Times of Deenabandhu
  • Home
  • ಜಿಲ್ಲೆ
  • ಅಕ್ರಮ ಕಲ್ಲುಕ್ವಾರೆ ಮತ್ತು ಮರಳು ದಂಧೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಲಾಗುವುದು
ಜಿಲ್ಲೆ ಶಿವಮೊಗ್ಗ

ಅಕ್ರಮ ಕಲ್ಲುಕ್ವಾರೆ ಮತ್ತು ಮರಳು ದಂಧೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಲಾಗುವುದು

ಶಿವಮೊಗ್ಗ : ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಕ್ವಾರೆ ಮತ್ತು ಮರಳು ದಂಧೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಲಾಗುವುದು ಎಂದು ಕರುನಾಡ ಯುವ ಶಕ್ತಿಯ (ಕೆವೈಎಸ್) ಸಂಸ್ಥಾಪಕ ಅಧ್ಯಕ್ಷ ವಸಂತಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಗ್ಗಿಲ್ಲದೇ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಮರಳುದಂಧೆ ನಡೆಯುತ್ತಿದೆ. ಹೆಚ್ಚಾಗಿ ಅರಣ್ಯ ಇಲಾಖೆಗೆ ಸೇರಿದ ಭೂಮಿಯಲ್ಲಿಯೇ ನಡೆಯುತ್ತಿದ್ದು, ಇದರಿಂದ ಪರಿಸರದ ಮೇಲೆ ತುಂಬಾ ದುಷ್ಪರಿಣಾಮ ಉಂಟಾಗುತ್ತಿದೆ. ಅರಣ್ಯನಾಶ, ಪರಿಸರ ನಾಶದ ಜೊತೆಗೆ ಆರೋಗ್ಯದ ಮೇಲೂ ಹಾನಿಯಾಗುತ್ತಿದೆ. ವಿಶೇಷವಾಗಿ ಗಣಿಗಾರಿಕೆ ನಡೆಯುವ ಸುತ್ತಮುತ್ತಲು ವಾಸಿಸುವ ಜನರ ಜೀವನದ ಮೇಲೆ ಕೆಟ್ಟಪರಿಣಾಮ ಬಿರುತ್ತದೆ ಎಂದು ಅವರು ಹೇಳಿದ್ದಾರೆ.
ಪರವಾನಗಿ ಇರುವ ಕಲ್ಲುಗಣಿಗಾರಿಕೆ ಮತ್ತು ಪರವಾನಗಿ ಇಲ್ಲದ ಗಣಿಗಾರಿಕೆ ಈ ಎರಡರಿಂದಲೂ ಅಪಾಯ ಹೆಚ್ಚಾಗುತ್ತಿದೆ. ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಮತ್ತು ಕಲ್ಲುಗಣಿಗಾರಿಕೆ ಮಾಡುತ್ತಿರುವವರು ಶಾಮೀಲಾಗಿದ್ದಾರೆ. ಯಾರಿಗೂ ಅರಣ್ಯ ಭೂಮಿಯ ‘ಸಿ’ಫಾರಂ ಸಿಕ್ಕಿಲ್ಲ. ವಿಶೇಷವಾಗಿ ಗಣಿಗಾರಿಕೆ ಇಲಾಖೆಯ ಅಧಿಕಾರಿಗಳು ಪರವಾನಗಿ ಇಲ್ಲದಿದ್ದರೂ ಗಣಿಗಾರಿಕೆ ಮಾಡುವವರ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳದೇ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟ ಉಂಟಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಕಲ್ಲುಕ್ವಾರೆಗಳಿವೆ. ಅದರಲ್ಲಿ ಅಕ್ರಮವಾಗಿ ಇರುವ ಕಲ್ಲುಕ್ವಾರೆಗಳೇ ಹೆಚ್ಚಾಗಿವೆ. ಅಧಿಕೃತವಾಗಿ ಕಲ್ಲು ಗಣಿಗಾರಿಕೆ ಮಾಡುವವರೂ ಕೂಡ ಸರ್ಕಾರದ ಬೊಕ್ಕಸಕ್ಕೆ ಹಣ ಕಟ್ಟಿಲ್ಲ. ಕಂದಾಯ ಪ್ರದೇಶದಲ್ಲೂ ಕೂಡ ಕಲ್ಲುಗಣಿಗಾರಿಕೆ ಇದೆ. ಈ ಎಲ್ಲಾ ವಿವರಗಳನ್ನ ನಮ್ಮ ಸಂಘಟನೆ ಪಡೆದಿದ್ದು, ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ ದಾಖಲೆಗಳನ್ನು ಪಡೆಯಲಾಗಿದೆ. ಸುಪ್ರೀಂಕೋರ್ಟಿನತನಕ ನ್ಯಾಯಾಂಗ ಹೋರಾಟ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಎಂ.ಎ.ಡಿ.ಬಿ. ಕಾರ್ಯದರ್ಶಿಯಾಗಿ ಮಣಿ

