Times of Deenabandhu
  • Home
  • ಪ್ರಧಾನ ಸುದ್ದಿ
  • ಕೊರೊನಾದಿಂದ ಪುರುಷರು, ವೃದ್ಧರಿಗೆ ಹೆಚ್ಚು ಅಪಾಯ, ಎಚ್ಚರದ ಅಗತ್ಯತೆ ಹೇಳಿದ ವೈದ್ಯರು
ದೇಶ ಪ್ರಧಾನ ಸುದ್ದಿ ಮುಖ್ಯಾಂಶಗಳು

ಕೊರೊನಾದಿಂದ ಪುರುಷರು, ವೃದ್ಧರಿಗೆ ಹೆಚ್ಚು ಅಪಾಯ, ಎಚ್ಚರದ ಅಗತ್ಯತೆ ಹೇಳಿದ ವೈದ್ಯರು

Spread the love

ಹೊಸದಿಲ್ಲಿ: ದೇಶಾದ್ಯಂತ ಕೊರೊನಾ ವೈರಸ್‌ನ ಆರ್ಭಟ ಜೋರಾಗಿದ್ದು, ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆ ಕೊರೊನಾ ನಿಯಂತ್ರಣಕ್ಕೆ ಭಾರತದಲ್ಲಿ ಮೂರು ವಾರಗಳ ಲಾಕ್‌ಡೌನ್‌ ಘೋಷಿಸಲಾಗಿದೆ. ಇದುವರೆಗೂ ದೇಶದಲ್ಲಿ ಕೊರೊನಾ ವೈರಸ್‌ನಿಂದ ಕನಿಷ್ಠ 10 ಜನ ಮೃತಪಟ್ಟಿದ್ದು, 606 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆದರೆ, ಭಾರತದಲ್ಲಿ ಕೊರೊನಾ ವೈರಸ್‌ನಿಂದ ಮೃತಪಟ್ಟವರನ್ನು ಗಮನಿಸಿದರೆ, ಒಂದು ಸಾಮಾನ್ಯ ವಿಷಯ ಮೇಲ್ನೋಟಕ್ಕೆ ಕಂಡುಬರುತ್ತದೆ. ಕೊರೊನಾದಿಂದ ಮೃತಪಟ್ಟವರಲ್ಲಿ ಹೆಚ್ಚಿನವರು ಪುರುಷರು ಆಗಿದ್ದು, ಬಿಹಾರದಲ್ಲಿ ಮೃತಪಟ್ಟ ಕೊರೊನಾ ಸೋಂಕಿತನನ್ನು ಹೊರತುಪಡಿಸಿದರೆ 50 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರೆ ಇದುವರೆಗೂ ಭಾರತದಲ್ಲಿ ಮೃತಪಟ್ಟಿದ್ದಾರೆ ಎಂಬುದು ಗೊತ್ತಾಗುತ್ತದೆ. ಅಧ್ಯಯನ ವರದಿಗಳು ಸಹ ಕೊರೊನಾ ವೈರಸ್‌ ಮಕ್ಕಳು, ಯುವಕರಿಗಿಂತ ವೃದ್ಧರಲ್ಲಿ ಹೆಚ್ಚಿನ ಜನರಿಗೆ ಕಾಣಿಸಿಕೊಳ್ಳುತ್ತದೆ. ಮತ್ತು ಮಹಿಳೆಯರಿಗಿಂತ ಹೆಚ್ಚು ಪುರುಷರಲ್ಲಿ ಕಂಡು ಬರುತ್ತದೆ ಎಂದು ಹೇಳಿವೆ. ಇದುವರೆಗೂ ಮೃತಪಟ್ಟ 10 ಕೊರೊನಾ ಸೋಂಕಿತರಲ್ಲಿ ದೆಹಲಿ ಮಹಿಳೆಯನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ಪುರುಷರು ಎಂಬುದನ್ನು ಗಮನಿಸಬೇಕಾಗಿದೆ.
