Times of Deenabandhu
  • Home
  • ಜಿಲ್ಲೆ
  • ಮಂಜುನಾಥಗೌಡರ ನಡೆ ಕಾಂಗ್ರೆಸ್ ನೆಡೆಗೆ?: ಡಿ ಕೆ ಶಿವಕುಮಾರ್ ಗೌಡರನ್ನು ಕರೆಸಿಕೊಂಡಿದ್ದರ ಗುಟ್ಟೇನು?
ಜಿಲ್ಲೆ ಮುಖ್ಯಾಂಶಗಳು ರಾಜಕೀಯ ರಾಜ್ಯ ಶಿವಮೊಗ್ಗ

ಮಂಜುನಾಥಗೌಡರ ನಡೆ ಕಾಂಗ್ರೆಸ್ ನೆಡೆಗೆ?: ಡಿ ಕೆ ಶಿವಕುಮಾರ್ ಗೌಡರನ್ನು ಕರೆಸಿಕೊಂಡಿದ್ದರ ಗುಟ್ಟೇನು?

ಬೆಂಗಳೂರು ಮಾರ್ಚ್ 20: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ಕಂಡ ನಂತರ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ವಿರೋಧಪಕ್ಷ ನಾಯಕತ್ವದ ಸ್ಥಾನಕ್ಕೂ, ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ ನಂತರ ಪಕ್ಷಕ್ಕೆ ಮಂಕು ಕವಿದಂತಾಗಿತ್ತು. ಕಳೆದ ವಾರ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಟ್ರಬಲ್ ಶೂಟರ್ ಎಂದೇ ಕರೆಯಲ್ಪಡುವ ಹಿರಿಯ ಮುಖಂಡರಾದ ಡಿ.ಕೆ.ಶಿವಕುಮಾರ್‍ರವರನ್ನು ಕಾಂಗ್ರೆಸ್ ಹೈಕಮಾಂಡ್  ನೇಮಿಸಿದ ಕೂಡಲೇ ಪಕ್ಷದಲ್ಲಿನ ಚಟುವಟಿಕೆಗಳು ಗರಿಗೆದರಿವೆ.

ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡ ನಂತರ ಡಿಕೆಶಿ ಹಿರಿಯ ನಾಯಕರುಗಳನ್ನೆಲ್ಲಾ ಒಂದೆಡೆ ತರುವ ಕೆಲಸಕ್ಕೆ ಕೈ ಹಾಕಿದರು. ಆ ನಿಮಿತ್ತ ಅವರು ಮೊದಲು ಭೇಟಿ ಮಾಡಿದ್ದು, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯನವರನ್ನು. ಪಕ್ಷವನ್ನು ರಾಜ್ಯದಲ್ಲಿ ಸದೃಢವಾಗಿ ಕಟ್ಟಲು ಅವರ ಸಹಕಾರವನ್ನು ಬಯಸಿದ್ದಾರೆ. ಅಂತೆಯೇ ಹಿರಿಯನಾಯಕರುಗಳಾದ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಹೆಚ್.ಕೆ.ಪಾಟೀಲ್,ಹರಿಪ್ರಸಾದ್, ಮುನಿಯಪ್ಪ ಇನ್ನಿತರ ಮುಂಚೂಣಿ ನಾಯಕರುಗಳನ್ನು ಭೇಟಿ ಮಾಡಿದ ನಂತರ ಮೂವರು ನೂತನ ಕಾರ್ಯಾಧ್ಯಕ್ಷರುಗಳನ್ನು ಕರೆದು ಒಂದೆಡೆ ಕೂರಿಸಿ ಮಾತನಾಡಿ ಪಕ್ಷದಲ್ಲಿನ ಬೆಳವಣಿಗೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳವಂತೆ ಕೋರಿದ್ದಾರೆ.

