Times of Deenabandhu
  • Home
  • ಪ್ರಧಾನ ಸುದ್ದಿ
  • ಅರ್ಜುನ್ ಜನ್ಯ ಈಸ್ ಬ್ಯಾಕ್‌! ಗುಣಮುಖರಾಗಿ ಕೆಲಸ ಶುರು ಮಾಡಿದ ‘ಮ್ಯಾಜಿಕಲ್ ಕಂಪೋಸರ್‌’
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

ಅರ್ಜುನ್ ಜನ್ಯ ಈಸ್ ಬ್ಯಾಕ್‌! ಗುಣಮುಖರಾಗಿ ಕೆಲಸ ಶುರು ಮಾಡಿದ ‘ಮ್ಯಾಜಿಕಲ್ ಕಂಪೋಸರ್‌’

ಕೆಲ ದಿನಗಳ ಹಿಂದೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಹೃದಯಾಘಾತವಾಗಿತ್ತು. ಚಂದನ್‌ ಶೆಟ್ಟಿ ಮತ್ತು ನಿವೇದಿತಾ ವಿವಾಹದ ಸಲುವಾಗಿ ಮೈಸೂರಿಗೆ ಹೋಗಿದ್ದ ಅವರು ಹೃದಯಾಘಾತಕ್ಕೆ ಒಳಗಾಗಿದ್ದು ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ವೈದ್ಯರು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ದರು. ಕಳೆದ ಒಂದೂವರೆ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಅರ್ಜುನ್ ಸಕ್ರಿಯರಾಗಿದ್ದಾರೆ. ಹಲವು ಸೂಪರ್‌ ಹಿಟ್‌ ಸಿನಿಮಾಗಳಿಗೆ ಸಂಗೀತ ನೀಡಿರುವ ಅವರಿಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ದಿಢೀರನೇ ಆ ರೀತಿ ಆದಾಗ ಅಭಿಮಾನಿಗಳಲ್ಲೂ ಆತಂಕ ಮನೆ ಮಾಡಿತ್ತು. ಸದ್ಯ ಅರ್ಜುನ್ ಗುಣಮುಖರಾಗಿದ್ದಾರೆ. ಎಷ್ಟರಮಟ್ಟಿಗೆಂದರೆ, ಮರಳಿ ಸಂಗೀತ ನಿರ್ದೇಶನದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

