Times of Deenabandhu
  • Home
  • ಪ್ರಧಾನ ಸುದ್ದಿ
  • ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ: ಪ್ರೊ.ಜಿ.ಪ್ರಶಾಂತ ನಾಯಕ ಸೇರಿ 10 ಜನರಿಗೆ ಸಾಹಿತ್ಯಶ್ರೀ ಪ್ರಶಸ್ತಿ,ಐವರಿಗೆ ಗೌರವ ಪ್ರಶಸ್ತಿ
ಪ್ರಧಾನ ಸುದ್ದಿ ಮುಖ್ಯಾಂಶಗಳು ಶಿವಮೊಗ್ಗ ಸಾಹಿತ್ಯ/ಸಂಸ್ಕೃತಿ

ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ: ಪ್ರೊ.ಜಿ.ಪ್ರಶಾಂತ ನಾಯಕ ಸೇರಿ 10 ಜನರಿಗೆ ಸಾಹಿತ್ಯಶ್ರೀ ಪ್ರಶಸ್ತಿ,ಐವರಿಗೆ ಗೌರವ ಪ್ರಶಸ್ತಿ

ಬೆಂಗಳೂರು:ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಗಣನೀಯವಾದ ಸೇವೆಯನ್ನು ಪರಿಗಣಿಸಿ ಈ ಬಾರಿ ಶಿವಮೊಗ್ಗದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರು ಹಾಗೂ ಖ್ಯಾತ ಸಾಹಿತಿಗಳಾದ ಪ್ರೊ.ಜಿ.ಪ್ರಶಾಂತ ನಾಯಕ್ ಸೇರಿ 10 ಜನ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2019ನೇ ವರ್ಷದ ‘ಸಾಹಿತ್ಯ ಶ್ರೀ’ ಪ್ರಶಸ್ತಿಯನ್ನು ಘೋಷಿಸಿದೆ.   ಕಾದಂಬರಿಗಾರ್ತಿ ಉಷಾ ಪಿ. ರೈ ಸೇರಿದಂತೆ ಐವರಿಗೆ 2019ನೇ ಸಾಲಿನ ಗೌರವ ಪ್ರಶಸ್ತಿಯನ್ನು     ಪ್ರಕಟಿಸಿದೆ. ಜತೆಗೆ 2018ನೇ ಸಾಲಿನ 19 ಪುಸ್ತಕ ಬಹುಮಾನ ಹಾಗೂ ಒಂಬತ್ತು ದತ್ತಿ ಬಹುಮಾನಗಳನ್ನೂ ಪ್ರಕಟಿಸಿದೆ.

ಗೌರವ ಪ್ರಶಸ್ತಿಗಳು ತಲಾ ಐವತ್ತು ಸಾವಿರ ರೂ. ನಗದು ಮತ್ತು ಸ್ಮರಣಿಕೆ ಒಳಗೊಂಡಿವೆ. ‘ಸಾಹಿತ್ಯಶ್ರೀ’ ಪ್ರಶಸ್ತಿಯು ತಲಾ 25 ಸಾವಿರ ರೂ. ನಗದು ಹಾಗೂ ಪುಸ್ತಕ ಬಹುಮಾನವು ತಲಾ 25 ಸಾವಿರ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಆದರೆ, ದತ್ತಿ ಪ್ರಶಸ್ತಿಗಳು ಆಯಾ ದತ್ತಿ ಹಣದ ಮೇಲೆ ಭಿನ್ನವಾಗಿರುತ್ತವೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ಹೆಮ್ಮೆ ಡಾ.ಜಿ.ಪ್ರಶಾಂತ ನಾಯಕ್:

