Times of Deenabandhu
  • Home
  • ಜಿಲ್ಲೆ
  • ಪಂಚಾಯತ್‌ರಾಜ್ ತಿದ್ದುಪಡಿ ಮಸೂದೆ ಹಿಂಪಡೆಯಲು ಒತ್ತಾಯ : ಕೆ.ಸಿ.ಶಾಂತಾಕುಮಾರಿ
ಜಿಲ್ಲೆ ಶಿವಮೊಗ್ಗ

ಪಂಚಾಯತ್‌ರಾಜ್ ತಿದ್ದುಪಡಿ ಮಸೂದೆ ಹಿಂಪಡೆಯಲು ಒತ್ತಾಯ : ಕೆ.ಸಿ.ಶಾಂತಾಕುಮಾರಿ

ಶಿವಮೊಗ್ಗ  : ಇತ್ತೀಚೆಗೆ ರಾಜ್ಯ ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸದನದಲ್ಲಿ ಮಂಡಿಸಿದ ಪಂಚಾಯತ್‌ರಾಜ್ ತಿದ್ದುಪಡಿಸ ಮಸೂದೆಯನ್ನು ಹಿಂಪಡೆಯುವಂತೆ ಸುಗ್ರಾಮ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಒಕ್ಕೂಟದ ರಾಜ್ಯಾಧ್ಯಕ್ಷೆ ಶ್ರೀಮತಿ ಕೆ.ಸಿ.ಶಾಂತಾಕುಮಾರಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಹಿಂದೆ ಸರ್ಕಾರವು ಹಾಗೂ ಪಂಚಾಯತ್‌ರಾಜ್ ಅಭಿವೃದ್ದಿ ಸಮಿತಿಯು ನೀಡಿದ ಶಿಫಾರಸ್ಸಿನ ಆಧಾರದ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಅವಧಿ ಮತ್ತು ಮೀಸಲಾತಿಯನ್ನು ೧೦ವರ್ಷದ ಅವಧಿಗೆ ತಂದು ಹಿಂದುಳಿದ ವರ್ಗದವರಿಗೆ ಮತ್ತು ಮಹಿಳೆಯರಿಗೆ ಸಾಮಾಜಿಕವಾಗಿ ಮುಂದುವರೆಯಲು, ಸಮಾನತೆ ಹಾಗೂ ವಿಕೇಂದ್ರೀಕರಣ ವ್ಯವಸ್ಥೆ ಎತ್ತಿಹಿಡಿದು ಮಾದರಿಯಾಗಿತ್ತು.
ಪ್ರಸ್ತುತ ಘನ ಸರ್ಕಾರವು ಇತ್ತೀಚಿನ ಅಧಿವೇಶನದಲ್ಲಿ ಮಂಡಿಸಿರುವ ಮಸೂದೆಯು ಈ ವ್ಯವಸ್ಥೆಗೆ ತದ್ವಿರುದ್ಧವಾಗಿದ್ದು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅವಧಿಯನ್ನು ೩೦ತಿಂಗಳುಗಳಿಗೆ ಹಾಗೂ ಮೀಸಲಾತಿಯನ್ನು ೫ವರ್ಷಗಳಿಗೆ ನಿಗಧಿಪಡಿಸಿರುವುದು ಸರಿಯಲ್ಲ. ಕೇವಲ ೩೦ತಿಂಗಳ ಅವಧಿಯಲ್ಲಿ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸುವುದು ಸಾಧ್ಯವಿಲ್ಲ. ಅಲ್ಲದೇ ಸಾಮಾಜಿಕ ಅಸಮಾನತೆ ಪುನಃ ಉಂಟಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಸದರಿ ತಿದ್ದುಪಡಿಯನ್ನು ಹಿಂಪಡೆಯುವಂತೆ ಅವರು ಮನವಿ ಮಾಡಿದ್ದಾರೆ.

