Times of Deenabandhu
ನಮ್ಮ ವಿಶೇಷ ಮುಖ್ಯಾಂಶಗಳು

ಮಹಿಳೆಯರಿಗೊಂದು ಸಲಾಂ

Spread the love

-ದತ್ತಾತ್ರೇಯ ಹೆಗಡೆ

’ಸ್ತ್ರೀ’ ಈ ಜಗತ್ತಿನ ಕಣ್ಣು. ಪ್ರಕೃತಿ ಅನಂತ ಶಕ್ತಿಯನ್ನು, ಚೈತನ್ಯವನ್ನು ತನ್ನ ಒಡಲಲ್ಲಿ ಧರಿಸಿಕೊಂಡು ಮನುಕುಲವನ್ನು ಸದಾ ಪೊರೆಯುವ ಸಮೃದ್ಧಧಾತೆ. ಹೀಗೆಲ್ಲಾ ಕರೆಸಿಕೊಳ್ಳುವ ಮಹತ್ವದ ದರ್ಶನ ಹೊಂದಿರುವ ಸ್ತ್ರೀ ಕುಲ ಅಷ್ಟೇ ಮಟ್ಟದ ಹೀನಾಯವಾದ ಸ್ಥಿತಿಯನ್ನು ಇಂದು ಕಾಣುತ್ತಿದೆ.
ಸೃಷ್ಟಿಯ ಪ್ರಮುಖ ಪಾತ್ರಧಾರಿಯಾಗಿರುವ ಹೆಣ್ಣು ಪೂಜನೀಯಳು, ರಕ್ಷಕಳೂ ಆಗಿದ್ದು ಆಕೆಯನ್ನು ಪರಾಧೀನಳಂತೆಯೇ ನೋಡಲಾಗುತ್ತಿದೆ. ಹಾಗೆಯೇ
ನಡೆಸಿಕೊಳ್ಳಲಾಗುತ್ತಿದೆ. ನಿಕೃಷ್ಟಳನ್ನಾಗಿ, ಜ್ಞಾನಹೀನಳಂತೆ, ತೆಗಳುವ ಮೂದಲಿಸುವ ಆಕೆಯನ್ನು ಕಟ್ಟಕಡೆಯ ಸ್ಥಾನದಲ್ಲಿ ಇರಿಸುವ, ಹಾಗೆ ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿರುವ ಪುರುಷವರ್ಗ ಆಕೆಯನ್ನು ಭೋಗದ ವಸ್ತುವಾಗಿಯೇ ನೋಡುತ್ತಿದೆ. ಆಕೆ ಇರುವುದೇ ಪುರುಷ ವರ್ಗದ ಕಾಮನೆಗಳನ್ನು ತಣಿಸಲು ಮತ್ತು ಗಂಡುತನದ ಇರುವಿನ ತೋರ್ಪಡಿಕೆಗೂ ಆಕೆ ಒಂದು ಮಾಧ್ಯಮವಾಗಿದ್ದಾಳೆ.
ನಾವು ಎಷ್ಟೇ ಮುಂದುವರೆದವರೆನಿಸಿಕೊಂಡಿದ್ದರೂ, ಎಷ್ಟೇ ಅಸಾಮಾನ್ಯ ಪುರುಷನಾದರೂ ಹೆಣ್ಣನ್ನು ನೋಡುವ ದೃಷ್ಟಿ ಬದಲಾಗಿಲ್ಲ. ಈಗ ಕಾಲ ಬದಲಾಗಿದೆ ಎಂದುಕೊಳ್ಳುತ್ತೇವೆ, ಕಾಲ ಬದಲಾಗಿರುವುದು ಹೆಣ್ಣಿನಿಂದ. ಆಕೆ ಪುರುಷನ ಹೀನ ದೃಷ್ಟಿಯಿಂದ ತನ್ನನ್ನು ತಾನೇ ಉದ್ಧರಿಸಿಕೊಳ್ಳುವ ನಿಟ್ಟಿನಲ್ಲಿ ಸಾಹಸಿಕಳಾಗಿ ಮುಂದುವರಿಯುತ್ತಿದ್ದು ತನ್ನ ದೈಹಿಕವಾದ ಪ್ರಕೃತಿ ಸಹಜ ದುರ್ಬಲತೆಯನ್ನು, ಮಾನಸಿಕ ಸೂಕ್ಷ್ಮತೆಯ ನವಿರನ್ನು ದಾಟಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿ ದಿಟ್ಟ ಹೆಜ್ಜೆಗಳನ್ನು ಇಡುತ್ತಿದ್ದಾಳೆ. ತನ್ನ ಹೊಸ ಅವಿಷ್ಕಾರವನ್ನು ಸ್ಥಾಪಿಸುತ್ತಿದ್ದಾಳೆ. ಇಂತಹ ದಿಟ್ಟ ಹೆಜ್ಜೆಗಳು ಅವಳ ಬದುಕಿಗೆ ಸಕಾರತ್ಮಕವಾಗಿ ತನ್ನದೇ ಆಸ್ಮಿತತೆಯನ್ನು ತಂದುಕೊಟ್ಟಿದೆ. ಈ ಎಲ್ಲಾ ದಿಟ್ಟತನದ ಧೃಡತೆಯು ಅವಳಿಗೆ ಸಬಲತೆಯನ್ನು ತಂದುಕೊಟ್ಟಿದ್ದರೂ, ಅವಳ ಮೇಲಿನ ಶೋಷಣೆ, ದಬ್ಬಾಳಿಕೆಗೆ ನಿರಂತರವಾದ ಹೋರಾಟದ ಅಗತ್ಯವಿದೆ.
