Times of Deenabandhu
ಜಿಲ್ಲೆ ಶಿವಮೊಗ್ಗ

33 ಕೇಂದ್ರಗಳಲ್ಲಿ ಪಿಯು ಪರೀಕ್ಷೆ

ಶಿವಮೊಗ್ಗ: ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು, ಅಂತೆಯೆ ಜಿಲ್ಲೆಯ ೩೩ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ೧೯,೭೪೮ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿದ್ದಾರೆ.
ಕಲಾ ವಿಭಾಗದ ೫೮೦೭, ವಾಣಿಜ್ಯ ವಿಭಾಗದ ೭೪೯೦, ವಿಜ್ಞಾನ ವಿಭಾಗದ ೬೪೫೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಬಂಡಲ್ ಕೊಂಡೊಯ್ಯವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಇನ್ನು ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್, ಎಲೆಕ್ಟ್ರಾನಿಕ್ ಉಪಕರಣ ನಿಷೇಧಿಸಲಾಗಿತ್ತು.
ನಕಲು ಮಾಡುವುದು, ನಕಲು ಮಾಡಲು ಸಹಾಯ ಮಾಡುವುದು, ಬದಲಿ ವ್ಯಕ್ತಿಯಾಗಿ ಪರೀಕ್ಷೆ ಬರೆಯುವುದು, ಪ್ರಶ್ನೆ ಪತ್ರಿಕೆ ಸೋರಿಕೆ ಮೊದಲಾದ ಪರೀಕ್ಷಾ ಕ್ರಮಗಳಿಗೆ ಕಡಿವಾಣ ಹಾಕಲಾಗಿದೆ. ಯಾವುದೇ ಅಕ್ರಮ ನಡೆಯದಂತೆ ಜಾಗೃತದಳ ರಚಿಸಲಾಗಿದೆ. ಸಿಟಿಂಗ್ ಸ್ಕ್ವಾಡ್, ಫ್ಲೈಯಿಂಗ್ ಸ್ಕ್ವಾಡ್ ನಿಗಾ ವಹಿಸಿದ್ದು, ಪರೀಕ್ಷಾ ಕೇಂದ್ರಗಳಿಗೆ ಸಿಸಿ ಕ್ಯಾಮೆರಾ ಹಾಕಲಾಗಿದೆ.

ಆಚಾರ್ಯತ್ರಯರ ಜಯಂತಿಗೆ ಅನುದಾನಕ್ಕೆ ಒತ್ತಾಯ

ಶಿವಮೊಗ್ಗ: ಆಚಾರ್ಯತ್ರಯರ ಜಯಂತಿ ಆಚರಣೆಗೆ ಮಹಾನಗರಪಾಲಿಕೆ ಬಜೆಟ್‌ನಲ್ಲಿ ಅನುದಾನ ಒದಗಿಸಬೇಕೆಂದು ಒತ್ತಾಯಿಸಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ನೇತೃತ್ವದಲ್ಲಿ ಇಂದು ಮೇಯರ್‌ಗೆ ಮನವಿ ಸಲ್ಲಿಸಲಾಯಿತು.
ಶ್ರೀ ಶಂಕರಾಚಾರ್ಯರು, ಶ್ರೀ ಮಧ್ವಾಚಾರ್ಯರು ಮತ್ತು ಶ್ರೀ ರಾಮಾನುಜಾ ಚಾರ್ಯರು ದೇಶದ ಆಧ್ಯಾತ್ಮ ಕ್ಷೇತ್ರದ ದೃವತಾರೆಗಳಾಗಿದ್ದಾರೆ. ಹಿಂದು ಸಮಾಜವು ಧಾರ್ಮಿಕವಾಗಿ ವಿಶ್ವ ಮಾನ್ಯತೆ ಪಡೆಯುವಂತಾಗಲು ಈ ಯತಿಗಳ ತತ್ವಜ್ಞಾನ ಬಹುಮುಖ್ಯ ನೆಲೆ ಒದಗಿಸಿದೆ ಎಂದು ತಿಳಿಸಿದರು.
ಶ್ರೀ ಶಂಕರಾಚಾರ್ಯರು, ಶ್ರೀ ಮಧ್ವಾಚಾರ್ಯರು ಮತ್ತು ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನು ಹಿಂದು ಸಮಾಜ ಆಚರಿಸಿಕೊಂಡು ಬರುತ್ತಿದ್ದು ಮುಖ್ಯವಾಗಿ ಶಿವಮೊಗ್ಗ ಬ್ರಾಹ್ಮಣ ಸಮುದಾಯ ಪ್ರತಿ ವರ್ಷವೂ ಅದ್ದೂರಿಯಾಗಿ ಜಯಂತಿ ನಡೆಸುತ್ತಿದೆ. ಆಚಾರ್ಯತ್ರಯರ ಜಯಂತಿಗಳನ್ನು ಆಚರಿಸಲು ಪಾಲಿಕೆಯಿಂದಲೂ ಅನುದಾನ ಒದಗಿಲಾಗುತ್ತಿದೆ ಎಂದು ತಿಳಿಸಿದರು. ಈ ವರ್ಷವೂ ಪ್ರತಿ ವರ್ಷದಂತೆ ಪಾಲಿಕೆ ಬಜೆಟ್‌ನಲ್ಲಿ ಆಚಾರ್ಯತ್ರಯರ ಜಯಂತಿ ಆಚರಣೆಗೆ ತಲಾ ೨ ಲಕ್ಷ ರೂ.ಗಳಂತೆ ಅನುದಾನ ನಿಗದಿಪಡಿಸುವ ಮೂಲಕ ಶ್ರೀ ಶಂಕರಾಚಾರ್ಯರು, ಶ್ರೀ ಮಧ್ವಾಚಾರ್ಯರು ಮತ್ತು ಶ್ರೀ ರಾಮಾನುಜಾಚಾರ್ಯರ ತತ್ವಾದರ್ಶನಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ನಿರಂತರವಾಗಲು ನೆರವಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆ.ಬಿ.ಪ್ರಸನ್ನಕುಮಾರ್, ಭಾರದ್ವಾಜ್, ಮಧುಸೂದನ್, ಸತ್ಯೇಂದ್ರ, ಪಿ.ಎ.ಸಾವಿತ್ರಮ್ಮ, ಮೊದಲಾದವರಿದ್ದರು.
ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ನಡೆದಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ದಲಿತಪರ ಗೋಷ್ಠಿಯಲ್ಲಿ ಎಲ್ಲ ದಲಿತ ಸಂಘಟನೆಗಳನ್ನು ಕಡೆಗಣಿಸಿ ಕೆಲವೇ ಕೆಲವುಭ್ರಷ್ಟರನ್ನು ಸಾಹಿತ್ಯ ಪರಿಷತ್ ಜೊತೆಗಿಟ್ಟುಕೊಂಡು ಗೋಷ್ಟಿ ನಡೆಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಹಾಲೇಶಪ್ಪ ಆರೋಪಿಸಿದ್ದಾರೆ.
ಕುವೆಂಪು ರಂಗಮಂದಿರದಲ್ಲಿ ಗೋಷ್ಠಿಯಿಂದ ಹೊರನಡೆದ ಅವರು ಕನ್ನಡ ಸಾಹಿತ್ಯ ಪರಿಷತ್ ದಲಿತ ಸಂಘಟನೆಗಳನ್ನು ಕಡೆಗಣಿಸಿದೆ ಎಂದು ಆರೋಪಿಸಿದರು. ಎಲ್ಲ ದಲಿತ ಸಂಘಟನೆಗಳನ್ನು ನಿರ್ಲಕ್ಷಿಸಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಂಕರಪ್ಪ ದಲಿತ ಪರ ಗೋಷ್ಠಿ ನಡೆಸಿದ್ದಾರೆ. ದಲಿತರ ಪರ ಗೋಷ್ಠಿಗಳಲ್ಲಿ ಹೋರಾಟಗಾರರು, ದಲಿತಪರವಾಗಿ ಮಾತನಾಡುವವರು, ಹಿರಿಯ ದಲಿತ ಮುಖಂಡರನ್ನು ಕಡೆಗಣಿಸಲಾಗಿದೆ ಎಂದು ದೂರಿದರು.
ಮುಂದಿನ ದಿನಗಳಲ್ಲಿ ಎಲ್ಲ ದಲಿತ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿ ದಲಿತಪರ ಗೋಷ್ಠಿ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

 