ಕರೋನಾ ತಡೆಗಟ್ಟಲು ಮಹಾನಗರಪಾಲಿಕೆ ವತಿಯಿಂದ ಅಗತ್ಯ ಕ್ರಮ

ಶಿವಮೊಗ್ಗ: ಕರೋನಾ ತಡೆಗಟ್ಟಲು ಮಹಾನಗರಪಾಲಿಕೆ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪಾಲಿಕೆ ಮೇಯರ್ ಸುವರ್ಣ ಶಂಕರ್ ಹಾಗೂ ಆಯುಕ್ತ ಚಿದಾನಂದ ವಠಾರೆ ತಿಳಿಸಿದರು.
ಅವರು ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೀದಿ ಬದಿ ವ್ಯಾಪಾರ ಬಂದ್ ಮಾಡುವುದು ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಮುನ್ನಚ್ಚರಿಕಾ ಕ್ರಮಗಳನ್ನು ಇಂದಿನಿಂದಲೇ ಕೈಗೊಳ್ಳಲಾಗಿದೆ. ಕಟ್ಟುನಿಟ್ಟಾಗಿ ಕರೋನಾ ವಿರುದ್ದ ಮಹಾನಗರಪಾಲಿಕೆ ಹೋರಾಡುವುದಾಗಿ ತಿಳಿಸಿದರು.
ಮೇಯರ್ ಸುವರ್ಣಾ ಶಂಕರ್ ಮಾತನಾಡಿ, ಕರೋನಾ ವೈರಸ್ ಹರಡದಂತೆ ನಾಗರಿಕರಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಈಗಾಗಲೇ ಮನವಿ ಮಾಡಲಾಗಿದೆ. ಬೀದಿ ಬದಿ ವ್ಯಾಪಾರ ಮಾ.೩೧ರವರೆಗೆ ಬಂದ್ ಮಾಡಲಾಗುವುದು. ಫುಡ್‌ಕೋರ್ಟ್ ಸೇರಿದಂತೆ ಎಲ್ಲ ರೀತಿಯ ಬೀದಿ ಬದಿಯ ಹೋಟೇಲ್‌ಗಳನ್ನು ಈ ಕ್ಷಣದಿಂದಲೇ ಮುಚ್ಚಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಾಗುವುದು ಮತ್ತು ಪಾಲಿಕೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳಲ್ಲಿ ಔಷಧಿ ಸಿಂಪಡಣೆ ಮತ್ತು ಫಾಗಿಂಗ್ ಮಾಡಲಾಗುವುದು ಎಂದರು.
ಮದುವೆ, ಜಾತ್ರೆಗಳು, ಸಂತೆ, ವಸ್ತು ಪ್ರದರ್ಶನಗಳು, ಸಂಗೀತ ಕಾರ್ಯಕ್ರಮಗಳು, ಹಬ್ಬಗಳು , ಕ್ರೀಡೆಗಳು ಹೀಗೆ ಸಾರ್ವಜನಿಕರು ಹೆಚ್ಚು ಸೇರುವ ಕಾರ್ಯಕ್ರಮಗಳನ್ನು ನಿಷೇಧಿಸಲು ಕ್ರಮ ವಹಿಸಲಾಗಿದೆ. ಹೊಟೇಲ್ ಮಾಲೀಕರೊಂದಿಗೆ ಸಭೆ ಸೇರಿ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಪಾಲಿಕೆಯ ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳನ್ನು ತಂಡಗಳನ್ನಾಗಿ ರಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪ್ರಧಾನಿ ಮೋದಿಯವರು ಮಾ.