ಟೈಮ್ಸ್ ದೀನಬಂಧು ಪತ್ರಿಕೆ ಇದುವರೆಗೆ 129 ಸಂಚಿಕೆಗಳನ್ನು ಹೊರತಂದಿದೆ. ನಮ್ಮ ಪತ್ರಿಕೆಯ ‘ಬದುಕು ಭಾವಗೀತೆ’ ಅಂಕಣದಲ್ಲಿ 129 ಲೇಖನಗಳನ್ನು ಬರೆದಿದ್ದಾರೆ. ಇಡೀ ಕರ್ನಾಟಕದೆಲ್ಲ್ಲೆಡೆ ನಮ್ಮ ಪತ್ರಿಕೆ ಜನರ ಮನೆ-ಮನಸ್ಸುಗಳನ್ನು ಮುಟ್ಟುವಲ್ಲಿ ಇವರ ಲೇಖನಗಳು ಪ್ರಮುಖ ಸ್ಥಾನವನ್ನು ಪಡೆದಿವೆ. “ಎಷ್ಟು ಅದ್ಭುತವಾಗಿ ಬರೆಯುತ್ತಾರೆ’ ಎಂಬುದು ನಮ್ಮ ಓದುಗರ ಉದ್ಘಾರ. ಹೋದಲ್ಲೆಲ್ಲ ನಾವು ನಿಮ್ಮ ಪತ್ರಿಕೆ ಬಂದಾಕ್ಷಣ  ಮೊದಲು ನೋಡುವುದೇ  ನಿಮ್ಮ 2ನೇ ಪುಟವನ್ನು(ಡಾ.ಜಿ.ಪ್ರಶಾಂತ ನಾಯಕ್‍ರವರ ಬದುಕುಭಾವ ಗೀತೆ ಅಂಕಣದ ಖಾಯಂ ಪುಟ). ಇನ್ನು ಕೆಲವರಂತೂ ನಿಮ್ಮ ಪತ್ರಿಕೆಯಲ್ಲಿ ಓದುವುದೇ ‘ಡಾ.ಜಿ.ಪ್ರಶಾಂತ್‍ನಾಯಕ್’ ರ ಲೇಖನ ಮಾತ್ರ ಎನ್ನುತ್ತಾರೆ. ಇದನ್ನು ನಾವು ಯಾವುದೇ ಮುಜುಗರವಿಲ್ಲದೇ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆ ಪ್ರಮಾಣದ ಜನಪ್ರಿಯತೆಯನ್ನು ನಮ್ಮ ಪತ್ರಿಕೆಗೆ ತಂದುಕೊಟ್ಟಿದೆ ಇವರ ಲೇಖನಗಳು.

ಡಾ.ಜಿ.ಪ್ರಶಾಂತನಾಯಕ್‍ರವರು  ಈ ನಾಡಿನ ಖ್ಯಾತ ಸಾಹಿತಿಗಳು. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಭಾರತಿಯ ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಸಾರ್ವಜನಿಕ ಸಂಪಕಾರ್ಧಿಕಾರಿಯಾಗಿ, ಕುಲಪತಿಗಳ ವಿಶೇಷಾಧಿಕಾರಿಯಾಗಿ ಹತ್ತು ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.

ಡಾ.ಪ್ರಶಾಂತನಾಯಕ್‍ರವರ 29ಕ್ಕೂ ಹೆಚ್ಚು ಪುಸ್ತಕಗಳು, 71 ಪ್ರಕಟಿತ ಲೇಖನಗಳು, 150ಕ್ಕೂ ಹೆಚ್ಚು ಅಂಕಣ ಬರಹಗಳು, 6 ಸಂಪಾದಿತ ಕೃತಿಗಳು ಸಾಹಿತ್ಯ ಲೋಕಕ್ಕೆ ಅರ್ಪಣೆಗೊಂಡಿವೆ. ಇವರ ಮಾರ್ಗದರ್ಶನದಲ್ಲಿ 11ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಎಚ್‍ಡಿ ಪದವಿಯನ್ನು ಪಡೆದಿದ್ದಾರೆ.