ಶಿವಮೊಗ್ಗ : ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕಲಬುರಗಿಯ ಅಪರ ಆಯುಕ್ತರ ಕಚೇರಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಸ್.ಮಣಿ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರಿಂದ ಕೆ.ಎಸ್.ಮಣಿ ಅವರು ಅಧಿಕಾರ ಸ್ವೀಕರಿಸಿ ಇಂದು ಅಧಿಕೃತವಾಗಿ ಕರ್ತವ್ಯದ ಮೇಲೆ ಹಾಜರಾದರು. ಕೆ.ಎಸ್.ಮಣಿ ಅವರು ಈ ಹಿಂದೆ ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು.

ಮಹಿಳೆಯರಲ್ಲಿ ಅತಿ ಹೆಚ್ಚು ಅನಿಮಿಯಾ: ಇನ್- ಜಿಪಂ ಸಿಇಓ ವೈಶಾಲಿ

ಶಿವಮೊಗ್ಗ: ೧೮ರಿಂದ ೨೫ರೊಳಗಿನ ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿಮೊಗ್ಲೋಬಿನ್ ಕೊರತೆ ಕಂಡುಬರುತ್ತಿದ್ದು,. ಈ ನಿಟ್ಟಿನಲ್ಲಿ ಅವರ ಆರೋಗ್ಯದ ಬಗ್ಗೆ ಸರಿಯಾದ ಕ್ರಮ ಜರುಗಿಸಬೇಕಿದೆ ಎಂದು ಜಿಪಂ ಸಿಇಓ ಎಂ. ಎಲ್.ವೈಶಾಲಿ ಹೇಳಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ಅನಿಮಿಯ ಮುಕ್ತ ಭಾರತ ಕಾರ್‍ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಅತಿ ಹೆಚ್ಚಿನ ಜನರು ಅನಿಮಿಯಾ (ರಕ್ತಹೀನತೆ) ಯಿಂದ ಬಳಲುತ್ತಿದ್ದಾರೆ. ಇದನ್ನು ತೊಡೆದುಹಾಕಲು ೨೦೧೮ರಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್‍ಯಕ್ರಮ ರೂಪಿಸಿದ್ದರು. ಆ ಪ್ರಕಾರ ಕಾರ್‍ಯಕ್ರಮ ನಡೆಯುತ್ತಿದೆ. ರಾಜ್ಯದಲ್ಲಿ ಶೇ. ೪೪ರಿಂದ ೪೮ ಜನರು ಇದರಿಂದ ಬಳಲುತ್ತಿದ್ದಾರೆ. ಹೆಣ್ಣುಮಕ್ಕಳಲ್ಲಿ ಶೇ. ೮ರಿಂದ ೧೦ ಮಾತ್ರ ಹಿಮೊಗ್ಲೋಬಿನ್ ಕಂಡುಬರುತ್ತಿದೆ ಎಂದರು.