೨೨ ರಂದು ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಇದೊಂದು ಒಳ್ಳೆಯ ನಿರ್ಧಾರವಾಗಿದೆ. ಅವರ ಕರೆಗೆ ಓಗೊಟ್ಟು ಬೆಳಿಗ್ಗೆಯಿಂದ ಸಂಜೆಯವರೆಗೆ ನಾಗರಿಕರು ಮನೆಯಿಂದ ಹೊರಗೆ ಬರದಂತೆ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಪಾಲಿಕೆ ಆಯುಕ್ತ ಚಿದಾನಂದ ವಠಾರೆ ಮಾತನಾಡಿ, ಪ್ರತಿ ವಾರ್ಡ್‌ನಲ್ಲಿ ಬೇರೆ ದೇಶದಿಂದ ಅಥವಾ ಬೇರೆ ರಾಜ್ಯದಿಂದ ಬರುವ ನಾಗರಿಕರ ಬಗ್ಗೆ ಮಾಹಿತಿ ಪಡೆಯಲಾಗುವುದು. ಅದನ್ನು ಆರೋಗ್ಯ ಇಲಾಖೆಗೆ ತಿಳಿಸಲಾಗುವುದು, ದೇವಸ್ಥಾನಗಳು ಮತ್ತು ಮಸೀದಿ ಹಾಗೂ Zರ್ಚ್‌ಗಳಲ್ಲಿಯೂ ಕೂಡ ಪ್ರಾರ್ಥನೆ ಮಾಡಲು ಕಡಿಮೆ ಸಮಯ ನಿಗದಿಪಡಿಸುವಂತೆ ಮನವಿ ಮಾಡಲಾಗಿದೆ. ಬಿಗ್ ಬಜಾರ್‌ಗಳಿಗೆ ಸಮಯ ನಿಗದಿ ಮಾಡಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಎರಡು ಗಂಟೆಗಳ ಕಾಲ ತೆರೆಯುವಂತೆ ಸೂಚಿಸಲಾಗಿದೆ. ಏಕೆಂದರೆ ದಿನಸಿ ವಸ್ತುಗಳು ಅಲ್ಲಿ ಮಾರಾಟವಾಗುವುದರಿಂದ ಸೂಚನೆ ನೀಡಲಾಗಿದ್ದು, ಹೋಂ ಡೆಲವರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ದಿನಸಿ ಅಂಗಡಿಗಳಿಗೆ ಸೂಚಿಸಲಾಗಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಸಹಾಯಕ್ಕಾಗಿ ದೂ.ಸಂ. ೧೦೪ ಜೊತೆಗೆ ೦೮೦-೬೬೬೯೨೦೦೦ ಮತ್ತು ೦೮೦-೪೬೮೪೮೬೦೦ ನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಉಪಮೇಯರ್ ಸುರೇಖಾ ಮುರಳೀಧರ್, ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಪ್ರಭು, ವಿಶ್ವಾಸ್, ಮಂಜುನಾಥ್, ವಿಶ್ವನಾಥ್ ಮುಂತಾದವರಿದ್ದರು.
 ಪತ್ರಕರ್ತರ ಪ್ರಶ್ನೆಗೆ ಬೆಸ್ತುಬಿದ್ದ ಆಯುಕ್ತರು: ಪತ್ರಿಕಾಗೋಷ್ಟಿಯಲ್ಲಿ ಯಾವ ಪೂರ್ವಸಿದ್ದತೆ ಇಲ್ಲದೇ, ಅಂಕಿಅಂಶಗಳು ಇಲ್ಲದೇ ಆಯುಕ್ತರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಲು ತಡಕಾಡಿ ಎಲ್ಲದಕ್ಕೂ ಆಯಿತು, ಮಾಡುತ್ತೇವೆ, ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹಾರಿಕೆ ಉತ್ತರ ಕೊಟ್ಟರು.
ಎಲ್ಲಿ ಫ್ಲೆಕ್ಸ್ ಹಾಕಿದ್ದೀರಿ, ನಿಮ್ಮಲ್ಲಿ ಕಸ ತೆಗೆಯುವವರಿಗೆ ಎಲ್ಲಿ ಶೂ ಕೊಟ್ಟಿದ್ದೀರಿ, ಮಾಸ್ಕ್ ಕೊಟ್ಟಿದ್ದೀರಿ, ಎಷ್ಟು ಕೊಟ್ಟಿದ್ದೀರಿ ತಿಳಿಸಿ, ಫಾಗಿಂಗ್ ಎಲ್ಲೆಲ್ಲಿ ಮಾಡಿದ್ದೀರಿ, ಎಲ್ಲಿ ಔಷಧಿ ಸಿಂಪಡಣೆ ಮಾಡಿದ್ದೀರಿ, ಹಂದಿ, ನಾಯಿಗಳನ್ನು ಎಲ್ಲಿ ಹಿಡಿದಿದ್ದೀರಿ,ಶಿವಮೊಗ್ಗದ ತುಂಬಾ ಕಸವಿದೆ. ಎಲ್ಲಿ ತೆಗೆದಿದ್ದೀರಿ, ಎಷ್ಟು ಜನ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬ ಪ್ರಶ್ನೆಗಳಿಗೆ ಅವರ ಉತ್ತರವಿರಲಿಲ್ಲ.