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ

ಶಿವಮೊಗ್ಗ : ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗಳು ಪ್ರಕಟವಾಗಿದ್ದು, ವಿಜಯವಾಣಿ ಪತ್ರಿಕೆ ಶ್ರೀಕಾಂತ ಭಟ್‌ರವರಿಗೆ ಎಸ್. ಎಚ್. ರಂಗಸ್ವಾಮಿ ಪ್ರಶಸ್ತಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವಿಶ್ರಾಂತ ಪತ್ರಕರ್ತ ಗುಂಡೂರಾವ್‌ರವರಿಗೆ ಮಿಂಚು ಶ್ರೀನಿವಾಸ ಪ್ರಶಸ್ತಿ, ವಿಜಯ ಕರ್ನಾಟಕ ಪತ್ರಿಕೆಯ ವಿಶ್ರಾಂತ ಪತ್ರಕರ್ತ ಸಿ. ರುದ್ರಪ್ರರಿಗೆ ನಾಗೇಂದ್ರರಾವ್ ಪ್ರಶಸ್ತಿ ಹಾಗೂ ಶಿಕಾರಿಪುರದ ಹಿರಿಯ ಪತ್ರಕರ್ತ ಎಸ್. ಬಿ. ಮಠದ್‌ರವರಿಗೆ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರುಗಳಿಗೆ ನೀಡಲಾಗುವ ಕಿಡಿ ಶೇಷಪ್ಪ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ವಿ. ಶಿವಕುಮಾರ್ ಹೇಳಿದರು.
ಶಿವಮೊಗ್ಗೆಯ ಹಿರಿಯ ಪತ್ರಕರ್ತರಾದ ಶ್ರೀ ಎಸ್. ಎಚ್. ರಂಗಸ್ವಾಮಿ, ಶ್ರೀ ಮಿಂಚು ಶ್ರೀನಿವಾಸ ಹಾಗೂ ಶ್ರೀ ಎಂ. ನಾಗೇಂದ್ರರಾವ್‌ರವರ ಹೆಸರಿನಲ್ಲಿ ಶಾಸಕ ಕೆ. ಎಸ್. ಈಶ್ವರಪ್ಪರವರು ತಲಾ ಒಂದು ಲಕ್ಷ ರೂಪಾಯಿಗಳ ದತ್ತಿಯನ್ನು ಸ್ಥಾಪಿಸಿದ್ದು, ಜಿಲ್ಲೆ ಹಾಗೂ ಜಿಲ್ಲೆಯ ಹೊರಗಿನ ಸಾಧನೆಗೈದ ಪತ್ರಕರ್ತರಿಗೆ ಪ್ರಶಸ್ತಿಯನ್ನು ಪ್ರತೀವರ್ಷ ನೀಡಲಾಗುತ್ತಿದೆ. ಈ ದತ್ತಿನಿಧಿ ಮೂಲಕ ಹಿರಿಯ ಪತ್ರಕರ್ತರ ಹೆಸರನ್ನು ಶಾಶ್ವತವಾಗಿಸಿದ ಶಾಸಕ ಶ್ರೀ ಈಶ್ವರಪ್ಪರವರಿಗೆ ಸಂಘವು ಸದಾ ಅಭಾರಿಯಾಗಿದೆ ಎಂದ ಅವರು, ಈ ಪ್ರಶಸ್ತಿಗಳನ್ನು ಮಂಗಳೂರಿನ ಪುರಭವನದಲ್ಲಿ ಇದೇ ಮಾ. ೦೭ ಹಾಗೂ ೦೮ರಂದು ನಡೆಯುವ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ೩೫ನೇ ರಾಜ್ಯ ಸಮ್ಮೇಳನದ ಸಂದರ್ಭದಲ್ಲಿ ಮಾ. ೮ರಂದು ಪ್ರದಾನ ಮಾಡಲಾಗುತ್ತಿದೆ. ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಈ ಪ್ರಶಸ್ತಿ ಪುರಸ್ಕೃತರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ರಾಜ್ಯ ಕಾರ್ಯಕಾರಿ ಸದಸ್ಯ ಎನ್. ರವಿಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ವೈದ್ಯ, ನಗರ ಕಾರ್ಯದರ್ಶಿ ವಿ.ಟಿ. ಅರುಣ್, ದೀಪಕ್ ಸಾಗರ್ ಇದ್ದರು.
*ಪರಿಚಯ
* ಶ್ರೀಕಾಂತ್ ಭಟ್‌ರವರು ಪ್ರಸ್ತುತ ವಿಜಯವಾಣಿ ಪತ್ರಿಕೆಯಲ್ಲಿ ರಾಜಕೀಯ ವಿಭಾಗದಲ್ಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶ್ರಾಂತ ಶಿಕ್ಷಕರ ಶೇಷಾದ್ರಿ ಭಟ್, ಅನ್ನಪೂರ್ಣ ದಂಪತಿಗಳ ಪುತ್ರರಾದ ಇವರು, ಶಿವಮೊಗ್ಗ ಸಮೀಪದ ಮತ್ತೂರು ಸರ್ಕಾರಿ ಶಾಲೆ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಢ ಶಿಕ್ಷಣ. ಜೆಪಿಎನ್ ಕಾಲೇಜಿನಲ್ಲಿ ಪಿಯುಸಿ, ಬಳಿಕ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಲ್ಲಿ ಬಿಬಿಎಂ ಶಿಕ್ಷಣ ಪಡೆದವರು.
ಹೊಸದಿಗಂತ ಮತ್ತು ನಾವಿಕ ದಿನ ಪತ್ರಿಕೆ ಮೂಲಕ ಪತ್ರಿಕೋದ್ಯಮ ಪ್ರವೇಶ ಮಾಡಿದ ಇವರು, ಬಳಿಕ ೧೨ ವರ್ಷ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಉಪ ಸಂಪಾದಕ, ವರದಿಗಾರ, ಪ್ರಧಾನ ವರದಿಗಾರ ಹುದ್ದೆ, ವಿಶ್ವವಾಣಿಯಲ್ಲಿ ಒಂದೂವರೆ ವರ್ಷ ಜವಾಬ್ದಾರಿ ನಿರ್ವಹಿಸಿ, ಇದೀಗ ಪ್ರಸ್ತುತ ಎರಡೂವರೆ ವರ್ಷದಿಂದ ವಿಜಯವಾಣಿಯ ರಾಜಕೀಯ ವಿಭಾಗದಲ್ಲಿ ವಿಶೇಷ ಪ್ರತಿನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕಾ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸಿರುವ ಇವರು, ಕಂಪ್ಯೂಟರ್ ಆಪರೇಟರ್, ಪ್ರೂಫ್ ರೀಡರ್ ಆಗಿ ಪತ್ರಿಕೋದ್ಯಮ ಪ್ರವೇಶ. ಬಳಿಕ ವರದಿಗಾರ, ಉಪ ಸಂಪಾದಕ, ಹಿರಿಯ ವರದಿಗಾರ, ಪ್ರಧಾನ ವರದಿಗಾರ, ವಿಶೇಷ ಪ್ರತಿನಿವರೆಗೆ ಹಂತಹಂತವಾಗಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಮಾಜಿ ಶಾಸಕರ ನಕಲಿ ಮೆಡಿಕಲ್ ಬಿಲ್ ಹಗರಣ, ವಿಟಿಯು ವಿಶ್ರಾಂತ ಕುಲಪತಿ ಫೇಕ್ ಬಯೋಡೇಟಾ ಪ್ರಕರಣ, ಲೋಕೋಪಯೋಗಿ- ಜಲ ಸಂಪನ್ಮೂಲ ಇಲಾಖೆಯ ವಿವಿಧ ಹಗರಣ ಬಯಲಿಗೆಳೆದು ತನಿಖೆ ಆಗುವಂತೆ ಮಾಡಿದ್ದು, ಸರ್ಕಾರದ ಬಡ್ತಿ ರಾದ್ಧಾಂತದ ಮೇಲೆ ಸರಣಿ ವರದಿ ಮೂಲಕ ಬೆಳಕು ಚೆಲ್ಲಿದ್ದು, ೨೦೧೮ರ ವಿಧಾನಸಭೆ ಚುನಾವಣೆ, ೨೦೧೯ರ ಲೋಕಸಭೆ ರಾಜಕೀಯ ವಿಶ್ಲೇಷಣೆ ವರದಿಗಳು ಇವರ ಪ್ರಮುಖ ಸಾಧನೆಗಳು.
ದೀರ್ಘಾವಧಿಗೆ ಶಿಕ್ಷಣ ವರದಿಗಾರಿಕೆ, ನಂತರ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವರದಿಗಾರಿಕೆಯಲ್ಲಿಯೂ ಗಮನಸೆಳೆದಿರುವ ಇವರು, ಪ್ರಸ್ತುತ ರಾಜಕೀಯ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ನಿ ಕೃಪಾ ಓರ್ವ ಕರ್ನಾಟಕ ಶಾಸ್ತ್ರೀಯ ಸಂಗೀತe, ಪುತ್ರಿ ಮಹತಿ ಭಟ್ ಉದಯೋನ್ಮುಖ ಪ್ರತಿಭೆ.
