Times of Deenabandhu
  • Home
  • ಜಿಲ್ಲೆ
  • ಮಹಾನಗರ ಪಾಲಿಕೆ ವತಿಯಿಂದ ಮನೆ ಬಾಗಿಲಿಗೆ ಫುಡ್ ಸಪ್ಲೈ-ಮಾಂಸ, ತರಕಾರಿಗೆ ಮುಗಿಬಿದ್ದ ಶಿವಮೊಗ್ಗದ ಜನರು-ಹಳ್ಳಿಯವರ ಮುಂಜಾಗ್ರತಾ ಕ್ರಮಗಳು ನಗರದವರಿಗೆ ಏಕೆ ಬರುತ್ತಿಲ್ಲ
ಜಿಲ್ಲೆ ಶಿವಮೊಗ್ಗ

ಮಹಾನಗರ ಪಾಲಿಕೆ ವತಿಯಿಂದ ಮನೆ ಬಾಗಿಲಿಗೆ ಫುಡ್ ಸಪ್ಲೈ-ಮಾಂಸ, ತರಕಾರಿಗೆ ಮುಗಿಬಿದ್ದ ಶಿವಮೊಗ್ಗದ ಜನರು-ಹಳ್ಳಿಯವರ ಮುಂಜಾಗ್ರತಾ ಕ್ರಮಗಳು ನಗರದವರಿಗೆ ಏಕೆ ಬರುತ್ತಿಲ್ಲ

ಮಹಾನಗರ ಪಾಲಿಕೆ ವತಿಯಿಂದ ಮನೆ ಬಾಗಿಲಿಗೆ ಫುಡ್ ಸಪ್ಲೈ

ಶಿವಮೊಗ್ಗ, ಮಾರ್ಚ್ 26  : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊಟೇಲ್ ವ್ಯವಸ್ಥೆ ಅಸ್ತವ್ಯಸ್ತವಾಗಿರುವ ಹಿನ್ನೆಲೆಯಲ್ಲಿ, ಪಾಲಿಕೆ ವತಿಯಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಮಾ.27ರಿಂದ ಆಹಾರ ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ.

ಗ್ರಾಹಕರು ದೂರವಾಣಿ ಮೂಲಕ ಆರ್ಡರ್ ಮಾಡಿದರೆ ಒಂದು ಗಂಟೆಯ ಒಳಗಾಗಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ಮನೆ ಬಾಗಿಲಿಗೆ ಬರಲಿದೆ. ಮೆನು ಇಂತಿದೆ.

ಬೆಳಗಿನ ಉಪಾಹಾರ: 2ಇಡ್ಲಿ-1 ವಡೆ ರೂ. 40, ಉಪ್ಪಿಟ್ಟು-ರೂ.30, ಸೆಟ್‍ದೋಸೆ(1 ಪ್ಲೇಟ್) ರೂ.50, ರೈಸ್‍ಬಾತ್ ವಿತ್ ಚಟ್ನಿ ರೂ. 50.

ಮಧ್ಯಾಹ್ನದ ಊಟ: ಚಪಾತಿ, ಪಲ್ಯ, ವೈಟ್‍ರೈಸ್, ಸಾಂಬಾರ್, ಪಾಪಡ್, ಮಜ್ಜಿಗೆ- ರೂ. 80, ಮಿನಿಮೀಲ್ಸ್ ರೂ. 40, ರೈಸ್ ಬಾತ್ ವಿತ್ ಸಾಗು ಹಾಗೂ ಮೊಸರನ್ನ ವಿತ್ ಉಪ್ಪಿನಕಾಯಿ ರೂ.60.

ರಾತ್ರಿ ಊಟ: 2 ಚಪಾತಿ ವಿತ್ ಸಾಗು ರೂ. 50, ರೈಸ್ ಬಾತ್ ವಿತ್ ಸಾಗು ಹಾಗೂ ಮೊಸರನ್ನ ವಿತ್ ಉಪ್ಪಿನಕಾಯಿ ರೂ.60.