ಕರೋನಾ ವೈರಸ್ ತಡೆಗೆ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮುಂಜಾಗರೂಕತಾ ಕ್ರಮ: ಚಿದಾನಂದ ವಟಾರೆ

ಶಿವಮೊಗ್ಗ : ಕರೋನಾ ವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಯುಕ್ತ ಚಿದಾನಂದ ವಟಾರೆ ತಿಳಿಸಿದರು.

ಅವರು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಮುಂಜಾಗರೂಕತಾ ಕ್ರಮಗಳ ಮಾಹಿತಿ ನೀಡಿದರು.

ನಗರದಲ್ಲಿ ಎಲ್ಲಾ ಶಾಪಿಂಗ್ ಮಾಲ್, ಪಬ್, ಕ್ಲಬ್, ಜಿಮ್, ಈಜುಕೊಳಗಳು, ಚಲನಚಿತ್ರ ಮಂದಿರಗಳು, ಚಿಕನ್ ಮತ್ತು ಮಟನ್ ಶಾಪ್‍ಗಳನ್ನು ಮುಚ್ಚಿಸಲು ಕ್ರಮ ವಹಿಸಲಾಗಿದೆ. ಮದುವೆ, ಜಾತ್ರೆ, ಸಂತೆ, ವಸ್ತು ಪ್ರದರ್ಶನ, ಸಂಗೀತ ಹಬ್ಬಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಕ್ರೀಡಾಕೂಟಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯ ಸಸ್ಯಾಹಾರಿ ಮತ್ತು ಮಾಂಸಾಹಾರಿ ಫುಡ್‍ಕೋರ್ಟ್‍ನಲ್ಲಿ ವ್ಯಾಪಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಇದೇ ರೀತಿ ಬೀದಿ ಬದಿ ವ್ಯಾಪಾರ ಮಾಡುವ ತಿಂಡಿ ತಿನಿಸುಗಳ ಅಂಗಡಿ, ಫಾಸ್ಟ್ ಫುಡ್ ಮತ್ತು ಇತರೆ ತಳ್ಳು ಗಾಡಿ ವ್ಯಾಪಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳಲಾಗಿದ್ದು, ವಾರ್ಡ್‍ವಾರು ಔಷಧಿ ಸಿಂಪಡಿಸಿ ಫಾಗಿಂಗ್ ಮಾಡಲಾಗುತ್ತಿದೆ. ಎಲ್ಲಾ ವಾರ್ಡ್‍ಗಳಲ್ಲಿ ಕಸದ ವಾಹನದ ಮೂಲಕ ಅರಿವು ಮೂಡಿಸಲಾಗುತ್ತಿದೆ. ಹೋಟೇಲ್‍ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳುವ ಬಗ್ಗೆ ಈಗಾಗಲೇ ಹೊಟೇಲ್ ಮಾಲಿಕರೊಂದಿಗೆ ಸಭೆಯನ್ನು ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಳಗೊಂಡ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 104 ಜತೆಗೆ 080-66692000, 080-46848600 ಸಂಪರ್ಕಿಸಬಹುದಾಗಿದೆ. ಮಹಾನಗರ ಪಾಲಿಕೆಯಲ್ಲಿ ಸಹ ದಿನದ 24ಗಂಟೆ ಕಾರ್ಯನಿರ್ವಹಿಸುವ ಹೆಲ್ಪ್ ಲೈನ್ ಆರಂಭಿಸಲು ಸಿದ್ಧತೆ ಮಾಡಲಾಗಿದೆ ಎಂದು ಹೇಳಿದರು.
ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ ಮತ್ತಿತರರು ಉಪಸ್ಥಿತರಿದ್ದರು.