ಕೊರೊನಾ ವೈರಸ್‌ ಪತ್ತೆಯಾದ ಚೀನಾದಲ್ಲೂ ಕೂಡ ಇದೇ ರೀತಿಯಲ್ಲಿ ಸಾವುಗಳು ಆಗಿರುವುದು ವರದಿಯಾಗಿದೆ. ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನಿರ್ದೇಶಕ ಡಾ.ರಣ್‌ದೀಪ್ ಗುಲೇರಿಯಾ, ಇಲ್ಲಿವರೆಗಿನ ಅಂಕಿ-ಸಂಖ್ಯೆಗಳನ್ನು ವೈದ್ಯಕೀಯ ಸಮುದಾಯ ಅಧ್ಯಯನ ಮಾಡುತ್ತಿದ್ದು, ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ. ಭಾರತದಲ್ಲೂ ಒಬ್ಬರನ್ನು ಹೊರತುಪಡಿಸಿದರೆ, ಇದುವರೆಗೂ ಕೊರೊನಾ ವೈರಸ್‌ನಿಂದ ಮೃತಪಟ್ಟವರು ಪುರುಷರು ಆಗಿದ್ದಾರೆ. ಆದರೆ, ಈ ತೀರ್ಮಾನಕ್ಕೆ ಬರಲು ಹೆಚ್ಚಿನ ದತ್ತಾಂಶಗಳನ್ನು ಅಧ್ಯಯನ ಮಾಡಬೇಕಾಗುತ್ತದೆ ಎಂದು ಡಾ.ಗುಲೇರಿಯಾ ಹೇಳುತ್ತಾರೆ.
ಈ ಬಗ್ಗೆ, ಗುರುಗ್ರಾಮ್‌ನ ಪ್ಯಾರಾಸ್ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ಡಾ.ಪಿ.ವೆಂಕಟ್ ಕೃಷ್ಣನ್ ಮಾತನಾಡಿದ್ದು, ಹೊಸ ವೈರಸ್ ದೇಶವೊಂದಕ್ಕೆ ಪ್ರವೇಶಿಸುವುಗ ವಯಸ್ಸಾದವರು ಹೆಚ್ಚಾಗಿ ಸಾವನ್ನಪ್ಪುತ್ತಾರೆ. ಅದು ಈಗ ಕೊರೊನಾ ವಿಷಯದಲ್ಲೂ ಮತ್ತೆ ಪುನರಾವರ್ತನೆಯಾಗಿದೆ ಎಂದು ಹೇಳಿದರು. ವೈರಸ್‌ನಿಂದ ಸಾವಿಗೆ ತುತ್ತಾಗುವ ವೃದ್ಧರಲ್ಲಿ ಅಪಾಯಕಾರಿ ಅಂಶಗಳು ಹೆಚ್ಚಿರುತ್ತವೆ. ಜನ ಬಹಳ ವರ್ಷ ಬದುಕಿರುತ್ತಾರೆ. ಆದರೆ, ಅವರ ಆರೋಗ್ಯದಲ್ಲಿ ಹಲವು ಸಮಸ್ಯೆಗಳು ಇರುತ್ತವೆ. ಇದರೊಂದಿಗೆ ಸಾಂಕ್ರಾಮಿಕವಲ್ಲದ ಕಾಯಿಲೆಗಳು (ಎನ್‌ಸಿಡಿ) ಅಪಾಯವನ್ನು ಹೆಚ್ಚಿಸುತ್ತವೆ. ಆದ್ದರಿಂದ, ವಯಸ್ಸಾದವರು ಈ ಸಂದರ್ಭದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ತಮ್ಮ ಔಷಧಿಗಳನ್ನು ತೆಗೆದುಕೊಳ್ಳುತ್ತಿರಬೇಕು ಎಂದು ಡಾ.ಪಿ.ವೆಂಕಟ್‌ಕೃಷ್ಣನ್‌ ಹೇಳುತ್ತಾರೆ.
ಮೇಲಿನ ಇಬ್ಬರು ವೈದ್ಯರಂತೆಯೇ ಗಾಜಿಯಾಬಾದ್‌ನ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಶ್ವಾಸತಜ್ಞೆ ಡಾ.ಗ್ಯಾನ್ ಭಾರತಿ ಮಾತನಾಡಿದ್ದು, ವೃದ್ಧಾಶ್ರಮದಲ್ಲಿ ವಾಸಿಸುವಂತಹ ವೃದ್ಧರಿಗೆ ಆರೋಗ್ಯ ಪ್ರೋಟೋಕಾಲ್‌ ಅನುಸರಿಸುವ ಮೂಲಕ ವೈರಸ್‌ ಬರುವುದನ್ನು ತಡೆಯಬಹುದು. ಅವರ ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ಫೋನ್‌ನಲ್ಲಿ ಮಾತನಾಡಬೇಕು. ಸಭೆಗಳು ವೈರಸ್‌ನ ಸಂಭಾವ್ಯ ವಾಹಕಗಳು ಆಗಿರುತ್ತವೆ ಎಂಬುದನ್ನು ಗಮನಿಸಬೇಕು ಎಂದು ತಿಳಿಸಿದರು.