* ಗುಂಡೂರಾವ್‌ರವರು, ಮೂಲತಃ ಶಿಕಾರಿಪುರದವರು. ಮುಂಬೈನ ಪತ್ರಿಕೋದ್ಯಮ ಕಾಲೇಜಿನಲ್ಲಿ ಪದವಿಯನ್ನು ಪಡೆದಿರುವ ಗುಂಡೂರಾವ್‌ರವರು, ಸುದೀರ್ಘವಾದ ೩೩ ವರ್ಷಗಳ ಕಾಲ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರೂವ್ ರೀಡರ್ ಆಗಿ ಕಾರ್ಯನಿರ್ವಹಿಸಿ, ವರದಿಗಾರರಾಗಿ, ಪ್ರಧಾನ ವರದಿಗಾರರಾಗಿ, ವಿಶೇಷ ವರದಿಗಾರರಾಗಿ, ಸಹಾಯಕ ಸಂಪಾದಕರಾಗಿ, ಸಂಪಾದಕೀಯ ಮಂಡಳಿಯ ಸಲಹೆಗಾರರಾಗಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಶಿವಮೊಗ್ಗೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇವರ ತಂದೆ ಎನ್. ಸಿ. ಹುಚ್ಚೂರಾವ್‌ರವರು ಕೂಡಾ ೧೯೬೨ ರಿಂದ ೧೯೮೪ರವರೆಗೆ ಶಿಕಾರಿಪುರದಲ್ಲಿ ಡೆಕ್ಕನ್ ಹೆರಾಲ್ಡ್ ಹಾಗೂ ಪ್ರಜಾವಾಣಿ ಪತ್ರಿಕೆಗೆ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಕೇಂದ್ರ ಸರ್ಕಾರದ ರಕ್ಷಣಾ ಸಚಿವಾಲಯದ ವತಿಯಿಂದ ನಡೆಸಲಾದ ಯುದ್ಧದ ವರದಿಗಾರಿಕೆ ಕುರಿತ ತರಬೇತಿಯಲ್ಲಿಯೂ ಪಾಲ್ಗೊಂಡಿದ್ದ ಇವರು, ಸಾಗರದ ಹೆಗ್ಗೋಡಿನ ನೀನಾಸಂನಲ್ಲಿಯೂ ಕೂಡಾ ಚಲನಚಿತ್ರ ರಸಗ್ರಹಣ ಕಾರ್ಯಾಗಾರದಲ್ಲಿ ಪಾಲ್ಗೊಂಡು ಚಲನಚಿತ್ರ ವರದಿಗಾರಿಕೆಯ ಸೂಕ್ಷ್ಮತೆಗಳನ್ನೂ ಸಹ ಕರಗತ ಮಾಡಿಕೊಂಡಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕುರಿತಾಗಿ ಇವರ ೧೩ ಅಂಕಣ ಬರಹಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿವೆ. ಆಂಗ್ಲ ಸಾಹಿತ್ಯದ ಅಭಿರುಚಿಯನ್ನು ಹೊಂದಿರುವ ಇವರು ನಿರಂತರ ಅಧ್ಯಯನಶೀಲರು. ರಷ್ಯಾ, ಜರ್ಮನಿ, ಸ್ವಿಡ್ಜರ್‌ಲ್ಯಾಂಡ್, ಫ್ರಾನ್ಸ್ ದೇಶಗಳಿಗೆ ಅಧ್ಯಯನ ಪ್ರವಾಸ ಮಾಡಿರುವ ಇವರು, ಪ್ರಸ್ತುತ ಶಿವಮೊಗ್ಗೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇವರ ಪತ್ನಿ ಬಿ. ಉಷಾ ಪ್ರಸಿದ್ಧ ವೀಣಾ ವಾದಕಿಯಾಗಿದ್ದಾರೆ.
* ಸಿ. ರುದ್ರಪ್ಪರವರು, ಮುಂಬೈನ ಕೆ.ಸಿ.ಕಾಲೇಜಿನಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಡಿಪ್ಲೋಮಾ ನಂತರ ಮುಂಬೈನ ಇಂಡಿಯನ್‌ಎಕ್ಸ್‌ಪ್ರೆಸ್‌ನಲ್ಲಿ ತರಬೇತಿ ಪಡೆದ ನಂತರ ನಾಡಿನ ಪ್ರಮುಖ ದಿನಪತ್ರಿಕೆಗಳು ಮತ್ತು ಟಿ.ವಿ. ವಾಹಿನಿಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಆರಂಭದಲ್ಲಿ ಶಿವಮೊಗ್ಗದಲ್ಲಿ ದಿ ಎಕನಾಮಿಕ್‌ಟೈಮ್ಸ್‌ನಲ್ಲಿ ಅರೆಕಾಲಿಕ ವರದಿಗಾರರಾಗಿ ಕಾರ್ಯನಿರ್ವಹಿಸಿದ ಇವರು, ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ, ಉದಯವಾಣಿ, ಉದಯ ಟಿ.ವಿಯ ಸ್ಥಾನಿಕ ಸಂಪಾದಕರಾಗಿ, ವಿಜಯ ಕರ್ನಾಟಕದ ಪ್ರಧಾನ ವರದಿಗಾರರಾಗಿ, ಜನಶ್ರೀ ಟಿ.ವಿ ಮತ್ತು ಸುವರ್ಣ ನ್ಯೂಸ್‌ನ ಸಂಪಾದಕರಾಗಿ, ನ್ಯೂಸ್ ೧೮ನ ಸಲಹೆಗಾರರಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಮೂವತ್ತಕ್ಕೂ ಹೆಚ್ಚು ವರ್ಷಗಳ ಸುದೀರ್ಘಅನುಭವ ಹೊಂದಿರುವ ಇವರು ೧೯೯೨ ರಲ್ಲಿ ಮುಖ್ಯಮಂತ್ರಿಎಸ್.ಬಂಗಾರಪ್ಪರನವರ ಬಜೆಟ್ ಭಾಷಣ ಸೋರಿಕೆ ಕುರಿತು ಸಾಕ್ಷಾತ್ ವರದಿ ಮಾಡಿದ್ದರು. ೧೯೯೯ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಉದಯ ಟಿ.ವಿ.ಯಲ್ಲಿ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ವೀರಪ್ಪ ಮೊಯಿಲಿ ಹಾಗೂ ಸಿ.ಬೈರೇಗೌಡರೊಂದಿಗೆ ಒಂದೇ ವೇದಿಕೆಯಲ್ಲಿ ಸಂವಾದ ನಡೆಸಿದ್ದರು. ೧೯೯೨ರಲ್ಲಿ ಬೆಂಗಳೂರಿನಲ್ಲಿ ಕಾವೇರಿ ಬಂದ್ ವರದಿ ಮಾಡಲು ತೆರಳುತ್ತಿದ್ದಾಗ ಇವರ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿತ್ತು. ಪೊಲೀಸ್ ಕಮಿಷನರ್ ರಾಮಲಿಂಗಂ ಪಥ ಸಂಚಲನ ಮೂಲಕ ಇವರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದು ಇವರ ವೃತ್ತಿ ಜೀವನದ ಮರೆಯಲಾಗದ ಘಟನೆ.
* ಎಸ್. ಬಿ. ಮಠದ್ ಎಂದೇ ಹೆಸರಾದ ಸಚ್ಚಿದಾನಂದ ಬಸವಲಿಂಗಯ್ಯ ಮಠದ್‌ರವರು ಮೂಲತಃ ಹಿರೇಕೇರೂರಿನವರು. ಶಿಕಾರಿಪುರದಲ್ಲಿ ಸರ್ವಜ್ಞ ವಾರ ಪತ್ರಿಕೆಯನ್ನು ಪ್ರಾರಂಭಿಸಿ, ಆ ಮೂಲಕ ಸಮಾಜವನ್ನು ಮತ್ತು ಆಡಳಿತ ವ್ಯವಸ್ಥೆಯನ್ನು ಎಚ್ಚರಿಸುವ ಕೆಲಸವನ್ನು ಮಾಡಿದವರು. ಯಂಕಟಪ್ಪರವರು ಶಿಕಾರಿಪುರದ ಶಾಸಕರಾಗಿದ್ದ ಸಂದರ್ಭದಲ್ಲಿ ಕೂಲಿಗಾಗಿ ಕಾಳು ಯೋಜನೆಯಡಿಯಲ್ಲಿ ನಡಲದ ಅವ್ಯವಹಾರವನ್ನು ಬಯಲಿಗೆಳೆದ ಹಿರಿಮೆ ಕೂಡಾ ಇವರದ್ದು. ಇವರ ನಿಷ್ಪಕ್ಷಪಾತದ ವರದಿಯಿಂದಾಗಿ ಯಂಕಟಪ್ಪರವರ ಅಧಿಕಾರಕ್ಕೆ ಚ್ಯುತಿಯಾಗಿತ್ತು ಎಂದರೆ, ಇವರ ಪತ್ರಿಕೋದ್ಯಮದ ಭಾಷೆಯ ತೀಕ್ಷ್ಣತೆಯನ್ನು ಅರ್ಥ ಮಾಡಿಕೊಳ್ಳಬಹುದು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಂಗಳೂರಿನ ಪ್ರಕಟವಾಗುತ್ತಿದ್ದ ಕಹಳೆ ಪತ್ರಿಕೆಯನ್ನು ಶಿಕಾರಿಪುರದಲ್ಲಿ ಮರು ಮುದ್ರಣ ಮಾಡಿ ಹಂಚಿದ್ದಲ್ಲದೇ ತುರ್ತುಪರಿಸ್ಥಿತಿಯ ಕರಾಳ ಮುಖದ ಬಗ್ಗೆ ಅರಿವನ್ನು ಮೂಡಿಸಿದವರಲ್ಲಿ ಮಠದ್ ಅಗ್ರಗಣ್ಯರು. ಸರ್ವಜ್ಞ ಪತ್ರಿಕೆಯನ್ನು ತಮ್ಮ ಕುಟುಂಬದ ಭಾಗವಾಗಿ ಬೆಳೆಸಿದ್ದ ಇವರು, ಅದಕ್ಕಾಗಿ ಸಾಕಷ್ಟು ತ್ಯಾಗವನ್ನೂ ಮಾಡಿದ್ದಾರೆ. ಅಷ್ಟೇ ಅಲ್ಲ, ಎಲ್ಲ ರೀತಿಯ ನೋವನ್ನೂ ಅನುಭವಿಸಿದ್ದಾರೆ. ಆದಾಗ್ಯೂ ಪತ್ರಿಕೋದ್ಯಮದ ವಿಷಯದಲ್ಲಿ ಯಾವುದೇ ಅಮಿಷಕ್ಕೆ ಒಳಗಾಗದೇ, ನಂಬಿಕೊಂಡ ತತ್ವ ಸಿದ್ಧಾಂತಗಳಿಗೆ ರಾಜಿ ಮಾಡಿಕೊಳ್ಳದೇ ಸರ್ವಜ್ಞಪತ್ರಿಕೋದ್ಯಮದ ಜೊತೆ ಜೊತೆಯಲ್ಲಿಯೇ ಶಿಕಾರಿಪುರ ಭಾಗಕ್ಕೆ ರೈಲಿನ ವ್ಯವಸ್ಥೆಯಾಗಬೇಕು ಎಂದು ಹೋರಾಟಕ್ಕೆ ನಾಂದಿ ಹೇಳಿದವರು.
ಓರ್ವ ಪ್ರಾಮಾಣಿಕ ಪತ್ರಕರ್ತ ಹೇಗೆ ಸಮಾಜಮುಖಿಯಾಗಿ ಕೆಲಸ ಮಾಡಬಹುದು ಎಂಬುದಕ್ಕೆ ಎಸ್. ಬಿ. ಮಠದ್ ಒಂದು ಉದಾಹರಣೆ.

