Times of Deenabandhu
  • Home
  • ಪ್ರಧಾನ ಸುದ್ದಿ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆ, ಅನಗತ್ಯವಾಗಿ ಹೊರಗಡೆ ಬಂದರೆ ಬಂಧನಕ್ಕೆ ಆದೇಶ
ಪ್ರಧಾನ ಸುದ್ದಿ ಮುಖ್ಯಾಂಶಗಳು

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 55ಕ್ಕೆ ಏರಿಕೆ, ಅನಗತ್ಯವಾಗಿ ಹೊರಗಡೆ ಬಂದರೆ ಬಂಧನಕ್ಕೆ ಆದೇಶ

ಬೆಂಗಳೂರು: ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‌ ರಾಜ್ಯದಲ್ಲಿಯೂ ವೇಗವಾಗಿ ಹರಡುತ್ತಿದೆ. ಬುಧವಾರ ಒಂದೇ ದಿನ ಕರ್ನಾಟಕದಲ್ಲಿ 10 ಕೊರೊನಾ ಪ್ರಕರಣಗಳು ವರದಿಯಾಗಿದ್ದವು. ಇಂದು ಮತ್ತೆ 4 ಕೊರೊನಾ ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ 70 ವರ್ಷದ ವೃದ್ಧೆಯೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಕೊರೊನಾಗೆ ಇಬ್ಬರು ಸಾವನ್ನಪ್ಪಿದಂತಾಗಿದೆ. ಮೂವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ದೇಶಾದ್ಯಂತ ಪ್ರಕರಣಗಳನ್ನು ಗಮನಿಸಿದರೆ ಮಹಾರಾಷ್ಟ್ರ, ಕೇರಳದ ನಂತರ ಅತಿಹೆಚ್ಚು ಕೊರೊನಾ ಸೋಂಕಿತರನ್ನು ಕರ್ನಾಟಕ ಹೊಂದಿದೆ. 55 ಪ್ರಕರಣಗಳಲ್ಲಿ 6 ಮಂದಿ ಕೇರಳದವರಾಗಿದ್ದು, ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರಿಂದ ಕರ್ನಾಟಕದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇದುವರೆಗೂ 1,28,046 ವಿದೇಶಿ ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ. ಇನ್ನು, ನೋಂದಾಯಿತ ಖಾಸಗಿ ವೈದ್ಯರಿಗೆ ಟೆಲಿ-ಮೆಡಿಸನ್‌ ಮುಖಾಂತರ ಚಿಕಿತ್ಸೆ ನೀಡಲು ಅನುವು ಮಾಡಿಕೊಡಲಾಗಿದ್ದು, ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಸಿಬ್ಬಂದಿ ವಾಸಿಸುತ್ತಿರುವ ಮನೆಯ ಮಾಲೀಕರು ಮನೆಯಿಂದ ಖಾಲಿ ಮಾಡುವಂತೆ ಒತ್ತಡ ಹೇರುವಂತಿಲ್ಲ. ಒತ್ತಡ ಹೇರಿದರೆ, ಕರ್ನಾಟಕ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಅಡಿಯಲ್ಲಿ ರೂಪಿಸಲಾದ ನಿಯಮಾವಳಿಗಳ ಅಡಿಯಲ್ಲಿ ಕ್ರಮ ಜರುಗಿಸಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇನ್ನು, ಕೊರೊನಾ ನಿಯಂತ್ರಣಕ್ಕೆ ಘೋಷಿಸಿರುವ ಲಾಕ್‌ಡೌನ್‌ ವೇಳೆಯಲ್ಲಿ ಅನಗತ್ಯವಾಗಿ ಹೊರಬಂದರೆ ಬಂಧಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪೊಲೀಸರಿಗೆ ಆದೇಶಿಸಿದ್ದಾರೆ.