ಇವರು ಪಡೆದಿರುವ ಪ್ರಶಸ್ತಿಗಳು:

  1. ಸ್ನೇಹ ಸೇತು: ‘ನೀಂ ಮಹಚ್ಛಿಲ್ಪಿ ದಿಟಂ’ ಕೃತಿಗೆ (ದಿನಾಂಕ: 20-12-2010, ಬೆಂಗಳೂರು)
  2. ಗೌರವ ಪುರಸ್ಕಾರ: ಯಳಂದೂರು ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು (ದಿನಾಂಕ: 07-02-2014, ಯಳಂದೂರು)
  3. ‘ಬದುಕು ಭಾವಗೀತೆ’ ಅಂಕಣಬರಹಕ್ಕೆ 2015ನೇ ಸಾಲಿನ ‘ಡಾ.ಹಾ.ಮಾ.ನಾಯಕ’ ಪ್ರಶಸ್ತಿ, ಕರ್ನಾಟಕ  ಸಂಘ(ರಿ.)ಶಿವಮೊಗ್ಗ.
  4. ಅಂಬೇಡ್ಕರ್ ಮತ್ತು ಕುವೆಂಪು  ಕೃತಿಗೆ  ‘ಎಲ್ ಬಸವರಾಜು ದತ್ತಿ’ ಪ್ರಶಸ್ತಿ

ಇಂತಹ ಬಹುಮುಖ ಪ್ರತಿಭೆ ಡಾ.ಜಿ.ಪ್ರಶಾಂತನಾಯಕ್‍ರವರಿಗೆ ನಮ್ಮ ಪತ್ರಿಕಾ ಬಳಗ ಅತ್ಯಂತ ಪ್ರೀತಿಯಿಂದ ಅಭಿನಂದಿಸುತ್ತದೆ.

ಅನುವಾದ ಕೃತಿಗಳ ಇಳಿಕೆ

ಪುಸ್ತಕ ಬಹುಮಾನಕ್ಕಾಗಿ ಅರ್ಹರಿಂದ ಅನುವಾದ ಕೃತಿಗಳನ್ನು ಆಹ್ವಾನಿಸಿದ್ದೆವು. ಆದರೆ ಕೇವಲ 5 ಪುಸ್ತಕಗಳು ಮಾತ್ರ ಬಂದವು. ಇತ್ತೀಚೆಗೆ ಅನುವಾದ ಕೃತಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಸಂತಕುಮಾರ್‌ ಹೇಳಿದರು.

ಈ ಹಿಂದಿನ ಅಧ್ಯಕ್ಷರು ಆರಂಭಿಸಿರುವ ಸೀಮಾತೀತ ಸಾಹಿತ್ಯ ಪರ್ಬ ಸೇರಿದಂತೆ ಕೆಲವು ಯೋಜನೆಗಳನ್ನು ಪುನರಾರಂಭಿಸಲು ಚಿಂತನೆ ನಡೆಸಲಾಗಿದೆ. ಜತೆಗೆ ಬೇಡಿಕೆಯುಳ್ಳ ಪುಸ್ತಕಗಳ ಮರುಮುದ್ರಣದ ಕಾರ್ಯ ನಡೆಸಲಾಗುವುದು. ಜತೆಗೆ ಜೀವನ ಮೌಲ್ಯಗಳ ಮಾಲೆ, ದೇಶಿ ದರ್ಶನ ಮಾಲೆ, ಪಾರಿಭಾಷಿಕ ಪದಕೋಶ ಮಾಲೆ ಯೋಜನೆಗಳನ್ನು ಆರಂಭಿಸಲಾಗುವುದು ಎಂದು ಡಾ ಬಿ.ವಿ. ವಸಂತಕುಮಾರ್‌ ತಿಳಿಸಿದರು.