ಲಿಂಗ ತಾರತಮ್ಯದ ಪ್ರಬಲ ಹೋರಾಟದಲ್ಲಿ ಮಹಿಳೆ ತನ್ನನ್ನು ಸ್ಥಾಪಿಸಿಕೊಳ್ಳುವ ನಿಟ್ಟಿನಲ್ಲಿ ಬೇರೆ ಆಯಾಮಗಳ ಚಿಂತನೆಯು ಅಗತ್ಯವಾಗಿ ಬೇಕಾಗುತ್ತದೆ. ಆಥಿಕವಾದ ಸಬಲತೆ ಆಕೆಯಲ್ಲಿ ಧೈರ್ಯ, ದಿಟ್ಟತನದ ನಿಲುವುಗಳಿಗೆ ಕಾರಣವಾಗಿ, ತನ್ನದೇ ಆದ ಸ್ವತಂತ್ರವಾದ ಬದುಕನ್ನು ಕಟ್ಟಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರೂ, ಅವಳ ಪರಾವಲಂಬನ ಭಾವನೆಗಳು ಅವಳನ್ನು ಪ್ರಬಲವಾಗಿಸುವಲ್ಲಿ ಸೋಲುತ್ತಿದೆ.
ಹೆಣ್ಣಿನದು ಮತ್ತೊಬ್ಬರಿಂದ ರಕ್ಷಣೆ ಬಯಸುವಂತಹ ಮನಸ್ಸು. ಆ ರಕ್ಷಣಾಭಾವದಲ್ಲಿ ಸಂತೋಷ, ನೆಮ್ಮದಿ, ಒಂದು ನೆಲೆ ಸಿಕ್ಕಾಗ ತನ್ನ ಆಸ್ಮಿತತೆಯ ಹೋರಾಟದಲ್ಲಿ ತೊಡಗಿಸಿಕೊಳ್ಳುವುದು ಬಹಳ ಕಡಿಮೆ.
ಹೆಣ್ಣಿನ ಈ ರೀತಿ ರಕ್ಷಣಾತ್ಮಕವಾದ ನೆಮ್ಮದಿಯ ನೆಲೆ ತನ್ನನ್ನೇ ತಾನು ಕುಂದಿಸಿಕೊಳ್ಳುವಿಕೆಗೆ ಕಾರಣವಾಗುತ್ತದೆ. ಮನು ಹೇಳಿದಂತೆ ಆಕೆ ಬಾಲ್ಯದಲ್ಲಿ
ತಂದೆ ತಾಯಿಯ ಬಳಿ, ಯೌವನದಲ್ಲಿ ಪತಿಯ ಬಳಿ, ವಯಸ್ಸಾದ ಕಾಲದಲ್ಲಿ ಮಕ್ಕಳ ಬಳಿ ಇರಬೇಕು ಎಂಬ ವಾದ, ಆಕೆಯನ್ನು ಒಂದು ಒಪ್ಪಿತ ಸಿದ್ಧ ಚೌಕಟ್ಟಿಗೆ ಅಳವಡಿಸಿದೆ. ಈ ಪರಾವಲಂಬನೆಯ ಸ್ಥಿತಿ, ಆಕೆಗೆ ನೀಡುವ ರಕ್ಷಣೆಯೆಂಬ ಚೌಕಟ್ಟಿನೊಳಗೆ, ಸ್ವತಂತ್ರಹರಣದ ಬಿಗಿ ಹಿಡಿತವಿದೆ ಎಂಬುದೇ ಆಕೆಗೆ
ತಿಳಿದಿರುವುದಿಲ್ಲ.
ಆಕೆ ತನ್ನ ರಕ್ಷಣೆಯ ಮಾನಸಿಕ, ಶೈಕ್ಷಣಿಕ, ಸಾಮಾಜಿಕ ವಲಯವನ್ನು ಸಾಧವಾದಷ್ಟು ತೆರೆದುಕೊಳ್ಳುವಿಕೆಗೆ ಒಡ್ಡಿಕೊಳ್ಳುವುದರಿಂದಾಗುವ ಮಹತ್ತರವಾದ ಬದಲಾವಣೆಗಳು ಆಕೆಯನ್ನು ಆಶಾವಾದಿಯನ್ನಾಗಿ ಮಾಡುತ್ತದೆ. ವ್ಯಕ್ತಿತ್ವದ ಬೆಳವಣಿಗೆಯಿಂದ ಬದುಕು ವಿಸ್ತಾರವಾಗುತ್ತಾ ಹೋಗುತ್ತದೆ. ತನ್ನೆಲ್ಲಾ ಸಾಮಾಜಿಕ ಕಟ್ಟು ಪಾಡುಗಳಿಂದ ದಾಟುವಿಕೆ, ಜಿಗಿಯುವಿಕೆಯಿಂದ ಅವಳೂ ಈ ಸಮಾಜದ ಪಾತ್ರದಾರಿಯಾಗಿ ಗುರ್ತಿಸಿಕೊಳ್ಳುತ್ತಾ ಹೋಗುತ್ತಾಳೆ. ತನ್ನ ಪರಾಧೀನ ಸ್ಥಿತಿಯನ್ನು ಕಳೆದುಕೊಂಡು, ತನ್ನ ಹೆಜ್ಜೆಗಳ ನಿಚ್ಚಳತೆಯಿಂದ ಹೆಚ್ಚು ಹೆಚ್ಚು ಸಾಧಿತ ಗೊಳಿಸುವಿಕೆಗೆ ತೆರೆದುಕೊಳ್ಳುತ್ತಾಳೆ. ತನ್ನ ಸ್ವಂತ ಬೆಳಕಲ್ಲಿ ತನಗೆ ತಾನೇ ಮಿನುಗುವ ಮೂಲಕ ತನ್ನ ಸ್ಥಾನಮಾನವನ್ನು ತಾನೇ ದೊರಕಿಸಿಕೊಳ್ಳುತ್ತಾ ಹೋಗುತ್ತಾಳೆ. ಆಕೆಗೆ ಸಿಗುವ ಸಾಮಾಜಿಕ ಸಮಾನತೆ ಆಕೆಯ ಆಸ್ಮಿತತೆಯೂ ಆಗಿದೆ.