ಶಿವಮೊಗ್ಗ: ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಅತ್ಯಂತ ವೈಜ್ಞಾನಿಕವಾಗಿ ಸಿದ್ಧಪಡಿಸಿದ ಎಲ್ಲಾ ಸಮುದಾಯಗಳ ಜಾತಿವಾರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸರ್ಕಾರ ಸ್ವೀಕರಿಸಿ ಜಾರಿಗೊಳಿಸಬೇಕೆಂದು ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ ಒತ್ತಾಯಿಸಿದೆ.
ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ಮೀಸಲಾತಿ ಸಂವಿಧಾನ ಮೂಲಭೂತ ಹಕ್ಕಲ್ಲ ಎಂದು ತಿಳಿಸಿರುವುದು ಒಕ್ಕೂಟದ ಅಘಾತಕಾರಿಯಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ವಿ. ರಾಜು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೀಸಲಾತಿ ನೀಡುವುದು ಆಯಾ ರಾಜ್ಯಕ್ಕೆ ಬಿಟ್ಟ ವಿಚಾರ ಎಂಬ ಆದೇಶ ನೀಡಿರುವುದು ದೇಶದಲ್ಲಿ ತಲ್ಲಣ ಸೃಷ್ಟಿಸಿದೆ. ಈ ತೀರ್ಪು ಪ್ರಜಾಪ್ರಭುತ್ವದ ಭಾರತದ ಸಂವಿಧಾನದ ಮೂಲತತ್ವಗಳಿಗೆ ಸಮಾನತೆಗೆ ಹಾಗೂ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದರು.
ಆದ್ಧರಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸರ್ಕಾರದ ಉದ್ಯೋಗ ಹಾಗೂ ಭಡ್ತಿಯಲ್ಲಿ ಮೀಸಲು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ತಕ್ಷಣವೇ ಸುಪ್ರೀಂಕೋರ್ಟ್‌ನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಹಾಗೂ ಕೂಡಲೇ ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿ ದಿ|| ಡಿ. ದೇವರಾಜ್ ಅರಸ್‌ರವರ ೧೦೪ನೇ ಜನ್ಮದಿನಾಚರಣೆ (೨೦-೮-೨೦೧೯)ಸಂದರ್ಭದಲ್ಲಿ ನೀಡಬೇಕಾಗಿದ್ದ ಡಿ. ದೇವರಾಜ್ ಅರಸ್ ರಾಜ್ಯ ಪ್ರಶಸ್ತಿಯನ್ನು ಕೆಲವು ಕಾರಣಗಳಿಂದ ತಡೆಯಲಾಗಿದ್ದು, ಅದನ್ನು ರಾಜ್ಯ ಸರ್ಕಾರವು ಸೂಕ್ತ ಮಾನದಂಡ ನೀತಿ ನಿಯಮಾನುಸಾರವಾಗಿ ಆಯ್ಕೆಮಾಡಿ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದರು.
ಶಿವಮೊಗ್ಗ ನಗರದಲ್ಲಿ ಡಿ. ದೇವರಾಜ್ ಅರಸ್ ಭವನ ನಿರ್ಮಾಣ ಮಾಡಲು ಸರ್ಕಾರವು ೪.೪೨ ಕೋಟಿ ರೂ. ಸೀಮಿತಗೊಳಿಸಿ ೩ ಕೋಟಿ ರೂ.ಗೆ ಮಾತ್ರ ಆಡಳಿತಾತ್ಮಕ ಅನುಮೋದನೆ ನೀಡಿರುವುದರಿಂದ ನಕ್ಷೆಯ ಪ್ರಕಾರ ಅರಸ್ ಭವನ ನಿರ್ಮಾಣಮಾಡಲು ಸಾಧ್ಯವಿಲ್ಲ. ಆದ್ದರಿಂದ ಹೆಚ್ಚುವರಿಯಾಗಿ ೩ ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಬಗ್ಗೆ ಮುಂಬರುವ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಬೇಕೆಂದು ಮನವಿ ಮಾಡಿಕೊಂಡರು.
ಮಾ.೭ರಂದು ಬೆಳಿಗ್ಗೆ ೧೧ಗಂಟೆಗೆ ಶಿವಮೊಗ್ಗದ ಬಾಪೂಜಿ ನಗರದಲ್ಲಿರುವ ಮಲೆನಾಡು ದೇವಾಂಗ ಸಮುದಾಯ ಭವನದಲ್ಲಿ ಹಿಂದುಳಿದ ಜಾತಿಗಳ ಕಾರ್ಯಕಾರಿ ಮಂಡಳಿ, ತಾಲ್ಲೂಕು ಅಧ್ಯಕ್ಷರು, ಕಾರ್ಯದರ್ಶಿ, ಜಿಲ್ಲಾ ಮಟ್ಟದ ವಿಶೇಷ ಆಹ್ವಾನಿತರ ಸಭೆಯನ್ನು ಕರೆಯಲಾಗಿದೆ ಎಂದರು.
ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಅವರು ರಾಜ್ಯ ಶಾಶ್ವತ ಹಿಂದುಳಿದ ಆಯೋಗದ ಮುಖಾಂತರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಎಲ್ಲಾ ಸಮುದಾಯಗಳ ಜಾತಿವಾರು ಸಮೀಕ್ಷೆಯನ್ನು ಸುಮಾರು ೨೦೦ ಕೋಟಿ ರೂ. ಖರ್ಚುಮಾಡಿಸಿದ್ದು, ಆಯೋಗವು ಅತ್ಯಂತ ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಿದೆ. ಈ ವರದಿಯ ಅಧ್ಯಯನ ಮಾಡಿಸಿ ಒಳ್ಳೆಯ ಅಂಶಗಳನ್ನು ಸರ್ಕಾರ ಜಾರಿಗೆ ತರಬೇಕೆಂದು ಒಕ್ಕೂಟದ ವಿಶೇಷ ಆಹ್ವಾನಿತರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಆರ್.ಕೆ. ಸಿದ್ಧರಾಮಣ್ಣ ಒತ್ತಾಯಿಸಿದರು.
ರಾಜ್ಯ ಸರ್ಕಾರ ಈ ವರದಿಯನ್ನು ರಾಜಕೀಯವಾಗಿ ನೋಡಬಾರದು. ಎಲ್ಲಾ ಸಮುದಾಯಗಳ ಸ್ಥಿತಿಗತಿಗಳನ್ನು ದಾಖಲಿಸಿ ಆಯೋಗವು ಅಧಿಕೃತ ವರದಿ ತಯಾರಿಸಿದ್ದು ಈ ವರದಿಯಲ್ಲಿ ಕಟ್ಟಕಡೆಯ ಸಮುದಾಯಕ್ಕೂ ಸಾಮಾಜಿಕ ನ್ಯಾಯ ಒದಗಿಸಲಾಗಿದೆ ಆದ್ದರಿಂದ ಸರ್ಕಾರ ಮೊದಲ ಹಂತದಲ್ಲಿ ಈ ವರದಿಯನ್ನು ಸ್ವೀಕರಿಸಿ ಜಾರಿಗೊಳಿಸಬೇಕೆಂದು ಆಗ್ರಹಿಸಿದ ಅವರು ಒಂದುವೇಳೆ ಅವಶ್ಯಕತೆ ಬಂದರೆ ಹೋರಾಟಕ್ಕೂ ಸಿದ್ಧ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಬಿ. ಅಶೋಕ್‌ಕುಮಾರ್, ಗುಣಸೇ ರಾಮಸ್ವಾಮಿ, ಎನ್. ಉಮಾಪತಿ, ಹಿರಣ್ಣಯ್ಯ, ಇಕ್ಕೇರಿ ರಮೇಶ್, ಮಾಧವಯ್ಯ ಉಪಸ್ಥಿತರಿದ್ದರು.

