Times of Deenabandhu
  • Home
  • ಜಿಲ್ಲೆ
  • ಶಿಕ್ಷಣದಲ್ಲಿ ಕೇಸರೀಕರಣ ಅಪರಾಧವಲ್ಲ-ಅಗತ್ಯ: ಜಿ.ಆರ್.ಜಗದೀಶ್
ಚಿಕ್ಕಮಗಳೂರು ಜಿಲ್ಲೆ

ಶಿಕ್ಷಣದಲ್ಲಿ ಕೇಸರೀಕರಣ ಅಪರಾಧವಲ್ಲ-ಅಗತ್ಯ: ಜಿ.ಆರ್.ಜಗದೀಶ್

ಚಿಕ್ಕಮಗಳೂರು : ಶಿಕ್ಷಣದಲ್ಲಿ ಕೇಸರೀಕರಣ ಅಪರಾಧವಲ್ಲ-ಅಗತ್ಯ ಎಂದು ವಿದ್ಯಾಭಾರತಿ ದಕ್ಷಿಣ ಭಾರತೀಯ ಸಂಘಟನಾ ಕಾರ್‍ಯದರ್ಶಿ ಜಿ.ಆರ್.ಜಗದೀಶ್ ಅಭಿಪ್ರಾಯಿಸಿದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನಕ್ಕೆ ಭೇಟಿನೀಡಿದ್ದ ಅವರು ಸುವರ್ಣಮಾಧ್ಯಮ ಭವನದಲ್ಲಿ ಗೌರವಸ್ವೀಕರಿಸಿ ಅಭಿಪ್ರಾಯ ಹಂಚಿಕೊಂಡರು.
ಕೇಂದ್ರಸರ್ಕಾರ ತರಲು ಉದ್ದೇಶಿಸಿರುವ ಹೊಸಶಿಕ್ಷಣ ನೀತಿಯಲ್ಲಿ ಕೇಸರೀಕರಣದ ಉದ್ದೇಶವಿದೆ ಎಂಬ ಆರೋಪದ ಬಗ್ಗೆ ಉತ್ತರಿಸಿದ ಅವರು, ಕೇಸರೀಕರಣ ತಪ್ಪಲ್ಲ. ಶಿಕ್ಷಣವಷ್ಟೇ ಅಲ್ಲ ಸಮಾಜದ ವಿವಿಧ ರಂಗಗಳಲ್ಲೂ ಕೇಸರೀಕರಣದ ಅಗತ್ಯವಿದೆ. ಕೆಲವರಿಗೆ ಹೆದರಿ ಈ ಬಗ್ಗೆ ಮಾತನಾಡದಿರುವುದು ಒಳ್ಳೆಯ ಲಕ್ಷಣವಲ್ಲ ಎಂದರು.
ಒಳ್ಳೊಳ್ಳೆಯ ಅನೇಕ ಪದಗಳನ್ನು ಅಪಾರ್ಥ ಕಲ್ಪಿಸಲಾಗಿದೆ. ಅಂತಹ ಪದಗಳಲ್ಲಿ ’ಕೇಸರಿ’ಯೂ ಒಂದು. ವಾಸ್ತವವಾಗಿ ಕೇಸರಿಬಣ್ಣವೇ ತ್ಯಾಗ, ಪರಾಕ್ರಮ, ಶೌರ್ಯದ ಪ್ರತೀಕ. ಅಭಿವೃದ್ಧಿ, ಕಲ್ಯಾಣ, ಪ್ರಗತಿಯ ಸಂಕೇತ ಕೇಸರಿ. ನಮ್ಮ ರಾಷ್ಟ್ರಧ್ವಜದ ಮೇಲ್ಭಾಗದಲ್ಲೇ ಕೇಸರಿ ಬಣ್ಣವಿದೆ. ಪ್ರಕೃತಿಯ ಸೂರ್‍ಯೋದಯಕ್ಕೆ ಮುನ್ನ ಅರುಣೋದಯದಲ್ಲಿ ಕೇಸರಿ ಇದೆ. ಋಷಿಮುನಿಗಳು-ಸಾಧುಸಂತರು ಕೇಸರಿವಸ್ತ್ರವನ್ನು ಹೆಚ್ಚಾಗಿ ಧರಿಸಿರುತ್ತಾರೆ. ನಮ್ಮ ಪರಂಪರಾನುಗತ ಭಗವಾಧ್ವಜದ ಬಣ್ಣವೂ ಕೇಸರಿ. ಕೇಸರಿ ನಮಗೆ ಅಭಿಮಾನದ ಅಕ್ಕರೆಯ ಸಂಗತಿ. ಅತ್ಯಂತ ಒಳ್ಳೆಯ ಅಭಿಮಾನದ ಕೇಸರಿಯನ್ನು ಬೇರೆ ಅರ್ಥದಲ್ಲಿ ಸ್ಥಾಪಿತ ಹಿತಾಸಕ್ತಿಗಳು ಬಳಸುತ್ತಿವೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.