ರಾಜ್ಯದಲ್ಲಿ ಗುರುವಾರ 4 ಪ್ರಕರಣಗಳು ಪತ್ತೆಯಾಗಿವೆ. ಆತಂಕಕಾರಿ ವಿಷಯ ಏನೆಂದರೆ, 35 ವರ್ಷದ ಮೈಸೂರಿನ ವ್ಯಕ್ತಿಯಲ್ಲಿ ಕೊರೊನಾ ಕಾಣಿಸಿಕೊಂಡಿರುವುದು. ಇವರು ಯಾವುದೇ ದೇಶಕ್ಕೆ ಹೋಗಿಲ್ಲ, ಯಾವುದೇ ಕೊರೊನಾ ಸೋಂಕಿತನ ಸಂಪರ್ಕಕ್ಕೂ ಬಂದಿಲ್ಲ. ಚಿಕ್ಕಬಳ್ಳಾಪುರದ 70 ವರ್ಷದ ಮಹಿಳೆಗೆ ಕೊರೊನಾ ಇರುವುದು ದೃಢಪಟ್ಟಿದೆ. ಈ ಮಹಿಳೆ ಮೆಕ್ಕಾಗೆ ಹೋಗಿ ಬಂದಿದ್ದರು. ಇನ್ನು, 64 ವರ್ಷದ ಆಂಧ್ರಪ್ರದೇಶದ ಅನಂತಪುರ ನಿವಾಸಿ ಫ್ರಾನ್ಸ್‌ ದೇಶಕ್ಕೆ ಪ್ರಯಾಣ ಮಾಡಿ ಬಂದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಜೊತೆ ಸೋಂಕಿತನ ಸಂಪರ್ಕಿತ 45 ವರ್ಷದ ವ್ಯಕ್ತಿಗೆ ಕೊರೊನಾ ಇರುವುದು ದೃಢವಾಗಿದ್ದು, ಈ ನಾಲ್ಕು ಪ್ರಕರಣದೊಂದಿಗೆ ರಾಜ್ಯದಲ್ಲಿ ಸೋಕಿತರ ಸಂಖ್ಯೆ 55ಕ್ಕೆ ಏರಿಕೆಯಾಗಿದೆ.
ಸೌದಿ ಅರೇಬಿಯಾದಿಂದ ವಾಪಸ್‌ ಆಗಿದ್ದ ಚಿಕ್ಕಬಳ್ಳಾಪುರದ 70 ವರ್ಷದ ವೃದ್ಧೆಯೊಬ್ಬರು ಬುಧವಾರ ಮೃತಪಟ್ಟಿದ್ದರು. ಆದರೆ, ಕೊರೊನಾ ಇರುವುದು ಗುರುವಾರ ದೃಢಪಟ್ಟಿದ್ದು, ರಾಜ್ಯದಲ್ಲಿ ಕೋವಿಡ್‌-19ಗೆ ಇದುವರೆಗೂ ಇಬ್ಬರು ಮೃತಪಟ್ಟಂತಾಗಿದೆ. ಚಿಕ್ಕಬಳ್ಳಾಪುರದ ಮಹಿಳೆ ಮೆಕ್ಕಾದಿಂದ ಮಾರ್ಚ್‌ 14 ರಂದು ಬೆಂಗಳೂರಿಗೆ ವಾಪಸ್‌ ಆಗಿದ್ದರು. ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆ ಬೆಂಗಳೂರಿನ ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮೃತಪಟ್ಟಿದ್ದಾರೆ. ಇನ್ನು, ಕೊರೊನಾ ವೈರಸ್‌ಗೆ ದೇಶದಲ್ಲಿಯೇ ಮೊದಲ ಸಾವಾಗಿದ್ದು ರಾಜ್ಯದ ಕಲಬುರಗಿಯಲ್ಲಿ. ಸೌದಿ ಅರೇಬಿಯಾಗೆ ಹೋಗಿ ಬಂದಿದ್ದ 76 ವರ್ಷದ ಕಲಬುರಗಿ ವೃದ್ಧ ಮೃತಪಟ್ಟು 2 ದಿನಗಳ ನಂತರ ಕೊರೊನಾ ವೈರಸ್‌ ಇರುವುದು ದೃಢಪಟ್ಟಿತ್ತು.
