Times of Deenabandhu
  • Home
  • ಜಿಲ್ಲೆ
  • ಪಾಪು ಕನ್ನಡದ ಸಾಕ್ಷಿಪ್ರಜ್ಞೆ, ಹೋರಾಟಗಾರ
ಚಿತ್ರದುರ್ಗ ಜಿಲ್ಲೆ

ಪಾಪು ಕನ್ನಡದ ಸಾಕ್ಷಿಪ್ರಜ್ಞೆ, ಹೋರಾಟಗಾರ

ಸಾಣೇಹಳ್ಳಿ:  ಇಲ್ಲಿನ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ನಿನ್ನೆ ರಾತ್ರಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದ ನಾಡೋಜ ಪಾಟೀಲ ಪುಟ್ಟಪ್ಪ ಅವರ ಅತ್ಯಸಂಸ್ಕಾರ (ಹಾವೇರಿ ಜಿಲ್ಲೆ, ರಾಣೇಬೆನ್ನೂರು ತಾಲ್ಲೂಕಿನ ಹಲಗೇರಿಯಲ್ಲಿ)ದಲ್ಲಿ ಭಾಗವಹಿಸಿ ಮಾತನಾಡುತ್ತ ‘ಪಾಪು’ ಎಂದೇ ಪ್ರಖ್ಯಾತರಾದ ಪಾಟೀಲ ಪುಟ್ಟಪ್ಪನವರು ಕನ್ನಡ ನಾಡಿನ ಹಿರಿಯ ಚೇತನ, ಶತಾಯುಷಿಗಳು. ಕನ್ನಡದ ಸಾಕ್ಷಿಪ್ರಜ್ಞೆ, ಹೋರಾಟಗಾರ, ಹಿರಿಯ ಸಾಹಿತಿ, ಪತ್ರಕರ್ತರಾಗಿದ್ದವರು. ಹಿರಿಯ ಜಗದ್ಗುರುಗಳವರ ಕಾಲದಿಂದಲೂ ಶ್ರೀಮಠದ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದವರು. ಬಹುತೇಕ ಎಲ್ಲ ತರಳಬಾಳು ಹುಣ್ಣಿಮೆಯ ಕಾರ್ಯಕ್ರಮಗಳಲ್ಲಿ ಅವರ ಉಪನ್ಯಾಸ ಖಾಯಂ ಆಗಿರುತ್ತಿತ್ತು. ಕನ್ನಡ ನೆಲ-ಜಲದ ವಿಷಯವಾಗಿ ಅಪಾರ ಅಭಿಮಾನ ಹೊಂದಿದ್ದರು. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಕರ್ನಾಟಕದಲ್ಲಿ ಆಡಳಿತ ಭಾಷೆ ಜಾರಿಯಾಗುವಲ್ಲಿ ಬಹುವಾಗಿ ಶ್ರಮಿಸಿದವರು. ಅದ್ಭುತ ನೆನಪಿನ ಶಕ್ತಿಯುಳ್ಳ ‘ಪಾಪು’ ಒಂದು ರೀತಿ ಕನ್ನಡ ನಾಡಿನ ಇತಿಹಾಸ, ಹೋರಾಟಗಳನ್ನು ಕುರಿತ ಜೀವಂತ ನಿಘಂಟಿದ್ದಂತೆ ಇದ್ದರು. ಕನ್ನಡ ನೆಲ, ಜಲ, ಅಭಿವೃದ್ಧಿಪರ ವಿಷಯಗಳಲ್ಲಿ ಎಂದೂ ಯಾರೊಡನೆಯೂ ರಾಜಿಮಾಡಿಕೊಳ್ಳದ ನಿಷ್ಠುರವಾದಿಗಳು. ಧೀರೋದತ್ತ ವ್ಯಕ್ತಿತ್ವ ಹೊಂದಿದವರು. ವಯೋಸಹಜ ರೋಗಗಳಿಂದಾಗಿ ಇತ್ತೀಚೆಗಷ್ಟೇ ಕಿಮ್ಸ್ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿತ್ತು. ಆಗ ಅವರನ್ನು ಕಂಡು ಆರೋಗ್ಯ ವಿಚಾರಿಸುತ್ತಿರುವಾಗ ಬಲವಾಗಿ ನಮ್ಮ ಕೈಹಿಡಿದು ‘ನನಗೇನಾಗಿದೆ? ಆದಷ್ಟು ಬೇಗ ಹುಷಾರಾಗಿ ಬರುವೆ. ಸಾಣೇಹಳ್ಳಿಯಲ್ಲಿ ಒಂದು ಭಾಷಣ ಮಾಡುವೆ’ ಎಂದು ಹೇಳಿದ್ದರು. ನಮ್ಮ ಬಗೆಗೆ ವಿಶೇಷವಾದ ಗೌರವಾದರಗಳನ್ನು ಇಟ್ಟುಕೊಂಡಿರುವ ಹಲವರಲ್ಲಿ ಪುಟ್ಟಪ್ಪನವರೂ ಒಬ್ಬರು. ಆದರೆ ಅವರೀಗ ನೆನಪು ಮಾತ್ರ. ಅವರ ವ್ಯಕ್ತಿತ್ವ ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಅವರನ್ನು ಮರೆಯುವುದು ಸಾಧ್ಯವಿಲ್ಲ. ಅಕ್ಷರಷಃ ಒಬ್ಬ ಕನ್ನಡ ಪರ ಹೋರಾಟಗಾರನನ್ನು, ಸ್ವಾಭಿಮಾನಿ ಪತ್ರಕರ್ತನನ್ನು, ಸಾಹಿತಿಯನ್ನು ಕನ್ನಡ ನಾಡು ಕಳೆದುಕೊಂಡಿದೆ ಎಂದು ವಿಷಾದಿಸಿದರು.

Related posts

ಎಸ್‌ಕ್ಯೂಲೆಂಟ್ ಗಾಲ ೨೦೨೦ : ಅಂತರ್ ಕಾಲೇಜು ಫುಡ್ ಫೆಸ್ಟ್

Times fo Deenabandhu

ನಾಡೋಜ ಪಾಟೀಲ ಪುಟ್ಟಪ್ಪ ಶ್ರದ್ದಾಂಜಲಿ

Times fo Deenabandhu

 ಗ್ರಾಮ ಜಾಗೃತಿಯಲ್ಲಿ ಎನ್‌ಎಸ್‌ಎಸ್ ಪಾತ್ರ ಮಹತ್ವದ್ದು: ಎಂ ಎಲ್ ವೈಶಾಲಿ

Times fo Deenabandhu