ಡಿ.ಕೆ.ಶಿವಕುಮಾರ್‍ರವರು ತಮ್ಮ ಅನುಭವದ ಮೂಸೆಯಿಂದ ಒಂದೊಂದೇ ಅಸ್ತ್ರವನ್ನು ಹೊರ ತೆಗೆಯುತ್ತಿದ್ದಾರೆ. ಈಗ ಇವರ ಗಮನ ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ಸನ್ನು ಬಲಪಡಿಸುವ ನಿಟ್ಟಿನಲ್ಲಿ ತಮ್ಮ ಗಮನಹರಿಸಿದಂತಿದೆ. ಅದು ಕೂಡ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ತವರು ಜಿಲ್ಲೆ, ಬಿಜೆಪಿ ಭದ್ರಕೋಟೆ ಶಿವಮೊಗ್ಗದಿಂದಲೇ   ಪ್ರಾರಂಭಿಸಿದಂತೆ ಕಾಣುತ್ತಿದೆ. ಮೊನ್ನೆ ದಿನ ಶಿವಮೊಗ್ಗ ಜಿಲ್ಲಾ ಜನತಾದಳದ ಅಧ್ಯಕ್ಷರಾಗಿದ್ದ ಹಾಗೂ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ, ಸಹಕಾರಿ ದುರೀಣ ಡಾ.ಆರ್.ಎಂ.ಮಂಜುನಾಥ್ ಗೌಡರನ್ನು ಕರೆಸಿಕೊಂಡಿದ್ದು ಇಂತಹ ಉಹಾಪೋಹಗಳಿಗೆ ರೆಕ್ಕೆಪುಕ್ಕ ಬಂದಂತಾಗಿದೆ. ಡಿಕೆಶಿಯವರು ಕರ್ತವ್ಯ ನಿಮಿತ್ತ ಹೊರ ತರೆಳಿ ತಮ್ಮ ನಿವಾಸಕ್ಕೆ ಹಿಂದಿರುಗಿ ಬಂದ ಸಂದರ್ಭದಲ್ಲಿ ಇವರನ್ನು ಅಭಿನಂದಿಸಲು  ಸಾವಿರಾರು ಜನ ಕಾರ್ಯಕರ್ತರು ಡಿಕೆಶಿ ನಿವಾಸದಲ್ಲಿ ಜಮಾಯಿಸಿದ್ದರು. ಅವರೆಲ್ಲರ ಮದ್ಯೆ ಶಿವಮೊಗ್ಗದಿಂದ ಕರೆಸಿಕೊಂಡಿದ್ದ ಡಾ.ಆರ್.ಎಂ.ಮಂಜುನಾಥ್‍ಗೌಡರು ಹಾಗೂ ಬೇಳೂರು ಗೋಪಾಲಕೃಷ್ಣವರನ್ನು ಒಳ ಕರೆದುಕೊಂಡು ಹೋಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಇವರುಗಳೊಡನೆ ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ಕುರಿತಾಗಿ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಬಲ್ಲ ಮೂಲಗಳ ಪ್ರಕಾರ ಸಂಘಟನಾ ಚತುರರಾದ ಡಾ.ಆರ್.ಎಂ.ಮಂಜುನಾಥ ಗೌಡರ ಹೆಗಲಿಗೆ ಶಿವಮೊಗ್ಗ ಜಿಲ್ಲೆಯಲ್ಲಿ  ಕಾಂಗ್ರೆಸನ್ನು ಇನ್ನಷ್ಟು ಗಟ್ಟಿಗೊಳಿಸುವ ಜವಾಬ್ದಾರಿ ಹೊರಿಸುವಂತೆ ಕಾಣುತ್ತಿದೆ. ಜಿಲ್ಲೆಯ ಜವಾಬ್ದಾರಿಯನ್ನು ತೆಗೆದುಕೊಂಡು ಯುವ ಮುಖಂಡರು, ಮಾಜಿ ಶಾಸಕರಾದ ಮಧುಬಂಗಾರಪ್ಪ, ಶಿವಮೊಗ್ಗ ಗ್ರಾಮಾಂತರ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ ಇನ್ನು ಮುಂತಾದ ಮುಖಂಡರುಗಳನ್ನು ಕಾಂಗ್ರೆಸ್ಸ್‍ನ ತೆಕ್ಕೆಗೆ ತಂದು ಪಕ್ಷವನ್ನು ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲ್ಲೂಕ್‍ಗಳಲ್ಲೂ ಬಲಪಡಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಗೌಡರು ತಾತ್ವಿಕವಾಗಿ ಇನ್ನು ಜನತಾದಳದಲ್ಲೇ ಇರುವುದರಿಂದ ಅವರು ಸ್ವಲ್ಪ ಕಾಲಾವಕಾಶ ಬಯಸಿದ್ದಾರೆ ಎನ್ನಲಾಗಿದೆ. ಎಲ್ಲವೂ ಡಿ.ಕೆ.ಶಿವಕುಮಾರ್ ಸೂಚನೆಯಂತೆ ನಡೆದರೆ ಯುಗಾದಿ ಹಬ್ಬದ ನಂತರ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‍ನಲ್ಲಿ ಮಹತ್ತರ ಬೆಳವಣಿಗೆಗಳು ಸಂಭವಿಸುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಶಿವಮೊಗ್ಗದಲ್ಲೂ ಕೂಡ ಹಾಲಿ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್‍ರವರ ನೇತೃತ್ವದಲ್ಲಿ ಪಕ್ಷ ಸಕ್ರೀಯವಾಗಿದೆ. ಪಕ್ಷ ಅಧಿಕಾರದಲ್ಲಿ ಇರಲಿ, ಬಿಡಲಿ ಜಿಲ್ಲೆಯಲ್ಲಿ ಪಕ್ಷವನ್ನು ಸದಾ ಚಟುವಟಿಕೆಯಲ್ಲಿ ಇರಿಸುವಲ್ಲ್ಲಿ ತಮ್ಮ ಪ್ರಬುದ್ಧತೆಯನ್ನು ತೋರುತ್ತಿದ್ದಾರೆ. ಇವರು ಅಧ್ಯಕ್ಷರಾದ ಮೇಲೆ ಕಾಂಗ್ರೆಸ್‍ನಲ್ಲಿನ ಒಳಬಣಗಳು ಮೇಲ್ನೋಟಕ್ಕೆ ಒಟ್ಟಾಗಿ ಇರುವಂತೆ ಕಾಣುತ್ತಿದೆ.