 

ಹೆಣ್ಣಿಗೆ ಶಿಕ್ಷಣ ದೊರೆತರೆ ಮಾತ್ರ ಎಲ್ಲವೂ ಸಿಗುತ್ತದೆ ಎಂಬುದು ತಪ್ಪು. ತನ್ನ ಶಿಕ್ಷಣದ ಜೊತೆಯಲ್ಲಿ ತನ್ನ ಸ್ವಂತ ಆಲೋಚನೆಗಳು, ಚಿಂತನೆಗಳಿಂದ ತನ್ನ
ಬದುಕಿನ ದೋರಣೆಯನ್ನು ಬದಲಾಯಿಸಿಕೊಂಡಾಗ ಸಮಾಜದಲ್ಲಿ ಸಮಾನ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ. ಅದಕ್ಕೆ ಪ್ರಯತ್ನಗಳನ್ನು ಅವಳೇ
ಮಾಡಿಕೊಳ್ಳಬೇಕಾಗುತ್ತದೆ. ಬೇರೆಯವರಿಂದ ನಿರೀಕ್ಷೆಗಳನ್ನು ಇಟ್ಟುಕೊಂಡು ಅವರನ್ನು ತೆಗಳುತ್ತಾ ಇದ್ದರೆ ಏನೂ ಪ್ರಯೋಜನವಿಲ್ಲ. ಇದರಿಂದ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಂತೆ. ತನ್ನ ಬಂಧನವನ್ನು ತಾನೇ ಬಿಡಿಸಿಕೊಳ್ಳುವ ಚಾಣಾಕ್ಷತೆ ಪ್ರತಿಯೊಬ್ಬ ಹೆಣ್ಣಿಗಿದ್ದರೆ ಆಕೆ ತನ್ನ ಸ್ವತಂತ್ರವನ್ನು ಬೇರೆಯವರಿಂದ ಬಯಸಲಾರಳು. ಅವಳಿಗೆ ಅವಳೇ ಗುರುವಾಗಿ, ಬೆಳಕಾಗಿ ಬದಲಾಗುತ್ತಾಳೆ.  


Spread the love

Related posts

ಉಪಚುನಾವಣೆ ಬಳಿಕ ಬಿಜೆಪಿ ಸರ್ಕಾರ ಪತನವಾಗಲಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ

Times fo Deenabandhu

ಪಟ್ಟ ಹಂಚಿಕೆ ಇಕ್ಕಟ್ಟಿನಲ್ಲಿ ಯಡಿಯೂರಪ್ಪ

Times fo Deenabandhu

ಪ್ರೀತಿಯ ಸಾಕು ನಾಯಿ ಗೋಪಿಯಿಂದ ಪುಸ್ತಕ ಬಿಡುಗಡೆ ಮಾಡಿಸಿದ ಸುಧಾಮೂರ್ತಿ

Times fo Deenabandhu
accumsan ipsum ultricies Aliquam lectus risus leo dapibus