Times of Deenabandhu
  • Home
  • ಕ್ರೀಡೆ
  • ವಾಂಖೆಡೆಯಲ್ಲಿ ಸಚಿನ್, ವೀರು ಅಬ್ಬರ; ವಿಂಡೀಸ್ ಲೆಜೆಂಡ್ಸ್ ವಿರುದ್ದ ಇಂಡಿಯಾ ಲೆಜೆಂಡ್ಸ್‌ಗೆ ಭರ್ಜರಿ ಗೆಲುವು
ಕ್ರೀಡೆ ಮುಖ್ಯಾಂಶಗಳು

ವಾಂಖೆಡೆಯಲ್ಲಿ ಸಚಿನ್, ವೀರು ಅಬ್ಬರ; ವಿಂಡೀಸ್ ಲೆಜೆಂಡ್ಸ್ ವಿರುದ್ದ ಇಂಡಿಯಾ ಲೆಜೆಂಡ್ಸ್‌ಗೆ ಭರ್ಜರಿ ಗೆಲುವು

ಮುಂಬಯಿ: ಬಹುಶ: ಕ್ರಿಕೆಟ್ ಅಭಿಮಾನಿಗಳಿಗೆ ಇದಕ್ಕಿಂತಲೂ ಅತ್ಯುತ್ತಮವಾದ ಮನರಂಜನೆ ಬೇರೆ ಎಲ್ಲೂ ಸಿಗಲಾರದು. ಭಾರತೀಯ ಕ್ರಿಕೆಟ್‌ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್, ಪ್ರಿನ್ಸ್ ಖ್ಯಾತಿಯ ವೆಸ್ಟ್‌ಇಂಡೀಸ್‌ನ ಮಾಜಿ ದಿಗ್ಗಜ ಬ್ರಿಯಾನ್ ಲಾರಾ, ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಸೇರಿದಂತೆ ಮಾಜಿ ದಿಗ್ಗಜರ ಆಟವನ್ನು ಮಗದೊಮ್ಮ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆಯೆಂದು ಯಾರೂ ಕೂಡಾ ಕನಸಲ್ಲೂ ಅಂದುಕೊಂಡಿರಲಿಕ್ಕಿಲ್ಲ. ಆದರೆ ಮುಂಬೈನ ವಾಂಖೆಡೆ ಮೈದಾನದಲ್ಲಿ 50,000ಕ್ಕೂ ಹೆಚ್ಚು ಕಿಕ್ಕಿರಿದು ತುಂಬಿದ ಪ್ರೇಕ್ಷಕರ ಮಧ್ಯೆ ಭಾರತ ಹಾಗೂ ವೆಸ್ಟ್‌ಇಂಡೀಸ್ ದಿಗ್ಗಜರ ನಡುವೆ ಜಿದ್ದಾಜಿದ್ದಿನ ಕದನವು ಅಕ್ಷರಶ: ಮಂತ್ರಮುಗ್ಧಗೊಳಿಸಿತ್ತು.
ದೇಶದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ 2020 ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಒಟ್ಟು ಐದು ತಂಡಗಳು ಭಾಗವಹಿಸುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ತಂಡವು ವೆಸ್ಟ್‌ಇಂಡೀಸ್ ಲೆಜೆಂಡ್ಸ್ ವಿರುದ್ಧ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ಬಾರಿಸಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ಹಾಗೂ ವಿಂಡೀಸ್ ತಂಡದ ಹಳೆಯ ಕಲಿಗಳು ಭಾಗವಹಿಸಿದ್ದರು. ಪಂದ್ಯದ ಮೊದಲ ಎಸೆತದಿಂದ ತೊಡಗಿ ಪಂದ್ಯ ಮುಗಿಯುವ ವರೆಗೂ ಆಟಗಾರರು ಹಾಗೂ ಅಭಿಮಾನಿಗಳಲ್ಲಿ ರೋಚಕತೆ ಮನೆ ಮಾಡಿತು. ಹಳೆಯ ಲೆಜೆಂಡ್‌ಗಳು ಸ್ಪರ್ಧಾತ್ಮಕ ಮನೋಭಾವ ಹಾಗೂ ಬದ್ಧತೆಯೊಂದಿಗೆ ಕಣಕ್ಕಿಳಿದಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ ಕ್ರಿಕೆಟಿಗರಷ್ಟೇ ಅಲ್ಲದೆ ಮಾಜಿ ಅಂಪೈರ್ ಸೈಮನ್ ಟೌಫೆಲ್ ಸಹ ಅಂಪೈರ್ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಗಮನ ಸೆಳೆದರು.