ಆಸಕ್ತ ಗ್ರಾಹಕರು ತಮ್ಮ ಅವಶ್ಯಕತೆಗನುಗುಣವಾಗಿ ಬೇಡಿಕೆಯನ್ನು ಕನಿಷ್ಠ 1 ಗಂಟೆ ಮೊದಲು ನೀಡಿದಲ್ಲಿ ತಮ್ಮ ಮನೆಗಳಿಗೆ ಸರಬರಾಜು ಮಾಡಲಾಗುವುದು. ಬೆಳಗ್ಗಿನ ಉಪಾಹಾರದ ಅವಧಿ ಬೆಳಿಗ್ಗೆ 7.30ರಿಂದ 10ರವರೆಗೆ, ಮಧ್ಯಾಹ್ನದ ಊಟ 12.30ರಿಂದ 3ರವರೆಗೆ ಮತ್ತು ರಾತ್ರಿ ಊಟ 7.30ರಿಂದ 8.30ರವರೆಗೆ ಲಭ್ಯವಿರುತ್ತದೆ. ಬಿಲ್‍ನ ಮೊತ್ತವನ್ನು ಪೇಟಿಯಂ, ಗೂಗಲ್‍ಪೇ ಅಥವಾ ನಗದು ರೂಪದಲ್ಲಿ ಸಂದಾಯ ಮಾಡಬಹುದಾಗಿದೆ.

ಆರ್ಡರ್ ನೀಡಲು 9972593256 ಅಥವಾ 7829678298 ಸಂಪರ್ಕಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ತಿಳಿಸಿದ್ದಾರೆ.

ಹಾಪ್‍ಕಾಮ್ಸ್‍ನಿಂದ ಪ್ರತಿ ವಾರ್ಡ್‍ಗಳಲ್ಲ್ಲಿ ಹಣ್ಣು ತರಕಾರಿ ಸರಬರಾಜು

ಶಿವಮೊಗ್ಗ, ಮಾರ್ಚ್ 26  : ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನನಿತ್ಯ ಹಣ್ಣು ತರಕಾರಿಗಳಿಗೆ ಕೊರತೆಯಾಗದಂತೆ ಕ್ರಮಕೈಗೊಳ್ಳಲು ಹಾಪ್‍ಕಾಮ್ಸ್ ಮಳಿಗೆ ಹಾಗೂ ವಾಹನಗಳ ಮೂಲಕ ಪ್ರತಿ ವಾರ್ಡ್‍ಗೂ ಸರಬರಾಜು ಮಾಡಲಾಗುತ್ತಿದೆ. ಗ್ರಾಹಕರು ಹಣ್ಣು, ತರಕಾರಿ ಖರೀದಿಸುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಹಾಗೂ ರೈತ ಬಾಂಧವರು ತಾವು ಬೆಳೆದ ಹಣ್ಣು, ತರಕಾರಿಗಳನ್ನು ಹಾಪ್‍ಕಾಮ್ಸ್‍ಗೆ ನೀಡುವಂತೆ  ಜಿಲ್ಲಾ ಹಾಪ್‍ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಂಸ, ತರಕಾರಿಗೆ ಮುಗಿಬಿದ್ದ ಶಿವಮೊಗ್ಗದ ಜನರು

ಶಿವಮೊಗ್ಗ: ಮಾಂಸ, ತರಕಾರಿಗೆ ಇಂದೂ ಕೂಡ ಜನರು ಮುಗಿಬೀಳುತ್ತಿದ್ದದು ಕಂಡು ಬಂದಿತು.

ಬೆಳಿಗ್ಗಿನಿಂದಲೇ ಜನರು ಹಾಲು, ತರಕಾರಿಗಾಗಿ ಮನೆಯಿಂದ ಹೊರಗೆ ಬಂದು ಅಲ್ಲಲ್ಲಿ ಕದ್ದುಮುಚ್ಚಿ ಮಾರಾಟ ಮಾಡುತ್ತಿದ್ದ ತರಕಾರಿಗಳನ್ನು ಅವಸರ ಅವಸರವಾಗಿ ಕೊಳ್ಳುತ್ತಿದ್ದುದು ಕಂಡುಬಂದಿತು. ಪೊಲೀಸರ ಎಚ್ಚರಿಕೆಯ ನಡುವೆಯೂ ಜನರು ಹೆದರದೇ ಹಾಲು, ತರಕಾರಿಗಳನ್ನು ಕೊಳ್ಳುತ್ತಿದ್ದರು.

