Times of Deenabandhu
  • Home
  • ಸಿನಿಮಾ
  • ‘ಕೆಜಿಎಫ್‌ ಚಾಪ್ಟರ್‌ 2’ ಶೂಟಿಂಗ್‌ ಪೂರ್ಣ
ಪ್ರಧಾನ ಸುದ್ದಿ ಮುಖ್ಯಾಂಶಗಳು ಸಿನಿಮಾ

‘ಕೆಜಿಎಫ್‌ ಚಾಪ್ಟರ್‌ 2’ ಶೂಟಿಂಗ್‌ ಪೂರ್ಣ

ರಾ ಕಿ ಭಾಯ್‌(ಯಶ್‌) ಹುಟ್ಟಿ ಬೆಳೆದಿದ್ದು, ಕೋಲಾರದ ಚಿನ್ನದ ಮಣ್ಣಿನಲ್ಲಿಯೇ. ಆತನಿಗೆ ಅಧಿಕಾರದ ಮೇಲೆ ಕಡುಮೋಹ. ಪವರ್‌ ಬೆನ್ನುಹತ್ತಿ ಆತ ಹೊರಟಿದ್ದು ಮುಂಬೈಗೆ. ಕಬ್ಬಿಣದ ತುಂಡಿನಂತಿದ್ದ ಅವನ ಮನಸ್ಸನ್ನು ಅಲ್ಲಿನ ಬೀದಿಗಳು ಚೆನ್ನಾಗಿ ಕುಟ್ಟಿದ್ದರಿಂದಲೇ ಆತ ಹರಿತವಾದ ತಲವಾರ್‌ ಆಗಿದ್ದು. ಅಲ್ಲಿನ ಕೊಳೆಗೇರಿಗಳಲ್ಲಿ ಬೆಳೆದ ಆತ ಶ್ರೀಮಂತನಾಗುವ ಆಸೆಯಿಂದ ಮತ್ತೆ ಕೋಲಾರದ ಚಿನ್ನದ ಗಣಿಗೆ ಬರುವುದೇ ‘ಕೆಜಿಎಫ್‌ ಚಾಪ್ಟರ್‌ 1’ ಚಿತ್ರದ ಕಥಾನಕ.

ನಿರ್ದೇಶಕ ಪ್ರಶಾಂತ್‌ ನೀಲ್‌ ಮತ್ತು ಯಶ್‌ ಕಾಂಬಿನೇಷನ್‌ನಡಿ ಮೂಡಿಬಂದ ಈ ಚಿತ್ರ ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿತ್ತು. ಮೊದಲ ಅಧ್ಯಾಯದಲ್ಲಿ ಅರ್ಧದಷ್ಟು ಕಥೆ ಹೇಳಿದ್ದ ನಿರ್ದೇಶಕ ನೀಲ್‌, ‘ಕೆಜಿಎಫ್‌ ಚಾಪ್ಟರ್‌ 2’ನಲ್ಲಿ ಉಳಿದರ್ಧ ಕಥೆ ಹೇಳುತ್ತಿದ್ದಾರೆ.
ಮೈಸೂರು, ಬೆಂಗಳೂರು, ಬಳ್ಳಾರಿ, ಹೈದರಾಬಾದ್‌ ಸೇರಿದಂತೆ ವಿವಿಧೆಡೆ ಎರಡನೇ ಅಧ್ಯಾಯದ ಶೂಟಿಂಗ್‌ ಪೂರ್ಣಗೊಳಿಸಿರುವ ಚಿತ್ರತಂಡ ಪೊಸ್ಟ್‌ ಪ್ರೊಡಕ್ಷನ್‌ನಲ್ಲಿ ತೊಡಗಿದೆ. ‘ಚಾಪ್ಟರ್‌ 1’ರ ಚಿತ್ರೀಕರಣದ ವೇಳೆಯೇ ‘ಚಾಪ್ಟರ್‌ 2’ರ ಕಾಲುಭಾಗದಷ್ಟು ಚಿತ್ರೀಕರಣವನ್ನು ಚಿತ್ರತಂಡ ಪೂರ್ಣಗೊಳಿಸಿತ್ತಂತೆ.

ಸಿನಿಮಾ ಸಂಬಂಧ ಹೊಂಬಾಳೆ ಫಿಲ್ಮ್ಸ್‌ನ ಸೃಜನಶೀಲ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್‌ ಗೌಡ ‘ಪ್ರಜಾಪ್ಲಸ್‌’ ಜೊತೆಗೆ ಮಾಹಿತಿ ಹಂಚಿಕೊಂಡಿದ್ದು ಹೀಗೆ; ‘ಒಂದೆರಡು ದಿನಗಳ ಸಣ್ಣಪುಟ್ಟ ಶೂಟಿಂಗ್‌ ಬಾಕಿಯಿದೆ. ಸಿನಿಮಾದ ಮಾತಿನ ಭಾಗ ಮತ್ತು ಹಾಡುಗಳ ಚಿತ್ರೀಕರಣ ಪೂರ್ಣಗೊಂಡಿದೆ. ಒಟ್ಟಾರೆ 100 ದಿನಗಳ ಕಾಲ ಶೂಟಿಂಗ್‌ ನಡೆಸಿದ್ದೇವೆ. ಕೆಲವೇ ದಿನಗಳಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಅಪ್‌ಡೇಟ್‌ ನೀಡುತ್ತೇವೆ. ಟೀಸರ್‌ ಬಿಡುಗಡೆ ಬಗ್ಗೆಯೂ ಮಾಹಿತಿ ನೀಡಲಾಗುವುದು’ ಎಂದು ವಿವರಿಸುತ್ತಾರೆ.

