಶುಲ್ಕ ಪಡೆದಿರುವ ಹಲವು ಶಾಲೆಗಳು ಪೋಷಕರಿಗೆ ಹಣ ವಾಪಸ್‌ ಮಾಡಲು ತೀರ್ಮಾನಿಸಿವೆ. ಇದೇ ಮಾದರಿಯಲ್ಲಿ ರಾಜ್ಯಾದ್ಯಂತ ಕೇಂದ್ರ ಪಠ್ಯಕ್ರಮ, ರಾಜ್ಯ ಪಠ್ಯಕ್ರಮ ಹಾಗೂ ಅಂತಾರಾಷ್ಟ್ರೀಯ ಶಾಲೆಗಳು ಸಹ ಒಂದು ವರ್ಷದ ಮಟ್ಟಿಗಾದರೂ ಶುಲ್ಕ ಹೆಚ್ಚಳ ಕೈಬಿಡಬೇಕು ಎಂಬುದು ಪೋಷಕರ ಮನವಿಯಾಗಿದೆ.

ಪೋಷಕರು ಮತ್ತು ವಿದ್ಯಾರ್ಥಿಗಳ ಈ ಕೂಗಿಗೆ ಸಹಮತ ವ್ಯಕ್ತಪಡಿಸಿರುವ ಶಿಕ್ಷಣ ತಜ್ಞರು, ಸಂಕಷ್ಟದ ಸಮಯದಲ್ಲಿ ಖಾಸಗಿ ಶಾಲೆಗಳು ‘ಶುಲ್ಕ ಹೆಚ್ಚಳ’ ಮಾಡದಂತೆ ರಾಜ್ಯ ಸರಕಾರವೇ ಸುತ್ತೋಲೆ ಹೊರಡಿಸಬೇಕು ಎಂದು ಸಲಹೆ ನೀಡಿದ್ದಾರೆ.
ಪ್ರಧಾನಿ ಮೋದಿ ಅವರೇ ”ಕೊರೊನಾದ ನಂತರದ ದಿನಗಳು ಈ ಮೊದಲಿನಂತೆ ಇರುವುದಿಲ್ಲ. ಅದಕ್ಕೆ ಜನ ಸಿದ್ಧರಾಗಬೇಕು,” ಎಂದು ಕರೆ ನೀಡಿದ್ದಾರೆ. ಮಧ್ಯಮ, ಕೆಳ ಮಧ್ಯಮ ವರ್ಗ, ಬಡವರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ಗಾರ್ಮೆಂಟ್ಸ್‌ ನೌಕರರು, ಚಾಲಕರು ಸೇರಿದಂತೆ ಸಮಾಜದ ಬಹುತೇಕ ವರ್ಗ ಗಂಭೀರ ಆರ್ಥಿಕ ಸಮಸ್ಯೆಗೆ ಸಿಲುಕಲಿದೆ. ಮಕ್ಕಳ ಶಾಲಾ ಶುಲ್ಕ ಪಾವತಿ ಸೇರಿದಂತೆ ಇತರೆ ಜೀವನ ನಿರ್ವಹಣೆ ಸಹ ಕಷ್ಟಕರವಾಗಲಿದೆ.
ಕಾನೂನಿನ ಅನ್ವಯ ಪ್ರತಿ ವರ್ಷ ಖಾಸಗಿ ಶಾಲೆಗಳು ಶೇ.10ರವರೆಗೆ ಶುಲ್ಕ ಹೆಚ್ಚಿಸಬಹುದು. 5ರಿಂದ 25 ಸಾವಿರ ರೂ.ವರೆಗೆ ಶಾಲಾ ಶುಲ್ಕ ಪಾವತಿ ಮಾಡುವ ಪೋಷಕರಿಗಿಂತ ವಾರ್ಷಿಕ ಸುಮಾರು 1ರಿಂದ ಮೂರ್ನಾಲ್ಕು ಲಕ್ಷ ರೂ.ಗಳವರೆಗೆ ಶುಲ್ಕ ಪಾವತಿಸುವ ಪೋಷಕರಿಗೆ ಭಾರಿ ಹೊರೆ ಬೀಳಲಿದೆ. ಈ ಹಿನ್ನೆಲೆಯಲ್ಲಿಎಚ್ಚೆತ್ತುಕೊಂಡ ಬೆಂಗಳೂರಿನ ಕೆಲವು ಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡದೇ ಇರಲು ತೀರ್ಮಾನಿಸಿವೆ.
ಕಂತು ಸೌಲಭ್ಯ ಕಲ್ಪಿಸಿ
ಶುಲ್ಕವನ್ನು ಹಲವು ಕಂತುಗಳಲ್ಲಿಪಾವತಿ ಮಾಡಲು ಅವಕಾಶ ಕಲ್ಪಿಸಬೇಕು. ಪ್ರಸ್ತುತ ಕಠೋರ ಆರ್ಥಿಕ ಪರಿಸ್ಥಿತಿಯಲ್ಲಿಶಾಲೆಗಳು ಒಮ್ಮೆಗೇ ಎಲ್ಲಾಶುಲ್ಕವನ್ನು ಪಾವತಿ ಮಾಡುವಂತೆ ಒತ್ತಡ ಹೇರಿದರೆ ವಿದ್ಯಾರ್ಥಿಗಳು ಶಾಲೆ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಹಾಗಾಗಿ ಸುಲಭ ಕಂತುಗಳಲ್ಲಿಪಾವತಿಸುವ ಅವಕಾಶ ಕಲ್ಪಿಸಬೇಕೆಂಬ ಸಲಹೆಯೂ ಕೇಳಿ ಬಂದಿದೆ.