ನಗರದ ಒಳಬಡಾವಣೆಗಳಲ್ಲಿ ತರಕಾರಿ ಮಾರಾಟ ಹೆಚ್ಚಾಗಿತ್ತು. ಪೊಲೀಸರು ಒಂದು ಕಡೆಯಿಂದ ಅವರನ್ನು ಎತ್ತಂಗಡಿ ಮಾಡಿದರೆ ಅವರು ಮತ್ತೊಂದು ಕಡೆ ಬಂದು ತರಕಾರಿ ಮಾರುತ್ತಿದ್ದರು. ಕೆಲವರು ತರಕಾರಿ ಕೊಳ್ಳಲು ಬರುವ ಗ್ರಾಹಕರನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ಮತ್ತು ಗೆರೆಯನ್ನು ಹಾಕುವ ಮೂಲಕ ಅಂತರ ಕಾಪಾಡುವಂತೆ ಮತ್ತು ಮಾಸ್ಕ್ ಇದ್ದವರಿಗೆ ಮಾತ್ರ ತರಕಾರಿ ಎಂದು ಹೇಳುವ ಮೂಲಕ ಒಂದಿಷ್ಟು ನಿಯಮಗಳನ್ನು ಪಾಲಿಸುತ್ತಿದ್ದುದು ಕೂಡ ಕಂಡುಬಂದಿತು.

ಮಾಂಸ ಖರೀದಿಗಾಗಿ ಮುಗಿಬಿದ್ದ ಜನರು:

ನಿನ್ನೆ ತಾನೇ ಯುಗಾದಿ ಮುಗಿಸಿದ ಜನರು ಇಂದು ವರ್ಷದತೊಡಕನ್ನು ನೆಪವಾಗಿಟ್ಟುಕೊಂಡು ಮಾಂಸದ ಅಂಗಡಿಗಳ ಮುಂದೆ ಮಾಂಸಕ್ಕಾಗಿ ಮುಗಿಬಿದ್ದರು. ವಿನೋಬನಗರ, ಮೀನುಮಾರುಕಟ್ಟೆ, ದುರ್ಗಿಗುಡಿ, ಕೆ.ಆರ್.ಪುರಂ ಇನ್ನಿತರೆ ಕಡೆಗಳಲ್ಲಿ ಮಾಂಸದ ಅಂಗಡಿಗಳು ತೆರೆದಿದ್ದೇ ಸಾಕು. ಮಾಂಸಕ್ಕಾಗಿ ಹೋರಾಟವನ್ನೇ ಮಾಡಿದರು. ಇದನ್ನು ಬಳಸಿಕೊಂಡ ಕೆಲವು ಮಾಂಸದ ಅಂಗಡಿ ಮಾಲೀಕರು ಬೆಲೆಯನ್ನು 700 ರಿಂದ 1000 ರೂ.ತನಕ ಹೆಚ್ಚಿಸಿ ಮಾರಾಟ ಮಾಡುತ್ತಿದ್ದುದು ಕಂಡುಬಂದಿತು.

