Times of Deenabandhu
  • Home
  • ಜಿಲ್ಲೆ
  • ಇಂದಿನ ಅಗತ್ಯಕ್ಕೆ ತಕ್ಕ ಇತಿಹಾಸ ಪಠ್ಯಕ್ರಮ ಅವಶ್ಯ: ಪ್ರೊ.ಸರ್ವಮಂಗಳ
ಜಿಲ್ಲೆ ಶಿವಮೊಗ್ಗ

ಇಂದಿನ ಅಗತ್ಯಕ್ಕೆ ತಕ್ಕ ಇತಿಹಾಸ ಪಠ್ಯಕ್ರಮ ಅವಶ್ಯ: ಪ್ರೊ.ಸರ್ವಮಂಗಳ

ಶಿವಮೊಗ್ಗ: ಇತಿಹಾಸವನ್ನು ಕೇವಲ ಯುದ್ಧಗಳ, ರಾಜ ಮಹಾರಾಜರ ಕಥೆಗಳ ಮೂಲಕ ನೋಡುವುದನ್ನು ಬಿಟ್ಟು ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡುವುದು ಇಂದಿನ ಅಗತ್ಯವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಜಿ.ಸರ್ವಮಂಗಳ ಕರೆ ನೀಡಿದರು.
ಅವರು ಇಂದು ನಗರದ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಇತಿಹಾಸ ವಿಭಾಗವು ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಕುವೆಂಪು ವಿಶ್ವವಿದ್ಯಾಲಯ ಇತಿಹಾಸ ಅಧ್ಯಾಪಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾಲಯ ಮಟ್ಟದ ಒಂದು ದಿನದ ಇತಿಹಾಸ ಪಠ್ಯಕ್ರಮ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದಿನ ಅಗತ್ಯತೆ ನೋಡಿಕೊಂಡು ಇತಿಹಾಸ ಪಠ್ಯಕ್ರಮ ರಚನೆಯಾಗಬೇಕು. ಕುವೆಂಪು ವಿಶ್ವವಿದ್ಯಾಲಯವು ದೇಶದಲ್ಲಿಯೇ ಉತ್ತಮ ಪಠ್ಯಕ್ರಮ ಹೊಂದಿದ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾದರೂ ಕಾಲಕ್ಕೆ ತಕ್ಕಂತೆ, ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟು ಪಠ್ಯಕ್ರಮ ರಚನೆಯಾಗಬೇಕು. ಇತಿಹಾಸ ತಿಳಿಯದೇ ನಾವೇನೂ ಮಾಡಲಾಗದು ಎಂದ ಅವರು ಇಂದಿನ ಕಾರ್ಯಾಗಾರ ವಸ್ತುನಿಷ್ಟ, ಪ್ರಸ್ತುತ ಸಮಾಜಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಕ್ಕೆ ಸಲಹೆ ನೀಡಲಿ ಎಂದು ಆಶಿಸಿದರು.
ಇತಿಹಾಸ ಅಧ್ಯಾಪಕರು ಹೊಸ ಹೊಸ ಗ್ರಂಥಗಳ ಬಗ್ಗೆ ಮಾಹಿತಿ ಪಡೆದು ವಿದ್ಯಾರ್ಥಿಗಳಿಗೆ ಅವುಗಳ ಪ್ರಯೋಜನವಾಗುವಂತೆ ಕಾರ್ಯ ನಿರ್ವಹಿಸಬೇಕು ಎಂದ ಅವರು ಇತಿಹಾಸದತ್ತ ವಿದ್ಯಾರ್ಥಿಗಳನ್ನು ಆಕಿರ್ಷಿಸಿ ಅದರಿಂದ ಅವರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗುವಂತೆ ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಇಂಥಹ ಕಾರ್ಯಾಗಾರಗಳು ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಕಮಲಾ ನೆಹರು ಮಹಿಳಾ ಕಾಲೇಜಿನ ಇತಿಹಾಸ ವಿಭಾಗ ಆಯೋಜಿಸಿದ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಪಠ್ಯಕ್ರಮ ಎಂಬುದು ವಿದ್ಯಾರ್ಥಿಗಳ, ಅಧ್ಯಾಪಕರ ನಡುವಿನ ಒಪ್ಪಂದದಂತೆ ಆಗಿದೆ. ಈ ಮನೋಭಾವನೆ ಬದಲಾಗಬೇಕು. ಇತಿಹಾಸದ ಮೊದಲ ಕಲಿಕೆಯಲ್ಲೇ ವಿದ್ಯಾರ್ಥಿಗಳು ಭ್ರಮನಿರಸನವಾಗಬಾರದು. ಪಠ್ಯಕ್ರಮದ ಬಗ್ಗೆ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಹೆಚ್ಚೆಚ್ಚು ಮಾಹಿತಿ ನೀಡಬೇಕು.