Times of Deenabandhu
  • Home
  • ಜಿಲ್ಲೆ
  • ಕೊರೊನಾ ಎಫೆಕ್ಟ್ : ಶಿವಮೊಗ್ಗ ಜಿಲ್ಲೆ ತುಸು ಸುರಕ್ಷಿತ ಸ್ಥಿತಿಯಲ್ಲಿದೆ…. ಹಾಗೆಂದು ಮೈಮರೆಯಬಾರದು…..
ಜಿಲ್ಲೆ ಶಿವಮೊಗ್ಗ

ಕೊರೊನಾ ಎಫೆಕ್ಟ್ : ಶಿವಮೊಗ್ಗ ಜಿಲ್ಲೆ ತುಸು ಸುರಕ್ಷಿತ ಸ್ಥಿತಿಯಲ್ಲಿದೆ…. ಹಾಗೆಂದು ಮೈಮರೆಯಬಾರದು…..

ವಿಶೇಷ ವರದಿ:ಅರುಂಡಿ ಶ್ರೀನಿವಾಸ ಮೂರ್ತಿ 

ಶಿವಮೊಗ್ಗ: ಅಂದು ದುಡಿಮೆ ಮಾಡಿ ಅಂದೇ ಹೊಟ್ಟೆ ತುಂಬಿಸಿಕೊಳ್ಳುವವರು, ಬಡವರು ನಿರ್ಗತಿಕರನ್ನು ಬಿಟ್ಟರೆ ಈ ಕೊರೋನಾ ಸಾಮಾನ್ಯ ಜನರಿಗೆ ಅಷ್ಟೇನೂ ತಲ್ಲಣ ಉಂಟು ಮಾಡಿಲ್ಲ.

ಕಾರಣ ಲಾಕ್ ಡೌನ್ ನಿಂದ ಹಿಡಿದು ಇಲ್ಲಿಯತನಕ ಜನರು ಬವಣೆ ಪಡುವಂತೆ ಏನೂ ಆಗಿಲ್ಲ. ಹಾಲು, ತರಕಾರಿ, ದಿನಸಿ, ಆಸ್ಪತ್ರೆ, ಪೆಟ್ರೋಲ್ ಹೀಗೆ ನಿತ್ಯದ ಬದುಕಿಗೆ ಯಾವ ತೊಂದರೆಯೂ ಆಗಿಲ್ಲ. ಒಂದು ತಿಂಗಳಿಗೂ ಹೆಚ್ಚು ಕಾಲದ ದಿನಸಿ ಔಷಧಗಳನ್ನು ಜನರು ಈಗಾಗಲೇ ಖರೀದಿಸಿಟ್ಟುಕೊಂಡಿದ್ದಾರೆ.

ಮೊದ ಮೊದಲು ಮನೆಯಿಂದ ಹೊರಗೆ ಅಡ್ಡಾಡುವವರಿಗೆ ಪೊಲೀಸರ ಲಾಠಿ ಏಟು ಬೀಳುತ್ತಿದ್ದವು. ಈಗ ಅದು ಕೂಡ ಕಡಿಮೆಯಾಗಿದೆ. ವಿರಳವಾಗಿಯಾದರೂ ಜನ ಹೊರಗಡೆ ತಮ್ಮ, ತಮ್ಮ ಕೆಲಸಗಳಿಗೆ ಹೋಗುತ್ತಲೇ ಇದ್ದಾರೆ. ಬಸ್, ಆಟೋ, ಮುಂತಾದವುಗಳನ್ನು ಬಿಟ್ಟರೆ, ದ್ವಿಚಕ್ರವಾಹನ, ಕಾರ್ ಗಳಲ್ಲಿ ಜನರು ತಮ್ಮ ಪ್ರಯಾಣ ಮುಂದುವರೆಸುತ್ತಿರುವುದು ಕಂಡು ಬರುತ್ತಿದೆ.

