Times of Deenabandhu
  • Home
  • ಮುಖ್ಯಾಂಶಗಳು
  • ರಾಜ್ಯದ ಮೂಲೆ ಮೂಲೆಗಳಿಂದ ಹರಿದು ಬಂದ ಜನಸಾಗರ:ಬುಕ್ ಆಫ್ ರೆಕಾರ್ಡ್ ಸೇರಿದ ಅಸಂಖ್ಯ ಪ್ರಮಥರ ಗಣಮೇಳ
ಚಿತ್ರದುರ್ಗ ಧರ್ಮ ಪ್ರಧಾನ ಸುದ್ದಿ ಮುಖ್ಯಾಂಶಗಳು

ರಾಜ್ಯದ ಮೂಲೆ ಮೂಲೆಗಳಿಂದ ಹರಿದು ಬಂದ ಜನಸಾಗರ:ಬುಕ್ ಆಫ್ ರೆಕಾರ್ಡ್ ಸೇರಿದ ಅಸಂಖ್ಯ ಪ್ರಮಥರ ಗಣಮೇಳ

ಬೆಂಗಳೂರು ಫೆ.16:ಬೆಂಗಳೂರಿನಲ್ಲಿ ಬಾನುವಾರ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಶೂನ್ಯ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಬಸವಕೇಂದ್ರಗಳು ಮತ್ತು ಬಸವ ಸಂಘಟನೆಗಳು ಸಂಯುಕ್ತವಾಗಿ ಆಯೋಜಿಸಿದ್ದ ‘ಶಿವಯೋಗ ಸಂಭ್ರಮ-ಅಸಂಖ್ಯ ಪ್ರಮಥರ ಗಣಮೇಳ ಹಾಗೂ ಸರ್ವ ಶರಣರ ಸಮ್ಮೇಳನ’ಕ್ಕೆ ರಾಜ್ಯದೆಲ್ಲೆಡೆಯಿಂದ ಜನಸಾಗರ ಹರಿದು ಬರುವ ಮೂಲಕ ಡಾ.ಶಿವಮೂರ್ತಿ ಮುರುಘಾ ಶರಣರ 21ನೇ ಶತಮಾನದಲ್ಲಿ ಒಂದು ಚಾರಿತ್ರಿಕ ಘಟನೆಗೆ ‘ಅಸಂಖ್ಯ ಪ್ರಮಥರ ಗಣಮೇಳ’ ಸಾಕ್ಷಿಯಾಗುವುದರ ಜೊತೆಗೆ ಇತಿಹಾಸ ಪುನರಾವರ್ತನೆಯಾಗಬೇಕೆಂಬ ಅವರ ಕನಸನ್ನು ಈಡೇರಿಸಿದರು.

ಇದೇ ಸಂದರ್ಭದಲ್ಲಿ ಡಾ.ಶ್ರೀಗಳ ನೇತೃತ್ವದಲ್ಲಿ ಏಕಕಾಲದಲ್ಲಿ 25 ಸಾವಿರ ಜನ ಭಕ್ತರು ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡರು. ಇದರಲ್ಲಿ ಹಿಂದೂ,ಮುಸ್ಲಿಂ, ಕ್ರೈಸ್ತ ಧರ್ಮಗುರುಗಳು, 1500 ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿದ್ದು ವಿಶೇಷವಾಗಿತ್ತು. ಈ ಇಷ್ಟಲಿಂಗ ಪೂಜೆಯ ಮೂಲಕ ತುಮಕೂರು ರಸ್ತೆಯ ನಂದಿ ಮೈದಾನ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದ್ದಲ್ಲದೇ, ಇಷ್ಟಲಿಂಗ ಪೂಜೆ ಇಂಡಿಯಾ ಬುಕ್ ಆಫ್ ರೆಕಾರ್ಡ್‍ನಲ್ಲಿ ಸೇರಿತು.

ಮುರುಘಾ ಮಠದ ಶೂನ್ಯ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಮುರುಘಾ ಶರಣರು ಬಸವೇಶ್ವರ ಧ್ವಜಾರೋಹಣ ಮಾಡುವ ಮೂಲಕ ಗಣಮೇಳಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಎಲ್ಲ  ಸ್ವಾಮೀಜಿಗಳು ಸೇರಿಕೊಂಡರೆ ಗಣ. ಈ ಗಣಕ್ಕೆ ಭಕ್ತರು ಸೇರಿಕೊಂಡರೆ ಅದು ಅಮರಗಣವಾಗಿ ಪರಿವರ್ತನೆಯಾಗುತ್ತದೆ. ನಮ್ಮ ಈಗಿನ ಹೊಸ ಜಗತ್ತು ಅಪತ್ತು ಹಾಗೂ ಅವಸರದ ಜಗತ್ತಾಗಿ ಗೋಚರಿಸುತ್ತಿದೆ. ಇದಕ್ಕೆ ಸೂಕ್ತ ಪರಿಹಾರದ ಕುರುಹಾಗಿ ಆಧ್ಯಾಯತ್ಮಿಕ ಯಾನ ಆರಂಭಿಸಿದ್ದೇವೆ. ಈ ಯಾನಕ್ಕೆ ಒಳಗಾಗದಿದ್ದರೆ ಅವಾಂತರ ಅನಾಹುತಗಳು, ಅವ್ಯವಸ್ಥೆಗಳು, ಅಶಾಂತಿ ಎದುರಿಸಬೇಕಾಗುತ್ತದೆ.  ಬಸವಾದಿ ಶರಣರು ಧ್ಯಾನ, ಶಿವಯೋಗ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಪ್ರತಿನಿತ್ಯ ನಿಯಮಿತ ಧ್ಯಾನ ಮಾಡುವುದರ ಮೂಲಕ ಮನುಷ್ಯನ ವರ್ತನೆ ಸಮತೋಲನದ ಸ್ಥಿತಿಯಲ್ಲಿರುತ್ತದೆ. ಇಂದ್ರಿಯ ಮತ್ತು ಬುದ್ಧಿಯ ನಡುವೆ ಸಮತೋಲನ ಸಾಧ್ಯವಾಗುತ್ತದೆ. ಸಮತೋಲನ ಸಾಧಿಸುವುದೇ ನಿಜವಾದ ಸಿದ್ಧಿಯಾಗಿದೆ. ನಾವೆಲ್ಲರೂ ಧ್ಯಾನ ಪರಂಪರೆ ಮುಂದುವರಿಸಬೇಕೆಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಾನೊಬ್ಬ ಬಸವ ಅನುಯಾಯಿ. ಅದ್ದರಿಂದಲೇ ಬಸವ ಜಯಂತಿಯಂದೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆ. ಅಂತರ್ಜಾತಿ ಮದುವೆಗಳು ಆಗದೇ ಜಾತಿ ವ್ಯವಸ್ಥೆಯ ನಿರ್ಮೂಲವಾಗಲು ಸಾಧ್ಯವಿಲ್ಲ. ಇದಕ್ಕೆ ಸಮಾಜದ ಸಮ್ಮತಿಯು ಅಗತ್ಯವಾಗಿದೆ ಎಂದರಲ್ಲದೇ ಇದೊಂದು ಆಭೂತಪೂರ್ವ ಪ್ರಯತ್ನ ಎಂದು ಶ್ರೀಗಳ ಗಣಮೇಳದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಆರ್ಟ್ ಆಫ್ ಲಿವಿಂಗ್‍ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಮಾತನಾಡಿ ವೈಚಾರಿಕ ಕ್ರಾಂತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಪಸರಿಸಲು ಮುರುಘಾಶ್ರೀಗಳು ಶ್ರಮಿಸುತ್ತಿರುವುದು ಶ್ಲಾಘನೀಯವಾದುದು ಎಂದರು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಸವಣ್ಣನವರು ಒಂದು ಲಕ್ಷದ ಮೇಲೆ ತೊಂಭತ್ತಾರು ಸಾವಿರ ಶರಣರನ್ನು ಸೇರಿಸಿದ್ದು, 12ನೇ ಶತಮಾನದ ದಾಖಲೆಯಾದರೆ, ಅದೇ ಉದ್ದೇಶದಿಂದ ಚಿತ್ರದುರ್ಗದ ಮುರುಘಾಶರಣರು ಆಯೋಜಿಸಿರುವ ಈ ಮೇಳವು 21ನೇ ಶತಮಾನದ ಇತಿಹಾಸ ಎಂದರಲ್ಲದೇ ಚಿತ್ರದುರ್ಗದ ಮಠದಲ್ಲಿ ನಿರ್ಮಾಣವಾಗುತ್ತಿರುವ 380 ಅಡಿ ಎತ್ತರ ಬಸವ ಪುತ್ಥಳಿಗೆ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ಒದಗಿಸುವು ಭರವಸೆ ನೀಡಿದರು. ಮುರುಘಾ ಶರಣರಿಗೆ ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡಿಬೇಕೆಂಬ ಭಕ್ತ ಸಮುದಾಯದ ಇಚ್ಚೆಯನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಗಣಮೇಳದಲ್ಲಿ ಏಳು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಅವುಗಳೆಂದರೆ,

  1. ಸಮಾಜಕ್ಕೆ ಸೇವೆ ಸಲ್ಲಿಸಿದ ಸ್ವಾಮೀಜಿಗಳ ಸ್ಮಾರಕ ಗಳನ್ನು ಸಂರಕ್ಷಿಸಲು ಸರ್ಕಾರ ಮುಂದಾಗಬೇಕು.
  2. ಪಠ್ಯಪುಸ್ತಕದಲ್ಲಿ ಶಿವಶರಣರ ಬಗ್ಗೆ ಮುದ್ರಣ ಮಾಡಿ ಶರಣ ಸಾಹಿತ್ಯ, ಬಸವ ಸಾಹಿತ್ಯ ಪ್ರಚಾರ ಮಾಡಬೇಕು.
  3. ಕಲಬುರಗಿ ವಿವಿಗೆ ಡಾ.ಬಿ.ಆರ್.ಅಂಬೇಡ್ಕರ್ ಹೆಸರು ಮತ್ತು ಧಾರವಾಡ ವಿವಿಗೆ ವಿಶ್ವಗುರು ಬಸವಣ್ಣನ ಹೆಸರನ್ನು ನಾಮಕರಣ ಮಾಡಬೇಕು.
  4. ಕೇಂದ್ರ ಸರ್ಕಾರ ಹುದ್ದೆಗಳ ಭರ್ತಿಯಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಬೇಕು.
  5. ಬಸವ ಕಲ್ಯಾಣ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು.
  6. ಮುರುಘಾಮಠದಲ್ಲಿ ನಿರ್ವಣವಾಗುತ್ತಿರುವ ಬಸವ ಪುತ್ಥಳಿಗೆ ಹೆಚ್ಚಿನ ಅನುದಾನ ನೀಡಬೇಕು.
  7. ಮಠದ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು.

ಒಟ್ಟಿನಲ್ಲಿ ಅಸಂಖ್ಯ ಪ್ರಮಥರ ಗಣಮೇಳ 21ನೇ ಶತಮಾನದ ಚರಿತ್ರೆಯ ಪುಟದಲ್ಲಿ ಸೇರಿತ್ತಲ್ಲದೇ ಡಾ.ಶಿವಮೂರ್ತಿ ಮುರುಘಾ ಶರಣರು, ವೀರಶೈವ ಮತ್ತು ವೈದಿಕ ಮಠಾಧೀಶರೂ ಸೇರಿದಂತೆ ವಿವಿದ ಸಮುದಾಯಗಳ ಮಠಾಧೀಶರಿಗೆ ಸಮನ್ವಯ ವೇದಿಕೆಯನ್ನು ಕಲ್ಪಿಸಿದ ಹೆಗ್ಗಳಿಗೆ ಪಾತ್ರರಾದರು.

ಇದೇ ಸಂದರ್ಭದಲ್ಲಿ ಮುರುಘಾ ಶ್ರೀಗಳಿಗೆ ಬುಕ್ ಆಫ್ ರೇಕಾರ್ಡ್‍ನ ಮುಖ್ಯಸ್ಥರು ಪ್ರಮಾಣಪತ್ರ ಹಾಗೂ ಪದಕ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದಂತಹ ಜನರಿಗೆ ಯಾವುದೇ ರೀತಯ ತೊಂದರೆಯಾಗದ ರೀತಿಯಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

 

 

 

 

 

 

 

Related posts

ನಾಲ್ಕು ಕಾಲಘಟ್ಟದಲ್ಲಿ ನಡೆಯಲಿದೆ ತಮಿಳು ನಟ ಸೂರ್ಯ ಅಭಿನಯದ ಸೂರರೈ ಪೊಟ್ಟರು ಸಿನಿಮಾ: ಕನ್ನಡದಲ್ಲೂ ಬಿಡುಗಡೆ

Times fo Deenabandhu

ಹಿರಿಯ ಸಾಹಿತಿ, ನಾಡೋಜ ಪಾಟೀಲ್‌ ಪುಟ್ಟಪ್ಪ ಇನ್ನಿಲ್ಲ

Times fo Deenabandhu

ಒಮ್ಮೆಗೇ ಇಲ್ಲ ಶ್ರೀಮನ್ನಾರಾಯಣ ಅವತಾರ: ಡಿ. 27ಕ್ಕೆ ಕನ್ನಡದಲ್ಲಷ್ಟೇ ಬಿಡುಗಡೆ

Times fo Deenabandhu