ಗೋಷ್ಠಿಯಲ್ಲಿಅಕಾಡೆಮಿ ಸದಸ್ಯರಾದ ಸಂತೋಷ್‌ ತಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ಅಕಾಡೆಮಿ ಸಾಹಿತ್ಯ ಗೌರವ ಪುರಸ್ಕೃತರು

ಕಾದಂಬರಿಗಾರ್ತಿ ಉಡುಪಿಯ ಉಷಾ ಪಿ. ರೈ, ಬೆಂಗಳೂರಿನ ಹಿರಿಯ ಪತ್ರಕರ್ತ ಬಾಬು ಕೃಷ್ಣಮೂರ್ತಿ, ಗುಬ್ಬಿ ತಾಲೂಕು ಕಲ್ಲೂರಿನ ಪ್ರೊ. ಕೆ.ಜಿ. ನಾಗರಾಜಪ್ಪ, ಚಿತ್ರದುರ್ಗದ ಇತಿಹಾಸಜ್ಞ ಪ್ರೊ. ಲಕ್ಷ್ಮಣ ತೆಲಗಾವಿ ಹಾಗೂ ಕೊಪ್ಪಳ ಜಿಲ್ಲೆಕುಷ್ಟಗಿ ತಾಲೂಕಿನ ಬೆನಕನಾಳದ ಸಾಹಿತಿ ಡಾ.ವೀರಣ್ಣ ರಾಜೂರ

ಸಾಹಿತ್ಯಶ್ರೀ ಪುರಸ್ಕೃತರು

ಡಾ.ಜಿ. ಪ್ರಶಾಂತನಾಯಕ, ಕಥೆಗಾರ ವಸುಧೇಂದ್ರ, ಕವಿ ಸುಬ್ಬು ಹೊಲೆಯಾರ್‌, ಕಥೆಗಾರ ಅಮರೇಶ ನುಗಡೋಣಿ, ವಿಮರ್ಶಕ ಡಾ. ವಿ.ಎಸ್‌. ಮಾಳಿ, ಡಾ. ಮಾಧವ ಪೆರಾಜೆ, , ಡಾ. ಶಾರದಾ ಕುಪ್ಪಂ, ಪಿ. ಶಿವಣ್ಣ, ಕಾದಂಬರಿಗಾರ್ತಿ ಎಂ.ಎಸ್‌. ವೇದಾ, ಸಂಶೋಧಕರಾದ ಪ್ರೊ. ಎಫ್‌.ಟಿ. ಹಳ್ಳಿಕೇರಿ

ಪುಸ್ತಕ ಬಹುಮಾನಕ್ಕೆ ಆಯ್ಕೆಯಾದವರು

ಎಚ್‌.ಎನ್‌.ಆರತಿ (ಸ್ಮೋಕಿಂಗ್‌ ಝೋನ್‌)
ವಿಲ್ಸನ್‌ ಕಟೀಲ್‌ (ನಿಷೇಧಕ್ಕೊಳಪಟ್ಟ ಒಂದು ನೋಟು)
ಕಾ.ತ.ಚಿಕ್ಕಣ್ಣ (ಮಳೆ ಬಯಲು)
ಎಸ್‌.ಗಂಗಾಧರಯ್ಯ (ದೇವರ ಕುದುರೆ)
ಹೂಲಿ ಶೇಖರ (ಸುಳಿವಾತ್ಮ ಎನ್ನೊಳಗೆ)
ಜಿ.ಕೆ.ರವೀಂದ್ರಕುಮಾರ್‌ ( ತಾರಸಿ ಮಲ್ಹಾರ್‌)
ಪ್ರಸಾದ್‌ ನಾಯ್ಕ್‌ (ಹಾಯ್‌ ಅಂಗೋಲಾ)
ಮ.ಸು.ಮನ್ನಾರ್‌ ಕೃಷ್ಣರಾವ್‌ (ವಲ್ಲಭಭಾಯ್‌ ಪಟೇಲ್‌)
ಎಸ್‌.ಆರ್‌.ವಿಜಯಶಂಕರ (ವಸುಧಾ ವಲಯ)
ಪ್ರೊ. ಶಿವರಾಮಯ್ಯ (ಪಂಪಭಾರತ ಸಂಪುಟ1 ಮತ್ತು 2)
ಬಸು ಬೇವಿನಗಿಡದ ( ಓಡಿ ಹೋದ ಹುಡುಗ)
ಸುಧೀಂದ್ರ ಹಾಲ್ದೋಡ್ಡೇರಿ (ಸುದ್ಧು! ಸಂಶೋಧನೆ ನಡೆಯುತ್ತಿದೆ)
ರವಿ ಹಂಜ್‌ ( ಹುಯೆನ್‌ ತ್ಸಾಂಗನ ಮಹಾ ಪಯಣ)
ಡಾ.ಪಂಡಿತ ಕೆ.ರಾಥೋಡ್‌ (ಕರ್ನಾಟಕದಲ್ಲಿಧಾರ್ಮಿಕ ಸಂಘರ್ಷ)
ಎಂ. ಮಾಧವ ಪೈ (ಸಾವಿತ್ರಿ)
ಡಿ.ಎನ್‌.ಶ್ರೀನಾಥ್‌ (ಕನ್ನಡ ಕಿ ಚರ್ಚಿತ್‌ ಬೀಸ್‌ ಕಹಾನಿಯಾ)
ನರೇಂದ್ರ ರೈ ದೇರ್ಲ (ನೆಲಮುಖಿ)
ಪುಂಡಲೀಕ ಕಲ್ಲಿಗನೂರು ( ಶಿಲ್ಪಕಲಾ ದೇಗುಲಗಳು)
ಪ್ರೊ.ಕೆ. ಸುಮಿತ್ರಾಬಾಯಿ ( ಸೂಲಾಡಿ ಬಂದೋ ತಿರುತಿರುಗೀ)