ಅದರಲ್ಲೂ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ತರಕಾರಿ, ದಿನಸಿ, ಹಾಲು ಮತ್ತು ಬೇಕರಿಗಳಲ್ಲಿ ಜನ ನೂಕುನುಗ್ಗಲಾಗಿ ಖರೀದಿಸುವ ದೃಶ್ಯಗಳು ಇಂದು ಕೂಡ ಕಂಡು ಬಂದಿವೆ. ಪೊಲೀಸರು ಎಷ್ಟು ಅಂಥ ತಡೆಯಲು ಸಾಧ್ಯ. ಅವರು ಕೂಡ ಸುಸ್ತಾಗಿ ತಲೆ ತಿರುಗಿ ಬೀಳುವುದನ್ನು ತಪ್ಪಿಸಲು ತೆರೆದಿದ್ದ ಟೀ ಅಂಗಡಿಯಲ್ಲೇ ಟೀ ಕುಡಿದು ಬೇಗ ಬಾಗಿಲು ಹಾಕಿ ಎಂದು ಹೇಳುವ ದೃಶ್ಯಗಳು ಕೂಡ ಕಂಡು ಬಂದವು.

ನಗರದ ಬಹುತೇಕ ಎಲ್ಲಾ ಬಡಾವಣೆಗಳಲ್ಲಿ ಇರುವ ಪಾರ್ಕ್ ಗಳಲ್ಲಿ ಜನ ಎಂದಿನಂತೆ ವಾಯು ವಿಹಾರ ಮಾಡುವ, ವ್ಯಾಯಾಮ ಮಾಡುವ ದೃಶ್ಯಗಳು ಇದ್ದು, ಈ ವ್ಯಾಯಾಮ, ವಿಹಾರ ಸಂಜೆ ಕೂಡ ಮುಂದುವರೆಯುತ್ತಿದೆ. ಈ ಬಗ್ಗೆ ಪೊಲೀಸರಿಗೆ ಎಲ್ಲಾ ಪಾರ್ಕ್ ಗಳಿಗೆ ಹೋಗಿ ಜನರನ್ನು ಚದುರಿಸುವುದು ಕಷ್ಟವಾಗುತ್ತಿದೆ.

ಅಂತರ ಕಾಯ್ದುಕೊಳ್ಳುವುದು ಸ್ವಲ್ಪ ಕಷ್ಟವೇ ಆಗಿದೆ. ತರಕಾರಿ, ಹಾಲು ಖರೀದಿಸುವಾಗ ಜನ ಯಾವ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ. ಇದರ ಜೊತೆಗೆ ಎಲ್ಲರೂ ಮಾಸ್ಕ್ ಧರಿಸಲು ಆಗುತ್ತಿಲ್ಲ. ಮಾಸ್ಕ್ ಕೊರತೆಯೂ ಇದಕ್ಕೆ ಕಾರಣವಾಗಿದೆ. ಅಲ್ಲದೇ, ಆರೋಗ್ಯ ಇಲಾಖೆ ಕೂಡ ಎಲ್ಲರೂ ಮಾಸ್ಕ್ ಧರಿಸಬೇಕಾದ ಅವಶ್ಯಕತೆ ಇಲ್ಲವೆಂದು ಹೇಳಿರುವುದರಿಂದ ಮಾಸ್ಕ್ ಧರಿಸುವವರ ಸಂಖ್ಯೆ ಕಡಿಮೆಯಾಗಿದೆ.

ಪುಣ್ಯಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ಇದುವರೆಗೂ ಒಂದೇ ಒಂದು ಕೊರೋನಾ ಪಾಸಿಟಿವ್ ದೃಢಪಟ್ಟಿಲ್ಲ. ಜನರಿಗೆ ಇದೊಂದೇ ಬಹುದೊಡ್ಡ ಸಮಾಧಾನದ ವಿಷಯವಾಗಿದೆ. ಆದರೆ, ಹೀಗೇ ಎಂದು ಹೇಳಲು ಬರುವುದಿಲ್ಲ. ನಿಜಾಮುದ್ದೀನ್ ಭೀತಿ ಜಿಲ್ಲೆಯನ್ನೂ ಕಾಡುತ್ತಿದೆ. ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾದ ಸುಮಾರು 10 ಮಂದಿಯನ್ನು ಗುರುತಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದಿನ್ನು ಅಧಿಕೃತವಾಗಿಲ್ಲ. ಇದರಲ್ಲಿ ಕೆಲವರು ಈಗಾಗಲೇ 14 ದಿನಗಳ ಹೋಮ್ ಕ್ವಾರಂಟೈನ್ ಮುಗಿಸಿದ್ದಾರೆ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಈ ಬಗ್ಗೆ ಎಚ್ಚರಿಕೆಯ ಹೆಜ್ಜೆ ಇಟ್ಟಿರುವುದು ಸ್ವಾಗತದ ವಿಷಯ. ಅಲ್ಲದೇ, ದೆಹಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರು, ಸ್ವಯಂಪ್ರೇರಿತವಾಗಿ ತಿಳಿಸಬೇಕೆಂದು ಮನವಿ ಕೂಡ ಮಾಡಿದೆ. ಇದು ಕೂಡ ಒಂದು ಒಳ್ಳೆಯ ಹೆಜ್ಜೆಯಾಗಿದೆ.