ಎಂ.ಆರ್. ಸತ್ಯನಾರಾಯಣ್ ಅವರು ಶ್ರೀಹರಿಭಕ್ತಿಸಾರದ ಆಯ್ದ ಪದ್ಯಗಳಿಗೆ ವ್ಯಾಖ್ಯಾನ

ಶಿವಮೊಗ್ಗ: ಖ್ಯಾತ ನ್ಯಾಯವಾದಿ, ವಾಗ್ಮಿ ಹಾಗೂ ಚಿಂತಕ ಎಂ.ಆರ್. ಸತ್ಯನಾರಾಯಣ್ ಅವರು ಶ್ರೀಹರಿಭಕ್ತಿಸಾರದ ಆಯ್ದ ಪದ್ಯಗಳಿಗೆ ವ್ಯಾಖ್ಯಾನ ಮಾಡಿರುವುದನ್ನು ನಗರದ ಖಾಸಗೀ ಚಾನಲ್ ಆದ ಟಿ.ವಿ.ಭಾರತ್‌ನಲ್ಲಿ ಮಾ.೮ರಿಂದ ಪ್ರತಿದಿನ ರಾತ್ರಿ ೭-೩೦ ರಿಂದ ೮ವರೆಗೆ ಪ್ರಸಾರ ಮಾಡಲಿದೆ ಎಂದು ಅಂಕಣಕಾರ ಕೆ.ಜಿ. ಕೃಷ್ಣಾನಂದ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮರುದಿನ ಬೆಳಿಗ್ಗೆ ೭-೩೦ ರಿಂದ ೮ರ ವರೆಗೆ ಇದೇ ಕಾರ್ಯಕ್ರಮದ ಮರುಪ್ರಸಾರ ವಾಗಲಿದ್ದು, ಮೊದಲ ೨೮ ಕಂತು ಪ್ರಸಾರವಾಗಲಿದೆ ಎಂದರು.
ನಗರದ ಗಾಯಕಿಯರಾದ ಸುಧಾ ಅರವಿಂದ್, ರಾಜಲಕ್ಷ್ಮಿ ಇಂದುಶೇಖರ್, ಅಭಿಜ್ಞಾ ಸತೀಶ್ ಮಾರ್ಪಳ್ಳಿ ಗಾಯನ ಮಾಡಿದ್ದು,
ನರರು ದುಷ್ಕರ್ಮದಲಿ ಮಾಡಿದ ದುರಿತವಡಗಲು ನಿನ್ನ ನಾಮಸ್ಮರಣೆಯೊಂದೇ ಸಾಕು…ರಕ್ಷಿಸು ನಮ್ಮನನವರತ ಎಂದು ಕಾವ್ಯದ ಮುಖ್ಯ ಉದ್ದೇಶ ತಿಳಿಸುವ ಕನಕದಾಸರು ಶ್ರೀಹರಿಯನ್ನು ಭಯಕ್ಕಿಂತ ಹೆಚ್ಚಾಗಿ ಭಕ್ತಿಯಿಂದ ಧ್ಯಾನಿಸುತ್ತ ವಸ್ತು-ವಿಚಾರ-ಕಾವ್ಯದ ಮೂಲಕ ದೇವರನ್ನು ಮಿತ್ರನಂತೆ ಭಾವಿಸಿ ಕೆಣಕುತ್ತ ಮೂದಲಿಸುತ್ತ ತಮಾಷೆಯ ವಾದ-ವಿವಾದ ನಡೆಸುತ್ತ ಅತ್ಯಂತ ಭಕ್ತಿಯಿಂದ ಪರಮಾತ್ಮನ ಲೀಲಾಮರತದ ವರ್ಣನೆ ಮಾಡುವ ಈ ಕೃತಿಯ ವ್ಯಾಖ್ಯಾನವಾಗಿದೆ ಎಂದರು.
ಈ ಕಾರ್ಯಕ್ರಮಕ್ಕೆ ಆರ್.ಗೋಪಾಲಕೃಷ್ಣ ಮುನ್ನುಡಿ ಮಾತುಗಳನ್ನಾಡಿದ್ದು, ಕನಕದಾಸರ ಕೊನೆಯ ಕೃತಿಯಾದ ಶ್ರೀಹರಿಭಕ್ತಿಸಾರದಲ್ಲಿ ೧೦೮ ಪದ್ಯಗಳಿದ್ದು ಆಯ್ದ ಕೆಲವು ಪದ್ಯಗಳ ಗಾಯನ-ವ್ಯಾಖ್ಯಾನ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಗಂಧ ಸಂಚಾಲಕ ಬಾ.ರ.ಮಧುಸೂದನ್, ಅಯ್ಯಪ್ಪ ಸ್ವಾಮಿ ಸೇವಾಸಮಿತಿಯ ಎನ್.ಡಿ.ಸತೀಶ್ ಉಪಸ್ಥಿತರಿದ್ದರು.