ಕೆಲವು ಕಡೆಗಳಲ್ಲಿ ಎಂದಿನಂತೆ ಅಂತರ ಕಾಪಾಡಿಕೊಳ್ಳಲು ಗೆರೆ ಹಾಕಿ ಪಟ್ಟಿಯ ಒಳಗೆ ನಿಂತು ಖರೀದಿಸುವಂತೆ ಹೇಳುತ್ತಿದ್ದರು. ಇದರ ನಡುವೆಯೂ ಹಿತ್ತಲಬಾಗಿಲುಗಳಿಂದ ಬಂದು ಗೋಡೆಗಳನ್ನು ಹತ್ತಿ ಮಾಂಸ ಖರೀದಿಸುತ್ತಿದ್ದುದು ಕೂಡ ಸಾಮಾನ್ಯವಾಗಿತ್ತು. ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಮಾಂಸ ಇದ್ದರೂ ಕೂಡ ಮಾರಾಟಕ್ಕೆ ಮಾತ್ರ ಪೊಲೀಸರು ಅವಕಾಶ ಕೊಡುತ್ತಿರಲಿಲ್ಲ. ಕಾರಣ ಸಾಲಾಗಿ ನಿಂತು ತೆಗೆದುಕೊಂಡರೆ ಸುಮ್ಮನಿರುತ್ತಿದ್ದರೋ ಏನೋ. ಆದರೆಒಂದೇ ಬಾರಿಗೆ ನೂರಾರು ಜನರ ಮೈಮೇಲೆ ಬಿದ್ದು ಮಾಂಸ ಕೊಳ್ಳುತ್ತಿದ್ದರೆ ಅವರಾದರೂ ಏನು ಮಾಡಬೇಕು. ಒಟ್ಟಿನಲ್ಲಿ ಮಾಂಸ ಕೊಳ್ಳುವ ದೃಶ್ಯ ಮಾತ್ರ ಕಂಡು ಬಂದಿತು.

ದಿನಸಿ ಅಂಗಡಿಗಳು ಕೂಡ ಎಂದಿನಂತೆ ತೆರೆದಿದ್ದವು. ಆದರೆ ಅಲ್ಲಿಯೂ ಕೂಡ ನೂಕುನುಗ್ಗಲಾಗಿತ್ತು. ಕೆಲವು ಅಧಿಕಾರಿಗಳು ಬಾಗಿಲು ಮುಚ್ಚಿಸುತ್ತಿದ್ದರೆ, ಇನ್ನು ಕೆಲವರು ಸರತಿ ಸಾಲಿನಲ್ಲಿ ನಿಲ್ಲಿಸಿ ಕೊಡು ಎನ್ನುತ್ತಿದ್ದರು.ಹೀಗೆ ಅಗತ್ಯ ಸೇವೆಗಳ ಮಾರಾಟದಲ್ಲಿಯೂ ಕೂಡ ಗೊಂದಲ ಕಂಡುಬಂದಿತು.

ಇನ್ನುಳಿದಂತೆ ಮೆಡಿಕಲ್ ಶಾಪ್‍ಗಳಲ್ಲಿಯೂ ಕೂಡ ಜನರಿದ್ದುದು ಕಂಡುಬಂದಿತು. ಬೆಳಿಗ್ಗೆ 5 ಗಂಟೆಗೆ ಎದ್ದ ಜನರು ಎಂದಿನಂತೆ ಪಾರ್ಕ್‍ನಲ್ಲಿ ವಾಯುವಿಹಾರ ಮತ್ತು ವ್ಯಾಯಾಮ ಮಾಡುತ್ತಿದ್ದುದು ಕೂಡ ಕಂಡುಬಂದಿತು. ಜೊತೆಗೆ ಪುಟ್ಟ ಪುಟ್ಟ ಮಕ್ಕಳು ಸಹ ಆಟವಾಡುವುದು ಸಹ ಇತ್ತು.

ಇನ್ನು ಮಧ್ಯಾಹ್ನದವರೆಗೂ ಸಾರ್ವಜನಿಕರು ತಮ್ಮ ದ್ವಿಚಕ್ರ ಅಥವಾ ಕಾರುಗಳಲ್ಲಿ ಅಗತ್ಯ ವಸ್ತುಗಳ ಖರೀದಿಸಲು ಓಡಾಡುತ್ತಲೇ ಇದ್ದರು. ಜನರು ವಿರಳವಾಗಿದ್ದುದು ಬಿಟ್ಟರೆ ಅಂತಹ ಬಿಗಿ ನಿಲುವು ಏನೂ ಕಂಡುಬರಲಿಲ್ಲ. ಇಷ್ಟರ ನಡುವೆಯೂ ಪೊಲೀಸರು ಅನಗತ್ಯವಾಗಿ ಓಡಾಡುವವರಿಗೆ ಆಗಾಗ ಲಾಠಿ ರುಚಿಯನ್ನು ತೋರಿಸುತ್ತಿರುವುದು ಕೂಡ ಕಂಡುಬಂದಿತು.