ಡಾ.ಆರ್.ಎಂ.ಮಂಜುನಾಥ್‍ಗೌಡರು ಜಿಲ್ಲಾ ಕಾಂಗ್ರೆಸ್‍ನ ಬಹುತೇಕ ಮುಖಂಡರುಗಳು ಹಾಗೂ ಕಾರ್ಯಕರ್ತರಲ್ಲಿ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಅವರುಗಳೆಲ್ಲ ಗೌಡರು ಕಾಂಗ್ರೆಸ್‍ಗೆ ಬರುವುದಾದರೆ ಜಿಲ್ಲಾ ಕಾಂಗ್ರೆಸ್‍ಗೆ ದೊಡ್ಡ ಆನೆ ಬಲ ಬರುತ್ತದೆ ಎನ್ನುತ್ತಾರೆ. ಡಿಕೆಶಿ ಯವರೊಡನೆ ಉತ್ತಮ ಸಂಪರ್ಕವಿರುವ ಕೆಲ ಕಾಂಗ್ರೆಸ್ ನಾಯಕರುಗಳೇ ಡಿಕೆಶಿಯವರಿಗೆ ಗೌಡರನ್ನು ಕಾಂಗ್ರೆಸ್‍ಗೆ ಕರೆತಂದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಡವಾಗುತ್ತದೆ ಎಂಬ ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಈ ಎಲ್ಲ ಬೆಳವಣೆಗೆಗಳ ಹಿನ್ನಲೆಯಲ್ಲಿ ಬೆಂಗಳೂರಿನ ಡಿ ಕೆ ಶಿವಕುಮಾರ್ ನಿವಾಸದ ಬಳಿ ನಮ್ಮ ಹಿರಿಯ ವರದಿಗಾರರು ಮಂಜುನಾಥ್ ಗೌಡರನ್ನು ಮಾತನಾಡಿಸಿ ತಾವು ಜನತಾದಳದ ನಾಯಕರು ಕಾಂಗ್ರೆಸ್ ಅಧ್ಯಕ್ಷರನ್ನು ಅಭಿನಂದಿಸಲು ಬಂದಿದ್ದೀರಿ? ಒಂದು ಘಂಟೆಗೂ ಹೆಚ್ಚು ಕಾಲ ಅಧ್ಯಕ್ಷರೊಡನೆ ಘಹನವಾದ ಚರ್ಚೆ ನಡೆಸಿದ್ದೀರಿ. ಇದು ಕಾಂಗ್ರೆಸ್ ಪಕ್ಷ ಸೇರುವ ಮುನ್ಸೂಚನೆಯೇ?  ಎಂದು ನೇರವಾಗಿ ಪ್ರಶ್ನಿಸಿದಾಗ. ಪ್ರತಿಕ್ರಿಯಿಸಿದ ಮಂಜುನಾಥ್‍ಗೌಡರು “ಹಾಗೇನಿಲ್ಲ, ಡಿ.ಕೆ.ಶಿವಕುಮಾರ್ ಯಾವ ಪಕ್ಷದಲ್ಲೂ ಇದ್ದರೂ ಅವರು ನಮ್ಮ ನಾಯಕರೆ, ಅವರು ಸಹಕಾರ ಸಚಿವರಾಗಿದ್ದಾಗಿನಿಂದಲೂ ಅವರೊಡನೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದೇನೆ. ಯಾವತ್ತೂ ಅವರ ಶ್ರೇಯಸ್ಸನ್ನು ಬಯಸುವವರಲ್ಲಿ ನಾನು ಒಬ್ಬ. ಹಾಗಾಗಿಯೇ ಅವರನ್ನು ಅಭಿನಂದಿಸಲು ಪಕ್ಷಾತೀತವಾಗಿ ಶಿವಮೊಗ್ಗ ಜಿಲ್ಲೆಯಿಂದ ಬಂದಿದ್ದೇವೆ. ಇನ್ನು ಕಾಂಗ್ರೆಸ್ ಪಕ್ಷವನ್ನು ಸೇರುವ ವಿಚಾರದಲ್ಲಿ ನನ್ನ ವೈಯಕ್ತಿಕ ನಿರ್ಧಾರಕ್ಕಿಂತ ಕಾರ್ಯಕರ್ತರ, ಅಭಿಮಾನಿಗಳ ಅಭಿಪ್ರಾಯ ಮುಖ್ಯ, ಪದೇ ಪದೇ ನಿರ್ಧಾರವನ್ನು ಬದಲಿಸಿಕೊಳ್ಳುವುದು ಸರಿಯಾದುದಲ್ಲ. ಇನ್ನು ಮುಂದೆ ತೆಗೆದುಕೊಳ್ಳುವ ನಿರ್ಧಾರ ನನ್ನ ರಾಜಕೀಯ ನೆಲೆಯಲ್ಲಿ ಬಹಳ ಮಹತ್ವದ್ದು ಎಂಬ ಅರಿವಿದೆ. ಆ ನಿಟ್ಟಿನಲ್ಲಿ ಜಾಗೃತೆಯಾಗಿ ಹೆಜ್ಜೆ ಇಡುತ್ತೇನೆ. ಯುಗಾದಿ ನಂತರ ಒಂದು ನಿರ್ಧಾರಕ್ಕೆ ಬರುತ್ತೇನೆ” ಎಂದರಲ್ಲದೇ ಡಿ ಕೆ ಶಿವಕುಮಾರ್‍ರವರ ದೀರ್ಘ ಚರ್ಚೆಯ ಗುಟ್ಟು ಮಾತ್ರ ಗೌಡರು ಬಿಟ್ಟುಕೊಡಲಿಲ್ಲ. ಆ ಬಗ್ಗೆ ಮತ್ತೆ ನಮ್ಮ ವರದಿಗಾರರು ಕೆಣಕಿದಾಗ. ಗೌಡರು ಮುಗುಳ್ನಕ್ಕು ಸುಮ್ಮನಾದರು.