ಕೆಲವು ಖಾಸಗಿ ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷಕ್ಕೆ ಶುಲ್ಕ ಹೆಚ್ಚಳ ಮಾಡದೇ ಇರಲು ಕೈಗೊಂಡಿರುವ ತೀರ್ಮಾನ ಪ್ರಶಂಸಾರ್ಹ. ಮಾನವೀಯತೆ ದೃಷ್ಟಿಯಿಂದ ರಾಜ್ಯಾದ್ಯಂತ ಎಲ್ಲಾಖಾಸಗಿ ಶಾಲೆಗಳು ಶುಲ್ಕ ಹೆಚ್ಚಳ ಮಾಡದಂತೆ ಸೂಕ್ತ ನಿರ್ದೇಶನ ನೀಡಲಾಗುವುದು.
– ಎಸ್‌. ಸುರೇಶ್‌ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

2ನೇ ಮಹಾಯದ್ಧದ ಬಗ್ಗೆ ಕೇಳಿದ್ದೇವೆಯೇ ಹೊರತು ನೋಡಿರಲಿಲ್ಲ. ಆದರೆ, ಕೋವಿಡ್‌-19ನಿಂದಾಗಿ ಜಗತ್ತಿನಾದ್ಯಂತ ಕಣ್ಣ ಮಂದೆ ಶತ್ರುವೇ ಇಲ್ಲದಂತಹ ಭೀಕರ ಯುದ್ಧ ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿಶಿಕ್ಷಣ ಸಂಸ್ಥೆಗಳು ಮಾನವೀಯತೆಗೆ ಪ್ರಾಧಾನ್ಯತೆ ನೀಡಬೇಕು. ಶಾಲೆಗಳು ಶುಲ್ಕ ಹೆಚ್ಚಳ ಮಾಡದಂತೆ ಸೂಕ್ತ ಆದೇಶ ಹೊರಡಿಸುವಂತೆ ಸರಕಾರಕ್ಕೆ ಪತ್ರ ಬರೆಯಲಾಗುವುದು.
– ಪ್ರೊ. ಎಂ.ಆರ್‌.ದೊರೆಸ್ವಾಮಿ, ಶಿಕ್ಷಣ ಸುಧಾರಣೆಗಳ ಸಲಹೆಗಾರರು, ಕರ್ನಾಟಕ ಸರಕಾರ