ವಯಸ್ಸಾದವರಿಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಸಾಮರ್ಥ್ಯ ಕಡಿಮೆಯಿರುತ್ತದೆ. ವಯೋಸಹಜ ಖಾಯಿಲೆಗಳಾದ ಹೃದಯ, ಶ್ವಾಸಕೋಶ ಅಥವಾ ಮೂತ್ರಪಿಂಡದಂತಹ ಸಮಸ್ಯೆಗಳು ಹೆಚ್ಚಾಗಿರುತ್ತವೆ. ಅವರಲ್ಲಿ ಅನೇಕರಿಗೆ ಏನು ಮಾಡಬೇಕು ಮತ್ತು ಮಾಡಬಾರದು ಎಂಬ ಮಾಹಿತಿ ಗೊತ್ತಿರುವುದಿಲ್ಲ. ವಯಸ್ಸಾದವರು ತಮ್ಮ ವಾರ್ಷಿಕ ತಪಾಸಣೆಗಾಗಿ ವೈದ್ಯರೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಡಾ.ಗ್ಯಾನ್‌ ಭಾರತಿ ಹೇಳಿದ್ದಾರೆ.
ಮೊದಲ ಸಾವು ವರದಿಯಾಗಿದ್ದು ಕರ್ನಾಟಕದ ಕಲಬುರಗಿಯಲ್ಲಿ. ಮಾರ್ಚ್‌ 10 ರಂದು 76 ವರ್ಷದ ವ್ಯಕ್ತಿಯೊಬ್ಬ ಅಧಿಕ ರಕ್ತದೊತ್ತಡ, ಆಸ್ತಮಾ ಮತ್ತು ಮಧುಮೇಹದಂತಹ ಕಾಯಿಲೆಯಿಂದ ಮೃತಪಟ್ಟಿದ್ದ. ಇವುಗಳ ಜೊತೆ ವೃದ್ಧನಲ್ಲಿ ಕೊರೊನಾ ವೈರಸ್‌ ಇರುವುದು ದೃಢವಾಗಿತ್ತು. ಅದೇ ರೀತಿ ಮಾರ್ಚ್‌ 13 ರಂದು ದೆಹಲಿಯಿಂದ ಎರಡನೇ ಸಾವಿನ ವರದಿಯಾಯಿತು. 68 ವರ್ಷದ ಮಹಿಳೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಕಾರಣದಿಂದ ಸಾವನ್ನಪ್ಪಿದ್ದಳು. ಸ್ವಿಡ್ಜರ್‌ಲ್ಯಾಂಡ್‌ ಮತ್ತು ಇಟಲಿ ಪ್ರಯಾಣ ಮುಗಿಸಿ ಬಂದಿದ್ದ ಮಗನಿಂದ ಮಹಿಳೆಗೆ ಕೊರೊನಾ ಸೋಂಕು ತಗುಲಿತ್ತು. ಇಲ್ಲಿಯೂ ಮಗನಿಂದ ವೈರಸ್‌ ಮಹಿಳೆಗೆ ತಗುಲಿರುವುದನ್ನು ಗಮನಿಸಬೇಕು.
