Times of Deenabandhu
  • Home
  • ಪ್ರಧಾನ ಸುದ್ದಿ
  • ಜಾತಿ, ಹಣದಿಂದ ಸಾರ್ವಜನಿಕ ಬದುಕು ಹಾಳು: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿಷಾದ
ಪ್ರಧಾನ ಸುದ್ದಿ ಮುಖ್ಯಾಂಶಗಳು ರಾಜಕೀಯ ರಾಜ್ಯ

ಜಾತಿ, ಹಣದಿಂದ ಸಾರ್ವಜನಿಕ ಬದುಕು ಹಾಳು: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ವಿಷಾದ

Spread the love

ಬೆಂಗಳೂರು: ಸಾರ್ವಜನಿಕ ಬದುಕನ್ನು ಹಾಳುಗೆಡವಿ, ಸಂವಿಧಾನದ ಆಶಯಗಳಿಗೆ ಭಂಗ ತಂದಿರುವ ಜಾತಿ ಮತ್ತು ಹಣದ ಪ್ರಭಾವ ತಗ್ಗಿಸಲು ಗಂಭೀರ ಚಿಂತನೆ ಹಾಗೂ ಪ್ರಯತ್ನ ಆಗಬೇಕು ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಪ್ರತಿಪಾದಿಸಿದರು. ಸಂವಿಧಾನ ಕುರಿತ ಚರ್ಚೆಯಲ್ಲಿಮಾತನಾಡಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲೇಬೇಕಿದೆ. ಅದಕ್ಕಾಗಿ ಬಿಎಸ್‌ವೈ ಸರಕಾರಕ್ಕೆ ಎಲ್ಲ ಸಹಕಾರ ನೀಡಲು ಸಿದ್ಧ್ದರಿದ್ದೇವೆ ಎಂದು ಹೇಳಿದರು. ‘ಟಿ.ಎನ್‌.ಶೇಷನ್‌ ಕಾಲದಲ್ಲಿ ಚುನಾವಣೆ ವ್ಯವಸ್ಥೆಯಲ್ಲಿ ಆಗಿದ್ದ ಸುಧಾರಣೆಗಳು ಮತ್ತೆ ದಿಕ್ಕು ತಪ್ಪಿವೆ. ಕರಪತ್ರಗಳ ಬದಲಿಗೆ ಚುನಾವಣೆಯಲ್ಲಿ ಗರಿಗರಿ ನೋಟುಗಳನ್ನು ಚೆಲ್ಲಲಾಗುತ್ತಿದೆ. ಮಾಧ್ಯಮಗಳೂ ಜಾತಿ ಹಿಡಿದು ಹೊರಟಿವೆ ಎಂದು ವಿಷಾದಿಸಿದರು. ಇನ್ನು ಸರಕಾರ ಬೀಳಿಸಿ, ಗ್ರಂಥಗಳನ್ನು ಓದಲು ಸಮಯಾವಕಾಶ ಮಾಡಿಕೊಟ್ಟಿದ್ದಕ್ಕೆ ಸಿಎಂ ಬಿ.ಎಸ್‌.ಯಡಿಯೂರಪ್ಪಗೆ ಥ್ಯಾಂಕ್ಸ್‌ ಹೇಳಿದ ಕುಮಾರಸ್ವಾಮಿ, ಯತ್ನಾಳ ಭ್ರಷ್ಟಾಚಾರ ಆರೋಪದ ವಿರುದ್ಧ ಗುಡುಗಿದರು. ಆರೋಪ ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಸವಾಲು ಹಾಕಿದರು. ರೇವಣ್ಣನವರ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಹೇಳಿರುವ ಜಾತಕ ಪ್ರಸಂಗವು ಸದನದ ಗಮನ ಸೆಳೆಯಿತು. ಇದರ ಜೊತೆ ಮಾಜಿ ಸಚಿವ ಎಚ್‌.ಡಿ.ರೇವಣ್ಣ, ನಮ್ಮ ಸರಕಾರ ಇದ್ದಾಗ 10 ಪರ್ಸೆಂಟ್‌ ಸರಕಾರ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದರು, ಈಗ ಎಷ್ಟು ಪರ್ಸೆಂಟ್‌ ಸರಕಾರ ಇದೆ ಎಂದು ಹೇಳಬೇಕು ಎಂದರು.
”ಓದುವ ಕಾಲಕ್ಕೆ ಓದಲಿಲ್ಲ. ಈಗ ಸಮಯ ಸಿಕ್ಕಿದೆ. ಸಂವಿಧಾನ ಸೇರಿ ನಾನಾ ಗ್ರಂಥಗಳನ್ನು ಅಭ್ಯಾಸ ಮಾಡುತ್ತಿದ್ದೇನೆ. ಮೈತ್ರಿ ಸರಕಾರ ಕೆಡವಿ ಅಧಿಕಾರ ಹಿಡಿಯುವ ಮೂಲಕ ನಾನು ಅಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟರು,” ಎಂದು ಸಿಎಂ ಬಿಎಸ್‌ವೈಗೆ ಕುಮಾರಸ್ವಾಮಿ ಸದನದಲ್ಲೇ ಥ್ಯಾಂಕ್ಸ್‌ ಹೇಳಿದರು. ಆದರೆ, ಈ ಮಾತಿಗೆ ಬಿಎಸ್‌ವೈ ಮುಗುಮ್ಮಾಗಿ ಕುಳಿತರು.
