Times of Deenabandhu
  • Home
  • ಜಿಲ್ಲೆ
  • ಸಾರ್ವಜನಿಕರು ಕೊರೋನಾ ವೈರಸ್ ವಿರುದ್ದ ಸ್ವಯಂ ನಿರ್ಬಂಧವನ್ನು ಕೈಗೊಳ್ಳಬೇಕು: ಸಿ.ಟಿ.ರವಿ
ಚಿಕ್ಕಮಗಳೂರು ಜಿಲ್ಲೆ

ಸಾರ್ವಜನಿಕರು ಕೊರೋನಾ ವೈರಸ್ ವಿರುದ್ದ ಸ್ವಯಂ ನಿರ್ಬಂಧವನ್ನು ಕೈಗೊಳ್ಳಬೇಕು: ಸಿ.ಟಿ.ರವಿ

ಚಿಕ್ಕಮಗಳೂರು :  ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ಅನ್ನು ತಡೆಗಟ್ಟಲು ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸ್ವಯಂ ನಿರ್ಬಂಧವನ್ನು ಹಾಕಿಕೊಳ್ಳಬೇಕು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ.ರವಿ ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕೊರೋನಾ ವೈರಸ್ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಈವರೆಗೂ ಕೊರೋನಾ ವೈರಸ್ ಪ್ರಕರಣ ಕಂಡುಬಂದಿಲ್ಲ. ಆದರೆ ಲಕ್ಷಣಗಳುಳ್ಳ ೪ ಪ್ರಕರಣಗಳು ದಾಖಲಾಗಿದ್ದು, ರಕ್ತ ಪರೀಕ್ಷೆಯ ಮೂಲಕ ಕೊರೋನಾ ವೈರಸ್ ಇಲ್ಲದಿರುವುದು ದೃಢಪಟ್ಟಿದೆ ಹಾಗೂ ೧೨೮ ಜನರನ್ನು ಪರೀಕ್ಷೆ ಮಾಡಲಾಗಿದೆ. ಈ ವೈರಸ್ ಹರಡದಂತೆ ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಸಿನಿಮಾ ಹಾಲ್, ಕೋಚಿಂಗ್ ಸೆಂಟರ್, ಕ್ರೀಡಾಂಗಣ, ಜಾತ್ರೆ, ಸಭೆ-ಸಮಾರಂಭ,  ಸಂತೆ, ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರು ಹೆಚ್ಚಾಗಿ ಸೇರುವುದರಿಂದ ಅಂತಹ ಸ್ಥಳಗಳನ್ನು ನಿರ್ಬಂದಿಸಿ, ಅವಶ್ಯಕತೆ ಇರುವ ಕಡೆ ೫ ಜನಕ್ಕಿಂತ ಹೆಚ್ಚು ಜನರು ಸೇರದಂತೆ ಕ್ರಮವಹಿಸಬೇಕು ಹಾಗೂ ಸಾರ್ವಜನಿಕರು ಸ್ವಯಂ ನಿರ್ಬಂಧಗಳನ್ನು ಹಾಕಿಕೊಂಡು ಎಚ್ಚರದಿಂದ ಇರಬೇಕು ಎಂದು ನಿರ್ದೇಶಿಸಿದರು.
ಸಾರ್ವಜನಿಕ ಶೌಚಾಲಯಗಳಲ್ಲಿ ಸ್ಯಾನಿಟೈಸರ್‌ಗಳನ್ನು ಬಳಸಬೇಕು. ನಗರ ಸಭೆಯವರು ಆಗ್ಗಿಂದಾಗೆ ಶೌಚಾಲಯಗಳ್ನು ಶುಚಿಗೊಳಿಸಬೇಕು ನಗರಗಳಲ್ಲಿ ಬಾರ್, ರೆಸ್ಟೋರೆಂಟ್ ಹಾಗೂ ಹೋಂಸ್ಟೇಗಳನ್ನು ನಿರ್ಬಂಧಿಸಬೇಕು ಮತ್ತು ನಗರಸಭೆ, ಟಿ.ಎಂ.ಸಿ ಮತ್ತು ಸಿ.ಎಂ.ಸಿ ಗಳು ಒಂದು ವಾರಗಳ ಕಾಲ ಬೀದಿ ಬದಿ ತಿಂಡಿ ಅಂಗಡಿಗಳನ್ನು ಮುಚ್ಚಿಸಿ ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.
ಹೊರ ದೇಶ, ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ. ಚೆಕ್ ಪೋಸ್ಟ್‌ಗಳಲ್ಲಿ ಬೇರೆ ರಾಜ್ಯಗಳಿಂದ ಬರುವ ವಾಹನಗಳನ್ನು ತಪಾಸಣೆಗೊಳಪಡಿಸಬೇಕು. ಧಾರ್ಮಿಕ ಸ್ಥಳಗಳಲ್ಲಿ ನಡೆಯುವ ಪೂಜೆ, ಸಮಾರಂಭಗಳನ್ನು ಮುಂದೂಡಿ ಸಾರ್ವಜನಿಕರು ಸೇರುವುದನ್ನು ತಡೆಗಟ್ಟಬೇಕು. ರಾಜ್ಯದಲ್ಲಿ ಅಫಿಶಿಯಲ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ಮಾಡಬೇಕು. ಕಾಲ ಕಾಲಕ್ಕೆ ಕೊಡುವ ಸೂಚನೆಯನ್ನು ನಾವು ಪಾಲಿಸಬೇಕು ಎಂದರು.
ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೂಡ ಚಿಕಿತ್ಸಾ ಸೌಲಭ್ಯಗಳನ್ನು ಅಳವಡಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ೧೦೭೭, ೧೧೨, ೧೦೪ ಸಂಖ್ಯೆಯ ತುರ್ತು ಸಹಾಯವಾಣಿ ಒದಗಿಸಲಾಗಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುವ ಸೌಲಭ್ಯವನ್ನು ನೀಡಲಾಗಿದೆ. ಆರೋಗ್ಯ ಇಲಾಖೆ  ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಬೇಕು. ಮುಖ್ಯವಾಗಿ ವೈದ್ಯರು ಅವಶ್ಯಕ ಜಾಗರೂಕರಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಎನ್‌ಎಸ್‌ಎಸ್, ಎನ್‌ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ಕೆಲವು ಸಂಘಟನೆಗಳು ಜನರಿಗೆ ವೈರಸ್ ಕುರಿತು ಅರಿವು ಮೂಡಿಸಿ ಕೊರೋನ ವೈರಸ್ ಜಿಲ್ಲೆಯ ಗಡಿ ತಲುಪದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಹೊರ ದೇಶಗಳಿಂದ ಜಿಲ್ಲೆಗೆ ಬಂದ ಜನರನ್ನು ಪ್ರಾಥಮಿಕ ಪರೀಕ್ಷೆಗೊಳಪಡಿಸಿ ೧೪ ದಿನಗಳ ಕಾಲ ಅಂತಹವರ ಮೇಲೆ ನಿಗಾವಹಿಸಲಾಗುತ್ತದೆ. ಜಿಲ್ಲಾ ಆಸ್ಪತ್ರೆ, ಹೆರಿಗೆ ಆಸ್ಪತ್ರೆ, ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದಲ್ಲಿ ಹೆಚ್ಚುವರಿ ಚಿಕಿತ್ಸಾ ಘಟಕಗಳು ಹಾಗೂ ಐಸ್ಯೂಲೇಷನ್ ಕೊಠಡಿಗಳನ್ನು ತೆರೆಯಲಾಗಿದೆ ಎಂದು ಸರ್ವೇಕ್ಷಣಾಧಿಕಾರಿ ಡಾ|| ಮಂಜುನಾಥ್ ತಿಳಿಸಿದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ, ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರು ಸೇರುವಂತಹ ಸ್ಥಳಗಳಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಕರಪತ್ರವನ್ನು ನೀಡುವದರ ಮೂಲಕ ಹಾಗೂ ನಗರ ಸಭೆಯಿಂದ ಧ್ವನಿವರ್ಧಕಗಳನ್ನು ಬಳಸಿ  ಕೊರೋನಾ ವೈರಸ್ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಪೂವಿತ,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಪತ್ನಿ ನಿಧನ

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಪರ ಜಿಲ್ಲಾಧಿಕಾರಿ ಡಾ. ಕುಮಾರ್ ಅವರ ಧರ್ಮಪತ್ನಿ ರಶ್ಮಿ ಕುಮಾರ್ ಅವರು ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು.
ಮೃತರು ಇಬ್ಬರು ಮಕ್ಕಳು ಮತ್ತು ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.