ಭಾರತ ಜಗತ್ತಿಗೆ ಮಾರ್ಗದರ್ಶಿಯಾಗಿದ್ದ ಕಾಲವಿತ್ತು. ಗಣಿತ, ಖಗೋಳ, ಭೌತಶಾಸ್ತ್ರ, ಜೀವವಿಜ್ಞಾನ ಸೇರಿದಂತೆ ನಮ್ಮ ಸುತ್ತಲಿನ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಭಾರತೀಯರು ಪ್ರಭುತ್ವ ಸಾಧಿಸಿದ್ದರು. ನಮ್ಮ ಪ್ರಾಚೀನ ಗುರುಕುಲ ಪದ್ಧತಿಯಲ್ಲಿ ಪ್ರಕೃತಿ-ಬದುಕಿಗೆ ಪೂರಕವಾದ ಕಲಿಕೆಯಿತ್ತು. ಪಾಠಶಾಲೆಗಳು ಡೋಲಾಗಳಲ್ಲೂ ಶಿಕ್ಷಣ ಸಿಗುತ್ತಿತ್ತು. ಮೆಕಾಲೆಶಿಕ್ಷಣ ಬಂದ ನಂತರ ನಿರುದ್ಯೋಗಿಗಳನ್ನು ತಯಾರಿಸುವ ಶಿಕ್ಷಣವಷ್ಟೇ ನೀಡುತ್ತಿದ್ದೇವೆಂದರು.
ಮನುಷ್ಯನಿಗೆ ಬೇಕಾದ ಶಾಂತಿ-ನೆಮ್ಮದಿ-ಸಮಾಧಾನ ಪಡೆಯಲು ಆಧ್ಯಾತ್ಮಕತೆಯ ಪರವಿದ್ಯೆ ಮುಖ್ಯ. ಜೀವನಕ್ಕೆ ಬೇಕಾದ ಹಣಗಳಿಕೆಯ ವ್ಯವಹಾರಿಕತೆಯ ಅಪರವಿದ್ಯೆಯು ಬೇಕಾಗುತ್ತದೆ. ಸಮಾಜದ ಹಿಂದಿನ ಆದರ್ಶ ವ್ಯಕ್ತಿಗಳಾದ ರಾಮ, ಕೃಷ್ಣ, ಪಾಂಡವರು, ಕೌರವ, ದುರ್ಯೋಧನ ಎಲ್ಲರೂ ಶಸ್ತ್ರ ಮತ್ತು ಶಾಸ್ತ್ರ ಪಾರಂಗತರಾಗಿದ್ದರೆಂದ ಜಗದೀಶ್, ವ್ಯಕ್ತಿತ್ವದ ಸರ್ವಾಂಗೀಣ ವಿಕಾಸಕ್ಕೆ ಅಗತ್ಯವಾದ ಶಿಕ್ಷಣ ನೀಡಿದರೆ ಮಾತ್ರ ಭಾರತ ಮತ್ತೊಮ್ಮೆ ತಲೆಯೆತ್ತಿ ನಿಂತು ಜಗತ್ತಿಗೆ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ ಎಂದರು.
ಮೋಕ್ಷ ಸಾಧನೆಗೆ ಅರ್ಥ ಮತ್ತು ಕಾಮನೆ(ಬಯಕೆ)ಯನ್ನು ಧರ್ಮ ಆಧರಿಸಿ ನಡೆಯುವುದರಲ್ಲಿ ಬದುಕಿನ ಸಾರ್ಥಕತೆ ಕಂಡುಕೊಳ್ಳಬೇಕು. ಹಿಂದೆ ಋಷಿಮುನಿಗಳು ೬೪ವಿದ್ಯೆಗಳನ್ನು ಕಲಿಸುತ್ತಿದ್ದರಂತೆ ಅದರಲ್ಲಿ ಚೋರವಿದ್ಯೆಯೂ ಒಂದು. ಚೋರವಿದ್ಯೆ ಕಲಿತು ಕಳವು ಮಾಡಿದವರನ್ನು ಪತ್ತೆ ಹಚ್ಚಲು ಸಹಕಾರಿಯಾಗಬೇಕೆಂಬ ಸದುದ್ದೇಶವಿತ್ತು. ಶಿಕ್ಷಣದ ಮೂಲ ಆಶಯ ಸಾವಿರಾರುವರ್ಷಗಳ ಹಿಂದಿನ ಉಪನಿಷತ್ತಿನಲ್ಲಿ ಕಾಣಬಹುದು. ಗುರು-ಶಿಷ್ಯ ಪರಸ್ಪರ ಪ್ರಶ್ನಿಸುವ ಸಂವಾದಿಸುವ ಮೂಲಕ ಪಾಂಡಿತ್ಯ ಸಂಪಾದಿಸುತ್ತಿದ್ದರು. ಮನುಸ್ಮೃತಿಯಲ್ಲಿ ಬರುವ ಸಮಾಪನಾ ಮಂತ್ರವನ್ನು ಜಗತ್ತಿನ ಅನೇಕ ವಿಶ್ವವಿದ್ಯಾನಿಲಯಗಳ ’ಕಾನ್ವಕೇಷನ್ ಸೆರೆಮನಿ’(ಸಮಾವೇಶ ಸಮಾರಂಭ)ಗಳಲ್ಲಿ ಬಳಸುತ್ತಿದ್ದಾರೆಂದು ಉಲ್ಲೇಖಿಸಿದ ಜಗದೀಶ್, ಉದ್ಯೋಗ ಆಧಾರಿತ ಶಿಕ್ಷಣಕ್ಕಿಂತ ಉದ್ಯೋಗವೇ ಅರಸಿಕೊಂಡು ಬರುವ ಶಿಕ್ಷಣ ನೀಡುವುದು ಇಂದಿನ ಅಗತ್ಯವೆಂದರು.
ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಕಾರ್‍ಯದರ್ಶಿ ಸುಮಿತ್ರಾಶಾಸ್ತ್ರಿ, ಕಾರ್‍ಯಾಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮತ್ತು ವಿದ್ಯಾಭಾರತಿ ಜಿಲ್ಲಾಕಾರ್‍ಯದರ್ಶಿ ಪ್ರವೀಣ್‌ಕುಮಾರ್ ಇದೇ ಸಂದರ್ಭದಲ್ಲಿ ಜಗದೀಶ್ ಅವರನ್ನು ಗೌರವಿಸಿದರು.
ಚಿಕ್ಕಮಗಳೂರು ಮಾ.೧೯ (ಪಿಎನ್‌ಬಿ) ಅಜ್ಜಂಪುರ ಸಮೀಪದ ಗೊಂಡೇದಹಳ್ಳಿಯಲ್ಲಿ ಮಾರ್ಚ್ ೨೨ರಂದು ಶ್ರೀಗುರು ರೇಣುಕಶಿವಾಚಾರ್ಯ ಜನಕಲ್ಯಾಣ ಸೇವಾ ಪ್ರತಿಷ್ಠಾನ ಆಯೋಜಿಸಿದ್ದ ಶ್ರೀಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಧರ್ಮ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಪ್ರತಿಷ್ಠಾನ ಮುಖ್ಯಸ್ಥರಾದ ತಾವರೇಕೆರೆ ಶಿಲಾಮಠಾಧ್ಯಕ್ಷ ಶ್ರೀಅಭಿನವಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.
೧೫ವರ್ಷಗಳಿಂದ ಗೊಂಡೇದಹಳ್ಳಿಯಲ್ಲಿ ಶ್ರೀರೇಣುಕಾಚಾರ್ಯರ ಅದ್ಧೂರಿ ಮೆರವಣಿಗೆ, ಧರ್ಮಸಮಾರಂಭ, ಗ್ರಾಮದ ಸಾಧಕರಿಗೆ ಹಾಗೂ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಗೌರವಿಸುವುದರೊಂದಿಗೆ ಅನ್ನ ಸಂತರ್ಪಣೆಯನ್ನು ಪ್ರತಿಷ್ಠಾನ ನಡೆಸಿಕೊಂಡು ಬಂದಿತ್ತು. ಈ ಬಾರಿ ಭಾನುವಾರ ಶಾಸಕ ಡಿ.ಎಸ್.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಕುವೆಂಪು ವಿ.ವಿ.ಕುಲಪತಿ ಡಾ.ವೀರಭದ್ರಪ್ಪನವರು ಯಡೆಯೂರು ಕ್ಷೇತ್ರದ ಶ್ರೀರೇಣುಕ ಶಿವಾಚಾರ್ಯರ ಸಾನಿಧ್ಯದಲ್ಲಿ ಸಮಾರಂಭವನ್ನು ಉದ್ಘಾಟಿಸಬೇಕಾಗಿತ್ತು. ಕೊರೋನ ತೊಂದರೆಯ ಹಿನ್ನಲೆಯಲ್ಲಿ ಸರ್ಕಾರದ ಸಲಹೆಯ ಮೇರೆಗೆ ಯುಗಮಾನೋತ್ಸವವನ್ನು ಮುಂದೂಡಿರುವುದಾಗಿ ಶ್ರೀಗಳು ತಿಳಿಸಿದ್ದಾರೆ.

Related posts

ಪೌರತ್ವ ಕಾಯ್ದೆ ವಿರೋಧಿಸುವ ಮೂಲಕ ಕಾಂಗ್ರೆಸ್ಸಿಗರು ದೇಶದ್ರೋಹ ಮಾಡುತ್ತಿದ್ದಾರೆ: ಡಿ.ಹೆಚ್.ಶಂಕರಮೂರ್ತಿ

Times fo Deenabandhu

ಪೇಜಾವರ ಶ್ರೀ ಔಟ್‌ ಆಫ್ ಡೇಂಜರ್: ಆರೋಗ್ಯದಲ್ಲಿ ಚೇತರಿಕೆ

Times fo Deenabandhu

ಮರಳು ಬ್ಲಾಕ್‌ಗಳ ನಿರ್ವಾಹಕರು ನಿಯಮ ಪಾಲಿಸಲು ಸೂಚನೆ : ಡಿ.ಸಿ.

Times fo Deenabandhu