2011ನೇ ಇಸವಿಯಲ್ಲಿ ಮುಂಬಯಿನ ಇದೇ ವಾಂಖೆಡೆ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್ ವಿಶ್ವಕಪ್ ಗೆಲ್ಲುವ ಮೂಲಕ ಜೀವಮಾನ ಶ್ರೇಷ್ಠ ಸಾಧನೆ ಮಾಡಿದ್ದರು. 24 ವರ್ಷಗಳ ಅಂತಾರಾಷ್ಟ್ರೀಯ ಜೀವನದಲ್ಲಿ ಆರನೇ ಪ್ರಯತ್ನದಲ್ಲಿ ವಿಶ್ವಕಪ್ ಕನಸನ್ನು ನನಸುಗೊಳಿಸಿದ್ದರು. ಇದೀಗ ಅದೇ ಮಾಯಾನಗರಿಯ ಮೈದಾನದಲ್ಲಿ ಸಚಿನ್ ಮಗದೊಮ್ಮೆ ಕಾಲಿರಿಸಿದಾಗ ಸಚಿನ್ ಸಚಿನ್ ಎಂಬ ಹರ್ಷೋದ್ಗಾರ ಜೋರಾಗಿ ಮೊಳಗಿತ್ತು. ಅಭಿಮಾನಿಗಳೆಲ್ಲ ಹೃದಯಾಳದಿಂದ ಏಕ ಸ್ವರದಲ್ಲಿ ಸಚಿನ್ ಸಚಿನ್ ಉಚ್ಛರಿಸಿದಾಗ ಪ್ರತಿಯೊಬ್ಬ ಅಭಿಮಾನಿಯು ರೋಮಾಂಚನಗೊಂಡಿತ್ತು.ಟಾಸ್ ಗೆದ್ದ ಇಂಡಿಯಾ ಲೆಜೆಂಡ್ಸ್ ನಾಯಕ ಸಚಿನ್ ತೆಂಡೂಲ್ಕರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಇದರಂತೆ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್ ಲೆಜೆಂಡ್ಸ್ ತಂಡವು ಎಂಟು ವಿಕೆಟ್ ನಷ್ಟಕ್ಕೆ 150 ರನ್‌ಗಳ ಸ್ಪರ್ಧಾತ್ಮಕ ಪೇರಿಸಿತ್ತು. ಆರಂಭಿಕರಾದ ಡ್ಯಾರೆನ್ ಗಂಗಾ ಹಾಗೂ ಶಿವನಾರಾಯಣ್ ಚಂದ್ರಪಾಲ್ ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 40 ರನ್‌ಗಳ ಜೊತೆಯಾಟ ನೀಡಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಡ್ಯಾರೆನ್ ಗಂಗಾ 24 ಎಸೆತಗಳಲ್ಲಿ ಐದು ಬೌಂಡರಿಗಳಿಂದ 32 ರನ್ ಗಳಿಸಿದರು. ಇನ್ನೊಂದೆಡೆ ತಮ್ಮ ಹಳೆಯ ಬ್ಯಾಟಿಂಗ್ ವೈಭವವನ್ನು ಮೆರೆದ ಚಂದ್ರಪಾಲ್, 41 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಎರಡು ಮನಮೋಹಕ ಸಿಕ್ಸರ್ ನೆರವಿನಿಂದ 61 ರನ್ ಗಳಿಸಿದರು.
ನಾಯಕ ಬ್ರಿಯಾನ್ ಲಾರಾ ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಕಾಳ್ಗಿಚ್ಚು ಸಂತ್ರಸ್ತರ ನೆರವಿಗಾಗಿ ಆಯೋಜಿಸಲಾಗಿದ್ದ ಬುಶ್ ಫೈರ್ ಬಾಶ್‌ನಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದರು. ಇದೀಗ ಮುಂಬಯಿ ಮೈದಾನದಲ್ಲೂ ಮತ್ತದೇ ಕ್ಲಾಸ್ ಶಾಟ್‌ಗಳ ಮೂಲಕ ವೈಭವವನ್ನು ಮೆರೆದರು. ಕೇವಲ 15 ಎಸೆತಗಳನ್ನು ಎದುರಿಸಿದ ಲಾರಾ ನಾಲ್ಕು ಆಕರ್ಷಕ ಬೌಂಡರಿಗಳಿಂದ 17 ರನ್ ಗಳಿಸಿದರು. ಆದರೆ ಲಾರಾ ಪತನದ ಬೆನ್ನಲ್ಲೇ ವೆಸ್ಟ್‌ಇಂಡೀಸ್ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಹಿನ್ನೆಡೆಯನ್ನು ಅನುಭವಿಸಿದರು. ಪರಿಣಾಮ 150 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನುಳಿದಂತೆ ಡಾನ್ಜಾ ಹೈಟ್ (12), ಕಾರ್ಲ್ ಹೂಪರ್ (2), ರಿಕಾರ್ಡೊ ಪೊವೆಲ್ (1), ವಿಕೆಟ್ ಕೀಪರ್ ರಿಡ್ಲಿ ಜೇಕಬ್ಸ್ (2), ಟಿನೊ ಬೆಸ್ಟ್ (11), ಸುಲೈಮನ್ ಬೆನ್ (1) ಹಾಗೂ ಪೆಡ್ರೊ ಕಾಲಿನ್ಸ್ (3) ರನ್ ಗಳಿಸಿದರು.