 

ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣವನ್ನು ಪಡೆಯುವಂತಿಲ್ಲ- ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್

ಶಿವಮೊಗ್ಗ: ಖಾಸಗಿ ಶಾಲೆಗಳಿಗೆ ಆರ್‍ಟಿಇ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರ ಪಾವತಿಸುತ್ತಿದ್ದು, ಶಾಲೆಗಳು ಹೆಚ್ಚುವರಿ ಹಣವನ್ನು ಪಡೆಯುವಂತಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದ್ದಾರೆ.

ಕರ್ನಾಟಕ ಶಿಕ್ಷಣ ಹಕ್ಕು ಕಾಯ್ದೆ ಹಾಗೂ ಉಚಿತ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ ಪ್ರಕಾರ ಖಾಸಗಿ ಪೂರ್ವ ಪ್ರಾಥಮಿಕ ಶಾಲೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪಡೆಯುವ ಸಂದರ್ಭದಲ್ಲಿ ಕ್ಯಾಪಿಟೇಶನ್ ಶುಲ್ಕ ತೆಗೆದುಕೊಳ್ಳುವಂತಿಲ್ಲ. ನಿಗದಿತ ಶುಲ್ಕ ಪಡೆದಿರುವ ಬಗ್ಗೆ ಕಡ್ಡಾಯವಾಗಿ ರಶೀದಿ ನೀಡಬೇಕೆಂದು ಶಾಲೆಗಳಿಗೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಎಲ್ಲಾ ಖಾಸಗಿ ಶಾಲೆಗಳು ಶಾಲೆ ಪ್ರಾರಂಭಿಸುವ ಮುನ್ನ ಇಲಾಖೆಯಿಂದ ನೋಂದಣಿ ಪಡೆಯಬೇಕು ಮತ್ತು ಪ್ರತಿ ಶೈಕ್ಷಣಿಕ ಸಾಲಿಗೆ ಮಾನ್ಯತೆಯನ್ನು ಇಲಾಖೆಯಿಂದ ನವೀಕರಿಸಿಕೊಂಡಿರಬೇಕು. ನೋಂದಣಿ ಮತ್ತು ಮಾನ್ಯತೆ ಪಡೆಯದೇ ನಡೆಯುತ್ತಿರುವ ಶಾಲೆಗಳನ್ನು ಅನಧಿಕೃತ ಶಾಲೆ ಎಂದು ಘೋಷಿಸಲು ಅವಕಾಶವಿದೆ. ಪಾಲಕರು ಮಕ್ಕಳನ್ನು ದಾಖಲು ಮಾಡುವ ಮೊದಲು ಶಾಲೆ ನೊಂದಣಿಯಾಗಿರುವ ಬಗ್ಗೆ ಮತ್ತು ಮಾನ್ಯತೆ ನವೀಕರಿಸಿರುವ ಬಗ್ಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವುದು. ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ 1ನೇ ತರಗತಿಗೆ ನೇರವಾಗಿ ದಾಖಲಾಗುವ ಮಗುವು ಕನಿಷ್ಠ ವಯೋಮಿತಿಯನ್ನು ಜೂನ್ 1 ರಿಂದ 5 ವರ್ಷ 5 ತಿಂಗಳು ಹಾಗೂ ಗರಿಷ್ಠ 7 ವರ್ಷಗಳಿಗೆ ಮತ್ತು ಎಲ್.ಕೆ.ಜಿ.ಗೆ 3 ವರ್ಷ 5 ತಿಂಗಳು ಹಾಗೂ 5 ವರ್ಷಗಳ ಗರಿಷ್ಠ ವಯೋಮಿತಿಯನ್ನು ನಿಗಧಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರವೇಶಾತಿಯನ್ನು ಏಪ್ರಿಲ್ ಮತ್ತು ಮೇ ತಿಂಗಳಲ್ಲೇ ನಡೆಸಬೇಕು. 