ಈ ನಡುವೆ ಕೆಲವು ದಿನಗಳಿಂದ ನಗರದ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಇರುವ ನಿರ್ಗತಿಕರಿಗೆ ಹಸಿದವರಿಗೆ, ಅಲೆಮಾರಿಗಳಿಗೆ ಕೆಲವು ಸಂಘ, ಸಂಸ್ಥೆಗಳು ಊಟ, ನೀರು ನೀಡಿ ಮಾನವೀಯತೆ ಮೆರೆದಿವೆ. ಆದರೆ, ಮಹಾನಗರ ಪಾಲಿಕೆ ಹೀಗೆ ಸರ್ಕಾರೇತರ ಸಂಘ ಸಂಸ್ಥೆಗಳು ನೇರವಾಗಿ ಊಟ ಕೊಡಬಾರದು ಅದರ ಬದಲು ಆಹಾರ ಸಾಮಗ್ರಿ ಪಾಲಿಕೆಗೆ ತಲುಪಿಸಲು ಹೇಳಿದೆ. ಆದರೆ, ಕೆಲವು ಸಂಘ ಸಂಸ್ಥೆಗಳು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಬಸ್ ನಿಲ್ದಾಣ ಮೊದಲಾದ ಕಡೆ ಪೊಲೀಸರನ್ನು ತಪ್ಪಿಸಿ ಊಟ, ನೀರಿಲ್ಲದೇ ಇರುವವರಿಗೆ ಊಟದ ಸಾಮಗ್ರಿ ಕಿಟ್ ಗಳನ್ನು ನೀಡಿದರೆ ಪ್ರಯೋಜನವೇನು? ಅವರಿಗೆ ತಕ್ಷಣಕ್ಕೆ ಬೇಕಾಗಿರುವುದು ಅನ್ನ ನೀರು. ಇಂತಹ ಸಂದರ್ಭದಲ್ಲಿ ಪಾಲಿಕೆಯ ಈ ಸರಿಯಲ್ಲ ಎಂದು ಹೇಳಲಾಗಿದೆ.

ಇನ್ನು ಇಂದಿನಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಆರಂಭವಾಗಲಿದೆ. ನಿಸ್ಸಂಶಯವಾಗಿ ನೂಕುನುಗ್ಗಲು ಉಂಟಾಗುವುದು ಖಚಿತ. ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ಕೊಡಲಾಗುತ್ತದೆ. ಇಲ್ಲಿ ಅಂತರವನ್ನು ಕಾಯ್ದುಕೊಳ್ಳುವುದು ಕಷ್ಟವಾಗಿ ನೂಕು ನುಗ್ಗಲು ಆಗಬಹುದು. ಜಿಲ್ಲಾಡಳಿತ ಮತ್ತು ಸಂಬಂಧಪಟ್ಟವರು ಸೂಕ್ತ ಗಮನಹರಿಸುವುದು ಒಳ್ಳೆಯದು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಕೆಲವು ಜನಪ್ರತಿನಿಧಿಗಳು ಸೇರಿದಂತೆ ಅನೇಕರು ತಮ್ಮ ವೇತನವನ್ನು ನೀಡಿರುವುದು ಸ್ವಾಗತಾರ್ಹವಾಗಿದೆ. ಅದರಲ್ಲಿಯೂ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಕೊರೋನಾ ಕಂಟ್ರೋಲ್ ನಲ್ಲಿ ಇರುವುದು ಶ್ಲಾಘನೀಯ. ಇದರ ಜೊತೆಗೆ ಸಚಿವ ಈಶ್ವರಪ್ಪನವರು ಪ್ರತಿಧಿನವೂ ಅಧಿಕಾರಿಗಳ ಸಭೆ ನಡೆಸುವ ಮೂಲಕ, ಮತ್ತು ವೀಕ್ಷಣೆಗಳ ಮೂಲಕ ಕೊರೋನಾ ಜಾಗೃತಿಯನ್ನು ಮೂಡಿಸುತ್ತಿದ್ದಾರೆ ಮತ್ತು ಎಚ್ಚರಿಕೆ ನೀಡುತ್ತಿದ್ದಾರೆ ಇದು ಕೂಡ ಸ್ವಾಗತದ ವಿಷಯವಾಗಿದೆ.