ಹೊನ್ನಾಳಿಯ ಹಿರೇಕಲ್ಮಠದ ಆವರಣದಲ್ಲಿ ಮಾ.೫, ೬ ಹಾಗೂ ೭ರಂದು ರಾಜ್ಯಮಟ್ಟದ ಕೃಷಿಮೇಳ-೨೦೨೦

ಶಿವಮೊಗ್ಗ: ಹೊನ್ನಾಳಿಯ ಹಿರೇಕಲ್ಮಠದ ಆವರಣದಲ್ಲಿ ಮಾ.೫, ೬ ಹಾಗೂ ೭ರಂದು ರಾಜ್ಯಮಟ್ಟದ ಕೃಷಿಮೇಳ-೨೦೨೦ನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೇಳದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರು, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ಹಿರೇಕಲ್ಮಠದ ಲಿಂಗೈಕ್ಯ ಶ್ರೀ ಒಡೆಯರ್ ಮೃತ್ಯುಂಜಯ ಶಿವಾಚಾರ್ಯ ಸ್ವಾಮಿಗಳ ೫೦ನೇ ಪುಣ್ಯಾರಾಧನೆ ಹಾಗೂ ಲಿಂಗೈಕ್ಯ ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಐದನೇ ಪುಣ್ಯಸ್ಮರಣೆ ‘ಚಂದ್ರ ಸ್ಮರಣೆ’ ಅಂಗವಾಗಿ ಶ್ರೀ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ರಾಜ್ಯ ಮಟ್ಟದ ಕೃಷಿಮೇಳ ಆಯೋಜಿಸಲಾಗಿದೆ ಎಂದು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮಾ.೫ರ ಬೆಳಿಗ್ಗೆ ೧೦ಗಂಟೆಗೆ ಮೇಳದ ಉದ್ಘಾಟನೆಯನ್ನು ಯೋಗಗುರು ಬಾಬಾ ರಾಮ್‌ದೇವ್ ನೆರವೇರಿಸಲಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ ವಸ್ತು ಪ್ರದರ್ಶನವನ್ನು, ಸಂಸದ ಬಿ.ವೈ. ರಾಘವೇಂದ್ರ ಇಸ್ರೇಲ್ ತಂತ್ರಜ್ಞಾನ ಪ್ರಾತ್ಯಕ್ಷಿಕೆಯನ್ನು, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಫಲಪುಷ್ಪ ಪ್ರದರ್ಶನ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿ.ವಿ. ಕುಲಪತಿ ಡಾ. ಎಂ.ಕೆ. ನಾಯಕ್ ಕೃಷಿ ಗೋಷ್ಠಿಯನ್ನು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಪ್ರಸಾದ ವಿತರಣಾ ಕೇಂದ್ರವನ್ನು ಉದ್ಘಾಟಿಸಲಿದ್ದು, ವಿವಿಧ ಮಠಗಳ ಸ್ವಾಮೀಜಿಗಳು ಸಾನಿಧ್ಯವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಆಗಮಿಸಲಿದ್ದಾರೆ ಎಂದರು.
ಮಧ್ಯಾಹ್ನ ೧೨ ಗಂಟೆಯಿಂದ ಕೃಷಿ ಕವಿಗೋಷ್ಠಿ ನಡೆಯಲಿದ್ದು, ೩ ಗಂಟೆಗೆ ನಡೆಯುವ ಧರ್ಮಸಭೆಯನ್ನು ನಟ ಡಾ. ಶಿವರಾಜ್‌ಕುಮಾರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಶಾಸಕರು, ಜನಪ್ರತಿನಿಧಿಗಳು, ರೈತಮುಖಂಡರು ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.
ಮಾ.೬ರ ಬೆಳಿಗ್ಗೆ ೧೦.೩೦ರಿಂದ ಕೃಷಿ ಕವಿಗೋಷ್ಠಿ ನಡೆಯಲಿದ್ದು, ಮಧ್ಯಾಹ್ನ ೩ ಗಂಟೆಗೆ ನಡೆಯುವ ಧರ್ಮಸಭೆಯನ್ನು ಮೈಸೂರು ಅರಮನೆಯ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದಾರೆ. ಸಂಜೆ ೭ ಗಂಟೆಗೆ ಸಾಂಸ್ಕೃತಿಕ ಸಂಜೆ ಹಾಗೂ ನೀನಾಸಂ ಕಲಾತಂಡದಿಂದ ನಾಟಕ ಪ್ರದರ್ಶನವಿದೆ ಎಂದರು.
ಮಾ.೭ರ ಬೆಳಿಗ್ಗೆ ೧೦-೩೦ರಿಂದ ಕೃಷಿಗೋಷ್ಠಿ-೨ ನಡೆಯಲಿದ್ದು, ಮಧ್ಯಾಹ್ನ ೩ ಗಂಟೆಗೆ ನಡೆಯುವ ಧರ್ಮಸಭೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಶ್ರೀ ಚಂದ್ರಶೇಖರ ಶಿವಾಚಾರ್ಯ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವಾಣಿಜ್ಯ ಸಂಕಿರಣವನ್ನು, ಉಪಮುಖ್ಯಮಂತ್ರಿ ಗೋವಿಂದ ಖಾರಜೋಳ ಗುರುಕುಲ ಮಾದರಿಯನ್ನು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜಾಲತಾಣವನ್ನು, ಶಾಸಕ ಡಿ.ಕೆ. ಶಿವಕುಮಾರ್ ಪುಷ್ಕರಣಿಯನ್ನು ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ್ ಶಿರಸ್ತ್ರಾಣವನ್ನು ಉದ್ಘಾಟಿಸಲಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ರಸ್ತೆ ಸುರಕ್ಷಾ ಸಿಡಿ ಬಿಡುಗಡೆ ಮಾಡುವರು. ಸಂಜೆ ೭ ಗಂಟೆಗೆ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರತಿದಿನ ಬೆಳಿಗ್ಗೆ ೫ ಗಂಟೆಗೆ ಪತಂಜಲಿ ಯೋಗ ಪೀಠದ ಯೋಗಗುರು ಬಾಬಾ ರಾಮ್‌ದೇವ್ ಇವರಿಂದ ಯೋಗಾಸನ ಪ್ರದರ್ಶನವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪತಂಜಲಿ ಯೋಗಪೀಠದ ರಾಜ್ಯಾಧ್ಯಕ್ಷ ಬವರ್‌ಲಾಲ್ ಆರ್ಯ, ಉಮಾಪತಿ, ಸೋಮಣ್ಣ, ರಾಜಣ್ಣ ಉಪಸ್ಥಿತರಿದ್ದರು.