ಮೊದಲು ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ಡ್ಯಾರೆನ್ ಗಂಗಾ ಕ್ಲೀನ್ ಬೌಲ್ಡ್ ಮಾಡಿದ ಜಹೀರ್ ಖಾನ್ ಬಳಿಕ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದರು. ಬಹುಶ: ತಮ್ಮ ಆಡುವ ಕಾಲಘಟ್ಟದಲ್ಲೂ ಜಹೀರ್ ಬೌಂಡರಿ ಗೆರೆ ಬಳಿ ಇಷ್ಟೊಂದು ಅದ್ಭುತವಾದ ಕ್ಯಾಚ್ ಹಿಡಿದಿರಲಾರರು. ಮುನಾಫ್ ಪಟೇಲ್ ದಾಳಿಯಲ್ಲಿ ರಿಕಾರ್ಡೊ ಪೊವೆಲ್ ಹೊಡೆತ ಚೆಂಡನ್ನು ಗಾಳಿಯಲ್ಲಿ ಮೇಲಕ್ಕೆ ಹಾರಿ ಒಂದೇ ಕೈಯಲ್ಲಿ ಹಿಡಿಯುವ ಮೂಲಕ ಜಹೀರ್ ಖಾನ್, ಈಗಲೂ ತಮ್ಮಲ್ಲಿ ಕ್ರಿಕೆಟ್ ಬಾಕಿ ಉಳಿದಿದೆ ಎಂಬುದನ್ನು ಸಾಬೀತು ಮಾಡಿದರು. ಅಷ್ಟೇ ಯಾಕೆ ನಿಖರ ಯಾರ್ಕರ್ ಮೂಲಕ ರಿಡ್ಲಿ ಜೇಕಬ್ಸ್ ಹೊರದಬ್ಬಿದ ಜಹೀರ್ ಖಾನ್ ಎರಡು ವಿಕೆಟ್ ಸಾಧನೆ ಮಾಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ಮುನಾಫ್ ಪಟೇಲ್ ಹಾಗೂ ಪ್ರಗ್ಯಾನ್ ಓಜಾ ಸಹ ತಲಾ ಎರಡು ಮತ್ತು ಇರ್ಫಾನ್ ಪಠಾಣ್ ಒಂದು ವಿಕೆಟ್ ಕಿತ್ತು ಮಿಂಚಿದರು.ಬಳಿಕ ಗುರಿ ಬೆನ್ನಟ್ಟಿದ ಭಾರತಕ್ಕೆ ವೀರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಬಿರುಸಿನ ಆರಂಭವೊದಗಿಸಿದರು. ಈ ಪೈಕಿ ಇನ್ನಿಂಗ್ಸ್‌ನ ಮೊದಲೆರಡು ಎಸೆತಗಳನ್ನು ಬೌಂಡರಿಗಟ್ಟಿದ ವೀರು, ಹಳೆಯ ಡ್ಯಾಶಿಂಗ್ ಶೈಲಿಯ ಬ್ಯಾಟಿಂಗ್ ನೆನಪಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರು ವರ್ಷಗಳ ಬಳಿಕ ಆಡಿದ ಮೊದಲ ಪಂದ್ಯದ ಪ್ರಥಮ ಎಸೆತವನ್ನೇ ಬೌಂಡರಿಗಟ್ಟುವ ಮೂಲಕ ಜಾದೂ ಮೆರೆದರು. ಭಾರತೀಯ ಕ್ರಿಕೆಟ್‌ನ ಸರ್ವಶ್ರೇಷ್ಠ ಆರಂಭಿಕ ಜೋಡಿಯಾಗಿರುವ ಸೆಹ್ವಾಗ್ ಹಾಗೂ ಸಚಿನ್ ಕಟ್ಟಿಹಾಕಲು ವಿಂಡೀಸ್ ದಿಗ್ಗಜರು ಹರ ಸಾಹಸವೇ ಪಡಬೇಕಾಯಿತು. ಸಚಿನ್ ಹಾಗೂ ಸೆಹ್ವಾಗ್ ಮನಬಂದಂತೆ ಎದುರಾಳಿ ಬೌಲರ್‌ಗಳನ್ನು ದಂಡಿಸಿದರು. ಪರಿಣಾಮ 5.3 ಓವರ್‌ಗಳಲ್ಲೇ ತಂಡದ ಮೊತ್ತ 50ರ ಗಡಿ ದಾಟಿತು.