2020-21ನೇ ಸಾಲಿನಿಂದ ಎಲ್ಲಾ ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಪಡೆಯುತ್ತಿರುವ ಶುಲ್ಕದ ವಿವರಗಳನ್ನು ಎಸ್.ಎ.ಟಿ.ಎಸ್.ನಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಹಾಗೂ ಸಾರ್ವಜನಿಕರಿಗೆ ಕಾಣಿಸುವಂತೆ ಶಾಲಾ ಸೂಚನಾ ಫಲಕದಲ್ಲೂ ಸಹ ಪ್ರಕಟಿಸಬೇಕು. ಉಚಿತ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆಯ ಪ್ರಕಾರ ಮಕ್ಕಳ ದಾಖಲಾತಿಯನ್ನು ಶಿಕ್ಷಣ ಸಂಸ್ಥೆಯವರು ಯಾವುದೇ ಕಾರಣಕ್ಕಾಗಿ ನಿರಾಕರಿಸುವಂತಿಲ್ಲ. ಪೋಷಕರನ್ನಾಗಲೀ ಮಕ್ಕಳನ್ನಾಗಲೀ ಲಿಖಿತ ಅಥವಾ ಮೌಖಿಕ ಸಂದರ್ಶನ ನಡೆಸುವಂತಿಲ್ಲ. ಪೋಷಕರು ಪದವೀಧರರಾಗಿರಬೇಕು, ಪ್ರವೇಶ ಬಯಸುವ ಮಕ್ಕಳು ಇಂತಿಷ್ಟೇ ಅಂಕಗಳನ್ನು ಪಡೆದಿರಬೇಕು ಎಂದು ಶಿಕ್ಷಣ ಸಂಸ್ಥೆಗಳು ನಿಬಂಧನೆಗಳನ್ನು ವಿಧಿಸುವಂತಿಲ್ಲ.
ಸಿ.ಬಿ.ಎಸ್.ಇ ಪಠ್ಯಕ್ರಮ ಅಳವಡಿಸುವ ಬಗ್ಗೆ ರಾಜ್ಯ ಸರ್ಕಾರವು ನಿರಾಪೇಕ್ಷಣಾ ಪತ್ರ ನೀಡಿರಬೇಕು. ಸಿಬಿಎಸ್‍ಇ ಅಫಿಲಿಯೇಶನ್ ನೋಂದಣಿ ಸಂಖ್ಯೆಯನ್ನು ದೊಡ್ಡದಾಗಿ ಸೂಚನಾ ಫಲಕದಲ್ಲಿ ಪ್ರಕಟಿಸಿರಬೇಕೆಂದು ತಿಳಿಸಿದ್ದಾರೆ.
ಖಾಸಗಿ ಶಾಲೆಗಳಲ್ಲಿ ನಿಗಧಿತ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು. ಅಗತ್ಯ ವಿದ್ಯಾರ್ಹತೆಯನ್ನು ಹೊಂದದೇ ಇರುವ ಸಿಬ್ಬಂದಿಗಳನ್ನು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಮಾಡಿಕೊಳ್ಳುವಂತಿಲ್ಲ. ನೇಮಕಾತಿ ಮಾಡಿಕೊಂಡ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಬೇಕು. ನಿಗಧಿತ ವಿದ್ಯಾರ್ಹತೆ ಹೊಂದದೇ ಇರುವ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡರೆ ಅಂತಹಾ ಶಾಲೆಯ ವಿರುದ್ಧ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರವು ವಿಚಾರಣೆ ನಡೆಸಿ ರೂ. 5.00 ಲಕ್ಷಗಳ ವರೆಗೆ ದಂಡ ವಿಧಿಸಲು ಅವಕಾಶವಿದೆ.