ಹಳ್ಳಿಯವರ ಮುಂಜಾಗ್ರತಾ ಕ್ರಮಗಳು ನಗರದವರಿಗೆ ಏಕೆ ಬರುತ್ತಿಲ್ಲ

ಶಿವಮೊಗ್ಗ: ಕರೋನಾದಿಂದ ಹಳ್ಳಿಗಳು ಮುಕ್ತವೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸದ್ಯಕ್ಕೆ ಹಳ್ಳಿಗರು ಈ ಬಗ್ಗೆ ತಲೆಕೆಡಿಸಿಕೊಳ್ಳದೇ ಯುಗಾದಿ ಹಬ್ಬದಲ್ಲಿ ತೊಡಗಿದ್ದಾರೆ.

ಆದರೂ ತಮ್ಮ ತಮ್ಮ ಹಳ್ಳಿಗಳಲ್ಲಿ ತಾವೇ ನಿರ್ಬಂಧ ಹೇರಿಕೊಳ್ಳತೊಡಗಿದ್ದಾರೆ. ಆದರೆ ಬೆಂಗಳೂರು, ಹೈದರಾಬಾದ್, ಬಾಂಬೆ ಮುಂತಾದ ಅನೇಕ ಕಡೆಗಳ ಬಹುರಾಷ್ಟ್ರಿಯ ಕಂಪೆನಿಗಳಲ್ಲಿ  ಕೆಲಸ ಮಾಡುತ್ತಿದ್ದ ಮಕ್ಕಳು ಮನೆಗೆ ಬಂದಿದ್ದಾರೆ. ಸದ್ಯಕ್ಕೆ ಅವರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಯಾವ ಕಾಯಿಲೆಯ ಲಕ್ಷಣಗಳೂ ಇಲ್ಲದಿರಬಹುದು. ಆದರೆ ಬಹುರಾಷ್ಟ್ರೀಯ ಕಂಪೆನಿಗಳಿಂದ ಬಂದಿರುವುದರಿಂದ ಅವರನ್ನು ಪ್ರಶ್ನಾರ್ಥಕವಾಗಿಯೇ ಕೆಲವರು ನೋಡುತ್ತಿದ್ದಾರೆ.

ಇನ್ನು ಕೆಲವು ಗ್ರಾಮದವರು ರಸ್ತೆಗೆ ಬೇಲಿ ಹಾಕಿ ಹೊರಗಡೆಯಿಂದ ಯಾರೂ ಬರದಂತೆ ಮತ್ತು ಒಳಗಡೆಯಿಂದ ಯಾರೂ ಹೊರಹೋಗದಂತೆ ತಡೆಗಟ್ಟುತ್ತಿದ್ದಾರೆ. ಹಳ್ಳಿಯವರ ಮುಂಜಾಗ್ರತಾ ಕ್ರಮಗಳು ನಗರದವರಿಗೆ ಏಕೆ ಬರುತ್ತಿಲ್ಲ ಎಂದು ಸಾರ್ವಜನಿಕರೇ ಮಾತನಾಡಿಕೊಳ್ಳುವಂತಾಗಿದೆ.

 

 

 

 

Related posts

ಯಾರು ಇತರರಿಗಾಗಿ ಬದುಕುತ್ತಾನೋ ಅವನದೆ ನಿಜವಾದ ಬದುಕು

Times fo Deenabandhu

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

Times fo Deenabandhu

ಯಕ್ಷಗಾನ ಕಲಾವಿದ ಸತೀಶ್ ಶೆಟ್ಟಿ ಪಟ್ಲಾ ಅವಮಾನ ಖಂಡಿಸಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಪ್ರತಿಭಟನೆ

Times fo Deenabandhu