ಸಹಕಾರ ಸಂಘದ ಚುನಾವಣೆ ಮುಂದೂಡಿಕೆ

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಮಾರ್ಚ್ ೨೨ ರಿಂದ ೩೧ ರವರೆಗೆ ಜನ ಸೇರುವ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ನಿಗದಿಯಾಗಿರುವ ಸಹಕಾರಿ ಸಂಘಗಳ  ಆಡಳಿತ ಮಂಡಳಿ ಚುನಾವಣೆಯನ್ನು (ಮತದಾನ)ವನ್ನು ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚಿಸಿ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈತ ಮಕ್ಕಳಿಗೆ ಉಚಿತ ತರಬೇತಿ

ಚಿಕ್ಕಮಗಳೂರು : ತೋಟಗಾರಿಕೆ ಇಲಾಖೆ ವತಿಯಿಂದ ಮೂಡಿಗೆರೆ ತಾಲ್ಲೂಕಿನ ಬಿಜುವಳ್ಳಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ೨೦೨೦-೨೧ ನೇ ಸಾಲಿನಲ್ಲಿ ರೈತರ ಮಕ್ಕಳಿಗೆ ೧೦ ತಿಂಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ೨೦೨೦ ರ ಮೇ ೦೨ ರಿಂದ ೨೦೨೧ ರ ಫೆಬ್ರವರಿ ೨೮ ರವರೆಗೆ ಆಯೋಜಿಸಲಾಗಿದೆ.
ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ ೨೪ ಕೊನೆಯ ದಿನವಾಗಿದ್ದು ಏಪ್ರಿಲ್ ೨೭ ರಂದು ಸಂದರ್ಶನ ನಡೆಸಲಾಗುತ್ತದೆ.
ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಛೇರಿ ಚಿಕ್ಕಮಗಳೂರು, ಸಹಾಯಕ ತೋಟಗಾರಿಕಾ ನಿರ್ದೇಶಕರು ಕಳಸ ಹಾಗೂ ಬಿಜುವಳ್ಳಿ ತೋಟಗಾರಿಕಾ ಕ್ಷೇತ್ರ ಮತ್ತು ತರಬೇತಿ ಕೇಂದ್ರ ಮೂಡಿಗೆರೆ ಅಥವಾ ೦೮೨೬೨-೨೯೫೦೪೩, ೨೩೨೮೫೮ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು : ಚಿಕ್ಕಮಗಳೂರು ಮತ್ತು ಹಿರೇಮಗಳೂರು ೬೬/೧೧ ಕೆ.ವಿ ಶಾಖಾ ವ್ಯಾಪ್ತಿಯ
ವಿದ್ಯುತ್ ವಿತರಣಾ ಕೇಂದ್ರದ ಯಾರ್ಡ್‌ನಲ್ಲಿ ಮಾರ್ಚ್ ೨೪ ರಂದು ನಾಲ್ಕನೇ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವುದರಿಂದ ಚಿಕ್ಕಮಗಳೂರು ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಹೊಮ್ಮುವ ನಗರದ ಫೀಡರ್‌ಗಳಿಗೆ ಒಳಪಡುವ ಪ್ರದೇಶಗಳಾದ ಹುಡ್ಕೋ, ಮಾರ್ಕೇಟ್ ರೋಡ್, ಜೈಲ್ ರೋಡ್, ಸಿ,ಡಿ.ಎ ಲೇಔಟ್, ವಿಜಯಪುರ, ರಾಮನಹಳ್ಳಿ, ಕೆಂಪನಹಳ್ಳಿ ಮತ್ತು ಗ್ರಾಮೀಣ ಫೀಡರ್‌ಗಳಿಗೆ ಒಳಪಡುವ ಲಕ್ಯಾ, ದತ್ತಪೀಠ, ಉದ್ದೇಬೋರನಹಳ್ಳಿ, ಮಲ್ಲೇನಹಳ್ಳಿ, ವಸ್ತಾರೆ, ಮಲ್ಲಂದೂರು, ಹಿರೇಕೊಳಲೆ, ಕೆ.ಆರ್.ಪೇಟೆ, ಕುರುವಂಗಿ, ಚಿಕ್ಕನಾಯಕನಹಳ್ಳಿ, ಮಾಗಡಿ, ಅಂಬಳೆ ಇಂಡಸ್ಟ್ರೀಯಲ್ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಚಿಕ್ಕಮಗಳೂರು ಮೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೋನಾ ವೈರಸ್ ಜನತೆ ಭಯಪಡುವ ಅಗತ್ಯವಿಲ್ಲ ಮುಂಜಾಗ್ರತೆ ವಹಿಸಿ