ಪೌಷ್ಟಿಕ ಆಹಾರ ಸೇವನೆ ಇದಕ್ಕೆ ಅತಿ ಮುಖ್ಯ. ಜೊತೆಗೆ ಬಯಲು ಶೌಚಾಲಯನ್ನು ನಿರ್ಮೂಲನೆ ಮಾಡಬೇಕೆನ್ನುವುದನ್ನು ಇನ್ನಷ್ಟು ಜಾಗೃತಿ ಮೂಡಿಸಬೇಕು. ನುಗ್ಗೆ, ಬಸಳೆ, ಚಕ್ರಮುನಿ ಮೊದಲಾದ ಸೊಪ್ಪುಗಳು ಮಲೆನಾಡಿನಲ್ಲಿ ಸಾಕಷ್ಟು ಲಭ್ಯವಿದ್ದು, ಅವು ಪೌಷ್ಟಿಕವಾಗಿವೆ. ಇವುಗಳನ್ನು ಬಳಸುವ ಬಗ್ಗೆ ಮನವರಿಕೆ ಮಾಡಿಕೊಡಬೇಕೆಂದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ, ಎಲ್ಲಾ ಮಹಿಳಾ ಕಾಲೇಜುಗಳಲ್ಲಿ ಈ ಕಾರ್‍ಯಕ್ರಮವನ್ನು ಈ ಬಾರಿ ಕಡ್ಡಾಯವಾಗಿ ಮಾಡಲಾಗುತ್ತಿದೆ. ಹೆಣ್ಣುಮಕ್ಕಳಲ್ಲಿ ಅತಿ ಹೆಚ್ಚು ಸಮಸ್ಯೆಯನ್ನು ಇದು ಸೃಷ್ಟಿಸುತ್ತಿದೆ. ಸ್ತ್ರೀಯರಲ್ಲಿ ಶೇ. ೧೨ರಿಂದ ೧೪ರವರೆಗೆ ಹಿಮೊಗ್ಲೋಬಿನ್ ಇರಬೇಕು. ಪುರುಷರಲ್ಲಿ ೧೩ರಿಂದ ೧೫ರಷ್ಟಿರಬೇಕು. ರಕ್ತಹೀನತೆ ಉಂಟಾದಲ್ಲಿ ಅದರಿಂದ ಮುಂದೆ ವಿವಿಧ ರೋಗಗಳು ಕಾಣಿಕೊಳ್ಳಬಹುದು. ಈ ನಿಟ್ಟಿನಲ್ಲಿ ಜಾಗೃತಿ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ತಾಯಿ-ಮಕ್ಕಳ ಆರೋಗ್ಯಾಧಿಕಾರಿ ಡಾ.. ನಾಗರಾಜ ನಾಯ್ಕ್ ಸ್ವಾಗತಿಸಿದರು. ವೇದಿಕೆಯಲ್ಲಿ ಬೆಂಗಳೂರಿನ ಪೌಷ್ಠಿಕ ಆಹಾರ ವಿಭಾಗದ ಉಪನಿರ್ದೇಶಕಿ ಡಾ. ಬಿ. ಎನ್. ರಜನಿ, ರಾಜ್ಯ ಸಂವಹನ ಸಲಹೆಗಾರ ಡಾ. ಮನೋಜ್, ಮಂಗಳೂರಿನ ಡಾ. ಸತೀಶಚಂದ್ರ, ರಾಜ್ಯ ಪೌಷ್ಟಿಕ ಆಹಾರ ಸಲಹೆಹಾರ ಡಾ. ಕೆ. ವಿಶ್ವನಾಥ ಹಾಜರಿದ್ದರು.