ಚಳವಳಿಗಳು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುತ್ತವೆ

ಶಿವಮೊಗ್ಗ: ಚಳವಳಿಗಳು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುತ್ತವೆ ಎಂದು ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರ್ರಾಧ್ಯಾಪಕ ಡಾ.ಕುಂಸಿ ಉಮೇಶ್ ಹೇಳಿದರು.
ಅವರು ಇಂದು ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ೧೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಗೋಷ್ಠಿ ೧೦ರ ಕನ್ನಡ ಸಾಹಿತ್ಯದಲ್ಲಿ ಚಳವಳಿಗಳ ನೆಲೆ ಕುರಿತು ಆಶಯ ಮಾತುಗಳನ್ನಾಡಿದರು.
ನಾಯಕರು ಚಳವಳಿಗಳಿಂದ ಉದ್ಬವಿಸುತ್ತಾರೆಯೇ ಹೊರತು ಚಳವಳಿಗೆ ನಾಯಕರು ಇರುವುದಿಲ್ಲ. ಜಗತ್ತಿನ ಮಾನವ ಚರಿತ್ರೆಯ ಚಳವಳಿಗಳ ಇತಿಹಾಸದಲ್ಲಿ ತಾತ್ಕಾಲಿಕವಾಗಿ ಚಳವಳಿಗೆ ಸೋಲುಗಳಾದರೂ ಅದು ಕೊನೆಗೆ ಜಯವನ್ನೇ ಕಂಡಿದೆ. ಬಹಳಷ್ಟು ಜನರು ತಾವು ಚಳವಳಿಗಳಿಂದ ಬಂದಿದ್ದೇವೆ ಎಂದುಕೊಳ್ಳುತ್ತಾರೆ ಆದರೆ ಹಾಗೆ ಇರುವುದಿಲ್ಲ ಎಂದರು.
ಸಾಹಿತಿಗಳ ಮತ್ತು ಇತರೆ ಚಳವಳಿಗಳನ್ನು ಹತ್ತಿಕ್ಕುವ ಪರಿಪಾಠ ಅಂದಿನಿಂದ ಇಂದಿನವರೆಗೂ ಬೆಳೆದು ಬಂದಿದೆ. ಪ್ರಭುತ್ವದ ವಿರುದ್ದ ಮಾತನಾಡಿದರೆ ಸಾಕು ಅವರ ಬಾಯಿ ಮುಚ್ಚುವ ಕೆಲಸ ನಿರಂತರವಾಗುತ್ತಿದೆ ಮತ್ತು ರಾಜಕೀಯ ಹಾಗೂ ಜಾತಿಯ ಕಾರಣಕ್ಕಾಗಿ ಚಳವಳಿಗಳು ಉಸಿರುಕಟ್ಟುವ ಇಲ್ಲವೇ ಅವೇ ಪ್ರಬಲವಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ವಚನಕಾರರ ಚಳವಳಿ ಕನ್ನಡ ಚಳವಳಿಯಲ್ಲಿ ಬಹು ಪ್ರಾಮುಖ್ಯತೆ ಸ್ಥಾನ ಪಡೆಯುತ್ತದೆ. ಕನ್ನಡ ಸಾಹಿತ್ಯವು ಮನುಷ್ಯನ ಪರವಾಗಿ ನಿಂತು ಜೀವಪರವಾಗಿ ಮಿಡಿಯುತ್ತಲೇ ಬಂದಿದೆ. ಕನ್ನಡ ಭಾಷೆಯನ್ನು ಉಳಿಸಿದವರು, ಬೆಳೆಸಿದವರು ಸಾಹಿತಿಗಳು, ಕವಿಗಳು ಮಾತ್ರ ಅಲ್ಲ. ಅದನ್ನ ನಿಜವಾಗಿ ಉಳಿಸಿದವರು ಅನಕ್ಷರಸ್ಥರು. ಇವರಿಂದಲೇ ಕನ್ನಡಕ್ಕೆ ಸಾವು ಬರುವುದಿಲ್ಲ ಎಂದರು.
ಕನ್ನಡ ಭಾಷಾ ಬೆಳವಣಿಗೆ ಮತ್ತು ಚಳವಳಿ ಕುರಿತು ಮಾತನಾಡಿದ ಸಹ್ಯಾದ್ರಿ ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪ್ರಕಾಶ್ ಮರಗನಳ್ಳಿ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ. ಅದೊಂದು ಬದುಕು, ಪ್ರದೇಶ, ಜನಾಂಗ, ಸಮುದಾಯ, ನಾಡು ಹೀಗೆ ಎಲ್ಲವನ್ನು ಒಳಗೊಂಡು ಒಟ್ಟಿಗೆ ಹಿಡಿದಿಡುತ್ತದೆ. ಕನ್ನಡ, ಕನ್ನಡಿಗ, ಕರ್ನಾಟಕ ಹೀಗೆ ಕನ್ನಡತನ ಎನ್ನವುದು ಒಂದು ಒಟ್ಟು ಸ್ವರೂಪವಾಗಿದೆ ಎಂದರು.
ಕನ್ನಡತನ ಎನ್ನುವುದು ಭಾಷೆಯ ನೆರಳಲ್ಲಿ ಬದುಕುತ್ತಾ ಬದುಕಿನ ದರ್ಶನ ನೀಡುತ್ತಾ, ಆತಂಕಗಳು ಬಂದಾಗ ಮೈಕೊಡವಿಕೊಂಡು ಏಳುತ್ತಾ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುತ್ತಾ ಬೆಳೆಯುತ್ತದೆ. ಪ್ರಸ್ತುತ ಕನ್ನಡ ಭಾಷೆ ಇಂಗ್ಲಿಷ್ ಮತ್ತು ಹಿಂದಿಗಳ ಆಕ್ರಮಣವನ್ನು ಎದುರಿಸಿ ಪುಟಿದೇಳುತ್ತಿದೆ. ಹಾಗಾಗಿ ಕನ್ನಡ ಭಾಷೆ ಬೆಳವಣಿಗೆ ಮತ್ತು ಚಳವಳಿ ಇವೆಲ್ಲವೂ ಒಟ್ಟಾಗಿಯೇ ಬೆಳೆಯುತ್ತಾ ಬಂದಿದೆ. ಚಳವಳಿಗಳು ಕನ್ನಡದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿವೆ. ಡಾ.ರಾಜ್‌ಕುಮಾರ್ ಒಂದು ಸಣ್ಣ ಉದಾಹರಣೆಯಷ್ಟೆ ಎಂದರು.
ಮುಳುಗುತ್ತಿರುವ ಚಳವಳಿಗಳು, ಬತ್ತುತ್ತಿರುವ ಸಾಹಿತ್ಯ ಕುರಿತು ಮಾತನಾಡಿದ ಸಾಗರದ ಇಂದಿರಾ ಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಬಿ.ಎಲ್.ರಾಜು, ಚಳವಳಿಗಳು ಮಾತ್ರ ಮುಳುಗುತ್ತಿಲ್ಲ. ಮನುಷ್ಯರ ಬದುಕೇ ಮುಳುಗುತ್ತಿದೆ. ನಮ್ಮಸುತ್ತು ಹಿಂಸೆ, ಅವಮಾನ, ಆತಂಕಗಳು ಹೆಚ್ಚಾಗುತ್ತಿವೆ ಎಂದು ವಿಷಾಧಿಸಿದರು.
ಜನರ ಗುರುತುಗಳನ್ನೇ ಅನುಮಾನದಿಂದ ನೋಡುವ ಪ್ರಭುತ್ವದ ನೇಣುಕುಣಿಕೆ ಕೂಡ ತಮ್ಮ ಮೇಲಿದೆ. ನಿರುದ್ಯೋಗ, ಹಸಿವು, ಬಡತನ ಕಾಡುತ್ತಿದೆ. ಕಾರ್ಖಾನೆಗಳ ಹೊಗೆ ನಿಂತು ಹೋಗಿದೆ. ಒಬ್ಬನು ಸುಖವಾಗಿರಲು ಕೋಟಿ ಜನರು ಕಷ್ಟಪಡುವಂತಾಗಿದೆ. ಸ್ವಾರ್ಥಕ್ಕಾಗಿ ಬದುಕುವವರು ಮಿತಿಮೀರಿ ಬೆಳೆಯುತ್ತಿದ್ದಾರೆ. ಸಮಾಜದ ಒಳಿತಿಗಾಗಿ ಯೋಚನೆ ಮಾಡುವವನೇ ನಿಜವಾದ ನಾಗರಿಕ ಎಂದರು.
ದಲಿತ ಚಳವಳಿಗಳು, ರೈತ ಚಳವಳಿಗಳು ಜಾತಿಯ ಚಳವಳಿಗಳಾಗಿ ಪರಿವರ್ತನೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಭಾಷಾ ಚಳವಳಿ ಸೇರಿದಂತೆ ಎಲ್ಲ ಚಳವಳಿಗಳು ಜನರ ಮಿಡಿತಕ್ಕೆ ಒಳಗಾಗಬೇಕು. ಜನರ ಬದುಕನ್ನು ಕಟ್ಟಿದಾಗ ಮಾತ್ರ ಎಲ್ಲ ಚಳವಳಿಗಳು ಉಳಿದುಕೊಳ್ಳುತ್ತವೆ ಎಂದರು.
ಪ್ರಸ್ತುತ ಸಂದರ್ಭ ಮತ್ತು ದಲಿತರು ಕುರಿತು ಮಾತನಾಡಿದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಲೇ ಹೋಗುತ್ತಿವೆ. ಪ್ರಭುತ್ವದ ಕಪಿಮುಷ್ಟಿಯಲ್ಲಿ ಚಳವಳಿಯಲ್ಲೂ ಕೂಡ ಸಿಲುಕಿಹಾಕಿಕೊಂಡಿವೆ. ಅಂಬೇಡ್ಕರರ ಚಿಂತನೆಗಳಿಗೆ ಹೊಸ ವ್ಯಾಖ್ಯಾನ ಕೊಡುವಂತಹ ವಿಪರ್ಯಾಸ ಒದಗಿಬಂದಿದೆ. ಪ್ರಸ್ತುತ ದಲಿತರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ತಮ್ಮದಲ್ಲದ ತಪ್ಪಿಗೆ ಕೊಲೆಯಾಗುತ್ತಿದ್ದಾರೆ. ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಕೆಟ್ಟ ದಿನಗಳನ್ನು ಎದುರಿಸುತ್ತಿದ್ದಾರೆ.ಇದರಿಂದ ಬಿಡುಗಡೆಯಾಗದ ಹೊರತು ಗಾಂಧಿ, ಅಂಬೇಡ್ಕರ್ ಕಂಡ ಭಾರತ ಆಗಲು ಸಾಧ್ಯವೇ ಇಲ್ಲ ಎಂದರು.
ತೀರ್ಥಹಳ್ಳಿಯ ಪ್ರಾಧ್ಯಾಪಕ ಡಾ.ಕೆ.ಆಂಜನಪ್ಪ ಬಂಡಾಯ ಸಾಹಿತ್ಯದ ನೆಲೆಗಳು ಕುರಿತು ಮಾತನಾಡಿ, ಬಂಡಾಯ ಎಂದರೆ ಕೊಚ್ಚು ಕೊಲ್ಲು ಅಲ್ಲ. ಮೌನವಾಗಿ ಪ್ರತಿಭಟಿಸುವುದು ಕೂಡ. ಇದುಸಾಹಿತ್ಯದ ಮೂಲಕವೂ ಪ್ರಕಟವಾಗುತ್ತದೆ ಎಂಬುದಕ್ಕೆ ವಚನ ಸಾಹಿತ್ಯವೇ ಉದಾಹರಣೆ, ಅಂದಿನಿಂದ ಬಂಡಾಯ ಸಾಹಿತ್ಯ ಚಳವಳಿ ಕಾಲಘಟ್ಟದವರೆಗೂ ಸಂಪ್ರದಾಯಿಕ ಮನಸ್ಥಿತಿಯನ್ನು ಪ್ರಶ್ನೆ ಮಾಡುತ್ತಲೇ ಬಂಡಾಯ ಸಾಹಿತ್ಯ ಸಾಗಿರುವುದು ವಿಶೇಷ ಎಂದರು.
ಗೋಷ್ಠಿಯ ಅಧ್ಯಕ್ಷತೆಯನ್ನು ಸಹ್ಯಾದ್ರಿಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಮೇಟಿ ಮಲ್ಲಿಕಾರ್ಜುನ ಮಾತನಾಡಿ, ಕನ್ನಡ ಸಾಹಿತ್ಯದ ಚರ್ಚೆ ಎಂದರೆ ಕೇವಲ ಒಳಿತು ಮಾತ್ರ ಅಲ್ಲ. ಅಲ್ಲಿನ ಕೆಡುಕನ್ನು ಚರ್ಚೆ ಮಾಡಬೇಕು. ಸಾಹಿತ್ಯ ಎನ್ನುವುದೇ ಒಂದು ಚಳವಳಿ. ಎಲ್ಲ ಅಸಹನೆಗಳನ್ನು ಮೀರಿ ಸಮಾಜದ ಒಳಿತಿಗಾಗಿ ಒಟ್ಟಾಗುವ ಕೇಂದ್ರವೇ ಸಾಹಿತ್ಯ ಎಂದರು.
ಮನುಷ್ಯ ಸಂಬಂಧಗಳನ್ನು ಒಡೆಯುವುದು ಧರ್ಮವಲ್ಲ. ಎಲ್ಲದನ್ನು ಒಗ್ಗೂಡಿಸುವುದು ಧರ್ಮ. ಹೇಗೆ ಭಾಷೆಗಳ ಜೊತೆಗೆ ಬೆರೆತು ಕನ್ನಡ ಪ್ರತ್ಯೇಕವಾಗಿ ನಿಲ್ಲುತ್ತದೆಯೋ ಹಾಗೆಯೇ ಧರ್ಮ ಕೂಡ. ಹಾಗಾಗಿ ಕನ್ನಡ ವಿವೇಕ ಕಲಿಸುತ್ತದೆ. ಅದು ಕೇವಲ ಭಾಷೆ ಮಾತ್ರವಲ್ಲದೇ ಒಂದು ಪರಂಪರೆ ಮತ್ತು ಅಭಿರುಚಿ ನೀಡುತ್ತದೆ ಎಂದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಜನಪರ ಹಾಗೂ ರೈತಪರವಾದ ಬಜೆಟ್ ನೀಡುತ್ತಾರೆ: ಎಂ.ಪಿ.ರೇಣುಕಾಚಾರ್ಯ