ಮುರುಘಾ ಮಠ ಸೇರಿದಂತೆ ಹಲವು ಮಠಗಳು ಈಗಾಗಲೇ ದೇಣಿಗೆ ನೀಡಿವೆ. ಬದುಕು, ಬವಣೆಯಾಗುತ್ತಿರುವ ಇಂತಹ ಸಂದರ್ಭದಲ್ಲಿ ಜಿಲ್ಲೆಯ ಆರೋಗ್ಯಾಧಿಕಾರಿಗಳು, ವೈದ್ಯರು, ಜಿಲ್ಲಾಧಿಕಾರಿಗಳು ವಿವಿಧ ಅಧಿಕಾರಿಗಳು, ದಾದಿಯರು, ಪತ್ರಕರ್ತರು, ಪೌರ ಕಾರ್ಮಿಕರು ಹೀಗೆ ಎಲ್ಲರೂ ಮಾನವೀಯತೆ ಮೆರೆಯುತ್ತಿರುವುದನ್ನು ನೋಡಿದರೆ ಕಣ್ತುಂಬಿ ಬರುತ್ತದೆ. ಈ ನಡುವೆ, ಕೆಲವರು ಧರ್ಮಗಳ ನಡುವೆ ದ್ವೇಷ ಬೆಳೆಸುವಂತಹ ಮಾತುಗಳನ್ನು ಗುಂಪು ಚರ್ಚೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಆತಂಕದ ವಿಷಯವಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ವಿಭಾಗದವರು ಎಚ್ಚರಿಕೆ ವಹಿಸಬೇಕಿದೆ.

ಒಟ್ಟಾರೆ, ಇಡೀ ವಿಶ್ವಕ್ಕೆ ಹೋಲಿಸಿದರೆ ನಮ್ಮ ಶಿವಮೊಗ್ಗ ಜಿಲ್ಲೆ ತುಸು ಸುರಕ್ಷಿತ ಸ್ಥಿತಿಯಲ್ಲಿದೆ. ಹಾಗೆಂದು ಮೈಮರೆಯಬಾರದು. ಲಾಕ್ ಡೌನ್ ನಿಧಾನವಾಗಿ ಅಭ್ಯಾಸವಾಗತೊಡಗಿದೆ. ಎಲ್ಲರೂ, ಸರ್ಕಾರದ ಆದೇಶಗಳನ್ನು ಪಾಲಿಸುವ ಮೂಲಕ, ಮಾನವೀಯತೆ ಮೆರೆಯುವ ಮೂಲಕ ಕೊರೋನಾ ಸೋಂಕಿನ ಸರಪಳಿಯನ್ನು ಕತ್ತರಿಸಬೇಕಾಗಿದೆ. ಈ ಎಲ್ಲಾ ಸಮಾಧಾನ ಮತ್ತು ಅಸಮಾಧಾನಗಳ ನಡುವೆ ಮದ್ಯಪಾನಿಗಳು ಮಾತ್ರ ವ್ಯಸನದಿಂದ ಇದ್ದಾರೆ.

 

Related posts

ಶಿವಮೊಗ್ಗದಲ್ಲಿ ಹೆಚ್ಚಿದ ಕೊರೊನಾ ಆತಂಕ … ವೈದ್ಯರು ಮತ್ತಿತರರಿಗೆ ಸೋಂಕು ಶಂಕೆ….

ಶುದ್ಧ ಶಾಸ್ತ್ರೀಯ ಸಂಗೀತ ಭಾವಾನಂದ ಮೂಡಿಸುತ್ತದೆ – ಚಲನಚಿತ್ರ ನಾಯಕನಟ ರಾಮಕೃಷ್ಣ

Times fo Deenabandhu

ಕೋಳಿ ಫಾರಂನಲ್ಲಿ ಕೋಳಿಗಳ ಸಾವು-ವೈಜ್ಞಾನಿಕ ವಿಲೇವಾರಿ ಮಾಡದೆ ನಿರ್ಲಕ್ಷ್ಯ ತೋರಿದ ವ್ಯಕ್ತಿಯ ಮೇಲೆ ಕೇಸು ದಾಖಲು…

Times fo Deenabandhu