ರಾಜ್ಯಾದ್ಯಂತ ಇದುವರೆಗೂ 55 ಜನರಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಬೆಂಗಳೂರಿನಲ್ಲಿ (35), ಕಲಬುರಗಿ (3), ಕೊಡಗು (1), ಚಿಕ್ಕಬಳ್ಳಾಪುರ (3), ಮೈಸೂರು (3), ಧಾರವಾಡ (1), ದಕ್ಷಿಣ ಕನ್ನಡ (5), ಉತ್ತರ ಕನ್ನಡ (2), ದಾವಣಗೆರೆ (1) ಮತ್ತು ಉಡುಪಿ ಜಿಲ್ಲೆಯಲ್ಲಿ ಒಬ್ಬರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇಬ್ಬರು ಮೃತಪಟ್ಟಿದ್ದು, ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಈ 55 ಪ್ರಕರಣಗಳಲ್ಲಿ 6 ಮಂದಿ ಕೇರಳದವರಾಗಿದ್ದು, ರಾಜ್ಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಇದುವರೆಗೂ 1,28,046 ವಿದೇಶದಿಂದ ಬಂದವರನ್ನು ತಪಾಸಣೆ ಮಾಡಲಾಗಿದ್ದು, ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 89,963 ಜನರನ್ನು, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 31,917 ಜನರನ್ನು ಹಾಗೂ ಮಂಗಳೂರು ಮತ್ತು ಕಾರವಾರ ಬಂದರುಗಳಲ್ಲಿ 6,166 ಜನರನ್ನು ತಪಾಸಣೆ ಮಾಡಲಾಗಿದ್ದು, ನಿನ್ನೆಯೊಂದೆ 46 ಜನರನ್ನು ತಪಾಸಣೆ ಮಾಡಲಾಗಿದೆ. ಇನ್ನು, ರಾಜ್ಯಾದ್ಯಂತ ಕೊರೊನಾ ಶಂಕಿತ ಲಕ್ಷಣಗಳು ಕಂಡಿದ್ದರಿಂದ ಒಟ್ಟು 172 ಜನರನ್ನು ನಿಯೋಕಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. 42 ಜನರನ್ನು ಇಂದು ಬಿಡುಗಡೆ ಮಾಡಲಾಗಿದ್ದರೆ, 36 ಜನರು ಇಂದು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿದ್ದಾರೆ.
ಕೊರೊನಾ ಭೀತಿಯಿಂದ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಸಿಬ್ಬಂದಿ ವಾಸಿಸುತ್ತಿರುವ ಮನೆಗಳ ಮಾಲೀಕರು ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿರುವುದು ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ನಗರ ಪಾಲಿಕೆಯ ಆಯುಕ್ತರು, ಬಿಬಿಎಂಪಿ ಆಯುಕ್ತರು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕರ್ನಾಟಕ ಸಾಂಕ್ರಾಮಿಕ ರೋಗಗಳ (ಕೋವಿಡ್‌-19) ನಿಯಂತ್ರಣದ ಅಡಿ ರೂಪಿಸಲಾದ ನಿಯಮಾವಳಿಗಳಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ರಾಜ್ಯ ಸರಕಾರ ಆದೇಶ ನೀಡಿದೆ.