ದತ್ತಿ ನಿಧಿಧಿ ಬಹುಮಾನಿತರು

ಡಾ. ಲೋಕೇಶ ಅಗಸನಕಟ್ಟೆ (ಅತೀತ ಲೋಕದ ಮಹಾಯಾತ್ರಿಕ),
ಚಿದಾನಂದ ಸಾಲಿ (ಮೂರನೇ ಕಣ್ಣು)
ಸ್ಮಿತಾ ಮಾಕಳ್ಳಿ (ಒಂದು ಅಂಕ ಮುಗಿದು)
ಚಂಸು ಪಾಟೀಲ ( ಬೇಸಾಯದ ಕತಿ)
ಡಾ.ಲಕ್ಷ್ಮಣ ವಿ.ಎನ್‌.(ಎಲೆಕ್ಟ್ರಾನಿಕ್‌ ಬೇಲಿ ಮತ್ತು ಪಾರಿವಾಳ)
ಲಕ್ಷ್ಮೀಶ ತೋಳ್ಪಾಡಿ (ಮಹಾಭಾರತ ಅನುಸುಂಧಾನ ಭಾರತ ಯಾತ್ರೆ)
ಸುರೇಶ್‌ ನಾಗಲಮಡಿಕೆ (ಹಲವು ಬಣ್ಣದ ಹಗ್ಗ)
ಜಿ. ರಾಮನಾಥ ಭಟ್‌ (ರವೀಂದ್ರ ಗದ್ಯ ಸಂಚಯ)
ಎನ್‌. ತಿರುಮಲೇಶ್ವರಭಟ್‌ (‘ದಿ ಅದರ್‌ ಫೇಸ್‌’ ಮೂಲ: ಮೊಗಸಾಲೆ)

Related posts

ಸೋಮವಾರ ನಿರ್ಧಾರವಾಗುತ್ತೆ ರಾಜ್ಯದ ಲಾಕ್‌ಡೌನ್‌ ಭವಿಷ್ಯ..! ಏನಿರುತ್ತೆ? ಏನಿರಲ್ಲ..?

 ರಂಜಾನ್ : ಮಸೀದಿಯಲ್ಲಿ ಪ್ರಾರ್ಥನೆಗೆ ನಿರ್ಬಂಧ

Times fo Deenabandhu

ಪಶುಪಾಲನಾ ಇಲಾಖೆ ರೈತ ಸ್ನೇಹಿ ಕೆಲಸ ಮಾಡಬೇಕು

Times fo Deenabandhu