ಖಾಸಗಿ ಶಾಲೆಗಳು ಪ್ರವೇಶ ಶುಲ್ಕ ಹೆಚ್ಚಳ ಮಾಡದಂತೆ ಮತ್ತು ಶಾಲಾ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಹೆಚ್ಚುವರಿ ಶುಲ್ಕ ಪಡೆಯದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಬೇಕು. ಬಡ ಮಕ್ಕಳಿಗೆ ಶೇ.50ರಷ್ಟು ಶುಲ್ಕ ರಿಯಾಯಿತಿ ನೀಡಬೇಕು. ಹಲವು ಕಂತುಗಳಲ್ಲಿಶುಲ್ಕ ಪಾವತಿಗೆ ಅವಕಾಶ ನೀಡಬೇಕು.
– ಡಾ. ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ

ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದು, ಈ ವೇಳೆ ಶಾಲಾ ಮುಖ್ಯಸ್ಥರೂ ಸೇರಿದಂತೆ ಎಲ್ಲರೂ ಸ್ಪಂದಿಸುವ ಅಗತ್ಯವಿದೆ. ಶಾಲೆಗಳು ಶುಲ್ಕ ಹೆಚ್ಚಳ ಮಾಡುವ ಬದಲು, ತಮ್ಮ ಆದಾಯದ ಒಂದಷ್ಟು ಭಾಗವನ್ನು ವಿದ್ಯಾರ್ಥಿಳಿಗೆ ‘ವಿದ್ಯಾರ್ಥಿ ವೇತನ’ವನ್ನಾಗಿ ನೀಡಿದರೆ ಅಂತಹ ಶಾಲೆಗಳು ಸಮಾಜದಲ್ಲಿಮೆಚ್ಚುಗೆಗೆ ಪಾತ್ರವಾಗಲಿವೆ.
– ಪ್ರೊ. ಎಂ.ಕೆ.ಶ್ರೀಧರ್‌, ಶಿಕ್ಷಣ ತಜ್ಞ

ಈಗಾಗಲೇ ಬಹುತೇಕ ಖಾಸಗಿ ಶಾಲೆಗಳು 2020-21ನೇ ಸಾಲಿನ ಶಾಲಾ ಶುಲ್ಕ ಘೋಷಣೆ ಮಾಡಿವೆ. ಇದೇ ಶುಲ್ಕವನ್ನು ಪಡೆಯಬೇಕೇ ಅಥವಾ ಕಡಿತ ಮಾಡಬೇಕೇ? ಕಂತುಗಳಲ್ಲಿಪಡೆಯುವುದು ಹೇಗೆ ಎಂಬ ವಿಚಾರಗಳನ್ನು ಜೂನ್‌ ನಂತರ ನಮ್ಮ ಸಂಘಟನೆಯ ನಿರ್ದೇಶಕರೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು.
– ಸತ್ಯಮೂರ್ತಿ, ಕುಸ್ಮಾ ಸಂಘಟನೆ ಅಧ್ಯಕ್ಷ

Related posts

 ವೇದಿಕೆ ಮೇಲೆ ಸಚಿವರ ಕೂದಲು ಕತ್ತರಿಸಿದ…60,000 ರೂ.ಪಡೆದ !

Times fo Deenabandhu

ಲಾಕ್‌ಡೌನ್‌ ಹಿನ್ನೆಲೆ ಖಿನ್ನತೆಯಲ್ಲಿರುವ ವಿದ್ಯಾರ್ಥಿಗಳಿಗೆ ಸಾಂತ್ವನ: ಶಿಕ್ಷಕರಿಂದ ಕೌನ್ಸೆಲಿಂಗ್‌

Times fo Deenabandhu

ನಿರ್ಭಯಾ ಪ್ರಕರಣ; ಮರಣದಂಡನೆ ವಿಧಿಸಿರುವ ಇಬ್ಬರು ಅಪರಾಧಿಗಳ ಕ್ಯುರೇಟಿವ್​ ಅರ್ಜಿ ವಿಚಾರಣೆ ಜನವರಿ 14ಕ್ಕೆ

Times fo Deenabandhu