”ಅಧಿಕಾರ ಹಿಡಿದು ಗೌಡರ ಕುಟುಂಬ ಸಿರಿವಂತಾಯಿತು ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ. ಅಧಿಕಾರಿಗಳ ವರ್ಗಾವಣೆಯಲ್ಲಿ ಸಾವಿರಾರು ಕೋಟಿ ರೂ. ವಸೂಲು ಮಾಡಿದ್ದಾರೆ ಎಂದೆಲ್ಲಾ ಮಾತಾಡಿದ್ದಾರೆ. ಈ ಆರೋಪವನ್ನು ಯತ್ನಾಳ್‌ ಸಾಬೀತುಪಡಿಸಿದರೆ ಇಂದೇ ರಾಜೀನಾಮೆ ನೀಡಿ ರಾಜಕಾರಣದಿಂದ ನಿವೃತ್ತನಾಗುತ್ತೇನೆ” ಎಂದು ಕುಮಾರಸ್ವಾಮಿ ಗುಡುಗಿದರು.
“ದೇವೇಗೌಡರು ಮಾಜಿ ಪ್ರಧಾನಿಯಾದ ಬಳಿಕವೂ ರಾಜಾಜಿನಗರದ ಬಡ್ಡಿ ಚನ್ನಪ್ಪ ಅವರಿಗೆ ಖಾಲಿ ಚೆಕ್‌ ಕೊಟ್ಟು ಬಡ್ಡಿಗೆ ಸಾಲ ತೆಗೆದುಕೊಂಡು ಪಕ್ಷದ ಅಭ್ಯರ್ಥಿಗಳಿಗೆ ದೇಣಿಗೆ ಕೊಟ್ಟಿದ್ದಾರೆ. ಈ ರೀತಿ ಸಾರ್ವಜನಿಕ ಬದುಕಿನಲ್ಲಿ ಬದುಕುತ್ತಿರುವ ದೇವೇಗೌಡರ ಬಗ್ಗೆ ಮಾತನಾಡಬೇಡಿ. ಈಗಲೂ ಬಡ್ಡಿ ಚನ್ನಪ್ಪ ಬದುಕಿದ್ದಾರೆ. ಕೇಳಿಕೊಂಡು ಬನ್ನಿ,” ಎಂದು ಕುಮಾರಸ್ವಾಮಿ ಹೇಳಿದರು.
”ದೇವೇಗೌಡರು ಸಚಿವರಾಗಲು 23 ವರ್ಷ, ಎಸ್‌.ಆರ್‌.ಬೊಮ್ಮಾಯಿ 18 ವರ್ಷ ಬೇಕಾಯಿತು” ಎಂದು ರೇವಣ್ಣ ಹೇಳುತ್ತಿದ್ದಾಗ, ಗೃಹ ಸಚಿವ ಬಸವರಾಜ ಬೊಮ್ಮಾಯಿ ”ರೇವಣ್ಣ ಸ್ವಲ್ಪಮಟ್ಟಿಗೆ ದೊಡ್ಡಗೌಡರ ರೀತಿ ಕೆಳಹಂತದಿಂದ ಬಂದರು. ಆದರೆ, ಎಚ್ಡಿಕೆ ಲಾಸ್ಟ್‌ ಬೇಂಚ್‌ನಿಂದ ನೇರವಾಗಿ ಫಸ್ಟ್‌ ಬೆಂಚ್‌ಗೆ ಬಂದರು” ಎಂದರು. ಎಲ್ಲರೂ ನಿಮ್ಮ ಹಣೆಬರಹ ಹೇಳಿಕೊಳ್ಳುತ್ತಿದ್ದೀರಾ? ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಕಾಲೆಳೆದರು. ಆಗ ಬೊಮ್ಮಾಯಿ,”ದೇವೇಗೌಡರು ನನ್ನ ಬಳಿ ಮೊದಲೇ ಹೇಳಿದ್ದರು. ಕುಮಾರಸ್ವಾಮಿ ಶಾಸಕನಾದ ಕೂಡಲೇ ಸಿಎಂ ಆಗ್ತಾರೆ. ಆದರೆ, ರೇವಣ್ಣ ಏನಾದರೂ ಆದರೆ ನನಗೆ ಮತ್ತೆ 2ನೇ ಇನ್ನಿಂಗ್ಸ್‌ಗೆ ಕಾಲ ಕೂಡಿಬರುತ್ತೆ. ಜಾತಕ ಸುಳ್ಳಾಗಲ್ಲ ಎಂದು ಹೇಳಿದ್ದರು” ಎಂದು ಬೊಮ್ಮಾಯಿ ಸದನದ ಗಮನ ಸೆಳೆದರು.
ಮಧ್ಯಪ್ರವೇಶಿಸಿದ ಎಚ್‌.ಡಿ.ರೇವಣ್ಣ ”ರಾಜ್ಯದಲ್ಲಿ 10 ಪರ್ಸೆಂಟ್‌ ಸರಕಾರ ಇದೆ ಎಂದು ಮೋದಿ ಹೇಳಿದ್ದರು. ಈಗ ಎಷ್ಟು ಪರ್ಸೆಂಟ್‌ ಸರಕಾರ ಇದೆ? ಎಲ್ಲವನ್ನೂ ಹೇಳಿ,” ಎಂದು ತಾಕೀತು ಮಾಡಿದರು. ಆರಗ ಜ್ಞಾನೇಂದ್ರ ಅವರೂ ಧ್ವನಿಗೂಡಿಸಿ ”ಮುಗುಮ್ಮಾಗಿ ಬೇಡ, ಮುಕ್ತವಾಗಿ ಮಾತನಾಡಿ” ಎಂದು ಸಲಹೆ ಮಾಡಿದರು.