ಪ್ರೇಮ್‌ ನಿರ್ದೇಶನದ ‘ಏಕ್‌ ಲವ್ ಯಾ’ಗೆ ಅವರು ಸಂಗೀತ ನೀಡುತ್ತಿದ್ದಾರೆ. ಈಗ ಆ ಸಿನಿಮಾದ ಕೆಲಸಕ್ಕೆ ಚಾಲನೆ ಕೊಟ್ಟಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವುದು ಹೀಗೆ; ‘ಮ್ಯೂಸಿಕ್ ಬೀಟ್ಸ್ ಇರೋವರ್ಗೂ ನಮ್ ಹಾರ್ಟ್ ಬೀಟ್ ಯಾವತ್ತೂ ನಿಲ್ಲಲ್ಲ ಅಂತ ವಾಪಸ್ ಬಂದಿದ್ದಾರೆ ನಮ್ ಅರ್ಜುನ್‌ ಜನ್ಯ. ದಿ ಮ್ಯಾಜಿಕಲ್‌ ಕಂಪೋಸರ್ ಬ್ಯಾಕ್ ವಿತ್ ಮ್ಯಾಜಿಕಲ್ ಪವರ್ ಆಗೇನ್‌. ‘ಏಕ್‌ ಲವ್ ಯಾ’ ಹಾಡುಗಳು ಬೇಗ ರಿಲೀಸ್ ಆಗಲಿವೆ’ ಎಂದಿದ್ದಾರೆ ಪ್ರೇಮ್‌.
ಹಾಡುಗಳಿಗೆ ಸಂಬಂಧಪಟ್ಟ ಎಲ್ಲ ಕೆಲಸವನ್ನು ಅರ್ಜುನ್‌ ಜನ್ಯ ಈ ಮೊದಲೇ ಮಾಡಿಕೊಟ್ಟಿದ್ದರು. ಈಗ ಒಂದು ಬಿಟ್ ಸಾಂಗ್ ರೆಕಾರ್ಡಿಂಗ್ ಮಾಡಿಕೊಟ್ಟಿದ್ದಾರೆ. ಹಾಡುಗಳನ್ನು ಗಾಯಕರು ಹಾಡಬೇಕಿದೆ. ಸಿಂಪೋನಿ ಆರ್ಕೆಸ್ಟ್ರಾ ಬಳಸಿ ಯುರೋಪ್‌ನಲ್ಲಿ ರೆಕಾರ್ಡಿಂಗ್ ಮಾಡಿಸಿದ್ದೇವೆ. ಆರು ಸಾಂಗ್ ಅಲ್ಲಿ ಆಗಿದ್ದರೆ, ಎರಡು ಹಾಡುಗಳನ್ನು ಮುಂಬೈನಲ್ಲಿ ರೆಕಾರ್ಡ್ ಮಾಡಿದ್ದೇವೆ. ಆದರೆ, ಅದನ್ನು ಚೆಕ್‌ ಮಾಡಿಸಬೇಕಿತ್ತು. ಅದಕ್ಕೆ ಅರ್ಜುನ್ ಜನ್ಯ ಅವರಿಗಾಗಿ ಇಷ್ಟು ದಿನ ಕಾದಿದ್ದೆ. ಕೀ ಬೋರ್ಡ್ ಕೊಟ್ಟು ಬೇರೆಯವರ ಬಳಿ ಆ ಕೆಲಸ ಮಾಡಿಸಬಹುದಿತ್ತು. ಆದರೆ, ನನಗೆ ತೃಪ್ತಿ ಆಗುತ್ತಿರಲಿಲ್ಲ. ಅದಕ್ಕೆ ಅವರಿಂದಲೇ ಕೆಲಸ ಮಾಡಿಸುತ್ತಿದ್ದೇನೆ. ಅರ್ಮನ್‌ ಮಲ್ಲಿಕ್‌, ಸಿದ್ ಶ್ರೀರಾಮ್‌, ಶ್ರೇಯಾ ಘೋಷಾಲ್‌, ಕೈಲಾಶ್‌ ಕೇರ್ ಮುಂತಾದವರು ಹಾಡುಗಳನ್ನು ಹಾಡಲಿದ್ದಾರೆ’ ಎನ್ನುತ್ತಾರೆ ಪ್ರೇಮ್‌.
‘ಈ ಕೊರೊನಾ ಸಮಸ್ಯೆ ಇಲ್ಲದೇ ಇದ್ದರೆ, ಇಷ್ಟೊತ್ತಿಗಾಗಲೇ ಹಾಡುಗಳು ರಿಲೀಸ್ ಆಗಬೇಕಿತ್ತು. ಈಗ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿನಿಮಾವನ್ನು ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದ್ದೇವೆ. ಸದ್ಯ ಸಿನಿಮಾ ನೋಡಿ, ಹಿನ್ನೆಲೆ ಸಂಗೀತ ನೀಡುವುದಕ್ಕೆ ಅರ್ಜುನ್‌ ತಯಾರಿ ಮಾಡಿಕೊಳ್ಳಲಿದ್ದಾರೆ. ಅವರೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ತುಂಬ ಲವಲವಿಕೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ನನಗೆ ಅವರ ಜೊತೆ ಕೆಲಸ ಮಾಡೋಕೆ ತುಂಬ ಖುಷಿ ಆಗುತ್ತದೆ. ನಮ್ಮಿಬ್ಬರ ಹೊಂದಾಣಿಕೆ ಚೆನ್ನಾಗಿದೆ. ನಮ್ಮ ನಿರ್ಮಾಪಕಿ ರಕ್ಷಿತಾ ಕೂಡ ಒಂದು ತಿಂಗಳು ತಡವಾದರೂ ಪರವಾಗಿಲ್ಲ ಸಂಪೂರ್ಣ ವಿಶ್ರಾಂತಿ ಪಡೆದುಕೊಂಡ ಮೇಲೆ ಕೆಲಸ ಶುರು ಮಾಡಲಿ ಎಂದಿದ್ದರು. ನಮ್ಮದೇ ಹೋಮ್‌ ಬ್ಯಾನರ್ ಸಿನಿಮಾ ಆಗಿರುವುದರಿಂದ ಯಾವುದೇ ಸಮಸ್ಯೆ ಇಲ್ಲ’ ಎನ್ನುತ್ತಾರೆ ಪ್ರೇಮ್‌.
ಚಿತ್ರದ ಹಾಡುಗಳ ಬಗ್ಗೆ ಮಾತನಾಡುವ ಪ್ರೇಮ್‌. ‘ಮೇ ತಿಂಗಳಲ್ಲಿ ಆಡಿಯೋ ಬಿಡುಗಡೆ ಮಾಡಬೇಕು. ಸದ್ಯ ಡಬ್ಬಿಂಗ್ ಎಲ್ಲ ಮುಗಿದಿದೆ. ಎರಡು ಹಾಡುಗಳ ಶೂಟಿಂಗ್ ಮಾಡಬೇಕಿದೆ. ಅದಕ್ಕಾಗಿ ಫ್ರಾನ್ಸ್, ಈಜಿಪ್ಟ್ ದೇಶಗಳಿಗೆ ಚಿತ್ರಿಕರಣ ಸಲುವಾಗಿ ಹೋಗ ಬೇಕಿತ್ತು. ಅದಕ್ಕಾಗಿ ಇಡೀ ತಂಡ ಹೋಗುವುದಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಕೊರೊನಾದಿಂದಾಗಿ ಎಲ್ಲವೂ ಕ್ಯಾನ್ಸಲ್‌ ಮಾಡಿದ್ದೇವೆ. ಮಾರ್ಚ್‌ 31ರವರೆಗೆ ಕಾಯುತ್ತೇವೆ. ಆನಂತರವೂ ಪರಿಸ್ಥಿತಿ ಹೀಗೆ ಇದ್ದರೆ, ಆ ಎರಡು ಹಾಡುಗಳ ಚಿತ್ರೀಕರಣವನ್ನು ಭಾರತದಲ್ಲೇ ಮಾಡಲಿದ್ದೇವೆ. ಅಲ್ಲೆಲ್ಲ ಹೋಗಿ ಸುಮ್ಮನೆ ಸಮಸ್ಯೆ ಸೃಷ್ಟಿ ಮಾಡಿಡಕೊಳ್ಳುವುದು ಬೇಡ ಎಂಬುದು ನಮ್ಮ ನಿಲುವು’ ಎನ್ನುತ್ತಾರೆ ಪ್ರೇಮ್‌. ಕೊರೊನಾ ವೈರಸ್‌ ಬಗ್ಗೆಯೂ ಮಾತನಾಡುವ ಅವರು, ‘ಕೊರೊನಾ ಬಗ್ಗೆ ಸುಳ್ಳು ವದಂತಿಗಳನ್ನು ನಂಬಿ ಹೆದುರ್ಕೊಂಡು ಕೂತಿದ್ರೆ ಯಾವತ್ತಾದ್ರೂ ಒಂದಿನ ಸಾಯೋ ನಾವುಗಳು ಇವತ್ತೇ ಸಾಯೋದ್ರಲ್ಲಿ ಸಂಶಯನೇ ಇಲ್ಲ. ಸರಿಯಾದ ಮಾಹಿತಿಯನ್ನು ತಿಳ್ಕೋಳಿ. ಮುನ್ನೆಚ್ಚರಿಕೆವಹಿಸಿ ಪ್ರತಿಯೊಬ್ಬರು ಸುರಕ್ಷಿತವಾಗಿರಿ’ ಎಂದಿದ್ದಾರೆ.

Related posts

ಶೀಘ್ರದಲ್ಲೇ ಹೆಚ್ಚಲಿದೆ ಜಿಎಸ್‌ಟಿ ದರ

Times fo Deenabandhu

ಶಿವಮೊಗ್ಗ ರೈಲ್ವೇ ಸಂಪರ್ಕ ಇನ್ನಷ್ಟು ಅಭಿವೃದ್ಧಿಗೆ ಕ್ರಮ: ಸಂಸದ ಬಿ.ವೈ.ರಾಘವೇಂದ್ರ

Times fo Deenabandhu

24×7 ನೆಫ್ಟ್​ ಸೇವೆ ಆರಂಭವಾಗಿದ್ದು,ವಿಶ್ವದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ: ಕೇವಲ 8 ಗಂಟೆಗಳ ವಹಿವಾಟು ಎಷ್ಟು ನೋಡಿ..!

Times fo Deenabandhu