ಸಚಿನ್-ವೀರು ಜೋಡಿಯು ಕ್ರೀಸಿನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಪ್ರತಿ ಕ್ಷಣವೂ ನೋಡುಗರ ಪಾಲಿಗೆ ಅತೀವ ಮನರಂಜನೆಯನ್ನು ನೀಡಿತು. ಪ್ರತಿಯೊಂದು ಚೆಂಡಿನಲ್ಲೂ ಹಳೆಯ ಬ್ಯಾಟಿಂಗ್ ವೈಭವನ್ನು ನೆನಪಿಸಿದ ಈ ಜೋಡಿ ಮೊದಲ ವಿಕೆಟ್‌ಗೆ 10.2 ಓವರ್‌ಗಳಲ್ಲೇ 83 ರನ್‌ಗಳ ಜೊತೆಯಾಟ ನೀಡಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಸಚಿನ್ ತೆಂಡೂಲ್ಕರ್ 29 ಎಸೆತಗಳಲ್ಲಿ ಏಳು ಬೌಂಡರಿಗಳಿಂದ 36 ರನ್ ಗಳಿಸಿದರು.
ಸಚಿನ್ ವಿಕೆಟ್ ಪತನಗೊಂಡರೂ ಇನ್ನೊಂದೆಡೆ ವೀರು ಬಿರುಸಿನ ಬ್ಯಾಟಿಂಗ್ ಮುಂದುವರಿಸಿದರು. ಅಲ್ಲದೆ 47 ಎಸೆತಗಳಲ್ಲಿ ಫಿಫ್ಟಿ ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ನಡುವೆ ಕೊನೆಯ ಹಂತದಲ್ಲಿ ಮೊಹಮ್ಮದ್ ಕೈಫ್ (14) ಹಾಗೂ ಮನ್‌ಪ್ರೀತ್ ಗೋನಿ (0) ಬೆನ್ನು ಬೆನ್ನಿಗೆ ಹೊರದಬ್ಬಿದ ಕಾರ್ಲ್ ಹೂಪರ್ ಪಂದ್ಯಕ್ಕೆ ರೋಚಕತೆಯನ್ನು ತಂದರು. ಆದರೆ ಬಳಿಕ ಕ್ರೀಸಿಗಿಳಿದ ಯುವರಾಜ್ ಸಿಂಗ್ ತಮ್ಮ ಸಿಗ್ನೇಚರ್ ಶೈಲಿಯಲ್ಲಿ ಸಿಕ್ಸರ್ ಬಾರಿಸಿ ಒತ್ತಡವನ್ನು ಕಡಿಮೆ ಮಾಡಿದರು. ಅತ್ತ ಬೌಂಡರಿ ಬಾರಿಸುವ ಮೂಲಕ ವೀರೇಂದ್ರ ಸೆಹ್ವಾಗ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ಭಾರತ ತಂಡವು 18.2 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 57 ಎಸೆತಗಳನ್ನು ಎದುರಿಸಿದ ವೀರು 11 ಬೌಂಡರಿಗಳಿಂದ 74 ರನ್ ಗಳಿಸಿ ಔಟಾಗದೆ ಉಳಿದರು. ಇವರಿಗೆ ಸಾಥ್ ನೀಡಿದ ಯುವಿ 10 ರನ್ ಗಳಿಸಿ ಅಜೇಯರಾಗುಳಿದರು.

Related posts

ಮೇ 24ಕ್ಕೆ ಗ್ರಾ.ಪಂ. ಅವಧಿ ಅಂತ್ಯ, ನಾಮ ನಿರ್ದೇಶಿತ ಸಮಿತಿಗಳಿಗೆ ಆಡಳಿತ ಹೊಣೆ

ಸುಸ್ತಿ ಸಾಲದ ಬಡ್ಡಿ ಮನ್ನಾ, ಅಧಿವೇಶನಕ್ಕೂ ಮುನ್ನ ರೈತರಿಗೆ ಬಿಎಸ್‌ವೈ ಬಂಪರ್‌ ಕೊಡುಗೆ

Times fo Deenabandhu

35 ವರ್ಷದ ಬಳಿಕ ಕಮಲ್‌-ರಜನಿ ಒಟ್ಟಿಗೆ ಅಭಿನಯ?

Times fo Deenabandhu