“ಕಾಂಗ್ರೆಸ್ ಸಿದ್ದಾಂತವನ್ನು ಮೆಚ್ಚಿ ಯಾರೇ ಬಂದರೂ ನಾನು ವೈಯಕ್ತಿಕವಾಗಿ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಜಿಲ್ಲೆಯಲ್ಲಿನ ಮಾಜಿ ಶಾಸಕರುಗಳು,  ಪ್ರಭಾವಿ ಮುಖಂಡರುಗಳು ಕಾಂಗ್ರೆಸ್ ಸೇರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಜಿಲ್ಲಾ ಕಾಂಗ್ರೆಸ್ ಚಟುವಟಿಕೆಗಳ ಕುರಿತು ನೂತನ ಅಧ್ಯಕ್ಷರುಗಳನ್ನು ಅಭಿನಂದಿಸಿ ವರದಿ ಸಲ್ಲಿಸಲಾಗುವುದು. ಆ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪಕ್ಕೆ ಬಂದರೆ ನನ್ನ ಅಭಿಪ್ರಾಯ ತಿಳಿಸುತ್ತೇನೆ”

– ಹೆಚ್.ಎಸ್. ಸುಂದರೇಶ್, ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್, ಶಿವಮೊಗ್ಗ.

 

 

 

 

 

 

 

 

Related posts

ಖಾಸಗಿ ಆಸ್ಪತ್ರೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು: ಸಚಿವ ಕೆ.ಎಸ್.ಈಶ್ವರಪ್ಪ-ಸರ್ಕಾರದ ನಡೆಯನ್ನು ಪ್ರಶ್ನಿಸಿದ ಶಿಕ್ಷಕರಿಬ್ಬರ ಅಮಾನತ್ತು

Times fo Deenabandhu

ಷರತ್ತುಗಳೊಂದಿಗೆ ಸಂಪುಟ ವಿಸ್ತರಣೆಗೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ

Times fo Deenabandhu

ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ರಾಜ್ಯದ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ

Times fo Deenabandhu