ಬಾಲಿವುಡ್‌ ನಟ ಸಂಜಯ್ ದತ್‌ ‘ಅಧೀರ’ನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಮಿಕಾ ಸೇನ್‌ ಪಾತ್ರದಲ್ಲಿ ರವೀನಾ ಟಂಡನ್‌ ಕಾಣಿಸಿಕೊಂಡಿದ್ದಾರೆ. ಶ್ರೀನಿಧಿ ಶೆಟ್ಟಿ ಈ ಚಿತ್ರದ ನಾಯಕಿ. ರವಿಬಸ್ರೂರ್‌ ಸಂಗೀತ ಸಂಯೋಜಿಸಿದ್ದಾರೆ. ವಿಜಯ್‌ ಕಿರಗಂದೂರು ಬಂಡವಾಳ ಹೂಡಿದ್ದಾರೆ.
ಬಿಡುಗಡೆ ಯಾವಾಗ?
ಎಸ್‌.ಎಸ್‌. ರಾಜಮೌಳಿ ‘ಆರ್‌ಆರ್‌ಆರ್‌’ ಸಿನಿಮಾ ನಿರ್ದೇಶಿಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಇದರ ಶೂಟಿಂಗ್‌ ಇನ್ನೂ ಪೂರ್ಣಗೊಂಡಿಲ್ಲ. ‘ಆ‌ರ್‌ಆರ್‌ಆರ್‌’ ಮತ್ತು ‘ಕೆಜಿಎಫ್‌ ಚಾಪ್ಟರ್‌ 2’ ದಕ್ಷಿಣ ಭಾರತದ ಬಹುನಿರೀಕ್ಷಿತ ಚಿತ್ರಗಳು ಎಂಬುದರಲ್ಲಿ ಎರಡು ಮಾತಿಲ್ಲ. 2021ರ ಜ. 8ರಂದು ‘ಆರ್‌ಆರ್‌ಆರ್‌’ ಬಿಡುಗಡೆಯ ದಿನಾಂಕ ನಿಗದಿಯಾಗಿದೆ. ಹಾಗಿದ್ದರೆ ‘ಕೆಜಿಎಫ್‌ ಚಾಪ್ಟರ್‌ 2’ ಯಾವಾಗ ಬಿಡುಗಡೆಯಾಗಲಿದೆ? ಎಂಬುದು ಪ್ರೇಕ್ಷಕರ ಪ್ರಶ್ನೆ.

ಈ ಎರಡು ಚಿತ್ರಗಳ ಬಿಡುಗಡೆ ದಿನಾಂಕದ ನಡುವೆ ಘರ್ಷಣೆಯಾಗಲಿದೆಯೇ ಎಂಬ ಆತಂಕ ಅಭಿಮಾನಿಗಳಲ್ಲಿತ್ತು. ಆದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಯಶ್‌, ‘ಚಿತ್ರದ ಬಿಡುಗಡೆ ಸಂಬಂಧ ಆರ್‌ಆರ್‌ಆರ್‌ ಚಿತ್ರತಂಡದೊಟ್ಟಿಗೆ ನಾವು ಸಂಪರ್ಕದಲ್ಲಿದ್ದೇವೆ. ಅಲ್ಲದೇ ಎರಡೂ ಚಿತ್ರಗಳ ಹಿಂದಿ ಅವತರಣಿಕೆಯನ್ನು ಬಿಡುಗಡೆ ಮಾಡುತ್ತಿರುವುದು ಬಾಲಿವುಡ್‌ನ ಖ್ಯಾತ ವಿತರಕ ಅನಿಲ್‌ ಥಂಡಾನಿ. ಹಾಗಾಗಿ, ದಿನಾಂಕದ ಘರ್ಷಣೆ ಸಂಭವಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

Related posts

ಪುಂಡಾಟಿಕೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ: ಬೊಮ್ಮಾಯಿ

Times fo Deenabandhu

ಸ್ವಿಟ್ಜರ್ಲೆಂಡ್‌ನಲ್ಲಿ ಯಡಿಯೂರಪ್ಪ ಮೋಡಿ!

Times fo Deenabandhu

ಈ ಚಿತ್ರಗಳು ಏಲಿಯನ್ಸ್‌ 10 ಸಾವಿರ ವರ್ಷಗಳ ಹಿಂದೆ ಭೂಮಿಗೆ ಬಂದಿರುವುದಕ್ಕೆ ಸಾಕ್ಷಿಗಳಾ…?

Times fo Deenabandhu