Spread the love

Related posts

ಟ್ರಂಪ್​ ಪದಚ್ಯುತಿ ಪ್ರಕ್ರಿಯೆಗೆ ಅಮೆರಿಕ ಸಂಸತ್​ನಿಂದ ಅಧಿಕೃತ ಮುದ್ರೆ

Times fo Deenabandhu

ರಾಜ್ಯದ ಎಲ್ಲ ತಾಂಡಗಳನ್ನು ಕಂದಾಯ ಗ್ರಾಮವೆಂದು ರಾಜ್ಯ ಸರ್ಕಾರ ಘೋಷಣೆ ಮಾಡಬೇಕು – ಕಾಂಗ್ರೆಸ್ ಮುಖಂಡ ಎಸ್.ಶಿವಮೂರ್ತಿ ನಾಯ್ಕ ಒತ್ತಾಯ

Times fo Deenabandhu

ಒಂದೇ ವಾಟ್ಸ್​​​ಆ್ಯಪ್​ ಅಕೌಂಟ್​ಅನ್ನು ಎರಡಕ್ಕಿಂತ ಹೆಚ್ಚು ಸಾಧನಗಳಲ್ಲಿ ಬಳಸಬಹುದು

Times fo Deenabandhu
risus Phasellus consequat. nec vel, Aenean ut id amet, risus.