ಶಾಲಾ ಆವರಣದಲ್ಲಿ ನಿಯಮಬಾಹಿರವಾಗಿ ಶಾಲಾ ಪಠ್ಯಪುಸ್ತಕ, ನೋಟ್‍ಬುಕ್, ಲೇಖನ ಸಾಮಗ್ರಿ, ಸಮವಸ್ತ್ರಗಳನ್ನು ಮಾರಾಟಮಾಡುವಂತಿಲ್ಲ. ಖಾಸಗಿ ಶಾಲೆಗಳು ಮಾನ್ಯತೆ ಪಡೆಯುವ ಪೂರ್ವದಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿರಬೇಕು ಹಾಗೂ ಶಾಲಾ ಆವರಣದ ಸುತ್ತಮುತ್ತ ಜಂಕ್‍ಫುಡ್ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಖಾಸಗಿ ಶಾಲೆಗಳು ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ತಿಳಿಸಿದ್ದಾರೆ.

 ನೀರಿನ ಕರ ವಸೂಲಾತಿ ವಿಶೇಷ ಕೌಂಟರ್

ಶಿವಮೊಗ್ಗ : ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿರ್ವಹಣಾ ವಿಭಾಗ, ಉಪವಿಭಾಗವು 2019-2020ರ ಸಾಲಿನ ಕಂದಾಯ ಬಾಕಿ ಪಾವತಿಸಲು ವಿಶೇಷ ವಸೂಲಾತಿ ಕೇಂದ್ರವನ್ನು ತೆರೆದಿದೆ.

ನೀರಿನ ಬಾಕಿ ಕಂದಾಯವನ್ನು ಕಟ್ಟುವ ಖಾತೆದಾರರು ಮಾರ್ಚ್ 22 ರ ಭಾನುವಾರದಂದು ಕೆ.ಹೆಚ್.ಬಿ.ಕಲ್ಲಹಳ್ಳಿ ಹೌಸಿಂಗ್ ಬೋರ್ಡ್ ಕಚೇರಿ ಹತ್ತಿರ, ಸಂಗೊಳ್ಳಿರಾಯಣ್ಣ ವೃತ್ತ ಪೆಟ್ರೋಲ್ಲ ಬಂಕ್ ಹತ್ತಿರ, ಕುಂಬಾರ ಬೀದಿ ವಂದನಾ ಟಾಕೀಸ್ ಹತ್ತಿರ, ವಿದ್ಯಾನಗರ ಎಂ.ಅರ್.ಎಸ್.ಸರ್ಕಲ್ ಹತ್ತಿರ, ಸೂಳೆಬೈಲ್ ಮಾರಮ್ಮ ದೇವಸ್ಥಾನದ ಹತ್ತಿರ, ಸೋಮಿಕೊಪ್ಪ ಬಸ್‍ಸ್ಟ್ಯಾಂಡ್ ಹತ್ತಿರ, ಮಿಳಘಟ್ಟ ಲಕ್ಷ್ಮೀ ಟಾಕೀಸ್ ಹತ್ತಿರ ಮತ್ತು ಕೆಳಗಿನ ತುಂಗಾನಗರ ಚಾನಲ್ ಏರಿಯಾ ಹತ್ತಿರ ನಿರ್ಮಿಸಿರುವ ವಿಶೇಷ ಕೌಂಟರ್‍ಗಳಲ್ಲಿ ಕಟ್ಟಬಹುದಾಗಿದೆ.

ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಕ.ನ.ನೀ.ಸ ಮತ್ತು ಒ.ಚ ಮಂಡಳಿಯ ನಿರ್ವಹಣೆ ಮತ್ತು ಪಾಲನೆ ಸಹಾಯಕ ಕಾರ್ಯಪಾಲಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related posts

ಆರೋಗ್ಯವಂತ, ಸ್ವಸ್ಥ್ಯ ಸಮಾಜ ನಿರ್ಮಾಣಕ್ಕಾಗಿ ಸಾವಯವ ಕೃಷಿ ಪೂರಕ : ಲಕ್ಷ್ಮಣ ಎಸ್.ಸವದಿ

Times fo Deenabandhu

ಮೈಲಮ್ಮ, ಕೆಂಚಮ್ಮ, ಅಂತರಘಟ್ಟಮ್ಮ ಮತ್ತು ಭಂಡಿಬಂಡಾರದಮ್ಮ ದೇವಿಗಳ ಪ್ರತಿಷ್ಠಾನ ಮುಹೋತ್ಸವ ಕಳಸ ಪ್ರತಿಷ್ಠೆ

Times fo Deenabandhu

ಫೆ.29ರಿಂದ ಮಾ.2ರವರೆಗೆ: ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯ ಅಂತರ ಕಾಲೇಜು ಮಹಿಳಾ ಕ್ರೀಡಾಕೂಟವನ್ನು

Times fo Deenabandhu