ಕೊರೊನಾ ಟ್ರ್ಯಾಕಿಂಗ್‌ ಅಪ್ಲಿಕೇಷನ್‌ನ್ನು ರಾಜ್ಯ ಸರಕಾರ ಅಭಿವೃದ್ಧಿಪಡಿಸಿದ್ದು, ರಾಜ್ಯದಲ್ಲಿ ಇದುವರೆಗೂ ಕೊರೊನಾ ಸೋಂಕಿತರು ಲ್ಯಾಬ್‌ ರಿಸಲ್ಟ್‌ಗೂ ಮುನ್ನ 14 ದಿನಗಳು ಪ್ರಯಾಣದ ಮಾಡಿದ ವಿವಿಧ ಸ್ಥಳ, ಪ್ರದೇಶಗಳ ಮಾಹಿತಿ ಲಭ್ಯವಾಗುತ್ತದೆ. ಮತ್ತು ಫಸ್ಟ್‌ ರೆಸ್ಪಾಂಡರ್‌ ಹಾಗೂ ಸಹಾಯವಾಣಿಗಳ ಸಂಖ್ಯೆಗಳು ಇಲ್ಲಿ ಲಭ್ಯವಾಗುತ್ತವೆ.ಮತ್ತು ನಿಮ್ಮ ಹತ್ತಿರದ ಆಸ್ಪತ್ರೆಗಳ ಬಗ್ಗೆ ಮಾಹಿತಿ ಲಭ್ಯವಿದೆ.
14 ದಿನಗಳ ಕಾಲ ಕ್ವಾರಂಟೀವ್‌ನಲ್ಲಿರಲು ರೋಗಿಗಳಿಗೆ ಮಾನಸಿಕ ಸ್ಥೈರ್ಯ ಅಗತ್ಯವಾಗಿ ಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಂತಹ ರೋಗಿಗಳಿಗೆ ಅಥವಾ ಸಂಪರ್ಕಿತರಿಗೆ ಮಾನಸಿಕ ಆರೋಗ್ಯದ ಆಪ್ತ ಸಮಾಲೋಚನೆ ನಡೆಸಲು ಅನುವು ಮಾಡಿಕೊಟ್ಟಿದ್ದು, ಇದುವರೆಗೂ 9,111 ಜನರಿಗೆ ಕೌನ್ಸಲಿಂಗ್‌ ನಡೆದಿದೆ.
ಕೊರೊನಾ ಬಗ್ಗೆ ಮಾಹಿತಿಗಾಗಿ 104 ಸಹಾಯವಾಣಿಯನ್ನು ಸಂಪರ್ಕಿಸಬಹುದು. ಕೋವಿಡ್‌-19 ಕುರಿತ ಕರೆಗಳಿಗಾಗಿ ಆರೋಗ್ಯ ಇಲಾಖೆ 210 ಆಸನಗಳನ್ನು ಮೀಸಲಿರಿಸಿದೆ. ಬುಧವಾರ ಒಂದೇ ದಿನ 21,417 ಕರೆಗಳನ್ನು ಸ್ವೀಕರಿಸಲಾಗಿದ್ದು, 50,761 ಹೊರ ಕರೆಗಳನ್ನು ಮಾಡಲಾಗಿದೆ. ಇದರಲ್ಲಿ 73 ಅಗತ್ಯ ಮಾರ್ಗದರ್ಶನದ ಕರೆಗಳು ಇವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 104 ಸಹಾಯವಾಣಿ ಜೊತೆ 080-46848600 ಮತ್ತು 080-66692000 ಸಂಖ್ಯೆಗಳಿಗೂ ಸಾರ್ವಜನಿಕರು ಮಾಹಿತಿಗಾಗಿ ಸಂಪರ್ಕಿಸಬಹುದಾಗಿದೆ.

Related posts

ಜನರಿಗೆ ಮೋದಿಯಷ್ಟು ನಂಬಿಕೆ ದ್ರೋಹ ಮಾಡಿದವರು ಬೇರೆ ಯಾರೂ ಇಲ್ಲ: ಸಾಹಿತಿ ದೇವನೂರು ಮಹಾದೇವ

Times fo Deenabandhu

 ಕಾಂಗ್ರೆಸ್ ಆಂತರಿಕ ಆಕ್ರೋಶ: ಮನಮೋಹನ್ ಸಿಂಗ್‌ ಬೆಂಬಲಕ್ಕೆ ನಿಂತ ಹಿರಿಯ ನಾಯಕರು!

Times fo Deenabandhu

ಪ್ರಿಕಾಷನ್‌ ತಗೊಳ್ಳಿ, ಪ್ಯಾನಿಕ್‌ ಆಗಬೇಡಿ, ಅನಗತ್ಯ ದೂರ ಪ್ರಯಾಣ ಬಿಡಿ: ಜನತೆಗೆ ಮೋದಿ ಸಲಹೆ

Times fo Deenabandhu