ಅಮೆರಿಕ ಜೊತೆ ಹಾಲು, ಕೋಳಿಮಾಂಸ ಒಪ್ಪಂದ ಬೇಡ:  ಕಲ್ಲೂರು ಮೇಘರಾಜ್ ಆಗ್ರಹ

ಶಿವಮೊಗ್ಗ: ಕೆಲವು ತಿಂಗಳ ಹಿಂದೆ ರೈತರ ಪ್ರತಿಭಟನೆಗೆ ಮಣಿದು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಕೈಬಿಟ್ಟಿದ್ದ ಕೇಂದ್ರ ಸರಕಾರ ಈಗ ಅಮೆರಿಕಾದೊಂದಿಗೆ ಒಪ್ಪಂದ ಮಾಡಿಕೊಂಡು ಹಾಲು ಮತ್ತು ಕೋಳಿ ಉತ್ಪನ್ನ ಆಮದು ಮಾಡಿಕೊಳ್ಳಲು ಮುಂದಾಗಿರುವುದನ್ನು ಕೂಡಲೇ ನಿಲ್ಲಿಸಬೇಕೆಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಕೇಂದ್ರದ ಮುಖ್ಯ ಟ್ರಸ್ಟಿ ಕಲ್ಲೂರು ಮೇಘರಾಜ, ಫೆ. ೨೪ ಮತ್ತು ೨೫ರಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಆ ವೇಳೆ ಈ ಸಂಬಂಧ ಒಪ್ಪಂದ ಏರ್ಪಡುವ ಸಂಭವವಿದೆ ಎಂದಿದ್ದಾರೆ.
ಮುಕ್ತ ವ್ಯಾಪಾರ ಒಪ್ಪಂದದಿಂದ ಭಾರತ ಹಿಂದೆ ಸರಿದಿತ್ತು. ಈಗ ಅಮೆರಿಕಾ ಅಧ್ಯಕ್ಷರನ್ನು ಮೆಚ್ಚಿಸಲು ಅಮೆರಿಕದ ಹಾಲು ಮತ್ತು ಕೋಳಿ ಉತ್ಪನ್ನವನ್ನು ಇಲ್ಲಿಗೆ ತರಿಸಲು ನಿರ್ಧರಿಸಿರುವುದು ಆತಂಕಕಾರಿ ವಿಚಾರ. ಕರ್ನಾಟಕದಲ್ಲಿ ಕೆಎಂಎಫ್ ೧೪ ಸಾವಿರ ಹಾಲು ಸಹಕಾರಿ ಸಂಘಗಳ ಮೂಲಕ ಪ್ರತಿದಿನ ೮೪ ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದೆ. ಇದೇ ರೀತಿ ಇನ್ನೂ ಕೆಲವು ಖಾಸಗಿ ಸಂಸ್ಥೆಗಳು ಹಾಲು ಸಂಗ್ರಹಿಸುತ್ತಿವೆ. ಇವುಗಳಿಗೆ ಈ ಒಪ್ಪಂದ ಮಾರಕವಾಗಲಿದೆ ಎಂದರು.
ಭಾರತದ ಹಾಲಿಗೆ ಇದರಿಂದ ಪೈಪೋಟಿ ಎದುರಾಗಲಿದೆ. ಅಮೆರಿಕನ್ ಕಂಪನಿಗಳು ಭಾರತಕ್ಕೆ ಬಂದು ಮಳಿಗೆ ತೆರೆದು ಮಾರಾಟ ಮಾಡಲಿವೆ. ಇದರಿಂದ ನಮ್ಮ ಉತ್ಪನ್ನಕ್ಕೆ ಮಾರುಕಟ್ಟೆ ಇಲ್ಲದಂತಾಗಿ ಕ್ರಮೇಣ ನಶಿಸಿ ಹೋಗುವ ಜೊತೆಗೆ ರೈತರು ಹಾಲಿಗೆ ಬೆಲೆ ಇಲ್ಲದೆ ಉದ್ಯಮದಿಂದಲೇ ಹಿಂದೆ ಸರಿಯುವ ಅಪಾಯವಿದೆ ಎಂದು ಎಚ್ಚರಿಸಿದರು.
ಈ ಹಿನ್ನೆಲೆಯಲ್ಲಿ ಯಾವ ಕಾರಣಕ್ಕೂ ಅಮೆರಿಕ ಜೊತೆ ಈ ವಿಷಯದಲ್ಲಿ ಒಪ್ಪಂದವನ್ನು ಪ್ರಧಾನಿ ಮಾಡಿಕೊಳ್ಳದೆ ಇಲ್ಲಿನ ರೈತರ ಹಿತವನ್ನು ಕಾಯುವ ಕೆಲಸಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೊಳೆಮಡಿಲು ವೆಂಕಟೇಶ್ ಹಾಜರಿದ್ದರು.

Related posts

ರಕ್ತದಾನ ಮಾಡಿ ಮಾದರಿಯಾಗಿ : ವೈಶಾಲಿ ರೆಡ್ ಕ್ರಾಸ್ -ಶತಮಾನೋತ್ಸವ ನಿಮಿತ್ತ ರಕ್ತದಾನ ಶಿಬಿರ

Times fo Deenabandhu

ಕುವೆಂಪು ವಿವಿಯಿಂದ ದೂರಶಿಕ್ಷಣ ಮುಂದುವರಿಕೆ: ಕುಲಪತಿ

Times fo Deenabandhu

ಕರ್ನಾಟಕ ಜಾನಪದ ಪರಿಷತ್ತಿನಿಂದ ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ

Times fo Deenabandhu