ಚಿಕ್ಕಮಗಳೂರು : ರಾಷ್ಟ್ರವ್ಯಾಪಿ ಹರಡುತ್ತಿರುವ ಅಂತರಾಷ್ಟ್ರೀಯ ಸಾಂಕ್ರಾಮಿಕ ಪಿಡುಗಾದ ಕೊರೋನಾ ಸೋಂಕನ್ನು ತಡೆಗಟ್ಟಲು ಸರ್ಕಾರವು ಕ್ರಮಕೈಗೊಂಡಿದ್ದು ಜನತೆ ಭಯಪಡದೆ ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಅವರು ಹೇಳಿದರು.
ಅವರು ಶುಕ್ರವಾರ ನಗರದ ಸರ್ಕಾರಿ ನೌಕರರ ಭವನದಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿದ್ದ ಕೊರೋನಾ ಜಾಗೃತಿ ಹಾಗೂ ಕಾರ್ಯಕಾರಿ ಸಂಘದ ಸದಸ್ಯರ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವಿಶ್ವದೆಲ್ಲೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡಿ ಜನತೆಯನ್ನು ಭೀತಿಗೊಳಿಸುವುದರ ಜೊತೆಗೆ ಅನೇಕ ಜನರ ಬಲಿಪಡೆಯುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾರ್ಚ್ ೨೨ ರಂದು ಜನತಾ ಕರ್ಫ್ಯೂ ಕ್ರಮವನ್ನು ಕೈಗೊಂಡಿದ್ದು ಇದಕ್ಕೆ ಸರ್ಕಾರಿ ನೌಕರರ ಸಂಘದ ಸಂಪೂರ್ಣ ಬೆಂಬಲವಿದೆ ಎಂದರು.
ಜಿಲ್ಲೆಯಲ್ಲೂ ಸೋಂಕಿತ ವ್ಯಕ್ತಿಗಳ ತಪಾಸಣೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ನೌಕರರು  ಇಂತಹ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಆಸ್ಪತ್ರೆಯಲ್ಲಿ ವೈದ್ಯರ ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಿದ ಅವರು ಸುರಕ್ಷತೆ ಹಾಗೂ ಸ್ವಚ್ಚತೆಯ ಬಗ್ಗೆ ನೌಕರರು ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡುವಂತೆ ತಿಳಿಸಿದರು.
ಯಾವುದೇ ವ್ಯಕ್ತಿಗಳು ಪರಸ್ಪರ ಭೇಟಿಯಾದಾಗ ಹಸ್ತಲಾಘವ ಮಾಡುವುದನ್ನು ಬಿಟ್ಟು ಹಳೆಯ ಭಾರತೀಯ ಸಂಸ್ಕೃತಿಯ ಪದ್ಧತಿ ಕೈಮುಗಿದು ನಮಸ್ಕರಿಸುವುದನ್ನು ರೂಡಿಸಿಕೊಳ್ಳಬೇಕು ಜೊತೆಗೆ ಕುಟುಂಬ ವರ್ಗ ಮಕ್ಕಳು ರೋಗದ ಆತಂಕಕ್ಕೆ ಒಳಗಾಗದೆ ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಕ್ಷೇಮಾಭಿವೃದ್ದಿಗಾಗಿ ರಿಯಾಯಿತಿ ದರದ ಕ್ಯಾಂಟೀನ್ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು ಈ ಬಗ್ಗೆ ಚರ್ಚಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ನೌಕರರ ಸಂಘಧ ನಡಾವಳಿಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಪರಮೇಶ್ವರಪ್ಪ, ಖಜಾಂಚಿ ಸಂತೋಷ್‌ಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪೂರ್ಣೇಶ್, ಕಾರ್ಯದರ್ಶಿ ಸತ್ಯನಾರಾಯಣ್ ಹಾಗೂ ಸಂಘದ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

ಕೃಷಿ ತಂತ್ರಜ್ಞಾನ ಸಪ್ತಾಹದಲ್ಲಿ ರೈತರಿಗೆ ಉಪಯುಕ್ತ ಮಾಹಿತಿ

Times fo Deenabandhu

ಶಿವಮೊಗ್ಗದಲ್ಲಿ ಕರ್ನಾಟಕದಲ್ಲಿ ದೊಡ್ಡದಾದ ಡಿಜಿ ಅಮ್ಯೂಸ್‌ಮೆಂಟ್ ವಸ್ತು ಪ್ರದರ್ಶನ

Times fo Deenabandhu

ಮಕ್ಕಳ ಪೋಕ್ಸೋ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿ: ನ್ಯಾಯಮೂರ್ತಿ ಡಾ. ಹೆಚ್.ಬಿ. ಪ್ರಭಾಕರ ಶಾಸ್ತ್ರಿ