ಅದರಿಂದ ವಿದ್ಯಾರ್ಥಿಗಳಲ ಯಶಸ್ಸು ಹೆಚ್ಚುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಇತಿಹಾಸವೆಂದರೆ ಅದೊಂದು ತತ್ವಶಾಸ್ತ್ರದ ಇತಿಹಾಸ. ಇತಿಹಾಸದಿಂದ ಕಲಿಯುವುದು ಬಹಳ ಇದೆ ಎಂದು ಅವರು ಹೇಳಿದರು.
ಕಾರ್ಯಾಗಾರದ ಸಂಚಾಲಕರಾದ ಡಾ.ಬಾಲಕೃಷ್ಣ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ಇತಿಹಾಸ ಪಠ್ಯಕ್ರಮದ ಕುರಿತು ಅನೇಕ ವರ್ಷಗಳ ನಂತರ ಈ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ. ಈಗಿನ ಬೋಧನಾ ಪದ್ಧತಿ ಮತ್ತು ಕಲಿಕೆಯ ಗುರಿಗಳ ಕುರಿತು ಪರಾಮರ್ಶೆ ಮಾಡುವುದು ಇದರ ಉದ್ಧೇಶವಾಗಿದೆಯಲ್ಲದೆ ಪಠ್ಯಕ್ರಮ ರಚನೆ ಮತ್ತು ಗುರಿಗಳ ನಡುವಿನ ಕೊಂಡಿಯನ್ನು ಪುನ:ಪರೀಕ್ಷಿಸುವ ಕೆಲಸ ಈ ಕಾರ್ಯಾಗಾರದಲ್ಲಿ ಆಗುತ್ತದೆ. ಅಲ್ಲದೆ ಇತಿಹಾಸ ಕಲಿಸುವ ವಿಧಾನ ಮತ್ತು ಅದರತ್ತ ನೋಟದ ಬೆಳವಣಿಗೆಗಳ ಕುರಿತಾಗಿಯೂ ಚಿಂತನ ಮಂಥನ ನಡೆಯಲಿದೆ ಎಂದು ಅವರು ತಿಳಿಸಿದರು. ವಿಜ್ಞಾನವನ್ನು ಇತಿಹಾಸದಲ್ಲಿ ಮೇಳೈಸಿ ವಿದ್ಯಾರ್ಥಿಗಳನ್ನು ನಮ್ಮ ಭವ್ಯ ಪರಂಪರೆ, ಸಂಸ್ಕೃತಿಯತ್ತ ಹೇಗೆ ಸೆಳೆದುಕೊಳ್ಳಬಹುದು ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ಕುಲಸಚಿವ ಪ್ರೊ.ಟಿ.ಎಸ್.ಹೂವ್ಯಗೌಡ, ಡಾ.ಓಂಕಾರಪ್ಪ ಎ.ಪಿ., ಕಾರ್ಯಾಗರದ ಸಂಚಾಲಕ ಡಾ.ಆರ್.ಎಂ.ಜಗದೀಶ, ಡಾ.ಕೆ.ಜಿ.ವೆಂಕಟೇಶ್ ಮೊದಲಾದವರು ವೇದಿಕೆಯಲ್ಲಿದ್ದರು. ಉಪನ್ಯಾಸಕರಾದ ನಾಗರಾಜಕುಮಾರ್ ವಂದಿಸಿದರು. ಉಷಾ ಎಸ್.ಬಿ.ಕಾರ್ಯಕ್ರಮ ನಿರೂಪಿಸಿದರು. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸುಮಾರು ೭೫ ಇತಿಹಾಸ ಉಪನ್ಯಾಸಕರು ಇದರಲ್ಲಿ ಪಾಲ್ಗೊಂಡಿದ್ದರು. ಬಿ.ಎ.ಪದವಿಯ ಎಲ್ಲ ವರ್ಷಗಳ ಪಠ್ಯಕ್ರಮಗಳ ಕುರಿತಾದ ನಾಲ್ಕು ತಾಂತ್ರಿಕ ಗೋಷ್ಠಿಗಳು ಜರುಗಿದವು.

Related posts

ಡಿ.8ರಂದು ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

Times fo Deenabandhu

 4 ಜಿಲ್ಲೆಗಳಲ್ಲಿ ಶುಕ್ರವಾರದಿಂದ (ಏ.24) ರಂಜಾನ್ ಉಪವಾಸ

Times fo Deenabandhu

ಆಳ್ವಾಸ್‌ನಲ್ಲಿ ”ಅಂತರಾಷ್ಟ್ರೀಯ ಮಹಿಳಾ ದಿನ”

Times fo Deenabandhu