ಮಾರ್ಚ್ 22ರಂದು ಪಾಟ್ನಾದಲ್ಲಿ ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿದ್ದ 35 ವರ್ಷದ ರೋಗಿಯೊಬ್ಬರು ಮೃತಪಟ್ಟಿದ್ದರು. ಜೊತೆಗೆ ಅವರಲ್ಲಿ ಕೊರೊನಾ ವೈರಸ್‌ ಇರುವುದು ದೃಢಪಟ್ಟಿತ್ತು. ಮುಂಗರ್ ಜಿಲ್ಲೆಗೆ ಸೇರಿದ ವ್ಯಕ್ತಿ ಕತಾರ್‌ನಿಂದ ಮರಳಿದ್ದ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು, ಮಹಾರಾಷ್ಟ್ರದಲ್ಲಿ ಒಂದೇ ವಾರದಲ್ಲಿ ಕನಿಷ್ಠ 3 ಜನ ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಇದರಲ್ಲಿ ಒಬ್ಬರಿಗೆ 63 ವರ್ಷ, ಒಬ್ಬರಿಗೆ 65 ವರ್ಷ, ಮತ್ತೊಬ್ಬರು 60 ವರ್ಷ ವಯಸ್ಸಿನವರಾಗಿದ್ದರು. ಪ್ರಾಣ ಕಳೆದುಕೊಂಡ ಎಲ್ಲರು ರಕ್ತದೊತ್ತಡ, ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳಂತಹ ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು.
ಇನ್ನು, ಜರ್ಮನಿಯಿಂದ ಹಿಂದಿರುಗಿದ್ದ 72 ವರ್ಷದ ವ್ಯಕ್ತಿಯೊಬ್ಬರು ಕೊರೊನಾ ವೈರಸ್‌ನಿಂದ ಪಂಜಾಬ್‌ನಲ್ಲಿ ಮೃತಪಟ್ಟಿರುವುದು ವರದಿಯಾಗಿದೆ. ಇದರ ಜೊತೆ, ಕೊಲ್ಕತ್ತಾದ 55 ವರ್ಷದ ವ್ಯಕ್ತಿಯೊಬ್ಬರು ಕೋವಿಡ್‌-19 ಕಾರಣದಿಂದ ಸೋಮವಾರ ಸಾವನ್ನಪ್ಪಿದ್ದು, ಅವರು ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಅಮೆರಿಕದಿಂದ ಮರಳಿದ 69 ವರ್ಷದ ಟಿಬೆಟಿಯನ್ ವ್ಯಕ್ತಿ ಸೋಮವಾರ ನಿಧನರಾದರು. ಇನ್ನು, ಪಶ್ಚಿಮ ಬಂಗಾಳದಲ್ಲಿ 57 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. 10 ಸಾವುಗಳಲ್ಲಿ ದೆಹಲಿ ಮಹಿಳೆಯನ್ನು ಹೊರತುಪಡಿಸಿದರೆ, ಉಳಿದ ಎಲ್ಲರೂ ಪುರುಷರೇ ಎಂಬುದು ಗಮನಿಸಬೇಕಾದ ಅಂಶ.


Spread the love

Related posts

ಉಡುಪಿಯಲ್ಲಿ ಕೊರೋನಾ ಶಂಕೆ: ಮೂವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ

Times fo Deenabandhu

ವಿಶ್ವನಾಥ್‌ ಹೇಳಿದ ನಿಖಿಲ್‌ ನಿಶ್ಚಿತಾರ್ಥದ ಹಾರದ ಕತೆ!

ತನ್ನದೇ ವಿವಾಹಕ್ಕೆ ಬರಲಾಗದೆ ವೀರ ಯೋಧರೊಬ್ಬರ ವಿವಾಹ ಮುಂದೂಡಿಕೆ

Times fo Deenabandhu
felis quis Praesent ut Lorem justo in sed mi, ipsum porta. ut