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಜನಪರ ಹಾಗೂ ರೈತಪರವಾದ ಬಜೆಟ್ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳು ಆದಾಯವನ್ನು ಹೇಗೆ ಕ್ರೂಢೀಕರಿಸಬೇಕೆಂಬುದು ಸಹ ಅವರಿಗೆ ಅರಿವಿದೆ. ಅವರಿಂದ ಉತ್ತಮ ಬಜೆಟ್‌ನ್ನು ರಾಜ್ಯದ ಜನತೆ ಪಡೆಯಲಿದ್ದಾರೆ ಎಂದರು.
ದಾವಣಗೆರೆ ಜಿಲ್ಲೆಯ ಓರ್ವರಿಗೆ ಸಚಿವ ಸ್ಥಾನ ಸಿಗಬೇಕೆನ್ನುವುದು ಜಿಲ್ಲೆಯ ಶಾಸಕರ ಒತ್ತಾಯವಾಗಿದೆ. ಜಿಲ್ಲೆಯಲ್ಲಿ ಯಾರೊಬ್ಬರಿಗೆ ಸಚಿವ ಸ್ಥಾನ ಸಿಕ್ಕರೂ ನಮಗೆ ಸಂತೋಷ. ಪ್ರಸ್ತುತ ಕೆ.ಎಸ್.ಈಶ್ವರಪ್ಪನವರು ದಾವಣಗೆರೆ ಜಿಲ್ಲಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಅವರು ಅಧಿಕಾರಿಗಳ ಸಭೆ ನಡೆಸಲು ಬಂದ ಸಂದರ್ಭದಲ್ಲಿ ನಿಮ್ಮ ಜಿಲ್ಲೆಯವರೇ ಯಾರಾದರೂ ಸಚಿವರಾಗಿ ಉಸ್ತುವಾರಿಯನ್ನು ನೋಡಿಕಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಓರ್ವರಿಗೆ ಸಚಿವ ಸ್ಥಾನ ಸಿಗಬೇಕೆನ್ನುವುದು ನಮ್ಮ ಮನವಿಯಾಗಿದೆ ಎಂದರು.
ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಜನ ಇಂದಿಗೂ ಭಾವನಾತ್ಮಕವಾಗಿ ಶಿವಮೊಗ್ಗ ಜಿಲ್ಲೆಯೊಂದಿಗೆ ಇದ್ದಾರೆ. ಹಿಂದೆ ಜೆ.ಹೆಚ್.ಪಟೇಲ್ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆ ರಚನೆಯಾಯಿತು. ಅದುವರೆಗೂ ಶಿವಮೊಗ್ಗ ಜಿಲ್ಲೆಯಲ್ಲಿ ಇದ್ದಂತಹ ಹೊನ್ನಾಳಿ ಹಾಗೂ ಚನ್ನಗಿರಿ ತಾಲೂಕುಗಳು ದಾವಣಗೆರೆ ಜಿಲ್ಲೆಗೆ ಸೇರ್ಪಡೆಗೊಂಡವು. ಆದರೂ ಸಹ ನಮ್ಮ ಹೊನ್ನಾಳಿ ತಾಲೂಕಿನ ಜನತೆ ಶಿವಮೊಗ್ಗದೊಂದಿಗೆ ನಂಟು ಹೊಂದಿದ್ದಾರೆ ಎಂದರು.

 

Related posts

ಜಾತಿ ನಿಂದನೆ ಪ್ರಕರಣ: ಕುವೆಂಪು ವಿವಿ ಕುಲಸಚಿವರನ್ನು ಬಂದಿಸಲು ವಿದ್ಯಾರ್ಥಿ ಸಂಘಟನೆಯ ಆಗ್ರಹ

Times fo Deenabandhu

ಕ್ವಾರಂಟೈನ್ ಆದೇಶ ಉಲ್ಲಂಘಿಸಿದ ಇಬ್ಬರ ವಿರುದ್ಧ ಪ್ರಕರಣ ದಾಖಲು- ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು

Times fo Deenabandhu

ಸಹ್ಯಾದ್ರಿ ೧೦ಕೆ ರನ್ ಮಂಗಳೂರು

Times fo Deenabandhu